-->
ಪ್ರತಿಫಲನ : ಸಂಚಿಕೆ - 6

ಪ್ರತಿಫಲನ : ಸಂಚಿಕೆ - 6

ಪ್ರತಿಫಲನ : ಸಂಚಿಕೆ - 6
ಮಕ್ಕಳಿಗಾಗಿ ಲೇಖನ ಸರಣಿ

               
ಅಭಿವಾದನ ಶೀಲಸ್ಯ
ನಿತ್ಯಂ ವೃದ್ಧೋಪಸೇವಿನಃ |
ಚತ್ವಾರೀಯಸ್ಯ ವರ್ಧಂತೇ
ಆಯುರ್ವಿದ್ಯಾಯಶೋ ಬಲಮ್ ||
        ವಿಶೇಷ ಅರ್ಥವನ್ನು ಹೊಂದಿರುವ, ಜೀವನದ ಅವಿಭಾಜ್ಯ ಅಂಗವೆನಿಸಿದ ಹಲವು ತತ್ವಗಳನ್ನು ಒಳಗೊಂಡಿರುವ ಸುಭಾಷಿತ ಇದಾಗಿದೆ. ಪ್ರೀತಿಯ ವಿದ್ಯಾರ್ಥಿ ಮಿತ್ರರೇ, ಈ ಸುಭಾಷಿತದ ಅರ್ಥವನ್ನು ವಿಷದೀಕರಿಸುತ್ತ ಸಾಗೋಣ.
         ಹಿರಿಯರನ್ನು ಗೌರವಿಸುವವರಿಗೂ, ಅಶಕ್ತರೂ ವೃದ್ಧರೂ ಅನಿವಾರ್ಯ ನೆರವಿನ ಅವಶ್ಯಕತೆ ಉಳ್ಳವರೂ ಆದ ವ್ಯಕ್ತಿಗಳಿಗೆ ಕೈಲಾದ ಸಹಕಾರವನ್ನು ನೀಡುವವರಿಗೂ ತಮ್ಮ ಜೀವನದಲ್ಲಿ ಆಯುಷ್ಯ ವಿದ್ಯೆ ಯಶಸ್ಸು ಮತ್ತು ಬಲಗಳೆಂಬ ನಾಲ್ಕು ಅಂಶಗಳು ಯಥೇಚ್ಛವಾಗಿ ವೃದ್ಧಿಯಾಗುತ್ತವೆ. ಆರೋಗ್ಯವಂತರಾಗಿ ಉತ್ತಮ ಆಯುಷ್ಯದೊಂದಿಗೆ ಸಾಕಷ್ಟು ವಿದ್ಯಾಭ್ಯಾಸದ ಜತೆಗೆ ಕೈ ಹಾಕಿದ ಸಕಲ ಕಾರ್ಯಗಳಲ್ಲೂ ಯಶಸ್ಸು, ಇವೆಲ್ಲವನ್ನು ಸಾಧಿಸುವ ಬಲ ನಮ್ಮೊಳಗೆ ವೃದ್ಧಿಸುತ್ತಾ ಸಾಗಿದಾಗ ಸಂತಸ ತುಂಬಿದ ಜೀವನ ನಮ್ಮದಾಗುತ್ತದೆ. ಸಾಧಾರಣವಾಗಿ ನಮ್ಮ ಹಿಂದಿನ ಕಾಲವನ್ನು ನಿಮ್ಮಂತಹ ಮುದ್ದು ಮಕ್ಕಳು ಊಹಿಸಲೂ ಸಾಧ್ಯವಿಲ್ಲ. ಒಂದು ಬಾರಿ ನಿಮ್ಮ ಅಮ್ಮ ಅಪ್ಪನನ್ನು ಗಮನಿಸಿ. ಅವರು ತಮ್ಮ ಹಿರಿಯರು ತಂದೆ ತಾಯಿಯರು ಗುರುಗಳು ಬಂದಾಗ ಭಯ ಭಕ್ತಿಯಿಂದ ಎದ್ದು ನಿಲ್ಲುವುದು ಮಾತ್ರವಲ್ಲ ಅವರ ಮುಂದೆ ಸಮಾನ ಆಸನದಲ್ಲಿ ಕುಳಿತುಕೊಳ್ಳದಿರುವುದನ್ನು ನೀವು ಗಮನಿಸಿರಬಹುದು. ಅಲ್ಲದೆ ಹಿರಿಯರಾಡುವ ಮಾತನ್ನು ಶ್ರಧ್ಧೆಯಿಂದ ಕೇಳುವುದು ಎದುರಾಡದಿರುವುದನ್ನು ಕಂಡಿರುವಿರಾ…..? ಯಾಕೆ ಹೀಗೆ ಎಂದು ಚಿಂತಿಸಿರುವಿರಾ…? ಅದು ಸಂಸ್ಕೃತಿಯ ಅವಿಭಾಜ್ಯ ಅಂಗ. ನಾವು ಅಳವಡಿಸಿಕೊಳ್ಳಬೇಕಾದ ಜೀವನ ವಿಧಾನ. ಹಾಗಾದರೆ ಹಿರಿಯರನ್ನು, ಗುರುಗಳನ್ನು, ಪೂಜನೀಯ ಭಾವದಿಂದ ಕಾಣುವುದನ್ನು ನೀವು ಜೀವನದಲ್ಲಿ ಅಳವಡಿಸಿಕೊಳ್ಳುವಿರಾ…? ಬಸ್ ಪ್ರಯಾಣ, ಹಾಗೆಯೇ ಶಾಲಾ ದಾರಿಯ ಮದ್ಯೆ ವಿವಿಧ ಕಚೇರಿಗಳಿಗೆ ಹೋದಾಗ ಅಸಹಾಯಕರು, ವೃದ್ಧರು