-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ  ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                  
         ಮಕ್ಕಳೇ...  ಭೂಮಿಯಲ್ಲಿ ನಾವು ಹುಟ್ಟುತ್ತೇವೆ. ಭೂ ಸಂಜಾತರಾದ ಪ್ರತಿಯೊಬ್ಬರಿಗೂ ಹಸನಾದ ಬದುಕಿಗಾಗಿ ಶೋಡಷ ಸಂಸ್ಕಾರಗಳಿರುತ್ತವೆ. ಹುಟ್ಟು ಎನ್ನುವುದು ಗರ್ಭಾವಸ್ಥೆಯಿಂದ ಆರಂಭಗೊಳ್ಳುತ್ತದೆ. ಸಂಸ್ಕಾರವೂ ಗರ್ಭಾವಸ್ಥೆಯಿಂದಲೇ ಆರಂಭವಾಗುತ್ತದೆ. ಗರ್ಭದಾನ, ಪುಂಸವನ ಮತ್ತು ಸೀಮಂತೋನ್ನಯನ ಇವು ಗರ್ಭಾವಸ್ಥೆಯಲ್ಲಿ ನೀಡುವ ಸಂಸ್ಕಾರಗಳು ಎಂಬುದಾಗಿ ಹಿರಿಯರು ಗೊತ್ತುಪಡಿಸಿರುವರು. ಈ ಮೂರು ಸಂಸ್ಕಾರಗಳ ಕುರಿತು ಮಕ್ಕಳು ದೊಡ್ಡವರಾದ ನಂತರ ಅರಿತರೆ ಸಾಕು. ಮುಂದಿನ ಹದಿಮೂರು ಸಂಸ್ಕಾರಗಳು ಜನನದ ನಂತರದಲ್ಲಿ, ಮಗುವಿಗೆ ನೀಡಲ್ಪಡುವ ಸಂಸ್ಕಾರಗಳು. ಶೈಶವಾವಸ್ಥೆಯಲ್ಲಿ ಜಾತಕರ್ಮ, ನಾಮಕರಣ ಮತ್ತು ನಿಷ್ಕ್ರಮಣ ಎಂಬ ಸಂಸ್ಕಾರಗಳಿವೆ. 
        ಜಾತಕರ್ಮದಲ್ಲಿ ಜನನದ ಸೂತಕವನ್ನು ಕಳೆಯುವ ವಿಧಿಗಳನ್ನು ನಡೆಸುವರು. ಮಗುವಿನ ಜೀವನದಲ್ಲಿ ವ್ಯವಹಾರಗಳನ್ನು ನಡೆಸಲು ಅನುಕೂಲವಾಗಲೆಂದು ಹೆಸರಿಡುವ ವಿಧಿಯೇ ನಾಮಕರಣ. ಹೆಸರನ್ನಿಡುವಾಗ ಜನ್ಮ ನಕ್ಷತ್ರವನ್ನು ಗಮನಿಸಲಾಗುತ್ತದೆ. ಯಾ ನಕ್ಷತ್ರಗಳಿಗೆ ಹೊಂದುವ ಅಕ್ಷರಗಳ ಆಧಾರದಲ್ಲಿ ಸುಂದರವಾದ, ಚಿಕ್ಕದಾದ ಮತ್ತು  ಹೇಳಲು ಸಲೀಸಾಗಿರುವ ಹೆಸರನ್ನಿರಿಸುವುದು ವಾಡಿಕೆ. ಆದರೆ ಈಗೀಗ ಯಾರಿಗೂ ಇರದ ಹೆಸರುಗಳ ಹುಡುಕಾಟ ನಡೆಯುತ್ತದೆ. ಏನೂ ಅರ್ಥ ನೀಡದ ಹೆಸರೊಂದನ್ನು ಮಗುವಿಗಿಟ್ಟು ಕೈತೊಳೆದು ಕೊಳ್ಳುವುದೂ ಇದೆ. 
