-->
ಓ ಮುದ್ದು ಮನಸೇ ...…...! ಸಂಚಿಕೆ - 24

ಓ ಮುದ್ದು ಮನಸೇ ...…...! ಸಂಚಿಕೆ - 24

ಓ ಮುದ್ದು ಮನಸೇ ...…...! ಸಂಚಿಕೆ - 24
          
        ಅಂತೂ ಇಂತು ಮಾನ್ಯ ಮತ್ತು ಮನೋಹರ ಮನೆ ತಲುಪಿದರು. ಅಂಗಳದ ಮೂಲೆಯಲ್ಲಿ ಆಕಳ ಕರು ಕಟ್ಟಲು ನಿರ್ಮಿಸಿದ್ದ ಸೋಗೆಯ ಚಪ್ಪರದ ನೆರಳಿಗೆ ಮೈಯ್ಯೊಡ್ಡಿ ಕೂತಿದ್ದ ಅಜ್ಜಿ ಮೆಣಸಿನ ಪುಡಿ ಬೆರೆಸಿ ಹದಮಾಡಿದ್ದ ಕೆಂಪು ಬಣ್ಣದ ಹಪ್ಪಳದ ಹಿಟ್ಟನ್ನು ಸಣ್ಣದೊಂದು ತಟ್ಟೆಯಲ್ಲಿ ಹೊಯ್ದು ಅತ್ತಿತ್ತ ಜಾಡಿಸಿ ಪಕ್ಕದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಕೊತ ಕೊತ ಕುದಿಯುತ್ತಿದ್ದ ನೀರಿನ ಉಗಿಯ ಮೇಲೆ ಅಂಗಾತ ಮಗುಚಿ ಇಡುತ್ತಿದ್ದಳು. ಬೆಂದ ಹಪ್ಪಳಗಳನ್ನು ಚಮಚದ ಸಹಾಯದಿಂದ ನಿಧಾನವಾಗಿ ಬೇರ್ಪಡಿಸಿ ಸೂರ್ಯನ ಝಳಕ್ಕೆ ಮೈತೆರೆದಿದ್ದ ಹಸೆಹುಲ್ಲಿನ ಚಾಪೆಯ ಮೇಲೆ ಜೋಡಿಸುತ್ತಿದ್ದ ಅಜ್ಜಿಯ ಕಡೆ ಓಡಿದಳು ಮಾನ್ಯ. "ಅಜ್ಜಿ ಅಜ್ಜಿ ನಂಗೊಂದು ಹಪ್ಪಳ ಕೊಡು" ಅಂದಳು. "ಮೊದಲು ಕೈತೊಳೆದು ಬಾ, ಆ ಗಬ್ಬು ಕೈಯ್ಯಲ್ಲಿ ಹಪ್ಪಳ ತಿಂತೀಯಾ?" ಗದರಿದರು ಅಜ್ಜಿ. ಅಂಗಳದ ಕಿರು ಕಟ್ಟೆಯ ಮೇಲೆ ಪಾಟೀ ಚೀಲವನ್ನಿಟ್ಟು ತೆಂಗಿನ ಮರದ ಬುಡದಲ್ಲಿಟ್ಟಿದ್ದ ಮಣ್ಣಿನ ಬಾನಿಯೊಂದರಿಂದ ತಣ್ಣನೆ ನೀರು ಮಗೆದು ಕೈ ಕಾಲು ತೊಳೆದುಕೊಂಡ ಮಾನ್ಯ ಅಲ್ಲಿಂದಲೇ ಕೂಗಿದಳು "ಅಜ್ಜಿ... ಹಪ್ಪಳ". ಬಾಳೇ ಎಲೆಯ ಸಣ್ಣದೊಂದು ತುಂಡನ್ನು ಕೈಗೆತ್ತಿಕೊಂಡ ಅಜ್ಜಿ ತನ್ನ ಸೀರೆ ಸೆರಗಿನಿಂದ ಒರೆಸಿ ಹದವಾಗಿ ಬೆಂದಿದ್ದ ಹಪ್ಪಳವೊಂದನ್ನು ಅದರ ಮೇಲಿಟ್ಟು ಅಂದರು "ಉಪ್ಪು