-->
ತೀರ್ಪುಗಾರರ ಅನಿಸಿಕೆಗಳು

ತೀರ್ಪುಗಾರರ ಅನಿಸಿಕೆಗಳು

ಮಕ್ಕಳಿಗಾಗಿ
ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2022 
ಮಕ್ಕಳ ಜಗಲಿ
ಕವನ ಸಿರಿ ಮತ್ತು ಕಥಾ ಸಿರಿ
ಪ್ರಶಸ್ತಿ -- 2022

       ಮಕ್ಕಳ ಜಗಲಿಯ ಈ ಸ್ಪರ್ಧೆಯಲ್ಲಿ ಬಂದ ಕಥೆ ಹಾಗೂ ಕವನಗಳನ್ನು ಓದುವ ಅವಕಾಶ ಸಿಕ್ಕಿದಾಗ ಅನ್ನಿಸಿದ್ದು ಹಲವು ವಿಚಾರಗಳಿವೆ. ಮೊದಲನೆಯದು ಅಕ್ಷರ ತಪ್ಪು ಅತ್ಯಂತ ಕನಿಷ್ಠ ಪ್ರಮಾಣದಲ್ಲಿತ್ತು. ಮಕ್ಕಳು ತುಂಬ ಜೋಪಾನವಾಗಿ ಅತ್ಯಂತ ಅಚ್ಚುಕಟ್ಟಾಗಿ ಭಾಷೆ ಹಾಗೂ ವ್ಯಾಕರಣದ ಬಗ್ಗೆ ಗಮನ ಹರಿಸಿದ್ದು ಕಂಡುಬಂತು. (ಸಣ್ಣ ಪುಟ್ಟ ತಪ್ಪುಗಳು ಇದ್ದದ್ದೇ). ಈಗೀಗ ಪ್ರೌಢರ ಬರಹದಲ್ಲೂ ಇದಕ್ಕಿಂತ ಜಾಸ್ತಿ ತಪ್ಪುಗಳು ಎದ್ದು ಕಾಣುತ್ತವೆ. ಇನ್ನೊಂದು ಸಂಗತಿ ವಿಷಯಗಳ ಆಯ್ಕೆಯಲ್ಲಿನ ವೈವಿಧ್ಯತೆ. ಶಾಲೆ, ದೇಶ, ಪರಿಸರ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿ ದೆಸೆಯಲ್ಲಿ ಎಲ್ಲರೂ ಬರೆಯುವುದು ಸರ್ವೇ ಸಾಮಾನ್ಯ. ಪ್ರಾಸಬದ್ಧವಾಗಿ ಬರೆಯುವುದು ಸಹಿತ ಬರಹದ ಆರಂಭದ ಹಂತದಲ್ಲಿ ಎಲ್ಲರೂ ಮಾಡಿಕೊಂಡು ಬಂದಂಥದ್ದೇ ಹೌದು. ಆದರೆ, ಮಕ್ಕಳು ಇದನ್ನು ಮೀರಿ ಸಂಬಂಧಗಳು, ಮಾನವೀಯತೆ, ಕೂಡು ಕುಟುಂಬ, ಹೆತ್ತವರ ತ್ಯಾಗದ ಮಹತ್ವ ಮತ್ತಿತರ ಸೂಕ್ಷ್ಮ ವಿಚಾರಗಳನ್ನೂ ಸ್ಪರ್ಶಿಸಿ ಕತೆಗಳನ್ನು ಬರೆದದ್ದು ಓದಿದಾಗ ಬದುಕನ್ನು ಎಷ್ಟು ಸೂಕ್ಷ್ಮಪ್ರಜ್ಞೆಯಿಂದ ಕಾಣುತ್ತಾರೆ ಎಂಬುದು ಅರಿವಿಗೆ ಬಂತು. ಹಿರಿಯರ ವಿಭಾಗದಲ್ಲಿ ಸಾಕಷ್ಟು ಪ್ರೌಢ ಕತೆಗಳೂ ಓದಲು ಸಿಕ್ಕವು. ಮಕ್ಕಳ ಬರಹಕ್ಕೆ ಅಂಕಗಳನ್ನು ನೀಡುವಾಗ ಕೇವಲ ಸಾಮಾನ್ಯೀಕರಿಸಿ ನೀಡುವುದು ಸರಿಯಲ್ಲ ಎಂಬ ನೆಲೆಯಲ್ಲಿ ಮಕ್ಕಳು ಬಳಸಿದ ಭಾಷೆ, ವಿಷಯದ ಆಯ್ಕೆ, ವಿವರಣೆ, ಒಟ್ಟಾರೆ ಬರಹದ ಮಾತ್ರವಲ್ಲದೆ, ಅವರ ವಯಸ್ಸು ಹಾಗೂ ಕೈಬರಹದ ಸೊಬಗಿಗೂ ಸಹಿತ ವರ್ಗೀಕರಿಸಿ ಅಂಕಗಳನ್ನು ನೀಡುವ ಪ್ರಯತ್ನ ಮಾಡಿದ್ದೇನೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿ ಮಗುವಿಗೂ ಉಜ್ವಲ ಭವಿಷ್ಯವಿದೆ. ಇಲ್ಲಿ ಬಹುಮಾನ ಎನ್ನುವುದು ಈ ಸ್ಪರ್ಧೆಯ ತೀರ್ಪುಗಾರರ ಗ್ರಹಿಕೆಯ ಫಲಶೃತಿಯೇ ಹೊರತು ನಿಮ್ಮ ಒಟ್ಟೂ ಪ್ರತಿಭೆಗೆ ಪ್ರಮಾಣಪತ್ರವಲ್ಲ. ಹಾಗಾಗಿ ನಿಮ್ಮ ಬರವಣಿಗೆಯನ್ನು ಖಂಡಿತಾ ಮುಂದುವರಿಸಿ... ಬರಹವೇ ನಿಮ್ಮ ಬದುಕಿನ ನಿರಾಳತೆಗೆ ಹಾಗೂ ನಿಮ್ಮ ಅಭಿವ್ಯಕ್ತಿಗೊಂದು ಚಂದದ ವೇದಿಕೆ ಆಗಿ ಒದಗಿಬರಲಿ... ಅಭಿನಂದನೆಗಳು ಪಾಲ್ಗೊಂಡ ಪ್ರತಿಯೊಬ್ಬರಿಗೂ!
................................ಕೃಷ್ಣಮೋಹನ ತಲೆಂಗಳ
ಉಪ ಸುದ್ದಿ ಸಂಪಾದಕ
ಕನ್ನಡಪ್ರಭ, ಮಂಗಳೂರು.
******************************************


