ಹಕ್ಕಿ ಕಥೆ : ಸಂಚಿಕೆ - 75
Tuesday, November 29, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಇತ್ತೀಚೆಗೆ ಆಗಾಗ ವಾತಾವರಣದಲ್ಲಿ ಬದಲಾವಣೆಗಳಾಗುತ್ತಿದೆ. ಯಾವಾಗ ಮಳೆ ಬರುತ್ತದೋ, ಯಾವಾಗ ಬಿಸಿಲು ಕಾಯುತ್ತದೋ ಹೇಳುವುದು ಸ್ವಲ್ಪ ಕಷ್ಟ. ಬೆಳಗ್ಗೆ ಚಳಿಗಾಲ, ಮಧ್ಯಾಹ್ನ ಬೇಸಿಗೆಕಾಲ, ಸಂಜೆಯಾದರೆ ಮಳೆಗಾಲ ಹೀಗೆ ಒಂದೇ ದಿನದಲ್ಲಿ ಮೂರೂ ಕಾಲಗಳನ್ನು ನೋಡುವುದು ಸಾದ್ಯ ಅಂತ ಕೆಲವರು ತಮಾಷೆಗೆ ಹೇಳುವುದನ್ನು ಕೇಳಿದ್ದೇನೆ. ಹತ್ತು ವರ್ಷದ ಹಿಂದೆ ಇದ್ದ ಹವಾಮಾನಕ್ಕೂ ಈಗ ಇರುವುದನ್ನೂ ಹೋಲಿಸಿ ನೋಡಿದರೆ ಈ ವ್ಯತ್ಯಾಸ ನನಗೆ ಸ್ಪಷ್ಟವಾಗಿ ಕಾಣಸಿಗುತ್ತದೆ. ಇದನ್ನೇ climate change ಎಂದು ವಿಜ್ಞಾನಿಗಳು ಕರೆಯುವುದು.
ಸೂರ್ಯನ ಬಿಸಿಲು ಓರೆಯಾಗಿ ಬೀಳುವ ಕಾರಣ ಮತ್ತು ಹಗಲಿನ ಅವಧಿ ಕಡಿಮೆ ಇರುವ ಕಾರಣ ಈಗ ನಮ್ಮ ಉತ್ತರಾರ್ಧಗೋಳದಲ್ಲಿ ಚಳಿಗಾಲ ಪ್ರಾರಂಭವಾಗಿದೆ. ಚಳಿಗಾಲ ಬಂತು, ಮಂಜು ಬೀಳಲು ಶುರುವಾಯ್ತು ಎಂದಾದರೆ ಹಲವಾರು ಹಕ್ಕಿಗಳು ಬೆಚ್ಚಗಿನ ಪ್ರದೇಶಗಳನ್ನು ಅರಸಿಕೊಂಡು ವಲಸೆ ಹೋಗುತ್ತವೆ. ಚಳಿಗಾಲದಲ್ಲಿ ಮಾತ್ರ ವಲಸೆ ಬರುವ ಹಕ್ಕಿಗಳಲ್ಲಿ ಈ ಹಕ್ಕಿಯೂ ಒಂದು.
