-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

              ನಾವು ಬಹಳಷ್ಟು ಬಾರಿ ಕೇಳಿಸಿ ಸುಸ್ತಾದ ಪದಗಳಲ್ಲಿ ರಸ್ತೆ ತಡೆ, ಉಗಿ ಬಂಡಿ ತಡೆ, ಮೆರವಣಿಗೆಗೆ ತಡೆ ಮೊದಲಾದುವುಗಳೂ ಸೇರಿವೆ. ಇದರಿಂದ ಕೆಲವರಿಗೆ ಆತಂಕವಾಗುವುದು ಸಹಜ. ಮದುವೆಯ ದಿನ ಗೊತ್ತುಪಡಿಸಿದೆ. ಅದೇ ದಿನ ರಸ್ತೆ ತಡೆಯಾದರೆ ಮದುವೆ ಮನೆಯವರು ಆತಂಕ ಪಡುವುದು ಖಚಿತ. ನನ್ನ ಈ ಲೇಖನದ ಉದ್ದೇಶ ಅಂತಹ ತಡೆಗಳಾಗಲೀ ಆತಂಕಗಳಾಗಲೀ ಅಲ್ಲ. ಆಂಗ್ಲ ಭಾಷೆಯಲ್ಲಿ Concern ಮತ್ತು Constrain ಎಂಬ ಪದಗಳಿವೆ. ಈ ಪದಗಳನ್ನು ಆಧಾರವಾಗಿರಿಸಿದ ಲೇಖನವಿದು.
        ಸಣ್ಣ ಮಗು ಕುರ್ಚಿಯೇರಲು ಪ್ರಯತ್ನಿಸುತ್ತಿರುತ್ತದೆ. ಇದನ್ನು ನೋಡಿದ ತಂದೆಯೋ, ತಾಯಿಯೋ, ಮನೆಯಲ್ಲಿ ಅಜ್ಜ ಅಜ್ಜಿಯರಿದ್ದರೆ ಅವರೂ ಓಡೋಡಿ ಬರುತ್ತಾರೆ. ಮಗುವು ಕುರ್ಚಿಯೇರದಂತೆ ತಡೆಯುತ್ತಾರೆ. ತನ್ನ ಆಸೆ ಭಂಗವಾದ ಬೇಸರದಲ್ಲಿ ಮಗು ಅಳುತ್ತದೆ. ಇಲ್ಲಿ ಮಗುವಿನ ಕಾರ್ಯಕ್ಕೆ ತಡೆಯುಂಟು ಮಾಡಲು ಕಾರಣ, ಮಗುವಿನ ಮೇಲೆ ತಡೆ ಮಾಡಿದವರಿಗೆ ಇರುವ ಕಾಳಜಿ ಮತ್ತು ಅಪಾಯವಾಗಬಹುದೆಂಬ ಆತಂಕ. ಈ ಘಟನೆಯಲ್ಲಿ ಮಗುವಿನ ಮೇಲಿನ concern ಮಗುವಿಗೆ constrain ಆಯಿತು. ರಸ್ತೆ ತಡೆ ಮಾಡುವವರೂ ಹೇಳುವುದು ನಾವು ಈ concern ನಿಂದ ಈ constrain ಮಾಡಿದೆವು. ಉದಾಹರಣೆಗೆ, ಸರಕಾರದಿಂದ ಬಂದಿರುವ ಹೊಸ ನಿಯಮ ರೈತರಿಗೆ ತೊಂದರೆ ತರಬಹುದು, ಅದಕ್ಕಾಗಿ ಅವರ ಮೇಲಿನ ಕಾಳಜಿಯಿಂದ ರಸ್ತೆ ತಡೆ ಎಂದು ವಿವರಿಸುವರು. ನಿಜವಾಗಿಯೂ ಅವರು ತಮ್ಮ ಬೇಳೆ ಬೇಯಿಸಲು ಅಣಿಗೊಳಿಸುವ ವೇದಿಕೆಯೇ ರಸ್ತೆ ತಡೆ. ಆದರೆ ಮಗುವಿನ ಯಾವುದಾದರೂ ಕೆಲಸಕ್ಕೆ ಹಿರಿಯರು ತಡೆ ಮಾಡಿದರೆ ಅದರ ಹಿಂದೆ ಮಮಕಾರ ಇರುತ್ತದೆ, ಮಗುವಿಗೆ ಯಾವುದೇ ತೊಂದರೆ ಯಾಗಬಾರದೆಂಬ ಕಾಳಜಿಯೂ ಇರುತ್ತದೆ. ಜಾಗರೂಕತೆಯ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸುವ ಸದುದ್ದೇಶದಿಂದ ಮಾಡುವ ಅಥವಾ ನೀಡುವ ತಡೆಗಳು ಸಮಂಜಸವಾದರೂ ಎಲ್ಲಾ ಸಂದರ್ಭಗಳಲ್ಲಿ ಅವು ಅಪೇಕ್ಷಣೀಯವಾಗದು. ಕೆಲವೊಮ್ಮೆ ಹೆತ್ತವರ ಅಥವಾ ಹಿರಿಯರ ಅತಿಯಾದ ಕಾಳಜಿಯು ಮಕ್ಕಳನ್ನು ಬಲಿತೆಗೆದುಕೊಳ್ಳುತ್ತದೆ ಎಂಬ ಅರಿವೂ ಹಿರಿಯರಲ್ಲಿರಬೇಕು.
