
ಜೀವನ ಸಂಭ್ರಮ : ಸಂಚಿಕೆ - 58
Sunday, November 6, 2022
Edit
ಜೀವನ ಸಂಭ್ರಮ : ಸಂಚಿಕೆ - 58
ಮಕ್ಕಳೇ.... ಇಂದು ನಾವು ದೃಷ್ಟಿಕೋನದ ಬಗ್ಗೆ ತಿಳಿದುಕೊಳ್ಳೋಣ. ದೃಷ್ಟಿಕೋನಕ್ಕೆ ಆಧಾರವಾದುದ್ದೇ ಭಾವನೆ. ಧನಾತ್ಮಕ ಭಾವನೆ ಇದ್ದರೆ ದೃಷ್ಟಿಕೋನ ಧನಾತ್ಮಕವಾಗಿರುತ್ತದೆ. ಋಣಾತ್ಮಕ ಭಾವನೆ ಇದ್ದರೆ ದೃಷ್ಟಿಕೋನ ಋಣಾತ್ಮಕವಾಗಿರುತ್ತದೆ. ಈ ಘಟನೆ ಓದಿ.
ಒಂದು ದಿನ ಒಂದು ರಸ್ತೆಯಲ್ಲಿ, ಮೈಮೇಲೆ ಸರಿಯಾಗಿ ಬಟ್ಟೆ ಇಲ್ಲದ, ಸ್ನಾನ ಸರಿಯಾಗಿ ಮಾಡದ, ಒಬ್ಬ ತರುಣ ನಿಂತಿದ್ದಾನೆ. ಆತನನ್ನು ನೋಡಿ ಆ ದಾರಿಯಲ್ಲಿ ಯಾರೂ ಓಡಾಡುತ್ತಿರಲಿಲ್ಲ. ಆಗ ಒಬ್ಬ ಶ್ರೀಮಂತ, ಕಾರಿನಲ್ಲಿ ಬಂದು, ಕಾರನ್ನು ನಿಲ್ಲಿಸಿ, ಆತನಿಗೆ ಹೇಳುತ್ತಾನೆ. "ಏ ಭಿಕ್ಷುಕ, ಯಾಕೆ ಇಲ್ಲಿ ನಿಂತಿದ್ದೀಯಾ..? ನಿನ್ನ ವೇಷ ಭೂಷಣ ನೋಡಿ, ಎಲ್ಲರೂ ಹೆದರಿದ್ದಾರೆ ಈ ದಾರಿಯಲ್ಲಿ ಬರಲು ಇಷ್ಟಪಡುತ್ತಿಲ್ಲ. ಬೇರೆ ಕಡೆ ಜನ ಇಲ್ಲದ ಕಡೆ ಹೋಗಬಾರದೆ. ಎಂತಹ ದುರ್ದೈವ ನಿನ್ನದು" ಎನ್ನುತ್ತಾನೆ. ಆಗ ಆ ತರುಣ ಹೇಳಿದ ಮಾತು ಎಂತಹ ಅದ್ಭುತ! ಕೇಳಿ. "ಸ್ವಾಮಿ, ನಾನೇನು ಭಿಕ್ಷುಕನಲ್ಲ. ನನ್ನಲ್ಲಿ ಎರಡು ಕಣ್ಣುಗಳಿವೆ. ಅವು ಜಗತ್ತಿನ ಸೌಂದರ್ಯ ನೋಡುತ್ತವೆ. ನನ್ನಲ್ಲಿ ಎರಡು ಕಿವಿಗಳಿವೆ. ಜಗತ್ತಿನ ಮಧುರವಾದ ಧ್ವನಿಯನ್ನೇ ಕೇಳುತ್ತವೆ. ನನ್ನಲ್ಲಿ ಮೂಗಿದೆ. ಅದು ಜಗತ್ತಿನ ಪರಿಮಳ ಆಸ್ವಾದಿಸುತ್ತದೆ. ನನ್ನ ನಾಲಿಗೆ ಬಗೆ ಬಗೆಯ ರುಚಿ ಸವಿಯುತ್ತದೆ. ನನ್ನ ಕೈ ಸುಂದರ ಕೆಲಸ ಮಾಡುತ್ತವೆ. ನನ್ನ ಕಾಲು ಬಲಿಷ್ಠವಾಗಿದೆ. ಎಂಥ ಎತ್ತರ ಪ್ರದೇಶವನ್ನು ಏರಿ, ಜಗತ್ತನ್ನು ಸುತ್ತಾಡಿ ಅದ್ಭುತ ಸೌಂದರ್ಯ ಅನುಭವಿಸಲು ಸಹಕರಿಸುತ್ತವೆ. ಇಂತಹ ಸೌಂದರ್ಯ, ಮಧುರತೆ, ಸುವಾಸನೆ, ರುಚಿ ಅನುಭವಿಸುವ ಸುಂದರ ಮನಸ್ಸಿದೆ. ಈ ಮನಸ್ಸಿನಲ್ಲಿ ಸುಂದರ ಭಾವನೆಗಳಿವೆ. ಇಷ್ಟೆಲ್ಲಾ ನಿಸರ್ಗ ನನಗೆ ಕರುಣಿಸಿದೆ. ಇಷ್ಟೆಲ್ಲ ಇದ್ದ ಮೇಲೆ ನಾನೇಕೆ ಭಿಕ್ಷುಕ?. ಸುಂದರ ಭಾವನೆ, ಸುಂದರ ಮನಸ್ಸು ಇಲ್ಲದವರು ಭಿಕ್ಷುಕರು, ನಾನಲ್ಲ" ಎಂದನು. ಎಂತಹ ಅದ್ಭುತ ಮಾತು. ಸಂತೋಷಪಡುವುದಕ್ಕೆ ಇದಕ್ಕಿಂತ ಇನ್ನೇನು ಬೇಕು? ಈ ಘಟನೆ ಓದಿದ ಮೇಲೆ ದೃಷ್ಟಿಕೋನ ಉಳ್ಳವರು ಹೇಗೆ ವರ್ತಿಸುತ್ತಾರೆ ನೋಡೋಣ.
1. ಧನಾತ್ಮಕ ದೃಷ್ಟಿಕೋನ ಇರುವವರು ಕೊರತೆ ಹೇಳುವುದಿಲ್ಲ. ತಮ್ಮಲ್ಲಿ ಏನಿದಿಯೋ ಅದನ್ನು ಬಳಸಿ ಆನಂದ ಪಡುತ್ತಾರೆ. ಕೇವಲ ಮೂರು ಹೂವಿದ್ದರೆ ಅದನ್ನೇ ಸಿಂಗರಿಸಿ ಆನಂದಿಸುತ್ತಾರೆ. ಒಂದು ಗುಲಾಬಿ ನೋಡಿದಾಗ, ಹೂವಿನ ಕಡೆ ಗಮನ ಹರಿಸುತ್ತಾರೆ ವಿನಃ ಮುಳ್ಳಿನ ಕಡೆ ಅಲ್ಲ. ಋಣಾತ್ಮಕ ದೃಷ್ಟಿಕೋನ ಇರುವವರು, ಬರೀ ಕೊರತೆ ಹೇಳುತ್ತಾರೆ. ಅದಿಲ್ಲ ಇದಿಲ್ಲ ಎನ್ನುತ್ತಾರೆ. ಶೃಂಗರಿಸಲು ಕನಿಷ್ಠ 10 ಹೂವಾದರೂ ಬೇಕು ಎನ್ನುತ್ತಾರೆ. ಒಂದು ಗುಲಾಬಿ ನೋಡಿದಾಗ ಮುಳ್ಳಿಗೆ ಮಹತ್ವ ನೀಡುತ್ತಾರೆ, ಗುಲಾಬಿ ಕಡೆಯಲ್ಲ.
