ರಾಷ್ಟ್ರಮಟ್ಟದ ಸಾಧನೆ : ಸದ್ವಿತಾ ಬಿರಾದಾರ
Sunday, November 6, 2022
Edit
ಇನ್ನೂ ಮೂರು ವರ್ಷ ತುಂಬದ ಪೋರೆಯ ವಿಶಿಷ್ಟ ಸಾಧನೆ. ಸುಮಾರು 30ಕ್ಕಿಂತಲೂ ಹೆಚ್ಚು ವಿಷಯಗಳಲ್ಲಿ ಸಾಮರ್ಥ್ಯ ಮೆರೆದ ಪುಟ್ಟ ಮಗು.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ
ಹುಟ್ಟಿದ ಪ್ರತಿಯೊಂದು ಮಗುವಿನಲ್ಲಿಯೂ ವಿಶೇಷ ಪ್ರತಿಭೆಗಳಿರುತ್ತವೆ. ಪುರಾಣಗಳಿಂದಲೂ ನಾವು ವಿಶೇಷ ಪ್ರತಿಭಾನ್ವಿತ ಮಕ್ಕಳನ್ನು ಗಮನಿಸುತ್ತಾ ಬಂದಿದ್ದೇವೆ. ವೀರ ಅಭಿಮನ್ಯು ಗರ್ಭದಲ್ಲಿರುವಾಗಲೆ ಮಾತುಗಳನ್ನು ಆಲಿಸುತ್ತಿದ್ದುದು ತಿಳಿದಿದ್ದೇವೆ. ಬಾಲಕ ನಚಿಕೇತ ಪ್ರಶ್ನೆಗಳ ಮೂಲಕ ತನ್ನ ಜ್ಞಾನದಾಹವನ್ನು ತೀರಿಸುತ್ತಿದ್ದುದು ಗೊತ್ತಿದೆ. ಬಾಲಕ ಮಹಮ್ಮದ್ ಸ್ವರೂಪ ಅತಿ ಸಣ್ಣ ಪ್ರಾಯದಲ್ಲೇ ಕಂಪ್ಯೂಟರು ತಿಳಿದ ಬಾಲಕನೆಂದು ಸುದ್ದಿಯಾದ. ಹೀಗೆ ಹಿರಿಯರನ್ನು ನಾಚಿಸುವಂತಹ ಪ್ರತಿಭೆಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುವ ಮಕ್ಕಳನ್ನು ನಾವು ನಿತ್ಯ ನೋಡುತ್ತೇವೆ. ಇದಕ್ಕೆಲ್ಲ ಕಾರಣ ಪೂರಕ ವಾತಾವರಣ. ಅಂತಹುದೆ ವಿಶೇಷ ಪ್ರತಿಭಾನ್ವಿತ ಮಗುವೊಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ - 2022 ನಲ್ಲಿ ಇತ್ತೀಚೆಗೆ ಸುದ್ದಿಯಾದ ಸಂಗತಿ ಇಲ್ಲಿದೆ.
ಮಗುವಿನ ಹೆಸರು ಸದ್ವಿತಾ ಬಿರಾದಾರ. ವಯಸ್ಸು ಕೇವಲ ಎರಡು ವರ್ಷ 9 ತಿಂಗಳು. ಈಗಾಗಲೇ ಸುಮಾರು 30ಕ್ಕಿಂತಲೂ ಹೆಚ್ಚು ವಿಷಯಗಳಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ - 2022 ದಾಖಲೆಯಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ.
