-->
ಜೀವನ ಸಂಭ್ರಮ : ಸಂಚಿಕೆ - 60

ಜೀವನ ಸಂಭ್ರಮ : ಸಂಚಿಕೆ - 60

ಜೀವನ ಸಂಭ್ರಮ : ಸಂಚಿಕೆ - 60
                                
               ಮಕ್ಕಳೇ, ಈ ಕಥೆಯನ್ನು ಓದಿ ನಂತರ ನೀವೇ ನಿರ್ಧರಿಸಿ. ಯಾವುದು ಸ್ಥಿರ ಎಂದು. ಒಂದು ಊರಿನಲ್ಲಿ ಒಬ್ಬ ವ್ಯಕ್ತಿ ಇದ್ದ. ಆತನಿಗೆ ನಾಲ್ಕು ಮಕ್ಕಳು. ಆತ ಸಾಕಷ್ಟು ಜಮೀನು, ಹಣ ಮತ್ತು ಒಡವೆ ಸಂಪಾದಿಸಿದನು. ಆ ವ್ಯಕ್ತಿಗೆ ವಯಸ್ಸಾಗುತ್ತಾ ಬಂದಿತ್ತು. ಇನ್ನೇನು ಸಾವು ಸಮೀಪಿಸುತ್ತಿದೆ ಅನಿಸಿದಾಗ, ತನ್ನ 4 ಮಕ್ಕಳನ್ನು ಹತ್ತಿರ ಕರೆದು ಹೇಳಿದ. ನೋಡಿ ಮಕ್ಕಳೇ ನಾನು ಇನ್ನು ಹೆಚ್ಚು ದಿನ ಇರುವುದಿಲ್ಲ. ಅದಕ್ಕೆ ನನ್ನಲ್ಲಿರುವ ಆಸ್ತಿ, ಹಣ, ಒಡವೆ ಮತ್ತು ಒಂದು ಸುಂದರ ಮಾತು ಹಂಚಬೇಕೆಂದಿದ್ದೇನೆ. ಒಬ್ಬೊಬ್ಬರು ಒಂದೊಂದು ತೆಗೆದುಕೊಳ್ಳಬೇಕು ಎಂದು ಹೇಳಿದನು.
      ತನ್ನ ಹಿರಿಯ ಮಗನಿಗೆ ಮೊದಲ ಆದ್ಯತೆ ನೀಡಿದ. "ನೋಡಪ್ಪ, ನೀನು ನನ್ನ ಮಕ್ಕಳಲ್ಲಿ ಹಿರಿಯವನು. ಹಾಗಾಗಿ ನಿನಗೆ ಏನು ಬೇಕು ಕೇಳು" ಎಂದನು. ಹಿರಿಯ ಮಗ ಯೋಚಿಸಿದ, ಹೇಳಿದ. "ನೋಡಿ ತಂದೆಯೇ, ನಮ್ಮ ಮನೆಯಲ್ಲಿ ಅತಿ ಚಿಕ್ಕವನು ಇದ್ದಾನಲ್ಲ, ಅವನು ನಮ್ಮೆಲ್ಲರಿಗೂ ಪ್ರಿಯ. ಆತನಿಂದಲೇ ಹಂಚಿ ಬಿಡು" ಎಂದ. ತಂದೆ ಕಿರಿಯ ಮಗನಿಗೆ, "ಏನು ಬೇಕು ಕೇಳು. ಆಸ್ತಿ ಬೇಕಾ?, ಹಣ ಬೇಕಾ? ಒಡವೆ ಬೇಕಾ? ಅಥವಾ ನನ್ನ ಒಂದು ಸುಂದರ ಮಾತು ಬೇಕಾ?" ಎಂದನು. ಆಗ ಕಿರಿಯ ಮಗ ಯೋಚಿಸಿ ಹೇಳಿದ, "ನನಗೇನು ಗೊತ್ತಿಲ್ಲ ತಂದೆ. ನಿನ್ನ ದೃಷ್ಟಿಯಲ್ಲಿ ಯಾವುದು ಮಹತ್ವದ್ದು ಇದೆಯೋ ಅದನ್ನು ನೀಡು" ಎಂದನು. ಅದಕ್ಕೆ ತಂದೆ, "ನೋಡಪ್ಪ ಒಂದು ಮಾತು ತೆಗೆದುಕೊಂಡು ಏನು ಮಾಡುದಿದೆ?. ಕೇಳು ಏನು ಬೇಕು?" ಎಂದ. ಅದಕ್ಕೆ ಕಿರಿಯ ಮಗ ಹೇಳಿದ, "ಮಾತೇ ಅಷ್ಟು ಮಹತ್ವದ್ದಾಗಿದ್ದರೆ, ಅದನ್ನೇ ಕೊಡು" ಎಂದನು. ಅದಕ್ಕೆ ಅದನ್ನು ಕೇಳಿ ಉಳಿದ ಮೂವರು ಅಣ್ಣಂದಿರು ಬಹಳ ಸಂತೋಷಪಟ್ಟರು. ನಮಗೆ ಆಸ್ತಿ, ಹಣ ಮತ್ತು ಒಡವೆ ಸಿಗುತ್ತದೆ ಎಂದು. ತಂದೆ ಹೇಳಿದ ಮಾತು "ಯಾವುದೂ ಶಾಶ್ವತವಲ್ಲ" ತೆಗೆದುಕೋ ಇದನ್ನು ಎಂದ. ಅಣ್ಣಂದಿರು ಒಂದೊಂದು ವಸ್ತುವನ್ನು ಪಡೆದುಕೊಂಡರು. ತಂದೆ ಜೀವ ಬಿಟ್ಟ. ಕೊನೆಯ ಮಗ ಮನೆ ಬಿಟ್ಟ. ಏಕೆಂದರೆ ಆಸ್ತಿ, ಹಣ, ಒಡವೆ ಅವನದಾಗಿರಲಿಲ್ಲ. ಮುಂದೆ ಆತನೇ ಒಬ್ಬ ದೊಡ್ಡ ಸಂತನಾಗಿದ್ದ. ಆತನ ಸಂದೇಶ... "ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ, ಈ ಜ್ಞಾನವನ್ನು ತಿಳಿದು, ಅದು ನಾಶವಾಗುವುದರೊಳಗೆ ಆನಂದವಾಗಿ ಬಳಸಿ ಸಂತೋಷ ಪಡುವುದೇ ಜೀವನ" ಎಂತಹ ಅದ್ಭುತ ಮಾತು. ಮುಂದೆ ಅಣ್ಣಂದಿರ ಆಸ್ತಿ, ಹಣ, ಒಡವೆ ಎಲ್ಲಾ ಹೋಗಿತ್ತು. ಈ ಕಥೆ ಓದಿದ ಮೇಲೆ ಯಾಕೆ ಯಾವುದು ಸ್ಥಿರವಲ್ಲ ಎನ್ನುವ ಪ್ರಶ್ನೆ ಏಳಬಹುದು. ಈ ಭೂಮಿ ಮೊದಲು ಇರಲಿಲ್ಲ. ಕೆಲವು ಲಕ್ಷಾಂತರ ವರ್ಷಗಳ ಹಿಂದೆ ಅನಿಲದಿಂದ ಕೂಡಿತ್ತು. ನಂತರ ಘನೀಕರಿಸಿ ಘನವಾಯಿತು. ಮಳೆಬಿದ್ದು ಮೊದಲಿಗೆ ಏಕ ಕೋಶ ಜೀವಿಗಳು ರೂಪಿತವಾದವು. ಕ್ರಮೇಣ ಕ್ರಮೇಣ ಬಹು ಕೋಶ ಜೀವಿಗಳಾದವು. ಕ್ರಮೇಣ ವಿಕಾಸ ಹೊಂದಿ ಮಾನವನಾದ. ಮೊದಲಿಗೆ ಗಿಡಗಳು ಇರಲಿಲ್ಲ. ಕ್ರಮೇಣ ವಿಕಾಸ ಹೊಂದಿ ಈ ಸುಂದರ ಭೂಮಂಡಲವಾಗಿದೆ. ಯಾವುದು ಸೃಷ್ಟಿಯಾಗುತ್ತೋ ಅದು ನಾಶ ಹೊಂದಲೇಬೇಕು. ಕೆಲವು ಲಕ್ಷಾಂತರ ವರ್ಷಗಳ ನಂತರ ಈ ಭೂಮಿ, ಸೂರ್ಯ ಕೂಡ ಇರುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ನಮ್ಮ ದೇಹವನ್ನು ನೋಡಿ. ಕೆಲವು ವರ್ಷಗಳ ಹಿಂದೆ ಶಿಶುವಾಗಿದ್ದೆವು, ಬೆಳೆಯುತ್ತಾ ಬೆಳೆಯುತ್ತಾ ಮಾತು ಕಲಿತೆವು, ನಡೆಯುವುದನ್ನು ಕಲಿತೆವು, ಈಗ ಶಾಲೆಗೆ ಬರುತ್ತಿದ್ದೇವೆ, ಮುಂದಿನ ತರಗತಿಗೆ ಹೋಗುತ್ತಿದ್ದೇವೆ. ಮುಂದೆ ಮದುವೆ, ಮಕ್ಕಳು, ನಂತರ ಮುದುಕ, ಕ್ರಮೇಣ ನಾವೇ ಇಲ್ಲದಂತಾಗುತ್ತೇವೆ. ಪ್ರತಿದಿನ ಒಂದು ಹಂತದವರೆಗೆ ದೇಹ ಬೆಳೆಯುತ್ತದೆ. ನಂತರ ನಶಿಸಲು ಪ್ರಾರಂಭಿಸುತ್ತದೆ. ಇದು ಪ್ರತಿ ನಿಮಿಷ ಆಗೋದು. ನಾವು ಜ್ಞಾನ ಪಡೆದಂತೆ, ಬುದ್ಧಿ ಹೆಚ್ಚಾದಂತೆ, ನಮ್ಮ ಮನಸ್ಸು, ಭಾವನೆಗಳು ಮತ್ತು ಕಲ್ಪನೆಗಳು ಬದಲಾಗುತ್ತದೆ. ಅದರಂತೆ ನಮ್ಮ ವ್ಯಕ್ತಿತ್ವ ಬದಲಾಗುತ್ತದೆ. ಎಷ್ಟೋ ಕುಟುಂಬ ಜೊತೆಯಾಗಿ ಇದ್ದವರು ದೂರವಾಗುತ್ತಾರೆ. ಇದು ಆಗೋದೇ. ಯಾವುದು ಇದ್ದಂತೆ ಇರುವುದಿಲ್ಲ. ಭೂಮಿ ನಿರಂತರ ಚಲನೆ ಮಾಡುತ್ತದೆ. ಸಸ್ಯಗಳು ದಿನೇ ದಿನೇ ಬೆಳೆಯುತ್ತಲೇ ಇವೆ. ಹೂ ಹಣ್ಣನ್ನು ನೀಡುತ್ತವೆ. ಒಂದು ದಿನ ಸುಮ್ಮನೆ ಇದ್ದಂತೆ ಇರುವುದಿಲ್ಲ. ಬದಲಾಗುತ್ತದೆ. ಕ್ರಮೇಣ ಅವು ನಾಶವಾಗುತ್ತದೆ. ನಾವು ಒಂದು ಮನೆ ಕಟ್ಟುತ್ತೇವೆ. ಅದರ ಆಯಸ್ಸು ನೂರು ವರ್ಷ ಎನ್ನುತ್ತೇವೆ. ಅಂದರೆ ನೂರು ವರ್ಷದ ನಂತರ ಅದು ಬಳಸಲು ಯೋಗ್ಯವಲ್ಲ ಎಂದು ಕೆಡವುತ್ತೇವೆ. ಯಾವುದೇ ತಿಂಡಿ, ಪೊಟ್ಟಣ ಮತ್ತು ಔಷಧ ಖರೀದಿಸಿದರೂ ತಯಾರಾದ ದಿನಾಂಕ, ಮತ್ತು ಬಳಸಬೇಕಾದ ಅವಧಿ ನಮೂದಿಸಿರುತ್ತಾರೆ. ಆ ದಿನಾಂಕದ ನಂತರ ವಿಷವಾಗುತ್ತದೆ. ಒಂದು ವಾಹನ ತಯಾರಿಸಿದರು ಕೂಡ ಅದಕ್ಕೂ ಆಯಸ್ಸು ಇದೆ. ಅಂದರೆ ಯಾವುದು ನಿರ್ಮಾಣ ಆಗುತ್ತೋ, ಅದು ಪ್ರತಿದಿನ ಬದಲಾವಣೆಯಾಗುತ್ತದೆ, ಕ್ರಮೇಣ ಇಲ್ಲದಂತಾಗುತ್ತದೆ, ಎಂಬ ಸತ್ಯ ತಿಳುವಳಿಕೆ ಇದ್ದಲ್ಲಿ, ಅದು ನಾಶವಾಗುವುದರೊಳಗೆ, ಸುಂದರವಾಗಿ ಬಳಸಿ, ಆನಂದ ಪಡಬೇಕಾಗುತ್ತದೆ. ಆದರೆ ನಮ್ಮ ಮನಸ್ಸು ಇದನ್ನು ಅರಿತುಕೊಳ್ಳದೆ ಇದ್ದರೆ, ಖಾಯಂ ಮಾಡಲು, ಸ್ಥಿರ ಮಾಡಲು, ಪ್ರಯತ್ನಿಸುತ್ತೇವೆ. ಆದರೆ ಅದು ಸ್ಥಿರವಾಗಿರುವುದಿಲ್ಲ. ಬದಲಾವಣೆ ಹೊಂದುತ್ತದೆ. ಅದು ಸ್ಥಿರವಾಗಿಲ್ಲ ಎಂಬ ಚಿಂತೆ, ಬಣ್ಣ ಬದಲಾಯಿತಲ್ಲ ಎಂಬ ಚಿಂತೆ, ಸತ್ಯ ಸರಿಯಾಗಿ ತಿಳಿಯದಿದ್ದರೆ ಈ ರೀತಿ ಚಿಂತೆಯಾಗುತ್ತದೆ. ಮಕ್ಕಳೇ ಬದಲಾವಣೆ ಒಪ್ಪಿಕೊಳ್ಳುವುದು, ಜಗತ್ತು ಹೇಗಿದೆ ಹಾಗೆ ಒಪ್ಪಿಕೊಳ್ಳುವುದು, ಬದುಕೋದು. ಯಾವುದನ್ನು ಸ್ಥಿರ ಮಾಡಲು ಪ್ರಯತ್ನಿಸದೆ, ಇರೋದನ್ನೇ ಆನಂದವಾಗಿ ಬಳಸುವುದು, ನಾಶವಾಗುವುದರೊಳಗೆ ಸುಂದರವಾಗಿ ಬಳಸುವುದು ಜೀವನ. ಅಲ್ಲವೇ ಮಕ್ಕಳೇ.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article