
ಸಂಚಾರಿಯ ಡೈರಿ : ಸಂಚಿಕೆ - 23
Friday, December 16, 2022
Edit
ಸಂಚಾರಿಯ ಡೈರಿ : ಸಂಚಿಕೆ - 23
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
ಒಡಿಶಾದ ಹಳ್ಳಿಯಲ್ಲೊಂದು ದಿನ
------------------------------------------
ಕೊನಾರ್ಕ್‌ನ ಸೂರ್ಯ ದೇವಾಲಯ ವಿಶ್ವ ಪ್ರಸಿದ್ಧ ಪ್ರವಾಸಿತಾಣ. ದಿನಂಪ್ರತಿ ಸಾವಿರಾರು ಪ್ರವಾಸಿಗರು ಆಗಮಿಸುವ ತಾಣ. ಒಡಿಶಾ ರಾಜ್ಯಕ್ಕೆ ತೆರಳಬೇಕು, ಅಲ್ಲಿಯ ಜನಜೀವನ, ಸಂಸ್ಕೃತಿ, ಆಹಾರ, ವಿಹಾರದ ಬಗ್ಗೆ ಕುತೂಹಲವಂತೂ ವಿಪರೀತವಿತ್ತು. ಒಡಿಶಾದಲ್ಲಿ ಭುಬನೇಶ್ವರ, ಪುರಿ, ಬಾರಿಪಾದಾ, ಭದ್ರಕ್‌ನಂತಹ ಸ್ವಲ್ಪ ನಗರೀಕೃತ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೆನಾದರೂ, ಹಳ್ಳಿಯ ಸೌಂದರ್ಯ ಕಂಡಿರಲಿಲ್ಲ! ಆ ಅವಕಾಶ ಸಿಕ್ಕಿದ್ದು ಕೊನಾರ್ಕ್ ತೆರಳಿದ್ದಾಗ!.
ಅದು 2022 ರ ಮಾರ್ಚ್ ತಿಂಗಳು. ಒಡಿಶಾ ರಾಜ್ಯದಲ್ಲೆಲ್ಲಾ ಪಂಚಾಯತ್ ಚುನಾವಣೆಯ ಸಡಗರ, ಗದ್ದಲ-ಕೋಲಾಹಲ!. ಮನೆ ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ ಬ್ಯಾನರ್‌ಗಳು, ಕಾಗದ ಪತ್ರಗಳ ಚೂರುಗಳು ಕಾಣುತ್ತಿದ್ದವು. ಸಿಕ್ಕ ಸಿಕ್ಕ ಗೋಡೆಗಳಲ್ಲಿ ಬಣ್ಣ ಬಣ್ಣದ ಚಿತ್ತಾರ, ಅಭ್ಯರ್ಥಿಗಳ ಹೆಸರು, ಚಿಹ್ನೆ ಹೀಗೆ ಎಲ್ಲಾ ಕಡೆಯೂ ಪ್ರಚಾರವೇ!
ನಾ ಕಂಡ ಹಳ್ಳಿ ಅದು ಕೊನಾರ್ಕ್‌ನಿಂದ 4 ಕಿಮೀ ದೂರದ ಕಾಕತ್‌ಪುರ್ ಜಿಲ್ಲೆಯ ಒಂದು ಪುಟ್ಟ ಊರು. ಬಹುತೇಕ ಮಣ್ಣಿನ ಮನೆಗಳು. ಕೆಲವು ಮನೆಗಳ ಮೇಲೆ ಮುಳಿ ಹುಲ್ಲಾದರೆ, ಕೆಲವು ಮನೆಗಳ ಮೇಲೆ ಕಬ್ಬಿಣದ ಟಿನ್! ಶಾಲೆಗಳ ಛಾವಣಿಯೂ ಸಹ ಕಬ್ಬಿಣದ ಟಿನ್‌ನಿಂದಲೇ ಮಾಡಿದ್ದವು. ಮನೆ ಮಣ್ಣಿನದ್ದಾದರೂ ಮನೆ ಗೋಡೆಗಳಲ್ಲಿ ಸುಂದರ ವರ್ಣಾಕೃತಿಗಳು! (ಯಾವುದೋ ವಾರ್ಲಿ ಆರ್ಟ್, ಮುರಲ್ ಪೈಂಟಿಂಗ್ ಅನ್ಕೋಬೇಡಿ, ಪಂಚಾಯತ್ ಚುನಾವಣಾ ಅಭ್ಯರ್ಥಿಗಳ ಪ್ರಚಾರ ಚಿತ್ರಗಳಾಗಿದ್ದವು).
