-->
ಜೀವನ ಸಂಭ್ರಮ : ಸಂಚಿಕೆ - 59

ಜೀವನ ಸಂಭ್ರಮ : ಸಂಚಿಕೆ - 59

ಜೀವನ ಸಂಭ್ರಮ : ಸಂಚಿಕೆ - 59

                                             
       ಮಕ್ಕಳೇ, ಮನಸ್ಸಿನ ಸಾಮರ್ಥ್ಯ ತಿಳಿದುಕೊಂಡಿದ್ದೇವೆ. ಈ ದಿನ ಮನಸ್ಸಿನ ದೌರ್ಬಲ್ಯ ಅಂದರೇನು...? ಇದು ನಮ್ಮ ಜೀವನ ಹೇಗೆ ಕೆಡಿಸುತ್ತದೆ... ಎಂಬುದನ್ನು ನೋಡೋಣ.
     ಈ ಕಥೆ ಚಿರಪರಿಚಿತ. ಕೇಳಿದ್ದರೆ ಸಂತೋಷ. ಕೇಳಿದ್ದರೂ, ಕೇಳದಿದ್ದರೂ ಇದನ್ನು ಓದಿ. ಒಂದು ಊರಿನಲ್ಲಿ ಒಂದು ದೊಡ್ಡ ಮರ. ಈ ಮರದ ಕೆಳಗೆ ಒಂದು ಕೋಳಿ ವಾಸ ಮಾಡಿತ್ತು. ಅದು ತನ್ನ ಸಂತತಿ ಮುಂದುವರಿಸಲು ಮೊಟ್ಟೆ ಇಡುತ್ತಿತ್ತು. ಒಮ್ಮೆ ಗಿಡುಗ ಹಾರಿ ಬಂದು ಮರದ ಮೇಲೆ ಕೂತಿತ್ತು. ಆ ಗಿಡುಗ ತನ್ನ ಮೊಟ್ಟೆಯನ್ನು ಇಟ್ಟಿತು. ಅದು ಆಯ ತಪ್ಪಿ ಕೆಳಗೆ ಬಿತ್ತು. ಆದರೆ ಅದು ಒಡೆಯಲಿಲ್ಲ. ಕೋಳಿ ಮೊಟ್ಟೆ ಇತ್ತಲ್ಲ ಅದರ ಪಕ್ಕ ಬಿತ್ತು. ಕೋಳಿ ಮೊಟ್ಟೆ ಮೇಲೆ ಕುಳಿತು ಶಾಖ ಕೊಡುತ್ತಿತ್ತು. ಆ ಶಾಖಕ್ಕೆ ಮೊಟ್ಟೆ ಒಡೆದು ಕೋಳಿ ಮರಿಗಳು ಹೊರಬಂದವು. ಅದೇ ರೀತಿ ಗಿಡುಗದ ಮೊಟ್ಟೆಯಿಂದ ಗಿಡುಗದ ಮರಿ ಹೊರಬಂದಿತ್ತು. ಗಿಡುಗದ ಮರಿ ಕೋಳಿ ಮರಿಯೊಂದಿಗೆ ಆಡಿಕೊಂಡಿತ್ತು. ಇವೇ ನನ್ನ ಅಣ್ಣ, ತಂಗಿ ಮತ್ತು ತಾಯಿ ಎಂದು ನಂಬಿತ್ತು. ಕೋಳಿ ಮರಿಗಳು ಹೇಗೆ ಓಡಾಡುತ್ತವೆಯೋ ಹಾಗೆ ಗಿಡುಗನ ಮರಿ ಕೂಡ ಓಡಾಡಿಕೊಂಡು ಆನಂದವಾಗಿತ್ತು. 
