-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 74

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 74

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
                 ಹಸಿರೇ ಉಸಿರು - ಪ್ರಕೃತಿಯೇ ದೇವರು ಎಂಬ ಮಾತು ಪ್ರಕೃತಿಯ ಮಹತ್ವವನ್ನು ಸಾರುತ್ತದೆ. ನಾವು ಪರಿಸರದ ಸೊತ್ತೆ ಹೊರತು ಪರಿಸರ ನಮ್ಮ ಸೊತ್ತಲ್ಲ. ನಾವು ದಿನನಿತ್ಯ ನೋಡುವ ಎಲ್ಲಾ ಪ್ರಾಣಿ, ಪಕ್ಷಿ , ಕ್ರೀಮಿ, ಕೀಟಗಳಂತೆ ಮಾನವರಾದ ನಾವು ಕೂಡ ಪರಿಸರದ ಒಂದು ಭಾಗ. ಆದರೆ 90 ಶೇಕಡ ಜನರು ಇದನ್ನು ಅರ್ಥ ಮಾಡದೆ ಪರಿಸರವೇ ನಮ್ಮ ಸೊತ್ತು ಇಲ್ಲಿರುವ ಪ್ರಾಣಿಗಳು, ಪಕ್ಷಿಗಳು, ಕ್ರೀಮಿಕೀಟಗಳು, ಬೆಟ್ಟ-ಗುಡ್ಡ, ನದಿ - ಸಾಗರ ಇವೆಲ್ಲವು ನಮ್ಮದೇ ಎಂಬ ಭಾವನೆಯಿಂದ ಬೇಕಾಬಿಟ್ಟಿ ಬಳಸಿಕೊಂಡು ಪರಿಸರ ನಾಶಕ್ಕೆ ಕಾರಣರಾಗಿದ್ದಾರೆ. ಮನುಷ್ಯನ ಸ್ವಾರ್ಥ, ಹಣದಾಸೆ, ಭ್ರಷ್ಟ ರಾಜಕೀಯ ವ್ಯವಸ್ಥೆಯಿಂದ ಪರಿಸರವು ನಾಶವಾಗುತ್ತಿದೆ. ಆದರೆ ಪ್ರಕೃತಿಯು ಕೂಡ ನಮ್ಮ ದುರ್ಬುದ್ದಿಗೆ ತಕ್ಕಂತೆ ಆಗಾಗ ಬರಗಾಲ, ಭೂಕಂಪ, ಸುನಾಮಿ, ಹಿಮಕುಸಿತ, ನೆರೆ ಪ್ರವಾಹ, ಸಾಂಕ್ರಾಮಿಕ ರೋಗಗಳ ಮೂಲಕ ನಮ್ಮನ್ನು ಎಚ್ಚರಿಸುತ್ತಿದೆ. ಆದರೆ ನಾವು ಬುದ್ಧಿಕಲಿತಿಲ್ಲ. ಬುದ್ಧಿ ಕಲಿಯುವವರೆಗೂ ಅವು ನಮ್ಮನ್ನು ಬಿಡುವುದಿಲ್ಲ. ನಮ್ಮ ಸ್ವಂತ ಮನೆಯ ಹಂಚಿನ ರಿಪೇರಿ, ಗೋಡೆ ಬಿರುಕು ಬಿಟ್ಟರೆ ಅಥವಾ ಕಿಟಕಿಯ ಬಾಗಿಲು ಸರಿಯಾಗಿ ಹಾಕಲಿಕ್ಕೆ ಆಗದಿದ್ದರೆ ಅಥವಾ ಬೇರೆ ಯಾವುದೇ ರಿಪೇರಿ ಇದ್ದರೆ ನಾವು ಯಾರಾದರೂ ಮನೆ ಬಿಟ್ಟು ಬೇರೆ ಕಡೆಗೆ ಹೋಗುತ್ತೇವೆಯೇ? . ಇಲ್ಲವಲ್ಲ. ಅದೇ ಮನೆಯನ್ನು ಸರಿಪಡಿಸಿಕೊಂಡು ಅದರಲ್ಲಿಯೇ ನಾವು ವಾಸಿಸುತ್ತೇವೆ. ಅದೇ ರೀತಿ ಪ್ರಕೃತಿಯು ಕೂಡ ನಮ್ಮ ಮನೆ ಇದ್ದಂತೆ. ಅದರಲ್ಲಿ ಏನಾದರೂ ಒಂದು ನಾಶವಾದರೆ ಅದನ್ನು ಸರಿಪಡಿಸುವುದು ನಮ್ಮ ನಿಮ್ಮೆಲ್ಲರ ಮೊಟ್ಟಮೊದಲ ಕರ್ತವ್ಯವಾಗಿದೆ. ಏಕೆಂದರೆ ಪ್ರಕೃತಿ ಇಲ್ಲದೆ ನಾವು ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ಪ್ರಕೃತಿ ಹಾಗೂ ಜೀವ ಪ್ರಪಂಚದ ಪುನರ್ ಸ್ಥಾಪನೆ ಹೇಗೆ ಮಾಡುವುದು...? ಎಂಬುದು ಮುಖ್ಯ ವಿಚಾರವಾಗಿದೆ.
        ನಾನೊಂದು ಚಿಕ್ಕ ಉದಾಹರಣೆ ಕೊಡುತ್ತೇನೆ. ಆನ್ಲೈನ್ ಫುಡ್ ಡೆಲಿವರಿ ಪರಿಕಲ್ಪನೆ ಮೂಲಕ ಆಹಾರ ಸೇವಿಸುವುದರಲ್ಲಿ ಬೆಂಗಳೂರು ನಂಬರ್ ಒನ್ ಸ್ಥಾನವನ್ನು ಪಡೆದಿದೆ. ಅಲ್ಲಿ ಅಂದಾಜು ಮೂರು ಲಕ್ಷಕ್ಕಿಂತ ಹೆಚ್ಚಿನ ಜನರು ದಿನಕ್ಕೆ ಆನ್ಲೈನ್ ಫುಡ್ ಆರ್ಡರ್ ಮಾಡಿ ಆಹಾರವನ್ನು ಸೇವಿಸುತ್ತಾರೆ. ಈ ಲೆಕ್ಕಾಚಾರದಲ್ಲಿ ಬೆಂಗಳೂರಿನಲ್ಲಿಯೇ ವರ್ಷಕ್ಕೆ ಅಂದಾಜು 32 ಕೋಟಿ ಪ್ಲಾಸ್ಟಿಕ್ ಕವರ್ ಗಳು ನಮ್ಮ ಭೂಮಿಯನ್ನು ಸೇರುತ್ತಿದೆ. ಇದೇ ರೀತಿ ಇಡೀ ಪ್ರಪಂಚದ್ದು ಲೆಕ್ಕ ಹಾಕಿದರೆ ನಮ್ಮ ತಲೆ ತಿರುಗಬಹುದು. ಇನ್ನೂ ಮದುವೆ, ಹುಟ್ಟುಹಬ್ಬ, ವಾರಾಂತ್ಯ ಪಾರ್ಟಿಗಳು, ಸಭೆ ಸಮಾರಂಭಗಳಲ್ಲಿ ಭೂಮಿ ತಾಯ ಒಡಲನ್ನು ಸೇರುವ ಬಟ್ಟಲುಗಳು - ಲೋಟಗಳ ಇತ್ಯಾದಿ ರೂಪಗಳಲ್ಲಿ ಕೋಟಿ ಕೋಟಿಗಳಷ್ಟು ಪ್ಲಾಸ್ಟಿಕ್ ಗಳು ನಮ್ಮ ಭೂಮಿಯನ್ನು ಸೇರುತ್ತಿದೆ. ಅನಾವಶ್ಯಕವಾಗಿ ಮನೆ, ಕಟ್ಟಡಗಳನ್ನು ನಿರ್ಮಿಸಲು ಮರ ಗಿಡಗಳನ್ನು ಕಡಿಯುವುದು ಕೂಡಾ ಅರಣ್ಯ ನಾಶಕ್ಕೆ ಬಹುದೊಡ್ಡ ಕಾರಣವಾಗಿದೆ.
         ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಾದ ನಾವೇನು ಮಾಡುವುದು? ನಮ್ಮ ಪಾತ್ರವೇನು? ಎಂದು ತಿಳಿಯುವ ಅವಶ್ಯಕತೆ ಇದೆ. ದೃಷ್ಟಿ ಬದಲಾದರೆ ದೃಶ್ಯವೂ ಬದಲಾದಂತೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಹುಟ್ಟು ಹಬ್ಬದ ಪಾರ್ಟಿ ಮಾಡುವುದರ ಬದಲು ಗಿಡ ನೆಡುವ ಕಾರ್ಯಕ್ರಮ ಮಾಡಬೇಕು. ಶಾಲೆ ಶುಭ ಕಾರ್ಯಕ್ರಮದಲ್ಲಿ ಸ್ಮರಣಿಕೆಯಾಗಿ ಗಿಡವನ್ನು ನೆಡಬೇಕು. ಸ್ವಯಂಸೇವಾ ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ ಪರಿಸರ ಜಾಗೃತಿಯನ್ನು ಮೂಡಿಸಬೇಕು. ಮೊದಲು ನಮ್ಮ ವೈಯಕ್ತಿಕ ಸ್ವಚ್ಛತೆ, ನಂತರ ನಮ್ಮ ಮನೆ, ಓಣಿ, ಶಾಲೆ, ಸುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ತಲೆಗೊಂದು ಮುಂಡಸು ಮನೆಗೊಂದು ತಂಡಸು ಎಂಬ ಮಾತಿನಂತೆ ಎಲ್ಲರಿಗೂ ತಂಡಸಿನ ಮಹತ್ವವನ್ನು ತಿಳಿಸೋಣ. ಹಸಿ ಕಸ - ಒಣ ಕಸವನ್ನು ಬೇರ್ಪಡಿಸಿ ಪಂಚಾಯತ್ ನಿಂದ ಗಾಡಿಬರುವಾಗ ಹಾಕಬೇಕು. ವಿದ್ಯಾರ್ಥಿಗಳಾದ ನಮಗೆ ವಾಟ್ಸಾಪ್, ಫೇಸ್‌ಬುಕ್, ಯೂ ಟ್ಯುಬ್, ಮೊಬೈಲ್ ಗಳನ್ನು ನೋಡಲು ಬೇಕಾದಷ್ಟು ಸಮಯವಿದೆ. ಆದರೆ ಪರಿಸರವನ್ನು ಕಾಪಾಡಲು ಸಮಯವೇ ಸಿಗುವುದಿಲ್ಲ. ನಾವು ಈ ಬಗ್ಗೆ ಆಲೋಚಿಸಿ ಹಸಿರೇ ಉಸಿರಾಗಿರುವ ಪರಿಸರವನ್ನು ಕಾಪಾಡಲು ಹಸಿರು ಯೋಧರಾಗೋಣ. ಸ್ವಚ್ಛ ಭಾರತ ಸ್ವಚ್ಛ ಭಾರತ ಅಂತ ಕೇವಲ ಭಾಷಣ ಸ್ಪರ್ಧೆಯಲ್ಲಿ ಮಾಡುವುದನ್ನು ಬಿಟ್ಟು ಕಾರ್ಯರೂಪದಲ್ಲಿ ತೋರಿಸೋಣ. ಹನಿ ಹನಿ ಸೇರಿದರೆ ಸಾಗರವಾದಂತೆ ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿ ಸೇರಿ ಪರಿಸರವನ್ನು ಕಾಪಾಡೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article