          ಎಲ್ಲಾ ಕಥೆಗಳೂ, ಕವನಗಳೂ ಮಕ್ಕಳ ವಯೋ ಸಹಜ ಪ್ರತಿಭೆಗೆ ಅನುಗುಣವಾಗಿ ಚೆನ್ನಾಗಿಯೇ ಇದ್ದವು. ಆದರೆ ಕೆಲವೊಂದು ಮಾನದಂಡಗಳಲ್ಲಿ ಅಳೆಯಬೇಕಾದುದರಿಂದ, ಅಂಕಗಳನ್ನು ನೀಡುವ ದೃಷ್ಟಿಯಿಂದ ಕೆಲವನ್ನು ಉತ್ತಮ ಎಂದು ಆಯ್ಕೆ ಮಾಡಲಾಗಿದೆ. ಭಾಗವಹಿಸಿದವರೆಲ್ಲರೂ ಒಂದು ರೀತಿಯಲ್ಲಿ ಪುರಸ್ಕೃತರೇ... ಬಹುಮಾನ ಮುಖ್ಯವಲ್ಲ, ಭಾಗವಹಿಸುವುದೇ ಮುಖ್ಯ. ಸೋಲು, ಗೆಲುವು ಎಂಬುದು ಒಂದು ರೀತಿಯ ಪಾಠ, ಅನುಭವ ಮತ್ತು ಬೆಳವಣಿಗೆಯ ಮೂಲ ವೇದಿಕೆ. ಸೋಲು ಗೆಲುವಿನ ಮೂಲ, ಅದೇ ರೀತಿ ಗೆಲುವು ನಲಿವಿನ ಜಾಲ... ಎರಡೂ ಬೇಕು ಎರಡೂ ಇದ್ದರೇನೇ ಸ್ಪರ್ಧೆಯಲ್ಲಿ ಒಲವೋ ಛಲವೋ ಸೇರಿಕೊಳ್ಳುತ್ತದೆ.
       ಕವಿತೆಗಳಲ್ಲಿ ಪ್ರಾಸ ಬೇಕು ಆದರೆ ಅದುವೇ ಮುಖ್ಯವಲ್ಲ, ಕೆಲವೊಮ್ಮೆ ಪ್ರಾಸಕ್ಕೋಸ್ಕರ ಎಳೆದು ತಂದಾಗ ಕವಿತೆಯ ಸಾರಾಂಶ ಕೆಡವಿ ಹೋಗುವ ಸಾಧ್ಯತೆಗಳು ಇವೆ. ಕತೆಗಳಲ್ಲಿ ಸ್ವಾರಸ್ಯ ಮತ್ತು ಸಾರಾಂಶ ಮುಖ್ಯ. ಓದುವ ಹಂತಗಳಲ್ಲಿ ಕತೆಗಳ ಒಳ ಹೂರಣ ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಓದುಗರು ಅಲ್ಲೇನೋ ಆಳದಲ್ಲಿ ಕಾಣದ ಕುತೂಹಲವನ್ನು ತನ್ನೊಳಗೆ ಎಳೆದುಕೊಂಡಾಗ ಕಥೆಯು ಒಂದು ತನ್ನದೇ ಆದ ಚೌಕಟ್ಟನ್ನು ರೂಪಿಸಿಕೊಳ್ಳುತ್ತದೆ.
        ಮೊಬೈಲ್, ಟಿವಿ ಗಳು ಇಂದು ಮಕ್ಕಳ ಓದುವ, ಬರೆಯುವ ಸಮಯವನ್ನು ಕಸಿದು ಕೊಂಡಿರುವ ಈ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಆಸಕ್ತಿಯನ್ನು ಇಲ್ಲಿ ಕಾಣಬಹುದಾಗಿದೆ. ಇಂತಹ ಒಂದು ಸ್ಪರ್ಧೆಯ ವೇದಿಕೆ ಮಕ್ಕಳ ಸಾಹಿತ್ಯ ಬೆಳವಣಿಗೆಗೆ ಇನ್ನಷ್ಟು ಪೂರಕವಾಗುತ್ತವೆ. ಬರೆಯಲಿ.. ಇನ್ನಷ್ಟು ಬೆರೆಯಲಿ. ಶಬ್ದಗಳ ತೋರಣ ಕಟ್ಟಿ ಬೆಳಗಲಿ. ಎಲ್ಲರಿಗೂ ಶುಭಾಶಯಗಳು.
ಅಭಿನಂದನೆಗಳು.
..........................................ದಿನೇಶ್ ಹೊಳ್ಳ.
ಖ್ಯಾತ ಲೇಖಕರು, ಪರಿಸರ ಚಿಂತಕರು ಹಾಗೂ ಕಲಾವಿದರು, ಮಂಗಳೂರು
******************************************