ಸದ್ವಿತಾ, ಸದಾನಂದ ಬಿರಾದಾರ ಹಾಗೂ ಸವಿತಾ ದಂಪತಿಗಳ ಪುತ್ರಿ. ಮೂಲತಹ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರದವರಾದ ಸದಾನಂದ ಬಿರಾದಾರ್ ಚಿತ್ರಕಲಾ ಶಿಕ್ಷಕರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶ್ರೀಮತಿ ಸವಿತಾ ಗೃಹಿಣಿ. ಸದ್ವಿತಾಳ ಬೆಳವಣಿಗೆಯನ್ನು ಗಮನಿಸುತ್ತಿದ್ದ ಇವರು ಮಗಳ ಚಟುವಟಿಕೆಗಳು ವಿಭಿನ್ನ ಹಾಗೂ ಆಸಕ್ತಿದಾಯಕವಾಗಿದ್ದುದು ಇವರ ಗಮನಕ್ಕೆ ಬಂದಿತು. ಮಗುವಿಗೆ ಸುಮಾರು ಒಂದೂವರೆ ವರ್ಷ ತುಂಬವಾಗಲೇ ಪರಿಸರವನ್ನು ವಿಶೇಷ ಗಮನವಹಿಸಿ ನೋಡುವುದು, ವಸ್ತುಗಳನ್ನು, ಪ್ರಾಣಿ, ಪಕ್ಷಿಗಳನ್ನು ಕುತೂಹಲದಾಯಕವಾಗಿ ವೀಕ್ಷಿಸುವ ಅನುಭವವನ್ನು ಕಂಡುಕೊಂಡರು. ಎರಡು ವರ್ಷ ತುಂಬುವಷ್ಟೊತ್ತಿಗೆ ಮನನ ಮಾಡುವಂತಹ ಶಕ್ತಿ ಬೆಳೆಯಿತು. ಹೇಳಿದ ವಿಷಯಗಳನ್ನು ಆಲಿಸಿಕೊಂಡು ಪುನರಾವರ್ತಿಸುವ ಹಾಗೂ ಸುಮಾರು ದಿನಗಳ ಬಳಿಕವೂ ನೆನಪಿಸಿ ಹೇಳುವಂಥ ಶಕ್ತಿ ಈ ಮಗುವಿನಲ್ಲಿ ಗುರುತಿಸಿದರು. ಈ ಕಾರಣದಿಂದ ತಂದೆ ತಾಯಿ ವಿಶೇಷ ಮುತುವರ್ಜಿ ವಹಿಸಿ ಮಗುವಿಗೆ ಆಸಕ್ತಿದಾಯಕವಾದಂತಹ ವಿಚಾರಗಳನ್ನು ಹೇಳೋದು, ಚಟುವಟಿಕೆಗಳನ್ನು ನೀಡುವುದು, ವಿಭಿನ್ನ ವಸ್ತುಗಳನ್ನು ತೋರಿಸಿ ತಿಳಿಸುವಂತಹ ಕೆಲಸ ಮಾಡ ತೊಡಗಿದರು. ಯಾವುದೇ ವಿಷಯವನ್ನು ಒಂದೆರಡು ಭಾರಿ ಹೇಳಿಕೊಟ್ಟರೆ ಅದನ್ನು ಗ್ರಹಿಸಿ ಅದಕ್ಕೆ ಪ್ರತ್ಯುತ್ತರ ಕೊಡುತ್ತಿದ್ದಳು. ಹೀಗೆ ಅವಳ ಕಲಿಕೆ ಪ್ರಾರಂಭಿಸಿದರು.
ರಾಷ್ಟ್ರಗೀತೆ ಹೇಳುವುದು. ರಾಷ್ಟ್ರೀಯ ಚಿಹ್ನೆಗಳನ್ನು ಗುರುತಿಸುವುದು, ರಾಜ್ಯದ ರಾಜಧಾನಿಗಳ ಹೆಸರನ್ನು ಹೇಳುವುದು, ಗ್ರಹಗಳ ಹೆಸರು, ಇಂಗ್ಲಿಷ್ ಭಾಷೆಯಲ್ಲಿ 25 ಪದಗಳ ವಿರುದ್ದ ಪದಗಳನ್ನು ಹೇಳುವುದು, ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ 25 ದೇಹದ ಭಾಗಗಳನ್ನು ಹೇಳೋದು, ವಾರಗಳು ಮತ್ತು ತಿಂಗಳುಗಳ ಹೆಸರನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಿರರ್ಗಳವಾಗಿ ಹೇಳುವುದು, ವಿವಿಧ ಖಾದ್ಯಗಳ ಹೆಸರುಗಳನ್ನು ಹೇಳುವಂತಹ ಪ್ರತಿಭೆ ಇವಳದ್ದು. ಇಂಗ್ಲಿಷ್ ಮತ್ತು ಕನ್ನಡ ವರ್ಣಮಾಲೆ, ವಚನ, ಶ್ಲೋಕ, ಕನ್ನಡ ಹಾಗೂ ಇಂಗ್ಲಿಷ್ ಹಾಡುಗಳು, ಪ್ರಾಣಿ, ಪಕ್ಷಿ, ಹಣ್ಣು, ತರಕಾರಿಗಳ ಗಳ 25 ಹೆಸರುಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಸ್ಪಷ್ಟವಾಗಿ ಸರಾಗವಾಗಿ ಸದ್ವಿತಾ ಹೇಳುತ್ತಾಳೆ. 