       ಎಲ್ಲರೂ ನಡೆಯುವ ದಾರಿ ಅನುಸರಣೆಗೆ ಸುಲಭ. ಹೊಸದಾದ ದಾರಿಯಲ್ಲಿ ಅನೇಕ ಸವಾಲುಗಳಿರುತ್ತವೆ. ಡಾ. ಶಿವರಾಮ ಕಾರಂತರು ಹೇಳುವಂತೆ, "ನಾವು ಹತ್ತು ಜನರು ನಡೆದ ದಾರಿಯಲ್ಲಿ ನಡೆದರೆ ಹನ್ನೊಂದನೆಯವರಾಗುತ್ತೇವೆಯೇ ವಿನಹ ಮೊದಲಿಗರಾಗುವುದಿಲ್ಲ. ಮೊದಲಿಗರಾಗಲು ನಮ್ಮದೇ ಆದ ದಾರಿಯನ್ನು ನಾವು ಯೋಜಿಸಬೇಕಾಗುತ್ತದೆ." ಹೊಸದಾರಿಯಲ್ಲಿ ಸಾಗಲು ಆತಂಕವಿರುವುದಾದರೂ ಸಾಧನೆಯ ಛಲವಿರಬೇಕು, ಸವಾಲುಗಳನ್ನು ಎದುರಿಸುವ ಧೈರ್ಯ ಬಲಿಯಬೇಕು. ತಡೆಗಳು ಜಾಸ್ತಿಯಾದರೆ ಛಲ ಕಮರುತ್ತದೆ. ಸೋತರೂ ಅಡ್ಡಿಯಿಲ್ಲ, ನಮ್ಮ ದಾರಿಯನ್ನು ಅಂದರೆ ಯೋಜನೆಯನ್ನು ಗೆಲುವಿನತ್ತ ಒಯ್ಯುವೆನೆಂಬ ನಿರ್ಧಾರ ಇದ್ದಾಗ ಜಯ ಖಚಿತ. ಮರಳಿ ಯತ್ನವ ಮಾಡು ಎಂಬ ಹಿರಿಯರ ಮಾತು, ಸೋತಾಗ ನಿರ್ಧಾರ ಬದಲಿಸಬಾರದೆಂಬ ಆಶಯಕ್ಕೆ ಪೂರಕವಾಗಿದೆ. ಥೋಮಸ್ ಆಲ್ವಾ ಎಡಿಸನ್ ಮೊದಲ ಸೋಲಿಗೆ ಪ್ರಯತ್ನ ನಿಲ್ಲಿಸುತ್ತಿದ್ದರೆ ನಮಗೆ ವಿದ್ಯುತ್ ಬಲ್ಬು ಸಿಗುತ್ತಿರಲಿಲ್ಲವೇನೋ ಎಂದೆನಿಸುವುದಿಲ್ಲವೇ? ವಿಫಲತೆಯೊಳಗೆ ಸಫಲತೆಯನ್ನೇ ಕಾಣುವ, ತಡೆ ಮತ್ತು ಆತಂಕಗಳನ್ನು ಮೆಟ್ಟಿ ನಿಲ್ಲುವ, ಥೋಮಸರ ಪ್ರಯತ್ನಗಳ ಫಲವನ್ನು ನಾವು ಸಂತಸದಿಂದ ಅನುಭವಿಸುತ್ತಿದ್ದೇವೆ.
         ವ್ಯಕ್ತಿಯ ಬದುಕಿನ ಸೃಷ್ಠಿ, ಸ್ಥಿತಿ ಮತ್ತು ಲಯಗಳಿಗೆ ವೈಯಕ್ತಿಕವಾದ ಹೊಣೆಗಾರಿಕೆಯಿರಬೇಕೇ ಹೊರತು ಇತರರ ಪೂರ್ಣ ಅವಲಂಬನೆ ಇರಲೇ ಬಾರದು. ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವಾಗ ಆತಂಕಗಳಿಗೆ ಒಳಗಾಗದಿರುವುದು ಶೌರ್ಯದ ಲಕ್ಷಣ. ಉತ್ತಮವಾದ ಯೋಜನೆಯೊಂದಿಗೆ ಕಾರ್ಯೋನ್ಮುಖರಾದವರನ್ನು ಆತಂಕಗಳಿಗೆ ಒಳಪಡಿಸುವುದು, ಅಥವಾ ಅವರಿಗೆ ತಡೆಯಾಗುವುದು ಧೂರ್ತಗುಣ. ತಡೆ ಮತ್ತು ಆತಂಕಗಳಿಂದ ಮುಕ್ತಿಯೇ ವಿಕಾಸ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************

Ads on article

Advertise in articles 1

advertising articles 2

Advertise under the article