-->
ಅಕ್ಕನ ಪತ್ರ - 38 ಕ್ಕೆಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 38 ಕ್ಕೆಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 38 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


         ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ  ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ  ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ  ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ  ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ  ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........
              

      ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು... ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದೇ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಅನುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತುಂಬಿಸಿ, ಅವುಗಳನ್ನು ಮರುಬಳಕೆ ಮಾಡುವುದು ಬಹಳ ಉಪಯುಕ್ತ ಕಲ್ಪನೆಯಾಗಿದೆ. ನಮ್ಮ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಇಲ್ಲಿ ಈ ರೀತಿಯ ವಿನೂತನ ಕಲ್ಪನೆಯೊಂದು ಕಾರ್ಯರೂಪಕ್ಕೆ ಬಂದಿದೆ. ಇದು ಬಹಳ ಸಂತೋಷದ ವಿಷಯ. ಈ ಸಂಸ್ಥೆಯಲ್ಲಿ ಮುಂಬರುವ ದಿನಗಳಲ್ಲಿ ಸಾವಿರ ಪ್ಲಾಸ್ಟಿಕ್ ಬಾಟಲಿಗಳ ಸಂಗ್ರಹವಾದ ಮೇಲೆ ಅದರಿಂದ ಒಂದು ಮನೆಯನ್ನು ತಯಾರಿಸುವ ಯೋಜನೆಯ ಗುರಿಯನಿಟ್ಟುಕೊಂಡಿದ್ದೇವೆ. ಇದೊಂದು ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಮಾದರಿಯಾಗಲಿದೆ. ಇದೇ ರೀತಿ ಇನ್ನೂ ಹೊಸ ಹೊಸ ಪ್ರಯೋಗಗಳು ನಡೆದು, ಪರಿಸರ ಕಾಳಜಿಯು ಹೆಚ್ಚಾಗಲಿ. ಭವಿಷ್ಯದ ಜೀವನಕ್ಕೊಂದು ಸ್ಪೂರ್ತಿಯಾಗಲಿ. ಧನ್ಯವಾದಗಳೊಂದಿಗೆ
.......................................... ವೈಷ್ಣವಿ ಕಾಮತ್ 
6ನೇ ತರಗತಿ 
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ ಕಲ್ಲಡ್ಕ. 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************

   

     ಜಗಲಿಯ ನನ್ನೆಲ್ಲಾ ಬಳಗದವರಿಗೆ ಹಾಗೂ ನಮ್ಮೆಲ್ಲರ ಪ್ರೀತಿಯ ಅಕ್ಕನಿಗೂ ನಮಸ್ಕಾರಗಳು.... ನಾನು ನಿಮ್ಮೆಲ್ಲರ ಪ್ರೀತಿಯ ಭವ್ಯಶ್ರೀ... ಈ ಬಾರಿಯ ಅಕ್ಕನ ಪತ್ರದ ವಿಷಯವು ಪರಿಸರ ಕಾಳಜಿಯನ್ನು ಮೂಡಿಸುವ ಸಲುವಾಗಿತ್ತು.. ಶಂಭೂರು ಶಾಲಾ ಮಕ್ಕಳು ನಿಜವಾಗಿಯೂ ಭಾಗ್ಯವಂತರು, ಪರಿಸರ ಸೇವೆಯನ್ನು ಮಾಡಲು ಹೊರಟಿರುವುದಕ್ಕೆ. ಅವರ ಈ ಪರಿಸರ ಪ್ರೇಮವು ನಮ್ಮೆಲ್ಲರಿಗೂ ಮಾದರಿಯಾಗಿದೆ. ಪರಿಸರ ರಕ್ಷಣೆ ಶಾಲಾ ಮಕ್ಕಳಿಂದಲೇ ಆರಂಭವಾಗಬೇಕು. ನಾವುಗಳೇ ಸಮಾಜಕ್ಕೆ ಮಾದರಿಯಾಗಬೇಕು. ಪ್ಲಾಸ್ಟಿಕ್ ಬಳಕೆ ತೀರಾ ಕಡಿಮೆ ಮಾಡುವುದು ಪರಿಸರ ಸಂರಕ್ಷಿಸುವಲ್ಲಿ ಸೂಕ್ತ ಅಂಶವಾಗಿದೆ. ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಅತಿ ಪ್ರಮುಖ ಜವಾಬ್ದಾರಿ ಆಗಿದೆ. ಮುಂದಿನ ಪತ್ರಕ್ಕಾಗಿ ಕುತೂಹಲದಿಂದ ಕಾಯುತ್ತೇನೆ. ಇನ್ನಷ್ಟು ಹೊಸ ಅಂಶಗಳ ಜೊತೆಗೆ ಮುಂದಿನ ಪತ್ರದೊಂದಿಗೆ ಭೇಟಿಯಾಗಿ ಅಕ್ಕ. ಅಲ್ಲಿಯವರೆಗೂ ಜಗಲಿಯ ನನ್ನೆಲ್ಲಾ ಆತ್ಮೀಯರಿಗೆ ನಮನಗಳು...
...................................................... ಭವ್ಯಶೀ 
ಪ್ರಥಮ ಪಿಯುಸಿ 
ಸರಕಾರಿ ಪದವಿ ಪೂರ್ವ ಕಾಲೇಜು, ಕೊಣಾಲು
ಕಡಬ ತಾಲೂಕು,  ದಕ್ಷಿಣ ಕನ್ನಡ ಜಿಲ್ಲೆ.
******************************************