ಸರಿಯಾಗಿದೆಯಾ ನೋಡು". ಶಾಲೆಯಿಂದ ಮನೆಗೆ ಕಾಲ್ನಡಿಗೆಯಲ್ಲೇ ಬಂದಿದ್ದ ಮಾನ್ಯಾ ಹಸಿದಿದ್ದಳು, ಹಪ್ಪಳ ತಿನ್ನುವ ಭರದಲ್ಲಿ ಉಪ್ಪು ಚಪ್ಪೆ ಯಾವುದೂ ತಿಳಿಯಲಿಲ್ಲ. ಇತ್ತ ಸುಸ್ತಾಗಿದ್ದ ಮನೋಹರ ನೇರವಾಗಿ ಸ್ನಾನದ ಕೋಣೆಗೆ ನಡೆದ. "ಅಮ್ಮ ಟವೇಲ್ ಕೊಡು, ಸೋಪ್ ಎಲ್ಲಿದೆ? ನೀರ್ ಬಿಸಿ ಇದ್ಯಾ? ಮನೋಹರನ ಪ್ರಶ್ನೆಗಳು ನಿಲ್ಲಲಿಲ್ಲ. "ಎಲ್ಲಾ ಅಲ್ಲೇ ಇದೆ, ಸ್ನಾನ ಮಾಡಿ ಊಟ ಮಾಡು, ನಾನು ಹಾಲು ಕರೆದುಕೊಂಡು ಬರ್ತೇನೆ" ಎನ್ನುತ್ತಾ ಕೊಟ್ಟಿಗೆಯತ್ತ ಹೋದರು ಅಮ್ಮ. ಹಿತ್ತಲಿನ ಮೂಲೆಯಲ್ಲೊಂದು ಸಣ್ಣ ಹಂಚಿನ ಮನೆ, ಮಣ್ಣಿನ ಒಲೆಯ ಮೇಲೆ ತಾತನಕಾಲದ ಬೃಹದಾಕಾರದ ಹಿತ್ತಾಳೆಯ ಹಂಡೆ. ತಾನು ಬೆಂಕಿಯಲ್ಲಿ ಬೆಂದು, ಕಡುಗಪ್ಪು ಮಸಿಯನ್ನೆಲ್ಲಾ ಮೈಗೆ ಮೆತ್ತಿಕೊಂಡು ಅದೆಷ್ಟು ವರ್ಷಗಳಿಂದ ಮನೆಯವರ ದೇಹದ ದಾಹ ತಣಿಸಿದೆಯೋ ಗೊತ್ತಿಲ್ಲ. ಆ ಪುಟ್ಟ ಬಚ್ಚಲು ಮನೆಗೆ ಗೋಡೆಗಳಿಲ್ಲ, ಸುತ್ತಲು ತೆಂಗಿನ ಗರಿಗಳಿಂದ ತಟ್ಟಿ ಕಟ್ಟಿ ಬಾಗಿಲಿಗೆ ಗೋಣಿಚೀಲದ ಪರದೆ ಬಿಡಲಾಗಿದೆ. ಬಚ್ಚಲ ನೆಲಕ್ಕೆ ಹೊಳೆಯಲ್ಲಿ ಸಿಗುವ ಚಪ್ಪಟೆ ಕಲ್ಲುಗಳನ್ನು ಜೋಡಿಸಿ ಅಲ್ಲಲ್ಲಿ ಸಿಮೆಂಟ್ ಸುರಿದು ಜೋಡಿಸಲಾಗಿದೆ. ಇನ್ನು ತಲೆಗೆ ಸೀಗೆಕಾಯಿ ಜಜ್ಜಿ ಮಾಡಿದ ಸೀಗೆ ಪುಡಿ, ದೇಹಕ್ಕೆ ಅಟ್ಟಲಕಾಯಿ. ಬೆಚ್ಚಗಿನ ನೀರನ್ನು ಮೈಮೇಲೆ ಹಾಕಿಕೊಂಡಾಗ ಸಿಗುವ ನಿರಾಳತೆಯೇ ಒಂತರಾ ಚೆಂದ. ಸ್ನಾನದ ನೀರು ಹರಿದು ಹೋಗೋದಕ್ಕೆ ಅಡಿಕೆ ಮರವನ್ನು ಸಮವಾಗಿ ಎರಡು ಭಾಗ ಮಾಡಿ ಅದರೊಳಗಿನ ತಿರುಳು ತೆಗೆದು ಬಚ್ಚಲ ಕಟ್ಟೆಯಿಂದ ತೆಂಗಿನ ಮರದ ಬುಡಕ್ಕೆ ಜೋಡಿಸಲಾಗಿದೆ.
