ಪ್ರೀತಿಯ ಪುಸ್ತಕ : ಸಂಚಿಕೆ - 36
Friday, December 9, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 36
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ..... ‘ಚಿನ್ನಾರಿ ಮುತ್ತ’ ಅಂದ ತಕ್ಷಣ ನಿಮ್ಮಲ್ಲಿ ಕೆಲವರಿಗಾದರೂ ಈ ಹೆಸರಿನ ಸಿನಿಮಾ, ಅದರ ಹಾಡುಗಳು ನೆನಪಾಗಬಹುದು. ಈ ಪುಸ್ತಕವನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ. ಸಿನಿಮಾ ಚೆನ್ನಾಗಿ ಇದೆ. ನೋಡಿಲ್ಲದಿದ್ದರೆ, ಅವಕಾಶ ಸಿಕ್ಕರೆ ನೋಡಿ. ಸಿನಿಮಾ ಒಂದು ರೀತಿಯ ಅನುಭವ ಕೊಟ್ಟರೆ, ಓದು ಇನ್ನೊಂದೇ ರೀತಿಯ ಅನುಭವ ಕೊಡುತ್ತದೆ. ಸಿನಿಮಾದಲ್ಲಿ ಕಥೆಯನ್ನು ನಮ್ಮ ಕಣ್ಣೆದುರು ತೋರಿಸುತ್ತಾರೆ. ಆದರೆ ಓದುವಾಗ ಕಥೆ ನಮ್ಮ ಮನಸ್ಸಿನಲ್ಲಿ ನಮಗೆ ಬೇಕಾದ ಹಾಗೆ ರೂಪ ತೆಗೆದುಕೊಳ್ಳುತ್ತದೆ. ಆ ರೀತಿ ಕಲ್ಪನೆ ಕೂಡಾ ಬಹಳ ಖುಶಿ ಕೊಡುತ್ತದೆ. ಅಜ್ಜಿ ಜೊತೆಗೆ ಬೆಳೆದ ಮುತ್ತ ಎಂಬ ಹೆಸರಿನ ಪುಟ್ಟ ಹುಡುಗನ ಕಥೆ ಇದು. ಅಜ್ಜಿ ತೀರಿ ಹೋದ ಮೇಲೆ, ಇನ್ನೊಬ್ಬರ ಮನೆ ಕೆಲಸದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅಲ್ಲಿ ಸರಿ ಬರದೆ, ದೂರದ ಪಟ್ಟಣಕ್ಕೆ ಓಡಿ ಹೋಗುತ್ತಾನೆ. ಏನೇನೋ ಕತೆಗಳು ನಡೆದು ಕೊನೆಯಲ್ಲಿ ದೊಡ್ಡ ಓಟಗಾರನಾಗುತ್ತಾನೆ. ಈ ಪುಸ್ತಕದಲ್ಲಿ ಸೊಗಸಾದ ಹಳ್ಳಿ ಆಡುಮಾತು ಇದೆ. ಓದಲು ಖುಶಿ ಎನಿಸುತ್ತದೆ. ನಡುನಡುವೆ ಕಥೆಗೆ ಪೂರಕವಾದ ಚಿತ್ರಗಳೂ ಇವೆ. ಮುತ್ತನ ಬದುಕಲ್ಲಿ ಏನೇನಾಯಿತು ಅಂತ ತಿಳಿಯಲು ಪುಸ್ತಕ ಓದಿ. ನಿಮಗೆ ಇಷ್ಟ ಆಗುತ್ತದೆ, ನೋಡಿ.
ಲೇಖಕರು: ಎಚ್.ಎಸ್. ವೆಂಕಟೇಶ ಮೂರ್ತಿ
ಚಿತ್ರಗಳು: ಪಾರ್ಥ ಸೆನ್ ಗುಪ್ತಾ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ ( ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718)
ಬೆಲೆ: ರೂ.100
ಆರು, ಏಳನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ಇನ್ನೂ ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************