        ಪ್ರೀತಿಯ ಅಕ್ಕನಿಗೆ ಧನ್ಯಶ್ರೀ ಮಾಡುವ ನಮಸ್ಕಾರಗಳು. ನಾನು ಇಲ್ಲಿ ಕ್ಷೇಮ, ನೀವು ಅಲ್ಲಿ ಕ್ಷೇಮವೇ? ಹೌದು ನಿನ್ನೆ 10-12 -2022 ಶನಿವಾರದಂದು ನಮ್ಮ ಶಾಲೆಯಲ್ಲಿ ಕ್ರೀಡೋತ್ಸವ ಆಯೋಜಿಸಲಾಗಿತ್ತು. 2 ವರ್ಷ ಕಳೆದ ನಂತರ ಹೊನಲು ಬೆಳಕಿನ ಕ್ರೀಡೋತ್ಸವ ಬಂದಿದೆ. ಅದರಲ್ಲಿ ಘೋಷ್, ಕೋಲಾಟ, ಶಿಶುನೃತ್ಯ, ಬೆಂಕಿ ಸಾಹಸ ಮುಂತಾದ ಕಲೆಗಳು. ನಮ್ಮ ಕ್ರೀಡೋತ್ಸವ ನೋಡಲು ನಮ್ಮ ರಾಜ್ಯದ ಮುಖ್ಯಮಂತ್ರಿ ಕೂಡಾ ಬಂದಿದ್ದರು. ತುಂಬಾ ತುಂಬಾ ಖುಷಿ ಆಗುತ್ತಿದೆ. ಕೊರೊನ ಮಹಾ ಮಾರಿ ಬಂದು ನಮ್ಮ ಜೀವನದಲ್ಲಿ ಹೊಡೆತ ಬಿದ್ದಿತ್ತು. ನಿನ್ನೆ ನಮಗೆ ತುಂಬಾ ಸಂತೋಷದ ದಿನ. ಅದಲ್ಲದೆ ಕೆಲವೇ ದಿನಗಳಲ್ಲಿ ಕನ್ಯಾಕುಮಾರಿಗೆ ಪ್ರವಾಸವೂ ಇದೆ... ಕಟ್ಟುವುದು ಕಠಿಣ, ಕೆಡಿಸುವುದು ಸುಲಭ ಎಂಬ ಗಾದೆಮಾತಿನಂತೆ ನಮ್ಮ ಜೀವನ. ಕೆಲವು ತಿಂಗಳ ಹಿಂದೆ ನಮ್ಮ ಶಾಲೆಯಲ್ಲಿ ನಾನು, ನನ್ನ ಸ್ನೇಹಿತರು, ಶಿಕ್ಷಕಿ, ಶಿಕ್ಷಕರು ಸೇರಿ ಬಾಟಲಿಯಲ್ಲಿ ಮರದ ಸುತ್ತ ಇಟ್ಟಿಗೆ ಮಾಡಿದೆವು. ಈ ವಿಷಯ ತಿಳಿಸಿದ್ದು ನಮ್ಮ ಶಾಲೆಯ ಸಹಶಿಕ್ಷಕರಾದ ಬಾಲಕೃಷ್ಣ ಶ್ರೀಮಾನ್. ನಾವು ಪ್ಲಾಸ್ಟಿಕ್ ಬಾಟಲಿಗೆ ಪ್ಲಾಸ್ಟಿಕ್ ಗಳನ್ನು ಹಾಕಿದೆವು. ಪರಿಸರ ಸಂರಕ್ಷಣೆ ಮಾಡುವುದು ಒಳ್ಳೆಯ ಕೆಲಸ. ಜೈ ಹಿಂದ್... ಜೈ ಭಾರತ್... ಧನ್ಯವಾದಗಳು.
.............................................. ಧನ್ಯಶ್ರೀ
6ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ, ಕಲ್ಲಡ್ಕ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

