-->
ಅಕ್ಕನ ಪತ್ರ - 37 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 37 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 37 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


         ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........
                   
             ಮಕ್ಕಳ ಜಗಲಿಯ ಎಲ್ಲಾ ಪ್ರೀತಿ ಪಾತ್ರರಿಗೂ ನಲ್ಮೆಯ ಶುಭ ನಮನಗಳು....... ನಾನು ಪ್ರಿಯ,
        ನವೆಂಬರ್ ತಿಂಗಳಲ್ಲಿ ಖುಷಿ ಪಟ್ಟ ಸುಂದರ ಪಯಣವು ಸಾಗಿ..... ಡಿಸೆಂಬರ್ ತಿಂಗಳ ಅವಧಿಯಲ್ಲಿ ಪ್ರವಾಸ ಹಾಗೂ ವಾರ್ಷಿಕೋತ್ಸವದ ಸಂಭ್ರಮ...! ನಮ್ಮ ಕಾಲೇಜಿನಲ್ಲಿ ಈಗಿನಿಂದಲೇ ವಾರ್ಷಿಕೋತ್ಸವದ ಅಂಗವಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹಲವಾರು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ವಾರ್ಷಿಕೋತ್ಸವ ಸಮಾರಂಭಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಇನ್ನು ತಂಗಿಯವರಿಗೆ ಪ್ರವಾಸಕ್ಕೆ ತೆರಳುವ ತರಾತುರಿ.... ನಾವು ಭೇಟಿ ನೀಡದೆ ಇರುವ ಸ್ಥಳಗಳ, ಪಾರಂಪರಿಕ ಪ್ರೇಕ್ಷಣೀಯ ಸ್ಥಳಗಳ ಸಂದರ್ಶನವು ಮನಸ್ಸಿಗೆ ಬಹಳ ಮುದ ನೀಡುತ್ತದೆ ಹಾಗೂ ಸಂದರ್ಶಿಸುವುದರಿಂದ ಆ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಬಹುದು.... ಆದರೆ ಕೆಲವರಿಗೆ ಅವಕಾಶಗಳು ಸಿಕ್ಕರೂ ಕೆಲವು ಕಾರಣಗಳಿಂದ ಪ್ರವಾಸಕ್ಕೆ ಹೋಗಲು ಅಸಾಧ್ಯವಾಗುತ್ತದೆ.... ಅಂಥವರಿಗೆ ಪ್ರವಾಸಕ್ಕೆ ಹೋದವರು ತಾವು ವೀಕ್ಷಿಸಿದ ವಿಸ್ಮಯಗಳನ್ನು ಹಾಗೂ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಬೇಕು. ಆಗ ಅವರ ಮನಸ್ಸಿಗೆ ಅಲ್ಪ ಪ್ರಮಾಣದಲ್ಲಿಯಾದರು ಖುಷಿ ಸಿಗುತ್ತದೆ. ನೀವು ಹೇಳಿದಂತೆ ಪ್ರವಾಸಕ್ಕೆ ಹೋಗಲು ಅಸಾಧ್ಯವಾದ ಸಮಯವನ್ನು ಪರಿಸರ ಹಾಗೂ ಪ್ರಾಣಿ ಪಕ್ಷಿಗಳೊಡನೆ ಕಳೆಯುವುದು ಉತ್ತಮ. ಎಂದು ಹೇಳುತ್ತ ಪ್ರತಿ ವಾರವೂ ಅತ್ಯಂತ ಪ್ರೀತಿ, ಕಾಳಜಿ ತುಂಬಿದ ನಿಮ್ಮ ಪತ್ರದ ಹೂಗುಚ್ಚಗಳಿಗಾಗಿ ಧನ್ಯವಾದಗಳು ಅಕ್ಕ..... ನಮ್ಮ ನಿಮ್ಮೊಂದಿಗಿನ ಪತ್ರ ಬರಹ ಸದಾ ಸ್ವಾಧಿಸುತ್ತಿರಲಿ......... ವಂದನೆಗಳು....
....................................................... ಪ್ರಿಯ.
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು, ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************        ನಮಸ್ತೇ ಅಕ್ಕಾ... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು.
   ನಮ್ಮ ಶಾಲೆಯಿಂದ ಕೂಡ ನಾವೆಲ್ಲರೂ ಪ್ರವಾಸ ಹೋಗಿದ್ದೆವು. ಮಂಗಳೂರು ವಿಜ್ಞಾನ ಕೇಂದ್ರಕ್ಕೆ ಹೋದಾಗ ತುಂಬಾ ಸಂತೋಷವಾಯ್ತು. ನಾನು ಆವತ್ತು ಒಂದು ದಿವಸ ಅಂಗಳದಲ್ಲೇ ಹೋಗುತ್ತಿರುವಾಗ ನೋಡಲು ನನಗೆ ಕಂಡ ವಿಷಯವು ತುಂಬಾ ಕುತೂಹಲಕಾರಿಯಾಗಿತ್ತು. ಅದೇನೆಂದರೆ ಒಂದು ಹಕ್ಕಿ ಆ ಕಡೆ ಈ ಕಡೆ ಹಾರುತ್ತಿತ್ತು. ಹಕ್ಕಿಗೆ ಏನಾಯಿತಪ್ಪಾ? ಎಂದು ಸರಿಯಾಗಿ ಗಮನಿಸಿದಾಗ ಆ ಹಕ್ಕಿಯು ಅದರ ಗೂಡಿನ ನಿರ್ಮಾಣಕ್ಕಾಗಿ ಹುಲ್ಲನ್ನು ಕೊಕ್ಕಿನಲ್ಲಿ ತುಂಡು ಮಾಡಿ ತೆಗೆದು ಕೊಂಡು ಹೋಗುತ್ತಿತ್ತು. ಅದು ಹೋಗಿ ಬರುವುದನ್ನು ನೋಡುತ್ತಾ ಅಲ್ಲೇ ಬರೆದುಕೊಂಡು ಇದ್ದೆ. ಆ ಹಕ್ಕೀ (ವರಸ) ಎಷ್ಟು ವೇಗವಾಗಿ ಹೋಗಿ ಬರುತ್ತಿತ್ತು ಎಂದರೆ ನೋಡಿ ಅಚ್ಚರಿ ಆಯಿತು; ಅದು ಹಸಿವೆ, ಬಾಯಾರಿಕೆ ಬಿಸಿಲನ್ನೂ ಲೆಕ್ಕಿಸದೆ ಕ್ಷಣ ಮಾತ್ರದಲ್ಲಿ ಹೋಗಿ ಬರುತ್ತಿತ್ತು. ಹಾಗೆಯೇ ಮತ್ತೊಂದು ಕಡೆ ಜೇನು ನೊಣದ ಕೆಲಸವೂ ಹಾಗೆಯೇ. ಅದು ಅದರ ಕಾಲಿನಲ್ಲಿ ಹಳದಿ ಬಣ್ಣದ ವಸ್ತು (ಪರಾಗ) ವನ್ನು ತರುವುದು, ಹೂವಿನ ಮಕರಂಧ ಹೀರಿ ತರುವುದು ತುಂಬಾ ವೇಗದಿಂದ ಸಾಗುತ್ತಿತ್ತು. ಈ ಕೆಲಸವನ್ನು ಅವುಗಳು ಒಗ್ಗಟ್ಟಿನಿಂದ ಮಾಡುತ್ತವೆ. ಪ್ರಾಣಿ, ಪಕ್ಷಿಗಳು ಒಗ್ಗಟ್ಟಿನಿಂದ ಕೆಲಸವನ್ನು ಮಾಡುತ್ತದೆ. ಇದರಿಂದ ತಿಳಿಯುವುದೇನೆಂದರೆ ಆ ಹಕ್ಕಿ ಮತ್ತು ಜೇನು ನೊಣಕ್ಕೆ ಒಂದು ಗುರಿ ಇತ್ತು. ಅದು ಆ ಗುರಿಗೆ ತಲುಪುವ ತನಕ ಅದಕ್ಕೆ ಸುತ್ತಲಿನ ಯಾವ ವಿಷಯವೂ ಅದರ ಗಮನಕ್ಕೆ ಬರುತ್ತಿರಲಿಲ್ಲ. ಹಾಗೆಯೇ ನಾವು ಇದರಿಂದ ಒಂದು ಪಾಠವನ್ನೂ ಕಲಿಯಬಹುದು.      