25 ವಾಹನಗಳ ಹೆಸರುಗಳು, 8 ದಿಕ್ಕುಗಳ ಹೆಸರು, ಆಕಾರಗಳ ಹೆಸರು (ಶೇಪ್ಸ್), 15 ಕಡಲ ಜೀವಿಗಳ ಹೆಸರು, ಬಣ್ಣಗಳ (ಕಲರ್ಸ್) ಹೆಸರು, ಪ್ರಾಣಿಯ ಮರಿಗಳ (ಯಂಗ್ ಅನಿಮಲ್ಸ್) ಹೆಸರುಗಳನ್ನು ತಪ್ಪದೆ ಬಹಳ ಚಂದ ಹೇಳುತ್ತಾಳೆ. ಪ್ರಾರ್ಥನಾ ಸ್ಥಳಗಳು, ಲೇಖನ ಸಾಮಗ್ರಿಗಳ ಹೆಸರುಗಳು, ಕಾಲಗಳು, ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಸರಾಗವಾಗಿ ಹೇಳುತ್ತಾಳೆ.
ಹಿರಿಯರಿಗೂ ಕಷ್ಟಸಾಧ್ಯವೆನಿಸುವ ಇಂಡಿಯಾ ಮ್ಯಾಪ್ ಫಜಲ್, ಸೋಲಾರ್ ಸಿಸ್ಟಮ್ ಫಜಲ್ ಗಳನ್ನು ಲೀಲಾಜಾಲವಾಗಿ ರಚಿಸುತ್ತಾಳೆ. ಹೀಗೆ ವಯಸ್ಸಿಗೂ ಮೀರಿದ ಸಾಧನೆಯಲ್ಲಿ ತೊಡಗಿರುವ ಸದ್ವಿತಾ ಬಿರಾದಾರ್ ಅರ್ಹವಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ - 2022 ನಲ್ಲಿ ದಾಖಲೆಯನ್ನು ಮಾಡಿ ಶ್ರೇಷ್ಠ ಮಗುವಾಗಿ ಗುರುತಿಸಿಕೊಂಡಿದ್ದಾರೆ. ಇವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಶುಭಾಶೀರ್ವದಿಸಿದ್ದಾರೆ.
"ಎಲ್ಲಾ ಬೀಜದೊಳಡಗಿದೆ ಮರ
ಬೆಳೆಸಿ ಪೋಷಿಸುವವರದೆ ಬರ"
ರವಿಕೃಷ್ಣ ಒಡ್ಡಂಬೆಟ್ಟು ಬರೆದ ಈ ಕವನದ ಸಾಲಿನಂತೆ ಹುಟ್ಟಿದ ಪ್ರತಿಯೊಂದು ಮಗುವೂ ಈ ಜಗತ್ತಿಗೆ ಶ್ರೇಷ್ಠ. ಅವಕಾಶ ಮತ್ತು ಪ್ರೋತ್ಸಾಹ ನೀಡುವ ಮನಸ್ಸುಗಳ ನೆಲೆಯಾಗಬೇಕಾಗಿದೆ.
ಸದ್ವಿತಾ ಬಿರಾದಾರ ಳ ಸಾಧನೆಯ ಹಿಂದೆ ಪೋಷಕರ ಕಾಳಜಿ ಪ್ರಶಂಸನೀಯ. ಸದ್ವಿತಾ ದಿನೇ ದಿನೇ ಬೆಳೆಯಲಿ. ಬೆಳೆಯುತ್ತಾ ಬೆಳೆಯುತ್ತಾ ಎಲ್ಲರನ್ನು ಬೆಳೆಸುತ್ತಾ ಬೆಳೆಯಲಿ.... ಜಗತ್ತಿಗೆ ಶ್ರೇಷ್ಠಳಾಗಿ ಬೆಳಗಲಿ. ಮಕ್ಕಳ ಜಗಲಿಯ ಶುಭ ಹಾರೈಕೆಗಳು....
.................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ದಕ್ಷಿಣಕನ್ನಡ ಜಿಲ್ಲೆ
Mob : 9844820979
*******************************************