ಮಕ್ಕಳ ಸಂಭ್ರಮಕ್ಕೆ ಬೇಕಿದೆ - "ಹೆತ್ತವರ ಜಾಣನಡೆ"... ಮಕ್ಕಳ ದಿನಾಚರಣೆಯ ವಿಶೇಷ ಲೇಖನ
Sunday, November 13, 2022
Edit
ಲೇಖಕರು : ಮೌನೇಶ ವಿಶ್ವಕರ್ಮ
ಪತ್ರಕರ್ತ, ರಂಗನಿರ್ದೇಶಕ
ನವೆಂಬರ್ ತಿಂಗಳೆಂದರೆ ಸಾಕು, ಮಕ್ಕಳಲ್ಲಿ ಒಂದು ರೀತಿಯ ಉತ್ಸಾಹ, ಹುಮ್ಮಸ್ಸು... ಇದಕ್ಕೆ ನವೆಂಬರ್ ನ.14 ರ ಮಕ್ಕಳ ದಿನಾಚರಣೆಯೊಂದೇ ಕಾರಣವಲ್ಲ, ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವ ದಿಂದ ತೊಡಗಿ ಸಾಮಾನ್ಯವಾಗಿ ನವೆಂಬರ್ ತಿಂಗಳಿನಲ್ಲೇ ಎದುರಾಗುವ ದೀಪಾವಳಿ ಹಬ್ಬ, ಶಾಲೆಯ ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಡಿಸೆಂಬರ್ ತಿಂಗಳಲ್ಲಿ ನಡೆಯುವ ಶಾಲಾ ವಾರ್ಷಿಕೋತ್ಸವದ ಪೂರ್ವಸಿದ್ಧತೆಗಳು ಮಕ್ಕಳಲ್ಲಿ ಲವಲವಿಕೆ ಹೆಚ್ಚಿಸಿರುತ್ತದೆ. ಇದು ಮಕ್ಕಳ ಹಕ್ಕು, ಆದರೆ ಈ ಉತ್ಸಾಹ, ಲವಲವಿಕೆ ಕೇವಲ ನವೆಂಬರ್-ಡಿಸೆಂಬರ್ ತಿಂಗಳಿಗೆ ಮಾತ್ರ ಮೀಸಲಾಗದೆ ವರ್ಷಪೂರ್ತಿ ಸಿಗುವಂತಾಗಬೇಕು.
ಅಂದ ಹಾಗೆ ಈಗಿನ ಮಕ್ಕಳು ಶಾಲಾಪೂರ್ವ ಪ್ರಾಥಮಿಕ ತರಗತಿಗಳಿಂದಲೇ ಹೆಚ್ಚಿನ ಶೈಕ್ಷಣಿಕ ಒತ್ತಡದಲ್ಲಿರುತ್ತಾರೆ. ಇದಕ್ಕೆ ಕಾರಣ ಈಗಿನ ಶಿಕ್ಷಣ ವ್ಯವಸ್ಥೆ ಎನ್ನುವುದಕ್ಕಿಂತಲೂ ಹೆತ್ತವರು ತಮ್ಮ ಮಕ್ಕಳ ಮೇಲೆ ಇರಿಸಿರುವ ಅತಿಯಾದ ಪ್ರೀತಿ ಮತ್ತು ನಿರೀಕ್ಷೆ ಎಂದರೆ ತಪ್ಪಲ್ಲ. ಮೂವತ್ತೈದು ವರ್ಷಗಳ ಹಿಂದೆ 1ರಿಂದ 2ನೇ ತರಗತಿವರೆಗಿನ ಮಕ್ಕಳ ಕಲಿಕೆ ಆಟದ ಮಾದರಿಯಲ್ಲಿರುತ್ತಿದ್ದು, 3ಮತ್ತು 4ನೇ ಅಕ್ಷರ, ಪದ, ಜ್ಞಾನದ ಅರ್ಥವನ್ನು ತಿಳಿಸುತ್ತಿದ್ದರೆ, 5ನೇ ತರಗತಿಯಿಂದ ABCD ಅಕ್ಷರ ಮಾಲೆ ಸಹಿತ ಶಿಕ್ಷಣದ ಸಾಧ್ಯತೆಗಳು ಕಲಿಕೆಯಾಗಿ ಹಂತ-ಹಂತವಾಗಿ ವಿದ್ಯಾರ್ಥಿಯ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತಿತ್ತು. ಆದರೆ ಆಗಿನ ಶಾಲಾಪೂರ್ವ ಶಿಕ್ಷಣ, ಶಾಲಾಶಿಕ್ಷಣ ಬದುಕಿನ ಪಾಠದ ಅನುಭವ ಕಲಿಕೆಯಾಗಿ ಜೀವನೋತ್ಸಾಹ ನೀಡುತ್ತಿತ್ತು. ಆಗಿನ ಜನತೆ ಹೆಚ್ಚಿನ ಶೈಕ್ಷಣಿಕ ವಿದ್ಯಾರ್ಹತೆ ಪಡೆಯದೇ ಇದ್ದರೂ, ಬದುಕನ್ನು ಆತ್ಮಸ್ಥೈರ್ಯದಿಂದ ಎದುರಿಸುವ ಎಲ್ಲಾ ಅನುಭವಗಳನ್ನು ಹೊಂದಿದ್ದರು. ಆದರೆ ಈಗ ಯಾವುದೂ ಹಿಂದಿನಂತಿಲ್ಲ.. ಮಕ್ಕಳ ಮೇಲೆ ಹೆತ್ತವರು ಇಟ್ಟಿರುವ ಅತಿಯಾದ ಪ್ರೀತಿ, ನಿರೀಕ್ಷೆಗಳು ಶಿಕ್ಷಣ ವ್ಯವಸ್ಥೆಯನ್ನೇ ಅಡಿಮೇಲು ಮಾಡುವುದರ ಜೊತೆಗೆ ಮಕ್ಕಳಲ್ಲಿ ಹುಂಬಧೈರ್ಯವನ್ನು ಮಾತ್ರ ತುಂಬುತ್ತಿದೆಯೇ ಎಂಬ ಆತಂಕ ಎದುರಾಗಿದೆ.