   

ಅಕ್ಕನ ಪತ್ರ ಸಂಚಿಕೆ 38  ಕ್ಕೆ  ಶಿಶಿರನ ಉತ್ತರ              
    ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ   ನಮಸ್ಕಾರಗಳು.  ನಾನು ಕ್ಷೇಮವಾಗಿರುವೆ.  ನಿಮ್ಮ ಪತ್ರದಲ್ಲಿ ಶಂಭೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಾಡಿದ ಇಕೋಬ್ರಿಕ್ಸ್ ಪರಿಕಲ್ಪನೆಯನ್ನು ಓದಿ ತುಂಬಾ ಸಂತೋಷವಾಯಿತು. ನಿಮ್ಮ ಪತ್ರವನ್ನು ಓದುತ್ತಿರುವಾಗ ಕೆಲವು ಪರಿಸರ ಸಂರಕ್ಷಕರು ಮತ್ತು ಪರಿಸರ ಸಂರಕ್ಷಣೆಗಾಗಿ ದುಡಿಯುತ್ತಿರುವ ಕೆಲವು ಸಂಸ್ಥೆಗಳ ನೆನಪಾಯಿತು.  "ರಿಸೈಕಲ್ ಮ್ಯಾನ್ ಆಫ್ ಇಂಡಿಯಾ" ಎಂದು ಪ್ರಸಿಧ್ಧರಾಗಿರುವ ಡಾ.ಬಿನಿಶ್ ದೇಸಾಯಿಯವರು ಮೂಲತಃ ಗುಜರಾತಿನ ವಾಲ್ಸಾಡದವರು. ಇವರು ಪ್ಲಾಸ್ಟಿಕ್ ನ  ಸಹಾಯದಿಂದ ಪ್ಲಾಸ್ಟಿಕ್ ಇಟ್ಟಿಗೆಗಳನ್ನು ಮಾಡಿ ಪರಿಸರ ಸಂರಕ್ಷಣೆಗಾಗಿ ದುಡಿಯುತ್ತಿದ್ದಾರೆ. ಇವರ ಪ್ಲಾಸ್ಟಿಕ್ ನ ಇಟ್ಟಿಗೆಗಳು ಮಾಮೂಲಿ ಮಣ್ಣಿನ ಇಟ್ಟಿಗೆಗಳಿಂದ ಕಡಿಮೆ  ಖರ್ಚಿನಲ್ಲಿ ಮಾಡಬಹುದು  ಹಾಗೂ ಇದು ಮಣ್ಣಿನ ಇಟ್ಟಿಗೆಗಿಂತ ಸಬಲ. ಇದೇ ರೀತಿ ತಮಿಳುನಾಡು ಮಧುರೈಯವರಾದ ರಾಜಗೋಪಾಲ್ ವಿಷ್ಣುದೇವನ್ ಅವರು ತಮ್ಮ ಸಂಶೋಧನೆಯಲ್ಲಿ "ರಸ್ತೆಯನ್ನು ಮಾಡುವಾಗ 9ಟನ್ ಬಿಟ್ಯುಮೆನ್ ನ ಜೊತೆಗೆ  1ಟನ್ ಪ್ಲಾಸ್ಟಿಕ್ ಹಾಕಿ ರಸ್ತೆಯನ್ನು ನಿರ್ಮಾಣ ಮಾಡಬಹುದು. ಈ ರೀತಿ ಮಾಡಿದ ರಸ್ತೆಯು ಮಾಮೂಲಿ ರಸ್ತೆಗಿಂತ ಸದೃಢವಾಗಿರುತ್ತದೆ" ಎಂದು ಹೇಳಿದ್ದಾರೆ.
    ದೇಶದ ಸ್ವಚ್ಛತೆಯು ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಸಾಧ್ಯವಿಲ್ಲ. ಇದು ಸಾಧ್ಯ ವಾಗುವುದು ಸರ್ಕಾರದ ಜೊತೆಗೆ ಜನರು ಒಗ್ಗೂಡಿ ಸಹಕರಿ‌ಸಿದಾಗ ಮಾತ್ರ. ಉದಾಹರಣೆಗೆ  ಜನರು ಪ್ರವಾಸಕ್ಕೆ ಹೋಗುವಾಗ  ನೀರಿನ ಪ್ಲಾಸ್ಟಿಕ್ ಬಾಟಲ್ ಬಳಸಿ ಪ್ರವಾಸ ತಾಣಗಳಲ್ಲಿ ಬಿಸಾಡುವ ಬದಲು ಮನೆಯಿಂದಲೇ ನೀರಿನ ಬಾಟಲಿಗೆ ನೀರು ತುಂಬಿ ತೆಗೆದುಕೊಂಡು ಹೋಗಬಹುದು. ಹಾಗೆಯೇ ಅಂಗಡಿಗೆ ಹೋಗುವಾಗ ಮನೆಯಿಂದಲೇ ಕೈ ಚೀಲಗಳನ್ನು ತೆಗೆದುಕೊಂಡು ಹೋದರೆ ಮನೆಗೆ ಬರುವ ಪ್ಲಾಸ್ಟಿಕ್ ಕಡಿಮೆಯಾಗುತ್ತದೆ. ಇದೇ ರೀತಿ ಸಣ್ಣ ಪುಟ್ಟ ಬದಲಾವಣೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ದೇಶ ಸ್ವಚ್ಛ ವಾಗುವುದರಲ್ಲಿ  ಯಾವುದೇ ಸಂಶಯವಿಲ್ಲ. ಈ ಪತ್ರವನ್ನು ಇಲ್ಲಿಗೆ ಕೊನೆಗೊಳಿಸುತ್ತೇನೆ ಧನ್ಯವಾದಗಳು ಅಕ್ಕ.
.............................................. ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ  ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


