-->
ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 38

ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 38

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 38

                 ನಮಸ್ತೆ ಮಕ್ಕಳೇ.... ಎಲ್ಲರೂ ಕ್ಷೇಮ ಅಲ್ವೇ.... ನಾನೂ ಕ್ಷೇಮವಾಗಿದ್ದೇನೆ. ಶಾಲೆಯಲ್ಲಿ ಹಬ್ಬ!ವಾರ್ಷಿಕೋತ್ಸವ, ಆಟ, ಪ್ರವಾಸ...! ಓದಿನ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಖುಷಿ ಅಲ್ವಾ?.. ಈ ಸಂಭ್ರಮದ ನಡುವೆ ಪರಿಸರವನ್ನು ಕಾಪಾಡುವ ಜವಾಬ್ದಾರಿ...? ಈ ಕುರಿತಾಗಿ ನಿಮ್ಮಲ್ಲಿ ಹಂಚಿಕೊಳ್ಳಲೇಬೇಕಾದ ವಿಷಯವೊಂದಿದೆ.
ಶಾಲೆಯೊಂದು ಅರಿವಿನ ಬೆಳಕಿನೆಡೆಗೆ ಮಕ್ಕಳನ್ನು ತೆರೆದಿಟ್ಟ ಸ್ಫೂರ್ತಿದಾಯಕ ವಿಚಾರ. ನಿಮ್ಮಲ್ಲಿ ಹಂಚಿಕೊಳ್ಳಲೆಂದೇ ಈ ದಿನವನ್ನು ಕಾಯ್ತಾ ಇದ್ದೆ...!
      ನಾನು ಮೊನ್ನೆ ನಮ್ಮೂರಿನ ಪಕ್ಕದ ಶಂಭೂರು ಸರಕಾರಿ ಪ್ರೌಢಶಾಲೆಗೆ ಹೋಗಿದ್ದೆ. ವಿಶಾಲವಾದ ಕಟ್ಟಡಗಳು, ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರುವ ಶಾಲಾ ಪರಿಸರವನ್ನು ಪ್ರಭಾರ ಮುಖ್ಯಗುರುಗಳಾದ ಕಮಾಲಾಕ್ಷ ಸರ್ ಪರಿಚಯಿಸುತ್ತಾ, ಕೊಠಡಿಯೊಂದರ ಮೂಲೆಯಲ್ಲಿ ಬಣ್ಣ ಬಣ್ಣದ ಬಾಟಲ್ ಗಳನ್ನು ತೋರಿಸಿದರು. 
ನೋಡಲು ಆಕರ್ಷಕವಾಗಿ ಕಂಡವು. ಒಂದೊಂದು ಬಾಟಲಿಯಲ್ಲಿಯೂ ಸಾಧಾರಣ ಅರ್ಧ ಕಿಲೋ ಗ್ರಾಂ ನಷ್ಟು ಪ್ಲಾಸ್ಟಿಕ್ ಗಳು. ಏಕಬಳಕೆಯ ಪ್ಲಾಸ್ಟಿಕ್ ತ್ಯಾಜ್ಯಗಳು ಮಣ್ಣನ್ನು ಸೇರುವ ಬದಲು ಭದ್ರವಾಗಿ ಬಾಟಲಿಯೊಳಗೆ ಬಂಧಿಸಲ್ಪಟ್ಟಿವೆ! ರಾಶಿ ರಾಶಿ‌ ಬಣ್ಣದ ಬಾಟಲ್ ಗಳು! ಕೂಡಲೇ ನಿಮ್ಮ ನೆನಪಾಯಿತು. ನನ್ನ ಬಳಗಕ್ಕೆ ತಿಳಿಸ್ಬೇಕು ಎಂದಾಗ ಸರ್ ಮಾಹಿತಿಯನ್ನು ನೀಡಿದರು. ಜಗಲಿ ಬಳಗದ ಎಲ್ಲರ ಪರವಾಗಿ ಈ ಪರಿಸರ ಪರ ಕೆಲಸಕ್ಕಾಗಿ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳಿಗೆ ಅಭಿನಂದನೆಗಳು.
    ಇಕೋ ಬ್ರಿಕ್ಸ್.. ಎನ್ನುವ ಪರಿಕಲ್ಪನೆಯೊಂದು ಹುಟ್ಟಿಕೊಂಡು ಆ ಮೂಲಕ ಎಲ್ಲೆಂದರಲ್ಲಿ ಹರಡಿಕೊಂಡಿರುವ ಪ್ಲಾಸ್ಟಿಕ್ ಗಳು ಪ್ರಾಣಿಗಳ ಹೊಟ್ಟೆ ಸೇರುವುದನ್ನು ತಪ್ಪಿಸುತ್ತಿವೆ. ಚಾಕಲೇಟ್ ಸಿಪ್ಪೆಗಳೂ ಸೇರಿದಂತೆ, ಬಳಸಿದ ಯಾವುದೇ ಪ್ಲಾಸ್ಟಿಕ್ ನ್ನು ಸ್ವಚ್ಛಗೊಳಿಸಿ ಒಣಗಿದ ನಂತರ ಪ್ಲಾಸ್ಟಿಕ್ ಬಾಟಲ್ ಗಳಲ್ಲಿಯೇ ತುಂಬಿಸಿಡಬೇಕು. ಬಾಟಲ್ ಗಳು ಒಡೆದಿರಬಾರದು ಮತ್ತು ಮುಚ್ಚಳವನ್ನು ಹೊಂದಿರಬೇಕು. ಬಾಟಲ್ ನೊಳಗೆ ಜಾಗ ಉಳಿಯದಂತೆ, ಪೂರ್ತಿ ತುಂಬುವಷ್ಟು ತುಂಬಿಸಿ ಮುಚ್ಚಳ ಹಾಕಬೇಕು. ಪರಿಸರಸ್ನೇಹಿ ಕೆಲಸ ಮಾಡುವ ಸಂಸ್ಥೆಯವರು ಇವುಗಳನ್ನು ಸಂಗ್ರಹ ಮಾಡುತ್ತಾರೆ ಅಥವಾ ಒಂದೇ ರೀತಿಯ ಬಾಟಲ್ ಗಳಿದ್ದರೆ ನಮಗೂ, ಹೂವಿನ ಕಟ್ಟೆಗಳನ್ನು ಕಟ್ಟಲು, ಇಟ್ಟಿಗೆಗಳ ಬದಲಿಗೆ ಅಥವಾ ಅಲಂಕಾರಿಕವಾಗಿಯೂ ಬಳಕೆ ಮಾಡಬಹುದು.