2. ಧನಾತ್ಮಕ ದೃಷ್ಟಿಕೋನ ಇರುವವರು, ದೇಹ ಮತ್ತು ಮನಸ್ಸನ್ನು ಸುಂದರವಾಗಿಡಲು ಪ್ರಯತ್ನಿಸುವರು. ವಸ್ತುಗಳು ಸ್ಥಿರವಲ್ಲ ಹಾಗೂ ಖಾಯಂ ಆಗಿ ಇರುವುದಿಲ್ಲ ಎಂದು ತಿಳಿಯುತ್ತಾರೆ. ಹಾಗಾಗಿ ವಸ್ತುವಿಗೆ ಮಹತ್ವ ನೀಡುವುದಿಲ್ಲ. ಋಣಾತ್ಮಕ ದೃಷ್ಟಿಕೋನ ಇರುವವರು ಹೊರಗಿನ ವಸ್ತುಗಳಿಗೆ ಬೆಲೆ ಕೊಡುತ್ತಾರೆ. ಹಣ, ಒಡವೆ, ವಸ್ತು, ಭೂಮಿ ಮತ್ತು ರತ್ನಗಳಿಗೆ ಬೆಲೆ ಕೊಡುತ್ತಾರೆ. ದೇಹ ಮತ್ತು ಮನಸ್ಸಿಗೆ ಬೆಲೆ ಕೊಡುವುದಿಲ್ಲ. ಆ ವಸ್ತುಗಳನ್ನು ಖಾಯಂ ಆಗಿ ಸ್ಥಿರವಾಗಿ ಇಡಲು ಪ್ರಯತ್ನಿಸುತ್ತಾನೆ. ಅದು ಹಾಗಾಗುವುದಿಲ್ಲ. ಪ್ರತಿಯೊಂದು ವಸ್ತುವಿಗೂ ಆಯಸ್ಸು ಇದೆ. ಆಯಸ್ಸು ಮುಗಿದಂತೆ ಖಾಯಂ ದೂರವವಾಗುತ್ತದೆ. ಇದರಿಂದ ದುಃಖಿತನಾಗುತ್ತಾನೆ.
3. ಧನಾತ್ಮಕ ದೃಷ್ಟಿಕೋನ ಇರುವವನು ಮತ್ತೊಬ್ಬರೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ಅವರು ಅವರಷ್ಟಕ್ಕೆ ಪೂರ್ಣ. ನಾವು ನಮ್ಮಷ್ಟಕ್ಕೆ ಪೂರ್ಣ ಎಂದು ಭಾವಿಸುತ್ತಾನೆ. ಋಣಾತ್ಮಕ ದೃಷ್ಟಿಕೋನ ಇರುವವನು ಬೇರೆಯವರೊಂದಿಗೆ ಹೋಲಿಸಿಕೊಂಡು, ನಾನು ಬಡವ, ಸಣ್ಣವ, ಕನಿಷ್ಠ ಎಂದು ಕೊರಗುತ್ತಾನೆ.
4. ಧನಾತ್ಮಕ ದೃಷ್ಟಿಕೋನ ಇರುವವನು, ಇರುವುದನ್ನು ಅಭಿಮಾನದಿಂದ ಹೇಳುತ್ತಾನೆ. ಉದಾಹರಣೆ ಗುಡಿಸಲೇ ಆದರು ಅದನ್ನು ನನ್ನ ಅರಮನೆ ಎಂದೇ ಭಾವಿಸುತ್ತಾನೆ. ಋಣಾತ್ಮಕ ದೃಷ್ಟಿಕೋನ ಇರುವವನು ಇರುವುದನ್ನು ಹೇಳಿಕೊಳ್ಳಲು ಮುಜುಗರ ಪಡುತ್ತಾನೆ. ಇರುವುದಕ್ಕೆ ಇಲ್ಲದಿರುವುದನ್ನು ಸೇರಿಸಿ ಸುಳ್ಳು ಹೇಳುತ್ತಾನೆ. ಅರಮನೆಯಂತಹ ಮನೆಯಿದ್ದರೂ ಇದೆಂತಹ ಮನೆ ಎನ್ನುತ್ತಾನೆ.