     ಅಕ್ಕನಿಗೆ ಪೂಜಾ ಮಾಡುವ ನಮಸ್ಕಾರಗಳು..... ನೀವು ಹೇಗಿದ್ದೀರಿ.... ನಾನು ಚೆನ್ನಾಗಿದ್ದೇನೆ. ಹಾಗೆಯೇ ನೀವು ಹೇಳಿದ ಹಾಗೆ ಸಂಭ್ರಮದ ನಡುವೆ ಪರಿಸರವನ್ನು ಕಾಪಾಡುವುದು ನಮ್ಮ ಜವಬ್ದಾರಿ. ನಮ್ಮ ಶಾಲೆಗೆ ಮೊನ್ನೆಯಷ್ಟೆ ಒಬ್ಬರು ಅತಿಥಿಗಳು ಬಂದಿದ್ದರು. ಅವರು ಪರಿಸರದ ಬಗ್ಗೆ ತುಂಬಾ ವಿಷಯ ತಿಳಿಸಿಕೊಟ್ಟರು. ಅಂದರೆ ನಾವು ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ಹೇಳಿದರು. ಆದ್ರೆ ಕೊನೆ ವಿಷಯದಲ್ಲಿ 'ಇಕೋ ಬ್ರಿಕ್' ಎಂಬ ವಿಷಯವನ್ನು ಹೇಳಿದರು. ಆಗ ನಾವು, ಇದೇನಪ್ಪ 'ಇಕೋ ಬ್ರಿಕ್' ಎಂಬ ಹೊಸ ಹೆಸರು.... ಎಂದು ಎಲ್ಲರೂ ಮಾತಾಡಿಕೊಂಡೆವು. ಆಗ ಅವರು ಏನು ಹೇಳಿದರು ಗೊತ್ತೇ?... ನಾವು ಬೇಡದ ಬಾಟಲಿಗಳ ಒಳಗೆ ಪ್ಲಾಸ್ಟಿಕ್ ಗಳನ್ನು ತುಂಬಿಸಿ ಅದರಿಂದ ಏನಾದರೂ ಪ್ರಾಜೆಕ್ಟ್ ಅಥವಾ         ಇಟ್ಟಿಗೆಯಾಗಿ ಉಪಯೋಗಿಸಬಹುದು. ಇದರಿಂದ ಮಣ್ಣಿಗೆ ಕಸ ಎಸೆಯುವುದು ತಪ್ಪುತ್ತದೆ. ಎಂದು ಹೇಳಿದರು. ಇದರಿಂದ ನಮಗೆ ತುಂಬ ಕುಶಿಯಾಯಿತು. ನಂತರ ಅವರು ಹೊರಟರು. ನಂತ್ರ ನಮ್ಮ ಶಾಲೆಗಳಲ್ಲಿ ಇಕೋ ಬ್ರಿಕ್ ನ ಬಗ್ಗೆ ಹಲವಾರು ಸ್ಪರ್ದೆಗಳು ನಡೆದವು. ಇದರಿಂದ ತುಂಬ ಕುಶಿಯಾಯಿತು. ಇದು ನಿರಂತರವಾಗಿ ನಡೆಯಬೇಕು ಎಂದು ಆಶಿಸುತ್ತೇನೆ. ಹೀಗೆ ಹೊಸ ಹೊಸ ಯೋಚನೆಗಳು ಬರಬೇಕು ಈ ನಮ್ಮ ಪರಿಸರ ಕಸದಿಂದ ಮುಕ್ತವಾಗಬೇಕು ಎಂದು ಹೇಳುತ್ತಾ  ನನ್ನ ಪ್ರೀತಿಯ ಅಕ್ಕನಿಗೆ ನನ್ನ ನಮನಗಳು...
................................................. ಪೂಜಾ 
ಎಂಟನೇ ತರಗತಿ
ವಿವೇಕಾನಂದ ಕನ್ನಡ ಮಾದ್ಯಮ ಶಾಲೆ ತೆಂಕಿಲ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