ಮೂರೂವರೆ ವರ್ಷ ಪ್ರಾಯದಲ್ಲೇ ನರ್ಸರಿ, ಅಂಗನವಾಡಿಗೆ ಹೋಗುವ ಮಕ್ಕಳು ಹಾಡು ಹಾಡಬೇಕು, ಡ್ಯಾನ್ಸ್ ಮಾಡಬೇಕು, ಚಂದದ ಚಿತ್ರ ಬರೆಯಬೇಕು, ಬಹುಮಾನ ಪಡೆಯಬೇಕು ಎಂದೆಲ್ಲಾ ಬಣ್ಣಬಣ್ಣದ ಕನಸು ಕಾಣುವ ಕೆಲ ಹೆತ್ತವರಂತೂ, ಮಕ್ಕಳು ಎಲ್ಕೆಜಿ -ಯುಕೆಜಿ ತರಗತಿ ಸೇರ್ಪಡೆಗೊಂಡ ಬಳಿಕವಂತೂ ಆಕಾಶದಲ್ಲೇ ಹಾರಾಟ ನಡೆಸುತ್ತಾರೆ. ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ನೀಡಿ ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಾಸಕ್ಕೆ ಗಮನ ನೀಡಬೇಕಾದ ಆ ವಯಸ್ಸಿನಲ್ಲಿಯೇ ಅಂಕಗಳಿಕೆ, ಬಹುಮಾನಗಳೇ ಪ್ರಧಾನ ಎನ್ನುವುದನ್ನು ತುರುಕಿಸಲಾಗುತ್ತಿದೆ. ಬಾಲ್ಯದ ಸಂಭ್ರಮವನ್ನು ಪಡೆಯಬೇಕಾದ ಮಕ್ಕಳಲ್ಲಿ ಕೇವಲ ಸ್ಪರ್ಧಾತ್ಮಕ ಮನೋಭಾವವನ್ನು ಮಾತ್ರ ಉತ್ತೇಜಿಸುವ ಪ್ರಯತ್ನಗಳೇ ನಮ್ಮ ಸುತ್ತಮುತ್ತ ಕಾಣುತ್ತಿದೆ. 5ನೇ ವಯಸ್ಸಿನಲ್ಲೇ ತನ್ನ ಮಗ/ಮಗಳು ಕರಾಟೆ ಕಲಿಯಬೇಕು, ಯಕ್ಷಗಾನ ಕಲಿಯಬೇಕು, ಚೆಸ್ ಕಲಿಯಬೇಕು, ಅಬಾಕಸ್ ಹೀಗೆ ನಾನಾ ರೀತಿಯ ಕಲಿಕೆಯ ಒತ್ತಡಗಳ ನಡುವೆ ನಲುಗುವ ಪುಟ್ಟು-ಪುಟಾಣಿ ಮಕ್ಕಳು ಹೋಂ ವರ್ಕ್, ಪ್ರಾಜೆಕ್ಟ್ ಎಂಬ ಶಾಲೆಯ ಶೈಕ್ಷಣಿಕ ಒತ್ತಡಗಳಿಗೂ ಒಳಗಾಗುತ್ತಿದ್ದಾರೆ.
ಮಕ್ಕಳ ಮೇಲೆ ಒತ್ತಡಗಳು ಹೆಚ್ಚುತ್ತಿರುವುದಕ್ಕೆ ನೇರ ಕಾರಣ ಎಂದು, ಹೆತ್ತವರ ಅತಿಯಾದ ಪ್ರೀತಿ-ನಿರೀಕ್ಷೆಗಳನ್ನು ನಾವು ಬೊಟ್ಟು ಮಾಡಿದರೂ, ಪರೋಕ್ಷವಾಗಿ ಹಲವಾರು ಕಾರಣಗಳಿವೆ.