       ‘ನಿಷ್ಕ್ರಮಣ’ ಈ ಸಂಸ್ಕಾರವನ್ನು ನಾಲ್ಕು ತಿಂಗಳ ವಯಸ್ಸಿಗೆ ನಡೆಸುತ್ತಾರೆ. ಅಂದು ಮಗುವಿಗೆ ಹೊಸ ಉಡುಗೆಯುಡಿಸಿ ಪ್ರಕೃತಿ ದರ್ಶನಮಾಡಿಸುತ್ತಾರೆ. ಪ್ರಮುಖವಾಗಿ ಸೂರ್ಯ, ಚಂದ್ರ ಮತ್ತು ಗೋವಿನ ದರ್ಶನವನ್ನು ಮಾಡಿಸಿ ಅತಿಥಿಗಳನ್ನು ಉಪಚರಿಸಲಾಗುತ್ತದೆ. 
      ಮಗುವಿಗೆ ಅನ್ನಪ್ರಾಶನ, ಚೂಡಾಕರ್ಮ ಮತ್ತು ಕರ್ಣವೇಧ ಸಂಸ್ಕಾರ ನೀಡುವುದನ್ನು ಬಾಲ್ಯಾವಸ್ಥೆಯ ಸಂಸ್ಕಾರ ಎನ್ನುವರು. ಗಂಡು ಶಿಶುವಾದರೆ ಆರನೆ ಅಥವಾ ಎಂಟನೆ ತಿಂಗಳಿನಲ್ಲಿ, ಹೆಣ್ಣು ಮಗುವಾದರೆ ಐದನೆ ಅಥವಾ ಏಳನೇ ತಿಂಗಳಿನಲ್ಲಿ ಅನ್ನ ಕೊಡುವ ಸಂಸ್ಕಾರವನ್ನು ನಡೆಸುತ್ತಾರೆ. ತಾಯಿಯು ಶುಧ್ಧಬಾವದಿಂದ ಆಹಾರ ತಯಾರಿಸಿ ನೀಡಬೇಕು ಮತ್ತು ಆ ಆಹಾರವನ್ನು ಸತ್ಯಮಾರ್ಗದಿಂದ ಗಳಿಸಿರಬೇಕು, ಇದನ್ನು ಉಂಡ ಮಗು ಶುದ್ಧಾತ್ಮನಾಗಿ ಸಜ್ಜನನಾಗಿ ಬೆಳೆಯುತ್ತದೆ ಎಂದು ಶಾಸ್ತ್ರ ನಂಬುಗೆಯಿದೆ. 
         ಚೂಡಾ ಕರ್ಮವೆಂದರೆ ಕೇಶ ಖಂಡನೆ ಆರಂಭಿಸುವ ಪ್ರಕ್ರಿಯೆ. ಕ್ಷೌರಿಕನಿಂದ ಕೇಶ ಖಂಡನ ಮಾಡಿಸುವ ಮೊದಲು ಚೂಡಾ ಕರ್ಮ  ಅಥವಾ ಚೌಲ ವಿಧಿ ನಡೆಯುವುದು. ಕರ್ಣವೇಧ ಎಂದರೆ ಕಿವಿ ಚುಚ್ಚುವ ಕಾರ್ಯಕ್ರಮ. ಬಾಲಕರಾದರೆ ಮೂರು ಅಥವಾ ಐದನೇ ವಯಸ್ಸಿನಲ್ಲಿ ಚಿನ್ನದ ಶಲಾಕೆಯಿಂದ ಬಲ ಮತ್ತು ಎಡ ಕಿವಿಯನ್ನು ಚುಚ್ಚಲಾಗುತ್ತದೆ.
       ಕೌಮಾರ್ಯದಲ್ಲಿ ಅಕ್ಷರಾಭ್ಯಾಸ, ಉಪನಯನ ಮತ್ತು ಶಿಕ್ಷಣ ಸಂಸ್ಕಾರವನ್ನು ನೀಡಲಾಗುತ್ತದೆ. ಇಂದು ನಾವು ಹೇಳುವ ಶಿಕ್ಷಣವು ಗುರುಕುಲ ಪದ್ಧತಿಯಲ್ಲಿ ವೇದಾಧ್ಯಯನವೆಂದು ಕರೆಯಲ್ಪಡುತ್ತಿತ್ತು. ಅಕ್ಷರಾಭ್ಯಾಸಕ್ಕೂ ವಿಧಿಯಿದೆಯೇ? ಹೌದು. ಅಕ್ಷರಾಭ್ಯಾಸವನ್ನು ನಕ್ಷತ್ರ, ತಿಥಿ, ವಾರ ಮತ್ತು ರಾಶಿಗಳ  ಆಧಾರದಲ್ಲಿ ಮುಹೂರ್ತ ಗೊತ್ತುಪಡಿಸಿ ಅಕ್ಷರ ಬರೆಸುವುದನ್ನು ಆರಂಭಿಸುವುದು ಭಾರತೀಯ ಕ್ರಮದಲ್ಲಿ ಇಂದಿಗೂ ಜೀವಂತವಾಗಿದೆ. ಉಪನಯನವನ್ನು ಶಿವದೀಕ್ಷಾ ಎಂಬುದಾಗಿಯೂ ಕರೆಯಲಾಗಿದೆ. 