     ನಮಸ್ತೇ ಅಕ್ಕ..... ನಾನು ಧನ್ವಿ ರೈ ಪಾಣಾಜೆ. ನಿಮ್ಮ ಪತ್ರವನ್ನ ನಾವೆಲ್ಲರೂ ಮನೆ ಮಂದಿ ಸೇರಿ  ಓದಿದೆವು. ತುಂಬಾ ಒಳ್ಳೆಯ ವಿಷಯಗಳು ನಮಗೆ ಅದರಿಂದ ತಿಳಿಯಿತು. ಸಾಮಾಜಿಕ ಕಳಕಳಿಯ, ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುವಂತೆ ವಿಶೇಷ ವಿಷಯ ವನ್ನು ನೀವು ಪತ್ರ ದ ಮುಖಾಂತರ ತಿಳಿಯಪಡಿಸಿದ್ದೀರಿ. ಆ ಚಿತ್ರದ ಮೂಲಕ ನಮ್ಮನ್ನು ಆಕರ್ಷಿಸುವಂತೆ ಪ್ರಯತ್ನ ಗಮನಾರ್ಹ. ಪ್ರಕೃತಿಯಿಂದ  ಉಪಕಾರ ಪಡೆಯುವ ನಾವು ಪರಿಸರ ದ ಸಂರಕ್ಷಣೆ ಯನ್ನು ಈ ಮೂಲಕವೂ ಮಾಡಬಹುದು ಎಂಬ ವಿಚಾರ ದಲ್ಲಿ ಇನ್ನಷ್ಟು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪರಿಸರ ಉಳಿಸುವ ಅಳಿಲು ಸೇವೆಯನ್ನು ಮಾಡುವ ದಾರಿಯನ್ನು ವಿವರಿಸಿದ್ದೀರಿ ಅಕ್ಕ. ತುಂಬಾ ಧನ್ಯವಾದಗಳು . ಮುಂದಿನ ಪತ್ರದಲ್ಲಿ ಇನ್ನಷ್ಟು ವಿಶೇಷ ಮಾಹಿತಿಗಾಗಿ  ಕಾಯುತ್ತಿರುವೆವು. 
.................................. ಧನ್ವಿ ರೈ ಪಾಣಾಜೆ. 
7 ನೇ ತರಗತಿ
ವಿವೇಕ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



