-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 73

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 73

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು                
                  ಬೇರಿದ್ದರೆ ಮರವಿದೆ; ನೀರಿದ್ದರೆ ನದಿಯಿದೆ; ಸೈನಿಕರಿದ್ದರೆ ರಕ್ಷಣೆಯಿದೆ; ಸಂಸ್ಕಾರವಿದ್ದರೆ ಸಂಸ್ಕೃತಿ ಇದೆ; ಉತ್ತಮ ವಿದ್ಯಾರ್ಥಿ ಜೀವನವಿದ್ದರೆ ಸುಂದರ ಭವಿಷ್ಯವಿದೆ. ವಿದ್ಯಾರ್ಥಿ ಜೀವನ ಎಂಬುದು ಬದುಕಿನಲ್ಲಿ ಬರೆದಿಡುವಂತಹ ಬಂಗಾರದ ಅವಧಿಯಾಗಿದೆ (Students Life Is Golden Life). ವಿದ್ಯಾರ್ಥಿ ಜೀವನ ಎಂಬುದು ಬದುಕಿಗೆ ಉಸಿರಿದ್ದಂತೆ, ಕನಸಿಗೆ ಹಸಿರಿದ್ದಂತೆ. ವಿದ್ಯಾರ್ಥಿ ಜೀವನವೆಂದರೆ ವ್ಯಕ್ತಿಯ ಮುಂದಿನ ಬದುಕನ್ನು ಸೂಚಿಸುವ ದಿಕ್ಸೂಚಿಯಾಗಿದೆ. ಇಂತಹ ಅಮೂಲ್ಯವಾದ ವಿದ್ಯಾರ್ಥಿ ಜೀವನದಲ್ಲಿ ಸಾಮೂಹಿಕ ಜಾಲತಾಣಗಳು ಪ್ರಭಾವಶಾಲಿಯೂ ಪರಿಣಾಮಕಾರಿಯೂ ಆಗಿರುವ ಮಾಧ್ಯಮವಾಗಿದೆ. ಹಾಗಾಗಿ ಜಾಲತಾಣದಲ್ಲಿ ಜಾಣತನ ಉಪಯೋಗಿಸಬೇಕು.
     ಸಾಮೂಹಿಕ ಜಾಲತಾಣ ಎಂದರೆ ಸಮಾನ ಚಟುವಟಿಕೆಯಲ್ಲಿ ಆಸಕ್ತಿವುಳ್ಳ ಜನರನ್ನು ಪರಸ್ಪರ ಸಂಪರ್ಕಿಸುವ ಸಾಮಾಜಿಕ ಸಂಬಂಧಗಳ ಗುಂಪು ಎನ್ನಬಹುದು. ಟ್ವಿಟರ್, ಫೇಸ್ಬುಕ್, ಇನ್ ಸ್ಟಾಗ್ರಾಂ, ವಾಟ್ಸಪ್, ಯೂಟ್ಯೂಬ್, ವೆಬ್ ಸೈಟ್ ಇತ್ಯಾದಿ ವಿವಿಧ ತಾಣಗಳು ಇದಕ್ಕೆ ಉದಾಹರಣೆಯಾಗಿದೆ. ಹತ್ತಾರು ವರ್ಷಗಳ ಹಿಂದೆ ಪ್ರಾರಂಭಗೊಂಡ ಜಾಲತಾಣಗಳು ಇಂದು ವಿದ್ಯಾರ್ಥಿ ಜೀವನದ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ , ಪ್ರತಿ ಕ್ಷೇತ್ರ ಕ್ಷೇತ್ರದಲ್ಲೂ ಧನಾತ್ಮಕವಾಗಿಯೂ ಋಣಾತ್ಮಕವಾಗಿಯೂ ಪ್ರಭಾವ ಮತ್ತು ಪರಿಣಾಮವನ್ನು ಬೀರುತ್ತಿದೆ. ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೆ ಪೂರಕವಾಗಿ ಹಲವಾರು ವಿಚಾರಗಳನ್ನು ಕಲಿಸುತ್ತವೆ. ಬೇರೆ ಬೇರೆ ಜಾಲಾತಾಣಗಳಲ್ಲಿ ಕಲೆ, ಭಾಷೆ, ಸಂಗೀತ, ಕ್ರೀಡೆ,ಇತಿಹಾಸ, ವಿವಿಧ ಸ್ಥಳ ಪರಿಚಯ, ಗಣಿತ ಸೇರಿದಂತೆ ಹಲವಾರು ವಿಷಯಗಳು, ಸಂಬಂಧಿಸಿದಂತಹ ಮಾಹಿತಿಗಳು ಸಿಗುತ್ತವೆ. ಇದು ಹಾಸ್ಟೆಲ್ ನಲ್ಲಿ ಅಥವಾ ದೂರದ ಊರಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತನ್ನ ಮನೆಯವರ ಜತೆ ಪರಸ್ಪರ ಸಂಬಂಧ ಉಳಿಸಲು ವರದಾನವಾಗಿದೆ. 