        ಯೌವ್ವನದಲ್ಲಿ ಸಮಾವರ್ತನ ಮತ್ತು ವಿವಾಹಗಳು ನಡೆಯುತ್ತವೆ. ಸಮಾವರ್ತನ ಎಂದರೆ ಮರಳುವುದು ಎಂದು ವಿವರಣೆಯಿದೆ. ಗುರುಕುಲದಿಂದ ವಿದ್ಯಾಪಾರಂಗತರಾಗಿ ಮರಳಿದ ಮಕ್ಕಳನ್ನು ಕುಟುಂಬಕ್ಕೆ ಸ್ವಾಗತಿಸುವ ಕಾರ್ಯಕ್ರಮವಿದು. ಈ ಸಂದರ್ಭದಲ್ಲಿ ಕಲಿಸಿದ ಗುರುವನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ.
        ವಿವಾಹ ಕಾರ್ಯಕ್ರಮವು ನಮಗೆ ಪರಿಚಿತವೇ ಇದೆ. ವಿವಾಹಾನಂತರ ಮಕ್ಕಳು ಮೊಮ್ಮಕ್ಕಳು ಹುಟ್ಟಿದ ನಂತರದಲ್ಲಿ ವೃದ್ಧಾಪ್ಯವು ಬಂದು ಬಿಡುತ್ತದೆ. ವೃದ್ಧಾಪ್ಯದಲ್ಲಿ ವಾನಪ್ರಸ್ಥ  ಮತ್ತು ಸನ್ಯಾಸ  ಎಂಬ ಸಂಸ್ಕಾರಗಳಿವೆ.  ವಾನಪ್ರಸ್ಥವು ಯೋಗ ಮಾರ್ಗದಲ್ಲಿ ಮನಸ್ಸು ಮತ್ತು ದೇಹಗಳನ್ನು ಪಳಗಿಸಲು ಪ್ರಯತ್ನಿಸುವ  ಆಯುಷ್ಯದ ಭಾಗ ಎಂದು ಹೇಳಲಾಗಿದೆ. ವಾನಪ್ರಸ್ಥದ ನಂತರವೂ ಆಯುಷ್ಯ ಉಳಿದರೆ ಸರ್ವಸಂಗ ಪರಿತ್ಯಾಗ ಮಾಡಿ ದೇವಧ್ಯಾನದಲ್ಲಿ ಲೀನರಾಗುವ ವಿಧಿಯೇ ಸನ್ಯಾಸ. ಮನುಷ್ಯನ ಜೀವಿತ  ಅವಧಿಯಲ್ಲಿ ಈ ಎಲ್ಲ ಸಂಸ್ಕಾರಗಳೂ ನಡೆಯುತ್ತವೆ. ಆಯುಷ್ಯ ಮತ್ತು ಆರೋಗ್ಯ ಉಳ್ಳವರಿಗೆ ಮಾತ್ರವೇ ಶೋಡಷ ಸಂಸ್ಕಾರಗಳನ್ನು ಅನುಭವಿಸುವ ಯೋಗವಿರುತ್ತದೆ. 
◾(ಸೂಚನೆ: ಪ್ರತಿಯೊಂದು ಸಂಸ್ಕಾರದ ಉದ್ದೇಶ ಅರ್ಥಪೂರ್ಣವಾಗಿರುತ್ತದೆ. ಹೆಚ್ಚಿನ ವಿವರಣೆಗಳಿಗೆ ಶೋಡಷ ಸಂಸ್ಕಾರಗಳ ಪರಿಚಯ ನೀಡುವ ಪುಸ್ತಕಗಳು ಲಭ್ಯವಿವೆ.)
ನಮಸ್ಕಾರ,
...........ರಮೇಶ  ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************



Ads on article

Advertise in articles 1

advertising articles 2

Advertise under the article