-->
ಜೀವನ ಸಂಭ್ರಮ : ಸಂಚಿಕೆ - 61

ಜೀವನ ಸಂಭ್ರಮ : ಸಂಚಿಕೆ - 61

ಜೀವನ ಸಂಭ್ರಮ : ಸಂಚಿಕೆ - 61
                                 
               ಮಕ್ಕಳೇ, ಇಚ್ಛೆ ಮತ್ತು ಪ್ರೀತಿಯನ್ನು ಒಂದೇ ಅರ್ಥದಲ್ಲಿ ಬಳಸುತ್ತೇವೆ. ಇವುಗಳ ಅರ್ಥ ಬೇರೆ ಬೇರೆ. ನಾವು ದಿನನಿತ್ಯ ದಿನಪತ್ರಿಕೆಗಳಲ್ಲಿ ಹುಡುಗಿಯ ಮೇಲೆ ಆಗುವ ಹಲ್ಲೆಯಾಗಿರಬಹುದು ಅಥವಾ ಹುಡುಗಿಯನ್ನು ಕುರೂಪ ಮಾಡುವುದು ಅಥವಾ ಹುಡುಗಿಯ ಬಗ್ಗೆ ಕೆಟ್ಟದಾಗಿ ಹೇಳಿ ಹುಡುಗಿಯ ಜೀವನವನ್ನೇ ಹಾಳು ಮಾಡುವುದನ್ನು ಓದಿರುತ್ತೇವೆ.
          ನಾವು ದಿನಾ ಬೆಳಿಗ್ಗೆ ವಾಯುವಿಹಾರ ಮಾಡುವಾಗ  ಮನೆಯ ಕಾಂಪೌಂಡ್ ಒಳಗೆ ಬಣ್ಣ ಬಣ್ಣದ ಹೂಗಳು ನಳ-ನಳಿಸುತ್ತಿರುತ್ತದೆ. ದಾರಿಯಲ್ಲಿ ತಿರುಗಾಡುವ ವ್ಯಕ್ತಿಗಳು ದೇವರಿಗೆಂದು ಆ ಹೂಗಳನ್ನು ಕಿತ್ತುಕೊಂಡು ಹೋಗುತ್ತಾರೆ. ಈ ಕಡೆಯಿಂದ ಹೋಗುವಾಗ ಕಣ್ಣನ್ನು ತಂಪುಗೊಳಿಸುತ್ತಿದ್ದ, ಮನಸ್ಸು ಅರಳಿಸುತ್ತಿದ್ದ ಹೂಗಳು ಆ ಕಡೆಯಿಂದ ಬರುವಾಗ ಇರುವುದಿಲ್ಲ. ಆಗ ಬುದ್ಧ ಹೇಳಿದ ಮಾತು ನೆನಪಾಗುತ್ತದೆ. "ಇಚ್ಚಿಸುವ ವ್ಯಕ್ತಿ ಹೂ ಕೀಳುತ್ತಾನೆ, ಪ್ರೀತಿಸುವ ವ್ಯಕ್ತಿ ಗಿಡಕ್ಕೆ ನೀರನ್ನು ಹಾಕುತ್ತಾನೆ". ಎಷ್ಟು ಸಮಂಜಸವಾದ ಹೇಳಿಕೆ?.       
       ಇಚ್ಛೆಯಲ್ಲಿ ಮೋಹ ತುಂಬಿರುತ್ತದೆ. ನನ್ನದಾಗಬೇಕು ಎಂಬ ಆಸೆ ಇರುತ್ತದೆ. ಅಲ್ಲಿ ಪ್ರೀತಿ ಇದ್ದರೂ ಪ್ರೀತಿಗೆ ಅಷ್ಟು ಮಹತ್ವವಿಲ್ಲ. ಆದರೆ ಪ್ರೀತಿಯಲ್ಲಿ ಸಂತೋಷ ಇರುತ್ತದೆ. ಅದರಲ್ಲಿ ಮೋಹ ಇರುವುದಿಲ್ಲ. ಪ್ರೇಮ ವೈಫಲ್ಯವಾದರೆ ಪ್ರೀತಿ ಇರುವ ವ್ಯಕ್ತಿ ಯಾವ ಹಾನಿಯನ್ನು ಮಾಡುವುದಿಲ್ಲ. ನೋಡಿ ಸಂತೋಷ ಪಡುತ್ತಾನೆ. ಅಪರೂಪಕ್ಕಾದರೂ ನೋಡಬಹುದಲ್ಲ, ನೋಡಿ ಸಂತೋಷ ಪಡಬಹುದಲ್ಲ ಎಂದು ಭಾವಿಸುತ್ತಾನೆ. ಆಸೆಯಿಂದ ನೋಡುವುದನ್ನು ಬಿಟ್ಟರೆ ಸಂತೋಷವೇ ವಿನಃ ದುಃಖವಿಲ್ಲ. ಆಸೆಯಿಂದ ನೋಡಿದಾಗ, ಅದು ಸಿಗದಿದ್ದರೆ ದುಃಖವಾಗುತ್ತದೆ. 
            ಸಂತೋಷಕ್ಕಾಗಿ ನೋಡುವುದು ಬೇರೆ. ಆಸೆಯಿಂದ ನೋಡುವುದು ಬೇರೆ. ಸಂತೋಷಕ್ಕಾಗಿ ನೋಡುವುದು ಪ್ರೀತಿ. ಆಸೆಯಿಂದ ನೋಡುವುದು ಇಚ್ಛೆ. ಇಚ್ಛೆ ದುಃಖಕ್ಕೆ ಕಾರಣವಾದರೆ, ಪ್ರೀತಿ ಸಂತೋಷಕ್ಕೆ ಕಾರಣ. ಬುದ್ಧ ಹೇಳಿದ್ದು, "ಸುಖ-ದುಃಖಕ್ಕೆ ನಮ್ಮ ಆಲೋಚನೆಗಳೇ ಕಾರಣ" ಮಕ್ಕಳೇ, ನಮ್ಮಲ್ಲಿ ಪ್ರೀತಿ ತುಂಬಿರಲಿ, ಪ್ರೀತಿ ಜೀವನದ ಭಾಗವಾಗಿರಲಿ.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article