       "ಅತಿಯಾದರೆ ಅಮೃತವೂ ವಿಷ" ಎಂಬ ಮಾತಿನಂತೆ ಜಾಲತಾಣಗಳ ಅತಿಯಾದ ಬಳಕೆಯು ಅಪಾಯಕಾರಿಯಾಗಿದೆ. ಇದರಿಂದ ಮಾನಸಿಕ ಖಿನ್ನತೆ ಹೆಚ್ಚಾಗಿ ನಿದ್ರಾ ಹೀನತೆ, ಅನಾರೋಗ್ಯ, ಬೊಜ್ಜು. ಕಣ್ಣಿನ ಸಮಸ್ಯೆ, ಹೀಗೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಬೇರೆ ಬೇರೆ ಸಂದೇಶಗಳು, ಚಿತ್ರಗಳು, ಕರೆಗಳು ಮತ್ತು ವಿಡಿಯೋಗಳನ್ನು ನೋಡುವುದರಿಂದ ವಿದ್ಯಾರ್ಥಿಗಳು ಹಾಗೂ ಮನೆಯವರ ಮಧ್ಯೆ ಅಪನಂಬಿಕೆಗಳು, ಗಲಾಟೆಗಳು ಆಗುವಂತೆ ಮಾಡುತ್ತದೆ. ಕೆಲವೊಮ್ಮೆ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಕಲಿಕೆಗೆ ಮೀಸಲಿಡದೆ ಕೇವಲ ವ್ಯರ್ಥವಾಗಿ ಚಾಟಿಂಗ್ ಅಥವಾ ಆಟಗಳ ಮೂಲಕ ಕಳೆಯುವಂತಾಗಿದೆ. ಹಾಗಾಗಿ ಈ ಬಗ್ಗೆ ಎಚ್ಚರವಹಿಸಬೇಕಾಗಿದೆ. ಕೆಲವೊಮ್ಮೆ ಶಾಲಾ ಸಂಬಂಧಿತ ಯೋಜನೆ ಹಾಗೂ ಚಟುವಟಿಕೆಗಳನ್ನು ಸೃಜನಾತ್ಮಕವಾಗಿ ಸ್ವಂತವಾಗಿ ಆಲೋಚಿಸದೆ ಕೇವಲ ಜಾಲತಾಣಗಳಿಂದ ನಕಲು ಮಾಡಿ ನೀಡುವಂಥ ಪರಿಸ್ಥಿತಿ ಹೆಚ್ಚಾಗುತಿದೆ. ಒಮ್ಮೊಮ್ಮೆ ಇದರಿಂದ ಖಾಸಗಿತನಕ್ಕೆ ಧಕ್ಕೆಯಾಗಿ ಮಾನ ಹರಾಜಾಗುವುದು ಅಥವಾ ಆತ್ಮಹತ್ಯೆಗೆ ಪ್ರೇರಣೆಯಾದ ಘಟನೆಗಳು ಕೂಡ ದಿನನಿತ್ಯ ನೋಡುತ್ತೇವೆ.
        ಸಾಮಾಜಿಕ ಜಾಲತಾಣ ಎಂಬುದು ಬೆಂಕಿಯಿದ್ದಂತೆ. ಬೆಂಕಿಯಿಂದ ನಾವು ಕತ್ತಲನ್ನು ಹೋಗಲಾಡಿಸುವಂಥಹ ಬೆಳಕಿನ ದೀಪ ಬೆಳಗಿಸಬಹುದು. ದೇಹದ ಹಸಿವನ್ನು ನೀಗಿಸುವಂತಹ ಆಹಾರವನ್ನು ತಯಾರಿಸಬಹುದು. ಅದೇ ಬೆಂಕಿಯು ಕೆಟ್ಟ ವ್ಯಕ್ತಿಗಳ ಕೈಗೆ ಸಿಕ್ಕರೆ ಮನೆ ನಾಶ ಮಾಡುವ ಬೆಂಕಿಕೊಳ್ಳಿಯಾಗಿಯೂ ಬದಲಾಗುತ್ತದೆ. ಅದು ಬೆಂಕಿಯ ತಪ್ಪಲ್ಲ ಅದನ್ನು ಉಪಯೋಗಿಸುವವರ ತಪ್ಪು. ವಿದ್ಯಾರ್ಥಿಗಳು  ಸಾಮಾಜಿಕ ಜಾಲತಾಣವನ್ನು ಧನಾತ್ಮಕವಾಗಿ ಬಳಸಿದರೆ ಬದುಕನ್ನು ಬೆಳಗಿಸಬಹುದು. ಋಣಾತ್ಮಕವಾಗಿ ಬಳಸಿದರೆ ಬದುಕನ್ನು ನರಕವನ್ನಾಗಿಸಬಹುದು. ಇದು ಸಾಮಾಜಿಕ ಜಾಲತಾಣದ ತಪ್ಪಲ್ಲ. ಬನ್ನಿ ಮುಳ್ಳನ್ನು ಬಿಟ್ಟು ಗುಲಾಬಿಯನ್ನು ಹಿಡಿಯುವಂತೆ ಜಾಲತಾಣವನ್ನು ಉತ್ತಮ ರೀತಿಯಲ್ಲಿ ಬಳಸೋಣ. ಆ ಮೂಲಕ ಭವ್ಯ ಭಾರತ ನಿರ್ಮಾಣ ಮಾಡೋಣ. ಈ ಸದ್ಬಳಕೆಯ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article