         ಸ್ವಾಮಿ ವಿವೇಕಾನಂದರವರು ಹೇಳಿದಂತೆ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು. ಅವರು ಹೇಳಿದಂತೆ ನಾವು ನಮ್ಮ ಜೀವನದಲ್ಲಿ ಒಂದು ಗುರಿಯನ್ನು ಇಟ್ಟು ಕಷ್ಟ ಪಟ್ಟು ಸಾಧನೆ ಮಾಡಿದರೆ ನಮಗೂ ನಮ್ಮ ಗುರಿಯನ್ನು ತಲುಪಬಹುದು. ದೇವರು ಮನುಷ್ಯರಿಗೆ ಇಷ್ಟು ಬುದ್ಧಿ, ಸಾಮರ್ಥ್ಯ ವನ್ನು ಕೊಟ್ಟಿರುವಾಗ ಖಂಡಿತಾ ನಮಗೆ ಒಳ್ಳೆಯ ಸಾಧನೆ ಮಾಡಲು ಸಾಧ್ಯ. ಧನ್ಯವಾದಗಳು ಅಕ್ಕಾ,
..................................... ಸಾತ್ವಿಕ್ ಗಣೇಶ್ 
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************
      ಜಗಲಿಯ ನನ್ನ ಎಲ್ಲ ಆತ್ಮಿಯರಿಗೂ ನಮಸ್ಕಾರಗಳು. ನಾನು ನಿಮ್ಮ ಪ್ರೀತಿಯ ಭವ್ಯಶೀ... ಜಗಲಿಗೆ ಸತತ ಎರಡು ವರುಷಗಳು ತುಂಬಿದರೂ ನಾನು ಈ ಜಗಲಿಗೆ ಸೇರ್ಪಡೆಗೊಂಡು ಕೆಲವೇ ದಿನಗಳಾಗಿವೆ. ಸೇರ್ಪಡೆಗೊಂಡ ಬಳಿಕದ ಎಲ್ಲಾ ಲೇಖನಗಳನ್ನು ಓದಿ ಹಲವಾರು ಬದಲಾವಣೆಗಳನ್ನು ನನ್ನಲ್ಲಿ ನಾನೇ ಕಾಣುತ್ತಿರುವೆ. ಮೊದಲ ಬಾರಿ ಅಕ್ಕನ ಪತ್ರಕ್ಕೆ ಅನಿಸಿಕೆ ಬರೆಯುತ್ತಿದ್ದೇನೆ... ೩೬ನೇ ಸಂಚಿಕೆಯನ್ನು ಓದಿದರೂ ಉತ್ತರಿಸಲು ಸಾಧ್ಯವಾಗಿರಲಿಲ್ಲ..