ಒಂದು ದಿನ ನನ್ನ ಶಾಲೆ ಮುಗಿಸಿ ನನ್ನ ಮನೆಗೆ ಸೈಕಲ್ ಹತ್ತಿ ಹೊರಟಿದ್ದೆ. ಕಾರ್ಗದ್ದೆ ಎಂಬಲ್ಲಿ ಚಂದದ ಮೆಟ್ಟಿಲು ಆಕಾರದಲ್ಲಿ ಮಾಡಿದ ಗದ್ದೆಗಳು ಮತ್ತು ಇಂದು ಪುಟಾಣಿ ನೀರಿನ ಹರಿವು ಇರುವ ಜಾಗ. ಅಲ್ಲಿ ಯಾವಾಗಲೂ ನಿಲ್ಲಿಸಿ ಒಂದೈದು ನಿಮಿಷ ಸುತ್ತಲೂ ಗಮನಿಸಿ ಮುಂದೆ ಹೋಗುವುದು ನನ್ನ ಅಭ್ಯಾಸ. ಅವತ್ತು ಅಲ್ಲಿ ಗಮನಿಸುವಾಗ ಕೇದಗೆ ಎಲೆಯ ಪೊದೆಗಳ ನಡುವೆ ಆಕರ್ಷಕ ನೀಲಿ ಬಣ್ಣದ ಗುಬ್ಬಚ್ಚಿ ಗಾತ್ರದ ಹಕ್ಕಿಯೊಂದು ಕಾಣಿಸಿತು. ಅದುವರೆಗೂ ನಾನು ಆ ಹಕ್ಕಿಯನ್ನು ನೋಡಿಯೇ ಇರಲಿಲ್ಲ. ಪೊದೆ ಮತ್ತು ಮರಗಳಲ್ಲಿ ಕುಳಿತು ನೊಣದಂತಹ ಸಣ್ಣ ಹಾರುವ ಕೀಟ ಕಂಡರೆ ಹಾರಿ ಸರ್ಕಸ್ ಮಾಡಿ ಅದನ್ನು ಹಿಡಿದು ತಿನ್ನುತ್ತಿತ್ತು. ಗಂಡು ಹಕ್ಕಿ ಚಂದದ ಆಕಾಶನೀಲಿ ಬಣ್ಣದ್ದಾದರೆ ಹೆಣ್ಣು ಸ್ವಲ್ಪ ಬೂದು ಬಣ್ಣ. ಚಳಿಗಾಲದ ನವೆಂಬರ್ ನಿಂದ ಫೆಬ್ರವರಿವರೆಗೆ ಮಾತ್ರ ದಕ್ಷಿಣ ಭಾರತಕ್ಕೆ ವಲಸೆ ಬರುವ ಈ ಹಕ್ಕಿ ಮಾರ್ಚ್ ತಿಂಗಳು ಬಂದರೆ ಮತ್ತೆ ತಮ್ಮ ತವರು ಮನೆ ಹಿಮಾಲಯಕ್ಕೆ ಹಿಂತಿರುಗಿ ಹೋಗುತ್ತವೆ. ಎಪ್ರಿಲ್ ನಿಂದ ಜುಲೈ ನಡುವೆ ಹಿಮಾಲಯದ ಕಾಡುಗಳಲ್ಲಿ ಗೂಡು ಕಟ್ಟಿ ಮರಿ ಮಾಡುತ್ತವೆ.
ಪ್ರತಿವರ್ಷ ಚಳಿಗಾಲ ಬಂದರೆ ಈ ಗುಬ್ಬಚ್ಚಿ ಗಾತ್ರದ ಪುಟಾಣಿ ವಲಸೆ ಹಕ್ಕಿ ದಕ್ಷಿಣ ಬಾರತಕ್ಕೆ ವಲಸೆ ಬರುತ್ತದೆ. ಪ್ರತಿ ವರ್ಷ ಹಲವಾರು ಜನ ಪಕ್ಷಿವೀಕ್ಷಕರು ಇದನ್ನು ಗಮನಿಸಿ ದಾಖಲಿಸುತ್ತಾರೆ. ಈ ವರ್ಷವೂ ಹಲವಾರು ಕಡೆ ಈ ಹಕ್ಕಿ ಈಗಾಗಲೇ ಕಾಣಸಿಕ್ಕಿದೆ.. ನಿಮ್ಮ ಆಸುಪಾಸಿನಲ್ಲೂ ಈ ಪುಟಾಣಿ ಹಕ್ಕಿ ಇರಬಹುದು...
ಕನ್ನಡದ ಹೆಸರು: ನೀಲಿ ನೊಣಹಿಡುಕ
ಇಂಗ್ಲೀಷ್ ಹೆಸರು: Verditer Flycatcher
ವೈಜ್ಞಾನಿಕ ಹೆಸರು: Eumyias thalassina
ಛಾಯಾಚಿತ್ರ : ಅಂತರ್ಜಾಲ ಕೃಪೆ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************