ಒಂದೇ ತರಗತಿಯಲ್ಲಿ ಕಲಿಯುವ ಮಕ್ಕಳ ನಡುವೆ ಹೆತ್ತವರು ನಡೆಸುವ ಹೋಲಿಕೆ ಮಕ್ಕಳನ್ನು ಅತಿಯಾದ ಒತ್ತಡಕ್ಕೆ ತಳ್ಳುತ್ತಿದೆ. ಕೆಲವೊಂದು ವಿಚಾರದಲ್ಲಿ ಇದರಿಂದ ಸಕಾರಾತ್ಮಕ ಪರಿಣಾಮಗಳನ್ನು ಕಂಡುಕೊಳ್ಳಲು ಸಾಧ್ಯವಿದ್ದರೂ, ಹಲವು ಬಾರಿಯ ಪರಿಣಾಮ ಮಕ್ಕಳನ್ನು ಹಾದಿತಪ್ಪಿಸುವ ಸಾಧ್ಯತೆಯೂ ಇದೆ. ಜೊತೆಗೆ ಟಿವಿ ರಿಯಾಲಿಟಿ ಶೋಗಳಲ್ಲಿ ಪ್ರಕಟಗೊಳ್ಳುವ ರಿಯಾಲಿಟಿಯಲ್ಲದ ಹಲವು ನಾಟಕೀಯ ಅಂಶಗಳೂ ಮಕ್ಕಳ ಪಾಲಿಗೆ ಮುಳ್ಳಾಗಿದೆ. ಇಂತಹಾ ಸಂದರ್ಭದಲ್ಲಿ ಹೆತ್ತವರ ನಡೆ ನುಡಿಗಳು ಬಹಳ ಮುಖ್ಯವಾಗಿರುತ್ತದೆ. ಮಕ್ಕಳ ಬಗ್ಗೆ ನಿರೀಕ್ಷೆಗಳಿರಬೇಕು, ಭರವಸೆಗಳಿರಬೇಕು. ಆದರೆ ಅದು ಮಿತಿಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ.
"ಈಗಲೇ ಡ್ರಾ, ಈಗಲೇ ಬಹುಮಾನ" ಎಂಬ ಮನಸ್ಥಿತಿಯ ಹೆತ್ತವರು ಮಕ್ಕಳನ್ನು ಅತಿಯಾಗಿ ಮುದ್ದಿಸಿ ಮಕ್ಕಳ ಸ್ವಯಂ ಚಿಂತನೆಗೆ ಅವಕಾಶ ನೀಡದೆ, ಮತ್ತೊಬ್ಬರದ್ದನ್ನೇ ಹೇರುತ್ತಿದ್ದರೆ ಮುಗ್ಧ ಮನಸ್ಸುಗಳಿಗೆ ಹೇಗಾದೀತು..? ಇಂತಹಾ ಸ್ಥಿತಿ ಬದಲಾಗಬೇಕು. ಮಕ್ಕಳ ಬಗೆಗಿನ ನಿರೀಕ್ಷೆಗಳು ಹೆಚ್ಚಿದಂತೆಯೇ ಶಿಕ್ಷಣ ವ್ಯವಸ್ಥೆಯೂ ಹೆತ್ತವರ ಓಲೈಕೆಯ ಶಿಕ್ಷಣವಾಗಿ ಬದಲಾಗುತ್ತಿದೆಯೇ ವಿನಃ ಮಗು ಕೇಂದ್ರಿತವಾಗುತ್ತಿಲ್ಲ. ಹೀಗಾಗಿ ಮಕ್ಕಳ ಮೇಲಿನ ಒತ್ತಡಗಳು ಹೆಚ್ಚುತ್ತಲೇ ಇದೆ. ಇದು ಬದಲಾಗಬೇಕು ಅಂತಿದ್ದರೆ ನಾವೂ ಬದಲಾಗಬೇಕು.. ಮಕ್ಕಳನ್ನು ಅನಿಯಂತ್ರಿತ ಅಪೇಕ್ಷೆಗಳಿಗೆ ಚಿಕ್ಕವಯಸ್ಸಿನಲ್ಲಿ ನಾವೇ ತಳ್ಳಿದರೆ ಅದು ಮಕ್ಕಳ ಪಾಲಿಗೆ ಮುಳ್ಳಾಗುವ ಸಾಧ್ಯತೆಯೇ ಹೆಚ್ಚು ಎನ್ನುವುದನ್ನು ಅರಿತು ಹೆತ್ತವರೆಲ್ಲರೂ ತಮ್ಮ "ಜಾಣನಡೆ" ಅನುಸರಿಸಬೇಕಾದ್ದು ಕಾಲದ ಅನಿವಾರ್ಯತೆ.
ಎಲ್ಲಾ ಮಕ್ಕಳಿಗೂ, ಮಗುಮನಸ್ಸಿನ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು....
ಪತ್ರಕರ್ತ, ರಂಗನಿರ್ದೇಶಕ
ಶ್ರೀದಿಗ್ವಿಜಯಮ್ ಮನೆ, ಸಂಪ್ಯ
ಆರ್ಯಾಪು-ಪುತ್ತೂರು ದ.ಕ.ಜಿಲ್ಲೆ
Mob : +91 94810 17606
*******************************************