        ಐದನೆಯ ತರಗತಿಯಿಂದ ಪದವಿಪೂರ್ವ ಕಾಲೇಜು ವರೆಗಿನ ವಿವಿಧ ವಯೋಮಾನದ ಮಕ್ಕಳ ಕವಿತೆಗಳಲ್ಲಿ ಕಲ್ಪನೆಗೇನೂ ಕೊರತೆಯಿರಲಿಲ್ಲ. ನಾಡು- ನುಡಿ, ಪರಿಸರ, ಅಪ್ಪ, ಅಮ್ಮ, ಗುರು ಹೀಗೆ ಆಯ್ಕೆಯ ವಿಷಯ ವೈವಿಧ್ಯ ಸಮೃದ್ಧವಾಗಿತ್ತು. ಕಥೆಗಳಲ್ಲೂ ಅಷ್ಟೆ ಜೀವನ ಮೌಲ್ಯಗಳನ್ನು ತಿಳಿಸುವ ಹಂಬಲ ಎದ್ದು ಕಾಣುತ್ತಿತ್ತು. ಎಳೆಯರು ಬರೆವ ಕಥೆ- ಕವಿತೆಗಳಾದ ಕಾರಣ ರಚನೆಗಳಲ್ಲಿ ಹೆಚ್ಚಿನ ಪಕ್ವತೆಯ ಕೊರತೆಯಿರುವುದು ಸಹಜ. ಆದರೆ ಕವಿತೆ, ಕಥೆ ಬರೆಯಬೇಕೆಂಬ ತುಡಿತ, ಹುಮ್ಮಸ್ಸು ಕಂಡು ಖುಷಿಯಾಯಿತು. ಬಿಡುವಿನಲ್ಲಿ ಕಥೆ, ಕವಿತೆಗಳನ್ನು ಓದಿ ಅರ್ಥೈಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ತಮ್ಮ ಬರವಣಿಗೆಯನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆ. ಉತ್ಸಾಹದಿಂದ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಇಂತಹ ಅವಕಾಶವನ್ನು ಒದಗಿಸಿದ ಮಕ್ಕಳ ಜಗಲಿಯ ತಂಡಕ್ಕೆ ಅಭಿನಂದನೆಗಳು.
.......................... ಚಂದ್ರಶೇಖರ ಪಾತೂರು 
ಖ್ಯಾತ ಸಾಹಿತಿಗಳು ಹಾಗೂ ಸ್ಥಾಪಕ ಸಂಚಾಲಕರು ಚಿತ್ತಾರ ಮಂಗಳೂರು
******************************************