          ಸ್ನಾನ ಮುಗಿಸಿದ ಮನೋಹರ ಮಾನ್ಯಾಳನ್ನು ಕರೆದು ಅಂದ "ನಂದು ಸ್ನಾನ ಆಯ್ತು, ನೀನು ಬೇಕಿದ್ರೆ ಮಾಡು" ಕೇಳಿದರೂ ಕೇಳಿಸಿಕೊಳ್ಳದಂತೆ ಅಮ್ಮ ಹಾಲು ಕರೆಯುತ್ತಿದ್ದ ಕೊಟ್ಟಿಗೆಗೆ ನಡೆದಳು ಮಾನ್ಯ. ಕಪ್ಪು ಬಿಳುಪು ಮೈಬಣ್ಣ ಹೊಂದಿರುವ ಆಕಳು ಕರು ಹಾಕಿ ನಾಲ್ಕೈದು ದಿನಗಳಷ್ಟೇ ಆಗಿವೆ. ಪುಟ್ಟ ಕರು ತಾಯಿಯ ಕೆಚ್ಚಲಿಗೆ ಬಾಯೊಡ್ಡಿ ಅದನ್ನು ತನ್ನ ಸುಂಡಿಯಿಂದ ತಿವಿಯುತ್ತ ಹಾಲು ಹೀರುವುದನ್ನು ನೋಡುತ್ತಾ ನಿಂತಳು ಮಾನ್ಯ. "ಅಣ್ಣಂದು ಸ್ನಾನ ಆಯ್ತಾ? ನೀನು ಹೋಗಿ ಸ್ನಾನ ಮಾಡು" ಅಮ್ಮ ಅಂದರು. ಉತ್ತರ ಕೊಡದ ಮಾನ್ಯ ಕರುವಿನ ಪಕ್ಕದಲ್ಲಿ ಬಂದು ಕುಳಿತಳು.  ಕರುವಿನ ಹಣೆಯ ಮೇಲೆ ಶಂಕುವಿನಾಕಾರದ ಬೆಳ್ಳನೆಯ ಚಿತ್ತಾರ, ಮೈತುಂಬ ಕಪ್ಪು ಬಿಳಿ ಮಿಶ್ರಿತ ರಂಗೋಲಿ, ಅದೆಷ್ಟು ಮುದ್ದಾಗಿದೆ ಈ ಕರು. ದೇಹದಲ್ಲಿ ಶಕ್ತಿಯಿಲ್ಲದಿದ್ದರೂ ಓಲಾಡಿಕೊಂಡೇ ಹಾಲು ಹೀರುತ್ತಿರುವ ಈ ಕರುವನ್ನು ಎಷ್ಟು ಮುದ್ದಾಡಿದರೂ ಕಡಿಮೆಯೇ. "ಅಮ್ಮಾ ಇವತ್ತೂ ಗಿಣ್ಣು ಮಾಡ್ತೀರಾ?" ಹಸು ಕರು ಹಾಕಿದ ನಂತರ ಐದಾರು ದಿನಗಳವರೆಗೆ ಕರೆದ ಹಾಲನ್ನು ಬೆಲ್ಲ ಬೆರೆಸಿ ಒಂದಿಷ್ಟು ಏಲಕ್ಕಿ, ತುಪ್ಪ, ದ್ರಾಖ್ಷಿ ಮತ್ತು ಗೊಂಡಂಬಿ ಬೆರೆಸಿ ಹಾಲು ಗಟ್ಟಿಯಾಗುವವರೆಗೆ ಸರಿಯಾಗಿ ಕುದಿಸಬೇಕು, ಹೀಗೆ ತಯಾರಿಸಿದ ಗಿಣ್ಣಿನ ರುಚಿಯನ್ನು ಸವಿದವನೇ ಬಲ್ಲ. ಮಾನ್ಯಾಳ ನಾಲಿಗೆ ಗಿಣ್ಣಿನ ರುಚಿಗಾಗಿ ಕಾದಿದೆ. "ಪೂರ್ತಿ ಹಾಲನ್ನು ಕರುವೇ ಕುಡಿಯುತ್ತಿದೆ, ಉಳಿದರೆ ಮಾಡಿಕೊಡ್ತೇನೆ" ಅಂದರು ಅಮ್ಮ. ಅಲ್ಲಿಂದ ಅಂಗಳಕ್ಕೆ ಬಂದ ಮಾನ್ಯಾಳಿಗೆ ಹೆಗಲಮೇಲೆ ದೊಡ್ಡದೊಂದು ಬಾಳೆಗೊನೆ ಹೊತ್ತು ಬರುತ್ತಿದ್ದ ಅಪ್ಪ ಕಂಡರು. ಅಂಗಳದ ಕಿರುಕಟ್ಳ ಮೇಲೆ ಬಾಳೆಗೊನೆ ಇಳಿಸಿದ ಅಪ್ಪ "ನಡ್ಕೊಂಡೇ ಬಂದ್ರ ಶಾಲೆಯಿಂದ?" ಅಂದರು. "ಹೌದು ಹರೀಶಣ್ಣನ ಜೊತೆ ತೋಟದ ದಾರೀಲಿ ಬಂದ್ವಿ" ಅನ್ನುತ್ತಾ ಬಾಳೆಗೊನೆಯಲ್ಲಿನ ಅರ್ಧಂಬರ್ಧ ಹಣ್ಣಾದ ಬಾಳೆಕಾಯಿಯೊಂದನ್ನು ಕೀಳುವ ಪ್ರಯತ್ನ ಮಾಡಿದಳು ಮಾನ್ಯ. "ಇರು" ಅನ್ನುತ್ತ ಬಂದ ಅಪ್ಪ ಸೊಂಟದ ಹಿಂದೆ ನೇತು ಹಾಕಿದ್ದ ಕುಡಗೋಲನ್ನು ತೆಗೆದು ಬಾಳೇಕಾಯಿಯ ದಂಟನ್ನು ಹರಿದು ಮಾನ್ಯಾಳ ಕೈಯ್ಯಲ್ಲಿಟ್ಟ.
            ಒಬ್ಬೊಬ್ಬರಂತೆ ಎಲ್ಲರ ಸ್ನಾನ ಮುಗಿದ ಮೇಲೆ ಮನೋಹರ ಮತ್ತು ಮಾನ್ಯ ಇಬ್ಬರೂ ದೇವರ ಕೋಣೆಯಲ್ಲಿ ದೀಪ  ಹಚ್ಚಿ ಭಜನೆಗೆ ಕುಳಿತು ಕೊಂಡರು. ಅಣ್ಣ ತಬಲ ಬಾರಿಸುತ್ತಾ ಹೇಳಿಕೊಟ್ಟ ಸಾಲುಗಳನ್ನು ತಾಳ ನುಡಿಸುತ್ತಾ ಪುನರಾವರ್ತಿಸುತ್ತಿದ್ದ ಮಾನ್ಯ ಭಕ್ತಿಯ ಏಕಾಗ್ರತೆಯಲ್ಲಿ ತಲ್ಲೀನಳಾದಳು. ಸ್ನಾನ ಮುಗಿಸಿ ಬಂದ ಅಜ್ಜಿಯೂ ಅವರಿಬ್ಬರನ್ನು ಸೇರಿಕೊಂಡರು, ಜೊತೆಗೆ ಅಪ್ಪ ಆಮೇಲೆ ಅಮ್ಮ. ಹೀಗೆ ಎಲ್ಲರೂ ಒಂದರ್ಧ ಘಂಟೆ ಭಜನೆ ಮಾಡಿದ ನಂತರ ಅಪ್ಪ ಪೂಜೆ ಮುಗಿಸಿ ಬಂದು ಅಜ್ಜಿಯ ಕಾಲುಗಳನ್ನು ಸ್ಪರ್ಷಿಸಿ ನಮಸ್ಕರಿಸಿ ಎದ್ದು ಹೋದರು. ಅವರನ್ನು ಹಿಂಬಾಲಿಸಿದ ಮನೋಹರ, ಮಾನ್ಯಾ ಕೂಡಾ ಅಜ್ಜಿಯ ಕಾಲು ಸ್ಪರ್ಷಿಸಿ ನಮಸ್ಕರಿಸಿದರು. ಇದು ಅವರ ಮನೆಯಲ್ಲಿ ದಿನನಿತ್ಯ ನಡೆಯುವ ಸಂಸ್ಕಾರ. ದೇವರಿಗೆ ತೋರುವ ಭಕ್ತಿ ಹಿರಿಯರಿಗೆ ತೋರುವ ಗೌರವ ಮಕ್ಕಳನ್ನು ಸುಸಂಸ್ಕೃತ ರನ್ನಾಗಿಸಿದೆ. ಇನ್ನು