       ಅಕ್ಕಾ, ನಾನು ಸಾನ್ವಿ ಸಿ ಎಸ್. ನಾನು ಕ್ಷೇಮವಾಗಿದ್ದೇನೆ. ನಿಮ್ಮ ಪತ್ರ ನನಗೆ ತುಂಬಾ ಇಷ್ಟವಾಯಿತು. ಪರಿಸರವನ್ನು ನಾವು ಉಳಿಸಬೇಕಾಗಿದೆ. ನೀವು ಹೇಳಿದಂತೆ ಪರಿಸರ ಮಲಿನಗೊಳ್ಳುವುದರಲ್ಲಿ ಪ್ಲಾಸ್ಟಿಕ್ ಪ್ರಮುಖ ಪಾತ್ರ ವಹಿಸಿದೆ. ಪ್ಲಾಸ್ಟಿಕ್ ಮಣ್ಣಿಗೆ ಸೇರಿದರೆ ಮಣ್ಣು ಕಲುಷಿತಗೊಳ್ಳುತ್ತದೆ. ಆದ್ದರಿಂದ ನಾವು ಪ್ಲಾಸ್ಟಿಕ್ ಮಣ್ಣಿಗೆ ಸೇರದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನೀವು ಹೇಳಿದ ರೀತಿಯನ್ನು ಅನುಸರಿಸಿದರೆ ನಾವು ಭೂಮಿಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಇಡಬಹುದು. ಹಾಗಾಗಿ ನಾನು ನೀವು ಹೇಳಿದ ರೀತಿಯನ್ನು ಅನುಸರಿಸಲು ನಿರ್ಧರಿಸಿದ್ದೇನೆ. ನಿಮ್ಮ ಪತ್ರವನ್ನು ಓದಿದ ನಂತರ ಈ ವಿಷಯ ತಿಳಿಯಿತು. ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು....... ನಿಮ್ಮ ಪ್ರೀತಿಯ ಸಾನ್ವಿಯಿಂದ...
......................................... ಸಾನ್ವಿ ಸಿ ಎಸ್ 
5ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



        ನಾನು ಪ್ರಣಮ್ಯ. ಅಕ್ಕನ ಪತ್ರ ಓದಿ ಸಂತೋಷವಾಯಿತು. ಪರಿಸರವನ್ನು  ನಿರ್ಮಲವಾಗಿ ಇಟ್ಟುಕೊಳ್ಳುವ ಕಾಳಜಿ ಪ್ರತಿ ಮನೆ-ಮನೆಯಿಂದ ಆರಂಭಗೊಂಡರೆ ಬಹುಶಃ ಅಲ್ಲಲ್ಲಿ ಬೇಕಾಬಿಟ್ಟಿಯಾಗಿ ಎಸೆಯುವ ಕಸ, ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳ ಪ್ರಮಾಣ ಕಡಿಮೆಯಾಗಬಹುದೇನೋ?. ಪರಿಸರವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ  ಕರ್ತವ್ಯ ವಾಗಿದೆ. ಪರಿಸರದ ಹಿತದೃಷ್ಟಿಯಿಂದ ಶ್ರಮಿಸುತ್ತಿರುವ ಅದೆಷ್ಟೋ ಜನರ ನೀತಿ ನಮಗೆ ಮಾದರಿಯಾಗಬೇಕು. ಸ್ವಚ್ಛ ಪರಿಸರ ನಿರ್ಮಾಣಕ್ಕೆ ನಾವೂ ಕೈಜೋಡಿಸೋಣ
................................................... ಪ್ರಣಮ್ಯ
10 ನೇ ತರಗತಿ 
ಸಂತಜಾರ್ಜ್ ಆಂಗ್ಲಮಾಧ್ಯಮ 
ಪ್ರೌಢಶಾಲೆ ನೆಲ್ಯಾಡಿ
ಕಡಬ ತಾಲೂಕು,  ದಕ್ಷಿಣ ಕನ್ನಡ  ಜಿಲ್ಲೆ
******************************************


    ಪ್ರೀತಿಯ ಅಕ್ಕನಿಗೆ ಸಿಂಚನಾ  ಶೆಟ್ಟಿ  ಮಾಡುವ ನಮಸ್ಕಾರಗಳು. ನಾನು ಕ್ಷೇಮವಾಗಿದ್ದೇನೆ ಅಕ್ಕ ನೀವು ಕೂಡ, ನಿಮ್ಮ ಕುಟುಂಬದವರು ಕ್ಷೇಮವಾಗಿರುವಿರಿ ಎಂದು ಭಾವಿಸುತ್ತೇನೆ.  ನಾವು ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಬೇಕು. ನಾವು ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಗಿಡಗಳನ್ನು ಬೆಳೆಸಬಹುದು. ಪ್ಲಾಸ್ಟಿಕ್ ಕವರ್ ಗಳಿಂದ  ಮಾಲೆ ಮಾಡಿ ಅಲಂಕರಿಸಬಹುದು. ನಮ್ಮ ಮನೆಗಳಲ್ಲಿ ಕಸವನ್ನು ಹಾಕಲು ಕಸದ ತೊಟ್ಟಿ ತಯಾರಿಸಬೇಕು. ರಸ್ತೆಯ ಬದಿಯಲ್ಲಿ ನೋಡಬೇಕು ಕಸದ ಬಾಟಲಿಗಳು, ಸಮುದ್ರದ ದಂಡೆಯಲ್ಲಿ ಸಹ ಬಿದ್ದಿರುತ್ತದೆ. ಇದರಿಂದ ಜಲ ಮಾಲಿನ್ಯ ಉಂಟಾಗುತ್ತದೆ. ಧನ್ಯವಾದಗಳು ಅಕ್ಕಾ.... ಮುಂದಿನ ಪತ್ರದಲ್ಲಿ ಸಿಗುವ. ಅಲ್ಲಿವರೆಗೆ ಪ್ರೀತಿಯ ತಂಗಿ ಸಿಂಚನಾಳ ನಮನಗಳು.
........................................... ಸಿಂಚನಾ  ಶೆಟ್ಟಿ 
5ನೇ ತರಗತಿ 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೇಡಿಗುಳಿ
ಬಂಟ್ವಾಳ  ತಾಲೂಕು, ದಕ್ಷಿಣ ಕನ್ನಡ  ಜಿಲ್ಲೆ
******************************************


      ನಮಸ್ತೆ ಅಕ್ಕಾ ನಾನು ನಿಭಾ.
ನಿಮ್ಮ ಪತ್ರ ಓದಿ ಸಂತೋಷವಾಯಿತು. ಕಳೆದ ಬಾರಿ ಕಾರಣಾಂತರಗಳಿಂದ ನಿಮ್ಮ ಪತ್ರಕ್ಕೆ ಉತ್ತರಿಸಲಾಗಲಿಲ್ಲ ಕ್ಷಮೆ ಇರಲಿ. ನೀವು ನಮಗೆ ಹೇಳಿದಂತೆ ವಾರ್ಷಿಕೋತ್ಸವದ ಸಂಭ್ರಮ.
ಪರಿಸರ ರಕ್ಷಣೆ ಗೆ ಕೈಗೊಂಡ ಕ್ರಮವಂತೂ ಅತ್ಯದ್ಭುತವಾಗಿದೆ. ಪ್ಲಾಸ್ಟಿಕ್ ಎಂಬ ರಾಕ್ಷಸ ನಮ್ಮ ಪ್ರಪಂಚವನ್ನು ಆಳುತ್ತಿರುವಾಗ ಇಂತಹ ಒಂದೊಂದು ಕೆಲಸ ಮಾಡಿದರೆ ಪ್ಲಾಸ್ಟಿಕ್ ನಾಶ ಮಾಡಲು ಹೆಚ್ಚು ಸಮಯ ಬೇಕಾಗಿಲ್ಲ ಅಂದುಕೊಳ್ಳುತ್ತೇನೆ. ನಾನು ಅಷ್ಟೇ ಇನ್ನೂ ಮುಂದೆ ಪ್ಲಾಸ್ಟಿಕ್ಗಳನ್ನು ಬಾಟಲಿಯಲ್ಲಿ ತುಂಬಿಸದಿದ್ದರೂ ಪ್ಲಾಸ್ಟಿಕನ್ನು ಮರುಬಳಕೆ ಮಾಡುವ ಉಪಾಯ ಮಾಡಿ ಪ್ರಯೋಗಿಸುತ್ತೇನೆ. ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ ಅಕ್ಕಾ.
ಧನ್ಯವಾದಗಳು.
..................................................... ನಿಭಾ 
9ನೇ ತರಗತಿ
ಸ. ಪ. ಪೂ. ಕಾಲೇಜು ಕೊಂಬೆಟ್ಟು 
ಪ್ರೌಢ ಶಾಲಾ ವಿಭಾಗ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article