5. ಧನಾತ್ಮಕ ದೃಷ್ಟಿಕೋನ ಇರುವವನು, ಇರುವುದರಲ್ಲಿ ತೃಪ್ತಿ ಪಡುತ್ತಾನೆ. ಋಣಾತ್ಮಕ ದೃಷ್ಟಿಕೋನ ಇರುವವನು ಇರುವುದಕ್ಕಿಂತ ಹೆಚ್ಚು ಅಪೇಕ್ಷೆ ಪಡುತ್ತಾನೆ. ಅದನ್ನು ಪಡೆದೇ ತೀರಲು ಸಂತೋಷವನ್ನು ಬಲಿ ನೀಡಲು ಸಿದ್ದನಾಗುತ್ತಾನೆ.
6. ಧನಾತ್ಮಕ ದೃಷ್ಟಿಕೋನ ಇರುವವನು, ಪ್ರತಿ ಚಟುವಟಿಕೆಯಲ್ಲಿ , ಪ್ರತಿ ಕೆಲಸದಲ್ಲಿ ಆನಂದ ಪಡುತ್ತಾನೆ. ಋಣಾತ್ಮಕ ದೃಷ್ಟಿಕೋನ ಇರುವವನು, ತನ್ನ ಆಸೆ ಪೂರೈಸಿದ ನಂತರ ಆನಂದ ಬರುವುದಾಗಿ ಭಾವಿಸುತ್ತಾನೆ. ಆಸೆಗೆ ಮಿತಿ ಇಲ್ಲ. ಒಂದು ಆಸೆ ಪೂರೈಸಿದ ನಂತರ ಮತ್ತೊಂದು ಆಸೆ, ಹೀಗಾಗಿ ಆಸೆಗಳ ಬಲೆಯಲ್ಲಿ ಬಿದ್ದು ಸಂತೋಷದಿಂದ ವಂಚಿತನಾಗುತ್ತಾನೆ.
7. ಧನಾತ್ಮಕ ದೃಷ್ಟಿಕೋನ ಇರುವವನು ಯಾರಿಂದಲೂ ನಿರೀಕ್ಷೆ ಮಾಡುವುದಿಲ್ಲ. ಆದರೆ ಋಣಾತ್ಮಕ ದೃಷ್ಟಿಕೋನ ಇರುವವನು, ಬೇರೆಯವರಿಂದ ಅತಿ ನಿರೀಕ್ಷೆ ಮಾಡುತ್ತಾನೆ. ನಿರೀಕ್ಷೆ ಈಡೇರದಿದ್ದರೆ ಅವರಿಂದ ದೂರವಾಗುತ್ತಾನೆ.
8. ಧನಾತ್ಮಕ ದೃಷ್ಟಿಕೋನ ಇರುವವನು ಬೇರೆಯವರು ಏನಾದರೂ ಹೊಸದು ತಂದರೆ, ಕೊಂಡಾಡಿ ಆನಂದ ಪಡುವನು. ಹೊಸದನ್ನು ಖರೀದಿಸಿದವರು ಇವನನ್ನು ಕರೆದು ಸತ್ಕರಿಸುವರು. ಋಣಾತ್ಮಕ ದೃಷ್ಟಿಕೋನ ಇರುವವನು, ಬೇರೆಯವರು ಏನಾದರೂ ತಂದರೆ, ದುಃಖ ಪಡುವನು. ಅಸೂಯೆ ಪಡುವನು. ಆತಿಥ್ಯದಿಂದ ವಂಚಿತನಾಗುತ್ತಾನೆ.
9. ಧನಾತ್ಮಕ ದೃಷ್ಟಿಕೋನ ಇರುವವನು, ಕಷ್ಟಗಳ ಮತ್ತು ಸಮಸ್ಯೆಗಳ ಕಡೆ ಗಮನಹರಿಸುವುದಿಲ್ಲ. ಅವನ ಚಿತ್ತ ಸದಾ ಪರಿಹಾರದ ಕಡೆ ಇರುತ್ತದೆ. ಹಾಗಾಗಿ ಸಂತೋಷ ಹೊಂದುತ್ತಾನೆ. ಋಣಾತ್ಮಕ ದೃಷ್ಟಿಕೋನ ಇರುವವನು ಕಷ್ಟಗಳನ್ನು ಮತ್ತು ಸಮಸ್ಯೆಯನ್ನು ಕುರಿತು ಚಿಂತಿಸುತ್ತಾ ದುಃಖಿತನಾಗುತ್ತಾನೆ.