      ಒಮ್ಮೆ , ಒಂದು ಗಿಡುಗ ಮರದ ಮೇಲೆ ಬಂದು ಕುಳಿತಿತ್ತು. ಆ ಕಡೆ ಈ ಕಡೆ ನೋಡುವಾಗ ಗಿಡುಗನ ಮರಿ ಓಡಾಡುವುದನ್ನು ನೋಡಿತು. ಇದು ಏಕೆ ಇಲ್ಲಿ ಓಡಾಡುತ್ತಿದೆ ಎಂದು ಯೋಚಿಸಿ, ತಕ್ಷಣ ಅದನ್ನು ಹಿಡಿಯಲು ಮೇಲಿನಿಂದ ಹಾರಿತು. ಈ ಗಿಡುಗನನ್ನು ನೋಡಿ ಎಲ್ಲಾ ಕೋಳಿ ಮರಿಗಳು ಪ್ರಾಣ ಭಯದಿಂದ ಆ ಕಡೆ ಈ ಕಡೆ ಓಡಿದವು. ಗಿಡುಗನ ಮರಿ ಕೂಡ ಓಡುತ್ತಿತ್ತು. ದೊಡ್ಡಗಿಡುಗ ಹಾರಿ ಬಂದು ತನ್ನ ಕಾಲಿನಿಂದ ಹಿಡಿದುಕೊಂಡು ಮರದ ಮೇಲೆ ಹೋಯಿತು. ಎತ್ತರದ ಮರದ ಕೊಂಬೆ ಮೇಲೆ ಇದನ್ನು ಕುಳ್ಳಿರಿಸಿತು. ಮರಿ ಗಿಡುಗ ಹೇಳಿತು, ನನ್ನ ಅಣ್ಣ, ಅಕ್ಕ, ತಂಗಿ ಮತ್ತು ನನ್ನ ತಾಯಿ ಹತ್ತಿರ ನನ್ನನ್ನು ಬಿಟ್ಟುಬಿಡು. ನನಗೆ ಭಯವಾಗುತ್ತಿದೆ ಎಂದಿತು. ಅದಕ್ಕೆ ದೊಡ್ಡ ಗಿಡುಗ ಹೇಳಿತು, "ನೀನು ಕೋಳಿಯಲ್ಲ, ನನ್ನಂತೆ ಗಿಡುಗ. ನಿನ್ನ ಕೆಲಸ ಹಾರುವುದು ಮತ್ತು ಆಹಾರಕ್ಕೆ ಬೇಟೆಯಾಡುವುದು" ಇದಕ್ಕೆ ಮರಿಗಿಡುಗ ಹೇಳಿತು. ಇಲ್ಲ ಇಲ್ಲ ನೀನು ತಪ್ಪು ತಿಳಿದುಕೊಂಡಿದ್ದೀ, ನೀನಂದು ಕೊಂಡಂತೆ ನಾನಲ್ಲ. ನನಗೆ ಹಾರಲು ಬರುವುದಿಲ್ಲ ಎಂದಿತು. ಇದಕ್ಕೆ ದೊಡ್ಡ ಗಿಡುಗ ಹೇಳಿತು "ಇಲ್ಲ, ನೀನು ತಪ್ಪು ತಿಳಿದುಕೊಂಡಿದ್ದೀ, ನೀನು ನನ್ನಂತೆ ಹಾರಬಲ್ಲೆ, ನಾನೇ ಹಾರುತ್ತೇನೆ ಅಂದ ಬಳಿಕ ನಿನಗ್ಯಾಕೆ ಹಾರಲಾಗುವುದಿಲ್ಲ. ನಿನ್ನಲ್ಲಿ ನನ್ನಷ್ಟೇ ಸಾಮರ್ಥ್ಯವಿದೆ, ಹಾರು" ಎಂದಿತು. ಮರಿಗಿಡುಗ ಹೇಳಿತು.. "ಹಾರುವುದು ನನ್ನ ಕೈಯಲ್ಲಿ ಸಾಧ್ಯವಿಲ್ಲ" ಎಂದಿತು. ಆಗ ದೊಡ್ಡ ಗಿಡುಗ ಸಿಟ್ಟಿನಿಂದ ನೂಕೆ ಬಿಟ್ಟಿತು. ಮರಿಗಿಡುಗ ಕೆಳಗೆ ಬಿದ್ದು ಸತ್ತು ಹೋಗುತ್ತೇನೆ ಎಂಬ ಭಯವಾಯಿತು, ಆ ಭಯದಲ್ಲಿ ರೆಕ್ಕೆ ಬಿಚ್ಚಿತು. ಆಗ ರೆಕ್ಕೆ ಬಿಚ್ಚಿದ್ದೇ ತಡ ಹಾರಲು ಪ್ರಾರಂಭಿಸಿತು. ಆಗ ಆ ಮರಿ ಗಿಡುಗ ಅಂದುಕೊಂಡಿತು ನಾನು ಹಾರ ಬಲ್ಲೆ ಎಂದು.