        ದೇವರು ನಮಗೆ ಕರುಣಿಸಿರುವ ಪ್ರತಿಭೆಗಳನ್ನು ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಸಂಪೂರ್ಣವಾಗಿ ಬಳಸಿದರೆ ಮಾತ್ರ ಅವುಗಳನ್ನು ಅಭಿವೃದ್ಧಿಪಡಿಸಬಹುದು. ಜನಿಸಿರುವ ಪ್ರತಿಯೊಂದು ಮಗು ಕೂಡ ವೈವಿಧ್ಯಮಯ ಕೌಶಲ್ಯವನ್ನು ಹೊಂದಿರುವವರು. ಇಂತಹ ಪ್ರತಿಭಾನ್ವಿತ ಮಕ್ಕಳ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಮಕ್ಕಳ ಜಗಲಿ ಆನ್ಲೈನ್ ಪತ್ರಿಕೆಯೊಂದು ಸಾಧನವಾಗಿದೆ... ಈ ತರಹದ ವೇದಿಕೆಯ ಜೊತೆ ನಾವೂ ಭಾಗವಾಗಿರುವುದು ಖುಷಿಯ ವಿಚಾರ.
....................................ಅಲ್ಫೀಸ್ ಡಿ ಸೋಜ
NATTIHITHLU CONSTRUCTIONS
MUDIPU , BANTWALA
Mob ; +91 6366 189 549
*******************************************



    ಮಕ್ಕಳ ಜಗಲಿ ಮೂಲಕ ನಡೆಯುವ ಕವನ, ಕಥೆ, ಚಿತ್ರಕಲಾ ಸ್ಪರ್ಧೆಗಳು ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರತರಲು ಉತ್ತಮ ವೇದಿಕೆ. ಇದನ್ನು ಚೆನ್ನಾಗಿ ನಡೆಸಿಕೊಂಡು ಬರುತ್ತಿರುವ ಮಕ್ಕಳ ಜಗಲಿ ಬಳಗದವರೊಂದಿಗೆ ಹೈಸ್ಕೂಲ್ ಸಹಪಾಠಿಗಳಾದ ನಮಗೂ ಅವಕಾಶ ನೀಡಿರುವುದು ತುಂಬಾ ಖುಷಿಯನ್ನು ನೀಡಿದೆ. ಧನ್ಯವಾದಗಳು
.................................... ಶಿವಪ್ರಕಾಶ್ ಕೆ ಟಿ
 SMK DEVELOPERS
KONAJE MANGALORE
Mob ; +91 98449 93975
*******************************************


      ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹದಾಯಕ ಕೆಲಸ ಮಾಡುತ್ತಿರುವ ಮಕ್ಕಳ ಜಗಲಿಯಲ್ಲಿ ದೇಶದ ಹೊರ ದೇಶದ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಅಭಿಮಾನದ ಸಂಗತಿ. ಸಾಹಿತ್ಯಿಕ ಹಾಗೂ ಕಲಾ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ಜಾಗೃತಿ ಮನಸ್ಸು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದರೆ ಸಮಾಜದಲ್ಲಿ ಉತ್ತಮ ಕಾರ್ಯಗಳು ನೆರವೇರುತ್ತದೆ.
.................................... ಅಬ್ದುಲ್ ಜಲೀಲ್
BRIGHT CONSTRUCTIONS
MUDIPU BANTWALA
Mob ; +91 98864 95252
*******************************************




   ಬಾಲ್ಯದಲ್ಲಿ ನಾವು ಕಳೆದುಕೊಂಡಿರುವ ಅವಕಾಶಗಳನ್ನು ಇಂದಿನ ಮಕ್ಕಳಿಗೆ ನೀಡಬೇಕಾದುದು ಹಿರಿಯರಾದ ನಮ್ಮೆಲ್ಲರ ಕರ್ತವ್ಯ. ಮಗುವಿಗೆ ಐಷಾರಾಮ ದ ವಸ್ತುಗಳನ್ನು ಕೊಡುವುದಕ್ಕಿಂತ ಬದುಕಿನಲ್ಲಿ ಸಂತಸ ಪಡುವ ಕಲೆಗಳನ್ನು ಮೈಗೂಡಿಸಲು ಅವಕಾಶ ಒದಗಿಸಬೇಕು. ಪ್ರತಿಯೊಬ್ಬ ತಂದೆ ತಾಯಿ ಈ ನಿಟ್ಟಿನಲ್ಲಿ ಆಲೋಚಿಸಿದರೆ, ಎಲ್ಲಾ ಮಕ್ಕಳು ಪ್ರತಿಭಾ ಸಂಪನ್ನರಾಗಿ ಈ ದೇಶಕ್ಕೆ ಕೊಡುಗೆಯಾಗಬಲ್ಲರು. ಮಕ್ಕಳ ಜಗಲಿಯ ಈ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರ ಇದೆ.
.................................... ವಸಂತ್ ಬೆರ್ಮದೆ
SRI VASU SHYAM VENTURE
BALMATA MANGALORE
Mob ; +91 99647 58023
*******************************************

Ads on article

Advertise in articles 1

advertising articles 2

Advertise under the article