      ಧರ್ಮ‌ ಕಾಲಗಳ ಲೆಕ್ಕಾಚಾರ ವ್ಯಾಪ್ತಿಗೆ ಒಳಪಡದೆ ಎಲ್ಲೆಂದರಲ್ಲಿ ಯಾರು ಯಾವಾಗ ಬೇಕಾದರೂ ಪರಿಸರವನ್ನು ಮಲಿನಗೊಳಿಸಲು ಸ್ವತಂತ್ರರು ಎನ್ನುವ ಕಾನೂನಿದೆಯೇ? ನಮ್ಮದಲ್ಲದ ಮತ್ತು ನಮ್ಮದೇ ಆದ... ಬದುಕೀವ ಮಣ್ಣು, ಗಾಳಿ, ನೀರು.... ಎಷ್ಟೊಂದು ನಿರ್ಮಲವಾಗಿದ್ದವು...! ಮರಳಿ ಬಾರದಷ್ಟು ದೂರ ಸಾಗಿಬಿಟ್ಟಿದ್ದೇವೆ ಈ ವಿಚಾರದಲ್ಲಿ...! ಇನ್ನೇನಿದ್ದರೂ ಪ್ರಯತ್ನಗಳಷ್ಟೇ... ಅದೂ ಪ್ರಾಮಾಣಿಕವಾಗಿರಬೇಕು ಮತ್ತು ಸ್ವಾರ್ಥ ರಹಿತವಾಗಿರಬೇಕು. ಹೊಣೆಯನ್ನು ನಾವು ವಹಿಸಿಕೊಳ್ಳೋಣ. ನಿಸರ್ಗದ ಮಡಿಲಿನಲ್ಲಿ ಬೆಚ್ಚಗಿರುವ ಅಧಿಕಾರವನ್ನು ನ್ಯಾಯಯುತವಾಗಿಯೇ ಗಳಿಸಿಕೊಳ್ಳೋಣ..!ಇಂತಹ ಪರಿಸರ ಪರ ಆಲೋಚನೆಗಳು ಅಕ್ಷಯವಾಗಲಿ.
        Youtube ನಲ್ಲಿ ಈ ಕುರಿತಾದ ಬಹಳಷ್ಟು ಮಾಹಿತಿ ಇದೆ. ನನಗೆ ಈ ಯೋಚನೆ ಬಹಳ ಹಿತವೆನಿಸಿತು. ಕೆಲವರಿಗೆ ಈಗಾಗಲೇ ತಿಳಿದಿರಲೂಬಹುದು. ಮನೆಗಳಲ್ಲಿ, ಶಾಲೆಗಳಲ್ಲಿ ಇಂತಹ ಕೆಲಸವನ್ನು ಆರಂಭಿಸಿ, ಸ್ವಲ್ಪವಾದರೂ ಈ ಮಣ್ಣು ಮಲಿನವಾಗದಂತೆ ತಡೆಯಲು ನಮ್ಮ ಪ್ರಯತ್ನವನ್ನು ಮಾಡೋಣ ಅಲ್ವಾ...?
    ಕಳೆದ ವಾರದ ಪತ್ರಕ್ಕೆ ಎಷ್ಟೊಂದು ಪ್ರತಿಕ್ರಿಯೆಗಳು...! ಪ್ರಿಯಾ, ಸಾತ್ವಿಕ್ ಗಣೇಶ್, ಭವ್ಯಶ್ರೀ, ಶ್ರಾವ್ಯ, ವೈಷ್ಣವಿ ಕಾಮತ್, ಲಹರಿ, ಪ್ರಣಮ್ಯ, ಪೂಜಾ, ಸಿಂಚನಾ, ಶಿಶಿರ್, ರೇಣುಕಾ ರಂಗನಾಥ್.... ಭರವಸೆ ತುಂಬಿದ ಮಾತುಗಳನ್ನು ಪತ್ರದ ಮೂಲಕ ಎಷ್ಟೊಂದು ಆಪ್ತವಾಗಿ ಕಟ್ಟಿಕೊಟ್ಟಿದ್ದೀರಿ. ಈ ಪತ್ರವನ್ನು ಇನ್ನೂ ಹೆಚ್ಚಿನ ಗೆಳೆಯ ಗೆಳತಿಯರಿಗೆ ತಲುಪಿಸಿ. ಓದಲಾಗದವರಿಗೆ ವಿಷಯವನ್ನು ತಿಳಿಸಿ. ಎಲ್ಲರೂ ಜೊತೆಯಾಗಿ ಪರಿಸರ ಕಾಳಜಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳೋಣ.
    ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?ಬರೆದು ಕಳಿಸ್ತೀರಲ್ಲಾ..? ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
......................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************


Ads on article

Advertise in articles 1

advertising articles 2

Advertise under the article