       ಇನ್ನೊಂದು ಘಟನೆ ನೋಡಿ. ಒಂದು ದೊಡ್ಡ ತೆಂಗಿನ ಮರವಿತ್ತು. ಅದರಿಂದ ಬಲಿತ ತೆಂಗಿನಕಾಯಿ ಮರದಿಂದ ಕೆಳಗೆ ಬಿದ್ದಿತ್ತು. ಆ ತೆಂಗಿನ ಮರದ ಪಕ್ಕದಲ್ಲಿದ್ದ ತೆಂಗಿನಕಾಯಿ ತನ್ನ ತಾಯಿಯನ್ನು ನೋಡಿತು. ನಾನು ನನ್ನ ತಾಯಿಯ ಹಾಗೆ ಎತ್ತರವಾಗಿ ಬೆಳೆಯಲಾರೆ ಎಂದಿತು. ಅದು ಇನ್ನೂ ನೆಟ್ಟಿಲ್ಲ, ನೀರು ಹಾಕಿಲ್ಲ. ಆಗ ಆ ತೆಂಗಿನ ಮರದ ಮಾಲೀಕ ಆ ಕಾಯನ್ನು ಮಣ್ಣಿನಲ್ಲಿ ಹಾಕಿ, ಗೊಬ್ಬರ, ನೀರು ಹಾಕಿದ. ಬಿಸಿಲಿನಿಂದ ಹಿತವಾದ ಶಾಖ ದೊರಕಿತು. ಆ ಕಾಯಿ ಬೆಳೆಯಲು ಶುರು ಮಾಡಿತು. ಕೆಲವಾರು ವರ್ಷಗಳಲ್ಲಿ ತಾಯಿ ಮರದ ಎತ್ತರಕ್ಕೆ ಬೆಳೆದಿತ್ತು. 
       ಈ ಎರಡು ಪ್ರಸಂಗದಿಂದ ತಿಳಿದುಬರುವುದೇನೆಂದರೆ "ಆಗೋದಿಲ್ಲ" ಎನ್ನುವುದೇ ಮನಸ್ಸಿನ ದೌರ್ಬಲ್ಯ. ಆಗುವುದಿಲ್ಲ ಎಂದರೆ ಆಗೋದೇ ಇಲ್ಲ. ಆಗೋದಿಲ್ಲ ಅನ್ನುವವರಿಗೆ ಯಾವುದೇ ಮಾರ್ಗ ಇರುವುದಿಲ್ಲ. ನಾನು ಮಾಡಬಲ್ಲೆ. ನನ್ನ ಕೈಯಲ್ಲಿ ಇದು ಸಾಧ್ಯ. ಬೇರೆಯವರು ಮಾಡುವುದಾದರೆ ನನ್ನ ಕೈಯಲ್ಲಿ ಯಾಕೆ ಸಾಧ್ಯ ಇಲ್ಲ ಎನ್ನುವವರಿಗೆ ಒಂದಲ್ಲ ಒಂದು ಪರಿಹಾರ ಮಾರ್ಗ ಮತ್ತು ದಾರಿ ಸಿಕ್ಕೇ ಸಿಗುತ್ತದೆ. ಆಗ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಆಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮಕ್ಕಳೇ, ಆಗೋದಿಲ್ಲ ಅನ್ನುವುದನ್ನು ಮನಸ್ಸಿನಿಂದ ತೆಗೆದುಬಿಡಿ. ಆಗ ನೂರೆಂಟು ಪರಿಹಾರ, ಮಾರ್ಗ ಕಾಣುತ್ತದೆ. ಅದೇ ಜೀವನಕ್ಕೆ ಆನಂದ ನೀಡುತ್ತದೆ.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article