ಊಟ ಮಾಡುವಾಗ ಡೈನಿಂಗ್ ಟೇಬಲ್ ಇದ್ದರೂ ನೆಲದಮೇಲೇ ಕೂತು ಊಟ ಮಾಡುವ ಅಪ್ಪ ಅದನ್ನು ಅನ್ನ ಕೊಡುವ ಭೂತಾಯಿಗೆ ತೋರುವ ಗೌರವವೆಂದೇ ಭಾವಿಸುತ್ತಾರೆ. ಇನ್ನು ಅಮ್ಮ ಮಾಡುವ ಅಡುಗೆಯನ್ನು ಮನೆಮಂದಿಗಷ್ಟೇ ಸೀಮಿತ ಗೊಳಿಸದೆ ಬೆಕ್ಕು, ನಾಯಿಗಳನ್ನೂ ತಮ್ಮೊಳಗೊಬ್ಬರಂತೆ ಗ್ರಹಿಸುವುದು ಅವರ ಸಿಂಪಲ್ ಆದರೂ ಸ್ಪೆಶಲ್ ಗುಣಗಳಲ್ಲಿ ಒಂದು. ಅಪ್ಪ ಅದೆಷ್ಟೇ ಆಯಾಸ ಗೊಂಡಿದ್ದರೂ ರಾತ್ರಿ ಊಟದ ನಂತರ ಮಕ್ಕಳ ಜೊತೆ ಜಗಲಿಯಲ್ಲಿ ಕೂತು ಲುಡೋ, ಚೆಸ್ ಅಥವಾ ಕೇರಮ್ ಆಟ ಆಡಿಯೇ ಮಲಗೋದು. ಧಾರಾವಾಹಿಗಳಿಗೆ ಅಂಟಿಕೊಳ್ಳದೆ ಆಟ ನಡೆಯುವಾಗ ಅಮ್ಮ ಅಪ್ಪನ ಕಡೆಯಾದರೆ ಅಜ್ಜಿ ಮೊಮ್ಮಕ್ಕಳ ಕಡೆ. ಆಗ ನಡೆಯುವ ಆಟದ ಗಮ್ಮತ್ತೇ ಬೇರೆ. ಮಾನವ ನಿರ್ಮಿತ ಮಶೀನ್ಸ್ ಗಳ ಜೊತೆ ಬೆರೆಯದೆ ಮನುಷ್ಯನ ಮನಸ್ಸಿನ ಜೊತೆ ಬೆರೆತಾಗ ಸಿಗಬಹುದಾದ ಸಂತೋಷವನ್ನು ಅನುಭವಿಸಿದ್ದೀರಾ? ನಾವುಗಳೂ ಇಂತಹ ಸುಂದರ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕಾದದ್ದು ಈ ಹೊತ್ತಿನ ಅತೀ ಮುಖ್ಯ ಅನಿವಾರ್ಯತೆಗಳಲ್ಲಿ ಒಂದು ಅನ್ನಿಸುವುದಿಲ್ಲವೇ...?
......................................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , 
ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
********************************************

Ads on article

Advertise in articles 1

advertising articles 2

Advertise under the article