ಒಡಿಶಾದ ಪುಟ್ಟ ಹಳ್ಳಿ ಎಂದರೆ ಕೇಳಬೇಕೆ ? ಮನೆಮನೆಯಲ್ಲೂ ಒಡಿಯಾ ಭಾಷೆಯ ಘಮಲು! ಕೋಣ? ಕೋಣ? ಎನ್ನುತ್ತಿದ್ದರು. ನಾನು ಕೋಣವೇ ಎಂದು ಕೆಂಪು ಕಣ್ಣು ಮಾಡಿದಾಗ ನನ್ನ ಗೆಳೆಯ ಅಯ್ಯೋ ! ಕೋಣ ಎಂದರೆ ಒಡಿಯಾ ಭಾಷೆಯಲ್ಲಿ ಏನು ? ಎಂಬರ್ಥ ಅಂದುಬಿಟ್ಟ! ಹಿಂದಿ ಗೊತ್ತಿದ್ದೋರು ನೂರಕ್ಕೆ ಇಬ್ಬರು!
ಅಂದು ಸಂಜೆ ಪಕ್ಕದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟಕ್ಕೆ ಹೋಗಿದ್ದೆವು. ಹಠಾತ್ತನೆ ಧ್ವನಿವರ್ಧಕದಲ್ಲಿ ವಿರೋಧಪಕ್ಷದ ಚುನಾವಣಾ ಪ್ರಚಾರದ ಹಾಡು 'ಲೊಡಾಯಿ ಕೊರ್ಬೆ, ಲೊಡಾಯಿ ಕೊರ್ಬೆ' ಪ್ರಸಾರವಾದಾಗ ಇತ್ತ ಆಡಳಿತ ಪಕ್ಷದ ಬೆಂಬಲಿಗರು ಬೊಂದೊ ಕೊರೊ (ಬಂದ್ ಮಾಡಿ) ಎಂದು ಬೊಬ್ಬಿರಿಯತೊಡಗಿದರು. ಇನ್ನಾ ಸಮಸ್ಯೆ ಬೇಡ ಅಂತಾ ನಾ ಹಿಂದಿರುಗಿ ಬಂದೆ. ಹಾಗೇ ಬರೋವಾಗ ದಾರಿಯಲ್ಲಿ ಒಣಗಲು ಇಟ್ಟ ಬೆರಣಿ, ಎತ್ತಿನ ಗಾಡಿ ಕಂಡು ಮನಃಪುಳಕವಾಯಿತು. ಇಂತಹದು ನಮ್ಮ ಊರಲೆಲ್ಲಾ ಎಲ್ಲಿ ಅಲ್ವೇ?.. ಮನೆಗೆ ಬಂದಾಗ ಬಿಸಿಬಿಸಿ ಪಕಳೊ (ನಮ್ಮೂರಿನ ಗಂಜಿ) ತಯಾರಾಗಿತ್ತು.
ಮರುದಿನ ಬೆಳಗ್ಗೆ ಮನೆಯ ಬಟ್ಟೆಗಳನ್ನೆಲ್ಲಾ ಸೈಕಲ್‌ಗೆ ಏರಿಸಿ, ಕೆರೆಯಲ್ಲಿ ಒಗೆಯಲು ಕೊಂಡು ಹೋದರೆ ಇತ್ತ ನಾವು ಪಕ್ಕದಲ್ಲೆ ಇದ್ದ ಮಾರುಕಟ್ಟೆಗೆ ಹೋದೆವು. ಊರ ತರಕಾರಿಗಳ ಮಧ್ಯೆ ವಿಶೇಷವಾಗಿ ಕಂಡ ವಸ್ತು ಗೆದ್ದಲಿನ ಮೊಟ್ಟೆಗಳು! ಅಲ್ಲಿಯ ಕೆಲವು ಜನರು ಇದನ್ನ ಇಷ್ಟಪಟ್ಟು ತಿನ್ನುತ್ತಾರಂತೆ (ನಮ್ಮಲ್ಲಿ ಇರುವೆ ಮೊಟ್ಟೆಯನ್ನ ಸೇವಿಸುವವರಿದ್ದಾರೆ).
ಹೀಗೆ ಒಡಿಶಾದ ಹಳ್ಳಿಗೆ ತೆರಳಿ, ಅಲ್ಲಿಯ ಜನಜೀವನದ ಮೇಲೊಂದು ಕಣ್ಣೋಟ ಹಾಯಿಸುವ ಸದಾವಕಾಶ ನನಗೊದಗಿತ್ತು..
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
YouTube channel:
https://youtube.com/@thesilentsanchari4227
******************************************