-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                                  
              ಮಕ್ಕಳೇ, ಹಿರಿಯರು ಆಶೀರ್ವಾದ ನೀಡುವಾಗ, ‘ದೀರ್ಘಾಯುಷ್ಮಾನ್ ಭವ’ ಎನ್ನುವರು. ಇದರ ಅರ್ಥ ದೀರ್ಘಾಯುಷಿಯಾಗು ಎಂದಾಗಿದೆ. ‘ಹೃದಯೀ ಭವ’? ಎಂಬುದು ಹೊಸ ಪರಿಯ ಆಶೀರ್ವಾದವೇ? ಹೌದು. ಈ ರೀತಿಯೂ ಆಶೀರ್ವದಿಸುವ ಕಾಲ ಬಂದಿದೆ. “ಹೃದಯವಂತನಾಗು” ಎಂದು ಆಶೀರ್ವದಿಸುವಾಗ, ಆಶೀರ್ವದಿಸಲ್ಪಡುವವರು ಹೃದಯಶೂನ್ಯರೆಂದು ತಿಳಿಯಬೇಕೇ? ಈ ರೀತಿಯ ಅಧಿಕ ಪ್ರಸಂಗದ ಪ್ರಶ್ನೆಯೂ ಹುಟ್ಟುವುದು ಸಹಜ. ಯಾಕೆಂದರೆ ‘ದೀರ್ಘಾಯುಷ್ಮಾನ್ ಭವ’ ಮತ್ತು ‘ಹೃದಯೀ ಭವ’ ಇವುಗಳ ಒಳ ಧ್ವನಿಯಲ್ಲಿ ಅಂತರವಿದೆ. ಹೃದಯ ಶ್ರೀಮಂತರು ಅಥವಾ ಶ್ರೀಮಂತ ಹೃದಯವಂತರು ಎಂದೂ ಹೇಳುತ್ತಾರೆ. ಅವರಿಗೆ ಹೃದಯೀ ಭವ ಎಂದರೆ ತಪ್ಪಲ್ಲವೇ? ಯಾವುದೇ ಸಂದರ್ಭದಲ್ಲೂ ಶ್ರೀಮಂತಿಕೆಗೆ ಅಂತ್ಯರೇಖೆಯಿಲ್ಲ. ಶ್ರೀಂತಿಕೆ ಎಷ್ಟಿದ್ದರೂ ಬೇಡವೆನ್ನುವವರಿಲ್ಲ. ಹಾಗಾಗಿ ಹೃದಯ ಶ್ರೀಮಂತರಿಗೂ ಹೃದಯೀ ಭವ ಎಂದು ಹಾರೈಸಬಹುದು. 
         ನಾನು ಹೇಳ ಹೊರಟಿರುವುದೇನು ಎಂಬುದು ನಿಮಗಿನ್ನೂ ಮನನವಾಗಿರದು. ಹೃದಯದೊಳಗೆ ಪ್ರೀತಿ ಮತ್ತು ಗುಣ ಹುಟ್ಟುತ್ತದೆ. ಇವೆರಡೂ ಧಾರಾಳ ಇದ್ದರೆ ಅವನು ಅಥವಾ ಅವಳು ಹೃದಯ ಶ್ರೀಮಂತರ ಸಾಲಿಗೆ ಬರುತ್ತಾರೆ. ಅವರೇ ಹೃದಯವಂತರು. ಹಾಗಾದರೆ ಹೃದಯ ಶೂನ್ಯರು ಯಾರು? ಗುಣ ಮತ್ತು ಪ್ರೀತಿಗಳೆರಡೂ ಇರದವರು ಹೃದಯ ಶೂನ್ಯರು ಎಂದು ಹೇಳಬಹುದು. ದ್ವೇಷ ಮತ್ತು ದುರ್ಗುಣ ಹುಟ್ಟಲು ಹೃದಯ ಬೇಡವೇ? ಈ ಪ್ರಶ್ನೆಗೆ ಉತ್ತರ ಬೇಡ, ಇವುಗಳ ಉಗಮಸ್ಥಾನ ಬುದ್ಧಿ ಅಥವಾ ಮಿದುಳು. ಪ್ರಬುದ್ಧನಾದವನ ಬುದ್ಧಿಯಲ್ಲಿ ಹಗೆತನ ಮತ್ತು ದುರ್ಭಾವ ಹುಟ್ಟುವುದಿಲ್ಲ. ಗೌತಮ ಬುದ್ಧ ಪ್ರಬುದ್ಧ. ನಮಗೆ ನಿತ್ಯ ಕಾಣಿಸುವ ಪ್ರಬುದ್ಧರು ಎಂದರೆ ಹಸುಳೆಗಳು ಅಥವಾ ಮಕ್ಕಳು. ಅದಕ್ಕಾಗಿಯೇ ಮಕ್ಕಳನ್ನು