ಆದ ವ್ಯಕ್ತಿಗಳನ್ನು ಕಾಣುತ್ತೇವೆ. ವೃದ್ಧಾಪ್ಯವೆಂಬುವುದು ಎಲ್ಲರ ಜೀವನದ ನಾಲ್ಕನೆಯ ಘಟ್ಟ. ಅಲ್ಲಿ ಸಹಜವಾಗಿಯೇ ಅಶಕ್ತತೆ, ಮರೆವು, ಅಸಹನೆ, ಅನಿವಾರ್ಯತೆ, ಇತರರು ತಮ್ಮನ್ನು ಗಮನಿಸಬೇಕೆಂಬ ಭಾವ ಯಾರಾದರೂ ತನ್ನ ಸಂಕಷ್ಟ ಪರಿಸ್ಥಿತಿಯಲ್ಲಿ ಸಹಾಯ ಮಾಡಲಿ ಎಂಬ ತುಡಿತ ಸಹಜ. ಹೆಚ್ಚಿನ ಮನೆಗಳಲ್ಲಿ ವಯಸ್ಸಾದ ಅಜ್ಜ-ಅಜ್ಜಿಯರು ಇರುತ್ತಾರೆ. ಅವರನ್ನು ನಿಕೃಷ್ಟವಾಗಿ ಕಾಣುವವರಿಗೇನೂ ಕಡಿಮೆ ಇಲ್ಲ. ಏಕೆಂದರೆ ಮುದುಕರಿಗೇನೂ ತಿಳಿಯದೆಂಬ ಅಸಡ್ಡೆ ಭಾವ. ನಮ್ಮ ಅಪ್ಪ ಅಮ್ಮನವರಿಗಿಂತಲೂ ಹೆಚ್ಚಾಗಿ ಅಜ್ಜ-ಅಜ್ಜಿಯರನ್ನು ಗೌರವಿಸುವ, ಪ್ರೀತಿ ಮಮತೆಯಿಂದ ಕಾಣುವ, ಸಹಕಾರ ನೀಡುವ
ಮನೋಭಾವ ಬೆಳೆಸಿಕೊಳ್ಳಬೇಕೆಂಬುದನ್ನು ನಾವು ತಿಳಿದಿರಬೇಕು.
     ಮಕ್ಕಳೇ, ಹಿರಿಯರಿಗೆ ನೀವು ಮಾಡುವ ಪುಟ್ಟ ಪುಟ್ಟ ಸಹಾಯಗಳೂ ಅವರನ್ನು ಸಂತಸದಲ್ಲಿರಿಸುತ್ತವೆ. ಅದರಿಂದ ನಮಗೇನು ದೊರೆಯುವುದೆಂದು ಕೇಳುವಿರಾ ಆತ್ಮತೃಪ್ತಿ. ಸ್ವಯಂ ಸಂತಸಕ್ಕಿಂತ ಹಿರಿದಾದ ಪಾರಿತೋಷಕ ಏನಿದೆ ಹೇಳಿ? ಗುರುಗಳನ್ನು, ಹಿರಿಯರನ್ನು, ನಿರಂತರ ಗೌರವಿಸುತ್ತಾ ಸಾಗುವುದು, ವೃದ್ಧರನ್ನು ಪ್ರೀತಿಯಿಂದ ಕಾಣುವುದರ ಜತೆ ಎಲ್ಲರನ್ನೂ
ನಮ್ಮವರಂತೆ ಹೃದಯದಿಂದ ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳೋಣ. ನಮ್ಮೀ ವಿನೀತ ಭಾವಕ್ಕೆ ಭಗವಂತ ಆಯುಷ್ಯ, ವಿದ್ಯೆ, ಯಶಸ್ಸು ಮತ್ತು ಬಲಗಳನ್ನು ನೀಡಿ ನಮ್ಮನ್ನು ಪೋಷಿಸುತ್ತಾನೆ. ನಿಮ್ಮ ಸದ್ವಿಚಾರಗಳ ಜೊತೆಗೆ ಸದ್ವರ್ತನೆಯು ಸಂತಸದಾಯಕ ವಿದ್ಯಾರ್ಥಿ ಜೀವನಕ್ಕೆ ಪೂರಕವಾಗಲಿ. ಉತ್ತಮ ಗುಣನಡತೆಯ ಪ್ರತಿಫಲನವು ನಿಮ್ಮ ಮೂಲಕ ಇತರರಿಗೂ ಕಲಿಕೆಯ ಬೆಳಕ ನೀಡಲಿ ಪುಟ್ಟ ಬದಲಾವಣೆಯ ದಿಟ್ಟ ಹೆಜ್ಜೆ ನಿಮ್ಮದಾಗಲಿ ಎಂದು ಆಶಿಸಲೇ…. ಪ್ರೀತಿಯಿಂದ ನಿಮ್ಮ
.......................................... ಪುಷ್ಪಲತಾ ಎಂ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************Ads on article

Advertise in articles 1

advertising articles 2

Advertise under the article