10. ಧನಾತ್ಮಕ ದೃಷ್ಟಿಕೋನ ಇರುವವನು ಮಧುರವಾಗಿ ಮಾತನಾಡಿ ಸಮಾಜದಲ್ಲಿ ಸ್ವರ್ಗ ನಿರ್ಮಿಸುವನು. ಋಣಾತ್ಮಕ ದೃಷ್ಟಿಕೋನ ಇರುವವನು ಅಹಂಕಾರದ ಮಾತು, ದ್ವೇಷದ ಮಾತು ಮತ್ತು ಮಮಕಾರದ ಮಾತುಗಳನ್ನೇ ಆಡಿ ನರಕ ಮಾಡಿಕೊಳ್ಳುವನು.
11. ಧನಾತ್ಮಕ ದೃಷ್ಟಿಕೋನ ಇರುವವನಲ್ಲಿ ಪ್ರೀತಿ, ಪ್ರೇಮ ಮತ್ತು ಮಮತೆ ತುಂಬಿರುತ್ತದೆ. ಆದರೆ ಋಣಾತ್ಮಕ ದೃಷ್ಟಿಕೋನ ಇರುವವನಲ್ಲಿ ದ್ವೇಷ, ಆಸೆ, ದುರಾಸೆ ಮತ್ತು ಮತ್ಸರ ತುಂಬಿರುತ್ತದೆ. ಆತ ಮೋಸ ಮಾಡಲು ಹಿಂಜರಿಯುವುದಿಲ್ಲ. ಹಾಗಾಗಿ ದುಃಖ ಪಡುವನು.
12. ಧನಾತ್ಮಕ ದೃಷ್ಟಿಕೋನ ಇರುವವನು ಬೇರೊಬ್ಬರಲ್ಲಿ ತಪ್ಪನ್ನು ಗುರುತಿಸುವುದಿಲ್ಲ. ಯಾಕೆಂದರೆ ಆತನಿಗೆ ಗೊತ್ತು. ತಪ್ಪೇ ಮಾಡದವರು ಇಲ್ಲ ಎಂದು. ಹಾಗೆ ಯಾವುದೇ ವ್ಯಕ್ತಿ ಪರಿಪೂರ್ಣ ಅಲ್ಲ ಎಂದು. ಅಂದರೆ ಪ್ರತಿಯೊಬ್ಬರಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇದ್ದೇ ಇರುತ್ತದೆ. ಅದರಲ್ಲಿ ಒಳ್ಳೆಯದನ್ನು ಗುರುತಿಸಿ ಸಂತೋಷಪಡುತ್ತಾನೆ. ಮತ್ತು ಸಂಬಂಧ ಗಟ್ಟಿ ಮಾಡಿಕೊಳ್ಳುತ್ತಾನೆ. ಋಣಾತ್ಮಕ ದೃಷ್ಟಿಕೋನ ಇರುವವನು ಒಳ್ಳೆಯದರ ಕಡೆ ಗಮನ ಹರಿಸುವುದೇ ಇಲ್ಲ. ಒಳ್ಳೆಯದರಲ್ಲಿ ಕೆಟ್ಟದ್ದನ್ನು ಗುರುತಿಸಿ ಹೇಳಿ ಸಂಬಂಧ ದೂರ ಮಾಡಿಕೊಳ್ಳತಾನೆ. ಇದರಿಂದ ದುಃಖಿತನಾಗುತ್ತಾನೆ. ಮಕ್ಕಳೇ, ನಾವು ಧನಾತ್ಮಕ ದೃಷ್ಟಿಕೋನ ಉಳ್ಳವರಾಗಿ ಜೀವನ ಸುಂದರ ಮಾಡಿಕೊಳ್ಳೋಣ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************