ಮುಗ್ಧರು, ದೇವರು ಎನ್ನುವುದು. ನಂತರದಲ್ಲಿ ಸಿಗುವ ಮುಗ್ಧರೆಂದರೆ ವೃದ್ಧರು. ವೃದ್ಧರ ಮನಸ್ಸನ್ನು ಮಕ್ಕಳ ಮನಸ್ಸಿಗೆ ಹೋಲಿಸುವರು. ಹಾಗಾದರೆ ಹೃದಯ ಶೂನ್ಯರು ಯಾರು? ಮುಗ್ಧತೆಯನ್ನು ಸ್ವಾರ್ಥಕ್ಕೆ ಬಲಿನೀಡಿ ಹೃದಯವನ್ನು ದುಗ್ಧಗೊಳಿಸುವವರು ಹೃದಯ ಶೂನ್ಯರು. ಹೃದಯಶೂನ್ಯರಲ್ಲಿ ಗುಣಗಳು ಮತ್ತು ಪ್ರೀತಿ ಬತ್ತಿ ಹೋಗಿರುತ್ತದೆ. ಗುಣ ಮತ್ತು ಪ್ರೀತಿಯ ಮರು ಒರತೆ ಕಾಣಲು ಅವರು ಸ್ವಾರ್ಥ ಭಾವದಿಂದ ಹೊರ ಬರಬೇಕಾಗುತ್ತದೆ. ಅದಕ್ಕಾಗಿಯೇ ಇಂಥಹವರಿಗೆ “ಹೃದಯೀ ಭವ” ಎಂದು ಆಶೀರ್ವಾದ ಮಾಡಲೇ ಬೇಕು. ಇದು ಈ ಲೇಖನದ ಆಶಯ.
       ಗುಣ ಮತ್ತು ಪ್ರೀತಿ ಬದುಕಿಗೆ ಅನಿವಾರ್ಯವೇ? ಹೌದು. ಬದುಕು ಮತ್ತು ಬದುಕಲು ಬಿಡು ಎನ್ನುತ್ತೇವೆ. ಇತರರನ್ನು ಬದುಕಲು ಬಿಡಬೇಕಾದರೆ ಗುಣ ಮತ್ತು ಪ್ರೀತಿಯ ಸೆಲೆಗಳು ಬಲವಾಗಿ ಹೃಯದೊಳಗೆ ಸದಾ ಚಿಮ್ಮುತ್ತಿರಲೇ ಬೇಕು. ಇತರರಿಗೂ ಬದುಕಲು ಬಿಡುವವನ ಬದುಕನ್ನು “ಬಾಳು” ಎನ್ನುತ್ತೇವೆ. ಬಾಳುವುದು ಎಂದರೆ ದೀರ್ಘಕಾಲ ಉಳಿಯುವುದು ಎಂದೂ ಅರ್ಥವಿದೆ. ಗುಣ ಮತ್ತು ಪ್ರೀತಿಯ ಆಗರವಾದವರು ಸಾವಿನ ನಂತರವೂ ಜನರ ಹೃದಯದಲ್ಲಿ ಉಳಿಯುತ್ತಾರೆ. ಜೀವಿತಕಾಲದಲ್ಲಿ ಅವರ ಆರೋಗ್ಯ ಸಂಪತ್ತು, ಧನ ಸಂಪತ್ತು, ಕನಕ ಸಂಪತ್ತು, ಗೋ ಸಂಪತ್ತು, ಪುತ್ರ ಪೌತ್ರ ಸಂಪತ್ತು, ಜ್ಞಾನ ಸಂಪತ್ತು, ವಿಚಾರ ಸಂಪತ್ತು.... ಹೀಗೆ ಎಲ್ಲ ಸಂಪತ್ತುಗಳೂ ನಾಶಗೊಳ್ಳದೆ ಬಾಳುತ್ತವೆ. ಎಲ್ಲರ ಬಾಳುವೆಯ ಮೂಲ ಹೃದಯ, ಅರ್ಥಾತ್ ಗುಣ ಮತ್ತು ಪ್ರೀತಿಯ ಮಾತೃಕೇಂದ್ರ ಯಾ ಶಕ್ತಿಕೇಂದ್ರ. ಹಾಗಾಗಿ ಹೃದಯ ಶ್ರೀಮಂತಿಕೆಯನ್ನೇ ಎಲ್ಲರಿಗೂ ಹಾರೈಸುವುದು ಶ್ರೇಯಸ್ಕರವಲ್ಲವೇ? ನಮಸ್ಕಾರ
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************


Ads on article

Advertise in articles 1

advertising articles 2

Advertise under the article