
ಹಕ್ಕಿ ಕಥೆ : ಸಂಚಿಕೆ - 74
Tuesday, November 22, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಕಳೆದವಾರ ತರಬೇತಿಗೆ ಅಂತ ಬೆಂಗಳೂರಿಗೆ ಹೋಗಿದ್ದೆ. ಅಲ್ಲಿನ ವಿಶ್ವವಿದ್ಯಾಲಯದಲ್ಲಿ ನಮಗೆ ತರಬೇತಿ ಇತ್ತು. ಬೆಳಗ್ಗೆ ಎದ್ದು ನಾನು ಮತ್ತು ಗೆಳೆಯ ಚೇತನ್ ವಾಯುವಿಹಾರಕ್ಕೆ ಅಂತ ಹೋಗಿದ್ದೆವು. ಅಲ್ಲೆಲ್ಲ ಬೆಳಗ್ಗೆ ನಮ್ಮಂತೆಯೇ ನೂರಾರು ಮಂದಿ ವಾಕಿಂಗ್, ಜಾಗಿಂಗ್ ಅಂತೆಲ್ಲ ಓಡಾಡುತ್ತಿದ್ದರು. ಅಷ್ಟೊಂದು ಜನ ನೋಡಿದ ನಾವು ಸ್ವಲ್ಪ ಜನ ಜಂಗುಳಿ ಕಡಿಮೆ ಇರವ ಜಾಗ ಹುಡುಕುತ್ತಿದ್ದೆವು. ಅಲ್ಲೇ ಹತ್ತಿರದಲ್ಲಿ ಸುಶ್ರುತ ವನ ಎಂಬ ಬೋರ್ಡ್ ಕಾಣಿಸಿತು. ಅಲ್ಲಿ ಯಾರೂ ಓಡಾಡುವುದು ಕಾಣಲಿಲ್ಲ ಹಾಗಾಗಿ ಆ ಕಡೆ ನಮ್ಮ ದಿಕ್ಕು ಬದಲಾಯಿಸಿದೆವು.
ಒಂದು ಕಡೆ ನರ್ಸರಿ, ಇನ್ನೊಂದು ಕಡೆ ಸಾಲು ಮಾಡಿ ನೆಟ್ಟು ಬೆಳೆಸಿದ ಮರಗಳು, ಮಧ್ಯೆ ಹುಲ್ಲು ಸೊಂಪಾಗಿ ಬೆಳೆದಿತ್ತು. ಹಾಗೇ ಸ್ವಲ್ಪ ದೂರ ಹೋದ ನಮಗೆ ಪಕ್ಕದ ಬೇಲಿಯಲ್ಲೇನೋ ಹಾರಿದ್ದು ಕಾಣಿಸಿತು. ಅದೇ ಬದಿಯಿಂದ ಚುಕ್.. ಚುಕ್ ಎಂಬ ಕೂಗು ಸಹ ಕೇಳಿಸಿತು. ಇದ್ಯಾವ ಹಕ್ಕಿ ನೋಡಿಬಿಡೋಣ ಅಂತ ಇಬ್ಬರೂ ಅಲ್ಲೇ ನಿಂತೆವು. ಕೊಂಬೆಯಿಂದ ಕೊಂಬೆಗೆ ಕುಪ್ಪಳಿಸುತ್ತಾ, ತನ್ನ ಬಾಲವನ್ನು ಬೀಸಣಿಗೆಯಂತೆ ತೆರೆದು ಆ ಕಡೆ ಈ ಕಡೆ ಆಟವಾಡುತ್ತಾ ಇರುವ ಕಪ್ಪು ಬಿಳುಪು ಬಣ್ಣದ ಬುಲ್ ಬುಲ್ ಗಾತ್ರದ ಹಕ್ಕಿಯೊಂದು ಕಾಣಿಸಿತು. ಬೆನ್ನು, ಬಾಲ, ರೆಕ್ಕೆಗಳೆಲ್ಲ ಕಂದುಮಿಶ್ರಿತ ಕಪ್ಪು ಬಣ್ಣ, ಎದೆ, ಹೊಟ್ಟೆಯ ಭಾಗಗಳು ಮತ್ತು ಬಾಲದ ತುದಿ ಬಿಳೀ ಬಣ್ಣ, ಚೂಪಾದ ಪುಟಾಣಿ ಕೊಕ್ಕು, ಎದ್ದು ಕಾಣುವ ಬಿಳೀ ಬಣ್ಣದ ಹುಬ್ಬು. ಹೆಚ್ಚಾಗಿ ತನ್ನ ಬಾಲವನ್ನು ಬೀಸಣಿಗೆಯಂತೆ ಬಿಡಿಸಿಕೊಂಡು ಎತ್ತಿ ಹಿಡಿದಿರುತ್ತದೆ. ಹಾಗೆ ಬಿಡಿಸಿಕೊಂಡ ಬಾಲವನ್ನು ಆಡಿಸುತ್ತಾ ಕುಪ್ಪಳಿಸುತ್ತಾ ಹಾರುವ ಹಕ್ಕಿಯನ್ನು ನೋಡಿದಾಗ “ಸಯೊನಾರಾ ಸಯೊನಾರಾ” ಎಂಬ ಹಳೆಯ ಹಿಂದಿ ಹಾಡೊಂದು ನೆನಪಾಯಿತು.
ಕರ್ನಾಟಕದ ಕರಾವಳಿ ಭಾಗದಲ್ಲಿ ತುಸು ಅಪರೂಪವಾಗಿ ಕಾಣಸಿಗುವ ಈ ಹಕ್ಕಿ ಬಯಲು ಸೀಮೆಯಲ್ಲಿ ಬಿದಿರು ಮೆಳೆ, ಪೊದೆ, ಮುಳ್ಳು, ಬೇಲಿ ಇರುವಲ್ಲಿ ಒಂಟಿಯಾಗಿ ಅಥವಾ ಜೋಡಿಯಾಗಿ ಕಾಣಸಿಗುತ್ತದೆ. ಸಣ್ಣ ಪುಟ್ಟ ನೊಣ, ನುಸಿಯಂತಹ ಹಾರಾಡುವ ಕೀಟಗಳೇ ಇವುಗಳಿಗೆ ಆಹಾರ. ಮಾರ್ಚ್ ನಿಂದ ಜೂನ್ ತಿಂಗಳ ನಡುವೆ ಪೊದೆಗಳಲ್ಲಿ ಒಣಹುಲ್ಲು ಮತ್ತು ಕಡ್ಡಿಗಳನ್ನು ಬಳಸಿ ಸುಂದರವಾದ ಬಟ್ಟಲಿನಾಕಾರದ ಗೂಡನ್ನು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ನೋಡಲು ಒಂದೇ ರೀತಿ ಇರುವ ಗಂಡು ಹೆಣ್ಣು ಎರಡೂ ಹಕ್ಕಿಗಳು ಕಾವು ಕೊಡುವುದು ಮತ್ತು ಮರಿಗಳನ್ನು ಬೆಳೆಸುವಲ್ಲಿ ಸಮಾನವಾದ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತವೆ. ನಿಮ್ಮ ಮನೆಯ ಬೇಲಿಯ ಬದಿಯಲ್ಲಿ, ಬಿದಿರು ಮೆಳೆಯ ಹತ್ತಿರ ಈ ಹಕ್ಕಿ ಕಾಣಲು ಸಿಗಬಹುದು..
ಕನ್ನಡ ಹೆಸರು: ಬೀಸಣಿಗೆ ಬಾಲದ ನೊಣಹಿಡುಕ
ಇಂಗ್ಲೀಷ್ ಹೆಸರು: White-Browed Fantail-Flycatcher
ವೈಜ್ಞಾನಿಕ ಹೆಸರು: Rhipidura aureola
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************