          ಈ ಬಾರಿಯ ಸಂಚಿಕೆಯನ್ನು ಬಹಳ ಕುತೂಹಲದಿಂದ ಓದಿರುವೆ. ಓದಿದ ವಿಷಯವನ್ನು ಮನೆಯವರೆಲ್ಲರ ಜೊತೆ ಹಂಚಿಕೊಂಡೆನು. ವಿಶೇಷವಾಗಿ ಪ್ರವಾಸದ ಕುರಿತಾದ ವಿಷಯವು ಮನಮುಟ್ಟುವಂತಿದೆ... ಪ್ರವಾಸ‌ ಹೋಗಲು ಅಸಾಧ್ಯವಾದವರಿಗೆ ಸಹನೆ, ತಾಳ್ಮೆಯ ಪಾಠ ಹೇಳಿದಿರಿ. ನಾನು ಮುಂದಿನ ಭವಿಷ್ಯದ ಅವಕಾಶಗಳಿಗಾಗಿ ಕಾಯುತ್ತಾ ಇರುವೆ. ಹಾಗೆಯೇ ಪ್ರವಾಸ ಹೋಗಲು ಸಾಧ್ಯವಾಗದವರಿಗೆ ಹೇಳಿದ ಕೆಲಸವು ಬಹಳ ಚೆನ್ನಾಗಿದೆ. ನಾವು ನಮ್ಮ ಸುತ್ತಮುತ್ತಲಿರುವ ಪರಿಸರದ ಜೀವ ಜಂತುಗಳ ಕಡೆಗೂ ಗಮನ ಹರಿಸಬೇಕು. ಅವುಗಳ ಕುರಿತು ತಿಳಿದುಕೊಳ್ಳುವುದು ಅಗತ್ಯ. ಪರಿಸರದ ಕುರಿತು ಕುತೂಹಲಕಾರಿ ವಿಷಯಗಳನ್ನು ಸಂಗ್ರಹಿಸೋಣ. ಪರಿಸರದ ಉಳಿವು ಮಾನವನ ಉಳಿವಿಗೆ ಕಾರಣ ಎಂದು ಮರೆಯದಿರೋಣ......
     ಸರಿ ಗೆಳೆಯರೇ, ಚಳಿಯ ತಂಪಗಿನ ಭಾವನೆಯ ಜೊತೆಗೆ ಮುಂದಿನ ಪತ್ರಕ್ಕಾಗಿ ಕುತೂಹಲದಿಂದ ಕಾಯೋಣ. ಅಲ್ಲಿಯವರೆಗೆ ಜಗಲಿಯ ಬಳಗಕ್ಕೆ ಆದರತೆಯಿಂದ ನಮಸ್ಕಾರಗಳು....
.................................................... ಭವ್ಯಶೀ 
ಪ್ರಥಮ ಪಿಯುಸಿ 
ಸರಕಾರಿ ಪದವಿ ಪೂರ್ವ ಕಾಲೇಜು, ಕೊಣಾಲು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************

       
          ನಮಸ್ತೆ ಅಕ್ಕ. ನಾನು ಶ್ರಾವ್ಯ.... ಹೌದು ಅಕ್ಕ ಡಿಸೆಂಬರ್ ತಿಂಗಳು ಬಂತು ಅಂದ್ರೆನೇ ಹಾಗೆ. ಒಂದೆಡೆ ಪ್ರವಾಸದ ಗದ್ದಲವಾದರೆ ಇನ್ನೊಂದೆಡೆ ಕಾಲೇಜು ವಾರ್ಷಿಕೋತ್ಸವ ಸಿದ್ಧತೆಯ ಖುಷಿ. ಪ್ರವಾಸಕ್ಕೆ ಹೋಗುವ ಆಸೆ ತುಂಬಾನೇ ಇದ್ರೂ ಹೋಗಲು ಸಾಧ್ಯವಿಲ್ಲ ಎನ್ನುವುದು ಸ್ವಲ್ಪ ಬೇಸರ ಎಸಿಸುತ್ತದೆ.. ನಿರಾಸೆ ಪಡದೆ.. ಮುಂದೊಂದಿನ ಹೋಗುವ ಎನ್ನುವ ಕನಸು ಗಟ್ಟಿಗೊಳಿಸಿದ್ದೇನೆ. ನೀವು ಹೇಳಿದಂತೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ತಿಳಿದುಕೊಳ್ಳುವ ಅನೇಕ ವಿಚಾರಗಳಿರುತ್ತದೆ. ನಾನೂ ರಾತ್ರಿ ಹೊತ್ತು ಹೊರಗೆ ಬಂದು ಕಣ್ಣಾಡಿಸಿದಾಗ ಝೀ ಝೀ ಎನ್ನುವ ಕೂಗು ಕೇಳಿಸಿತು. ಅದು ಜೀರುಂಡೆಯ ಕೂಗು. ಸರಿಯಾಗಿ ಅದರ ಕಡೆ ಗಮನಹರಿಸುತ್ತಾ ನಿಂತೆ. ಒಂದೊಂದು ಬಾರಿಯೂ ಒಂದೊಂದು ರೀತಿ ಕೇಳಿಸುತಿತ್ತು. ಹೆಚ್ಚು ಹೊತ್ತು ಅದೇ ಸದ್ದು ಕೇಳಿ ಹರಟೆ ಎನಿಸಿತು. ರಾತ್ರಿ ಹೊತ್ತು ನಿರಂತರ ಸದ್ದು ಕೇಳಿ ಬರುತಿತ್ತು, ವಿನಃ ಒಂದು ಜೀರುಂಡೆಯೂ ಕಾಣ ಸಿಗಲಿಲ್ಲ. ಒಂದು ಜೀರುಂಡೆಯಿಂದ ಇಷ್ಟು ಸದ್ದು ಸಾದ್ಯವಿಲ್ಲ. ಆದ್ದರಿಂದ ಒಗ್ಗಟಿನಲ್ಲಿ ಬಲವಿದೆ ಅನ್ನುವುದು ಈ ಜೀರುಂಡೆ ವಿಚಾರದಲ್ಲಿ ಸತ್ಯ ಎನಿಸಿತು. ಅವುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಸಿದಾಗ ನನಗೆ ಸಿಕ್ಕ ಮಾಹಿತಿಗಳೆಂದರೆ ಇವು ಮಳೆಗಾಲದ ಸಮಯ ಹೆಚ್ಟು ಕಂಡು ಬರುವ ಕೀಟ. ಇವುಗಳಲ್ಲಿ ವಿವಿಧ ಜಾತಿಯ ವಿವಿಧ ರೀತಿಯ ಜೀರುಂಡೆಗಳಿದ್ದು, ಅವುಗಳಲ್ಲಿ ಹೆಚ್ಚಿನವು ಸಂಪೂರ್ಣ ರೂಪಾಂತರಕ್ಕೆ ಒಳಗಾಗುತ್ತವೆ. ಅವುಗಳ ಜಾತಿಯ ಆಧಾರದ ಮೇಲೆ ವಾರಗಳಿಂದ ವರ್ಷಗಳವರೆಗೂ ಬಹಳ ವ್ಯತ್ಯಾಸಗೊಳ್ಳುವ ಜೀವಿತಾವಧಿಯನ್ನು ಹೊಂದಿರುತ್ತವೆ. ಇವುಗಳ ಬಗ್ಗೆ ತಿಳಿಯುವುದಾದರೆ ಇನ್ನೂ ತುಂಬಾ ವಿಚಾರಗಳಿವೆ. ಜೀರುಂಡೆಗಳಂತೆ ಅನೇಕ ಕೀಟಗಳು ನಮ್ಮ ಸುತ್ತಮುತ್ತ ಇದೆ. ಅಕ್ಕ ಕೊಟ್ಟ ಚಿಕ್ಕ ಕೆಲಸದಿಂದ ನಾನು ಜೀರುಂಡೆ ಎನ್ನುವ ಕೀಟದ ಬಗ್ಗೆ ತಿಳಿದುಕೊಂಡೆ. ಧನ್ಯವಾದ ಅಕ್ಕ
...................................................... ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರಿರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


     ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ನೀವು ಕ್ಷೇಮವೇ? ನಾನು ಕ್ಷೇಮ. ನಾನು ನನ್ನ ಮನೆಯ ಸುತ್ತಮುತ್ತ ಓಡಾಡುತ್ತಿರುವಾಗ ನನಗೊಂದು ಮಿಡತೆ ಕಾಣ ಸಿಕ್ಕಿತು. ಅದು ಗಿಡದ ಮೇಲಿತ್ತು. ಆಗ ನಾನು ಅಂದುಕೊಂಡೆ.... ಅದು ಗಿಡದ ಎಲೆಗಳನ್ನು ತಿನ್ನುತ್ತದೆ ಎಂದು. ಮಿಡತೆಯನ್ನು ಆಂಗ್ಲ ಭಾಷೆಯಲ್ಲಿ Grasshopper ಎಂದು ಕರೆಯುತ್ತಾರೆ. ಅದನ್ನು ಹಿಡಿಯಲು ಹೋದಾಗ ಅದು ಗಿಡದಿಂದ ಗಿಡಕ್ಕೆ ಹಾರುತ್ತಿತ್ತು. ರಾತ್ರಿಯ ಸಮಯದಲ್ಲಿ ಅದು ಮನೆಯೊಳಗೂ ಬಂದಿತ್ತು. ಒಂದೆರಡು ದಿನ ನಮ್ಮ ಮನೆಯಲ್ಲೇ ಇತ್ತು. ಮೂರನೇ ದಿನ ಅದನ್ನು ನೋಡಿದಾಗ ಅದು ಸತ್ತು ಹೋಗಿತ್ತು. ಅಂದರೆ ಅದರ ಜೀವಿತಾವಧಿ ಕಡಿಮೆ ಇರಬಹುದು ಅಂದುಕೊಂಡೆನು. ನನಗೆ ಆ ಕೀಟವನ್ನು ನೋಡಿ ಬಹಳ ಸೋಜಿಗವಾಯಿತು. ನಂತರ ನನಗೆ ಅದರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವ ತವಕ ಉಂಟಾಯಿತು. ಧನ್ಯವಾದಗಳೊಂದಿಗೆ,
..................................... ವೈಷ್ಣವಿ ಕಾಮತ್ 
6ನೇ ತರಗತಿ 
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ ಕಲ್ಲಡ್ಕ. 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************ಮಕ್ಕಳ ಜಗಲಿ.... ಅಕ್ಕನ ಪತ್ರ---37
    ಪ್ರೀತಿಯ ಅಕ್ಕ... ನಿಮ್ಮ ಪ್ರೀತಿಯ ಲಹರಿಯು ಮಾಡುವ ನಮಸ್ಕಾರಗಳು. ನಿಮ್ಮ ಪತ್ರ ಓದಿ ತುಂಬಾ ಸಂತೋಷವಾಯಿತು. ಅಕ್ಕ ನೀವು ಪತ್ರದಲ್ಲಿ ನಮ್ಮ ಸುತ್ತಮುತ್ತ ಇರುವ ಜೀವಿಗಳನ್ನು ಗಮನಿಸಲು ತಿಳಿಸಿದ್ದೀರಿ. ನಾನು ಹೆಚ್ಚಾಗಿ ಇರುವೆಗಳನ್ನು ಗಮನಿಸುತ್ತಿರುತ್ತೇನೆ. ಕೆಲಸ ಮಾಡುವಾಗ ಸಣ್ಣ ಸಣ್ಣ ಇರುವೆಗಳು ಕಂಡಾಗ ಅದರ ಬಗ್ಗೆ ಕಾಳಜಿ ವಹಿಸಬೇಕು ಎಂದೆನಿಸುವುದು. ಅದು ತುಂಬಾ ಸಣ್ಣದಾದರೂ ಕೆಲವೊಮ್ಮೆ ಅದರ ಕೆಲಸಗಳನ್ನು ನೋಡುವಾಗ ತುಂಬಾ ಶಕ್ತಿಶಾಲಿ ಎಂದು ಎನಿಸುವುದು. ಆಗಾಗ ಮನೆಯೊಳಗೆ ಧಾಳಿ ಮಾಡುವ ಇರುವೆಗಳನ್ನು ಅದರಷ್ಟಕ್ಕೆ ಬಿಟ್ಟು ಬಿಟ್ಟರೆ ಸ್ವಲ್ಪವೇ ಹೊತ್ತಲ್ಲಿ ಅವುಗಳು ಇದ್ದಕ್ಕಿದ್ದಂತೆ ಮಾಯವಾಗುವುದು. ಇದು ನನಗೆ ಸೋಜಿಗ ಅನಿಸುವುದು. ಅವುಗಳು ಎಲ್ಲಿ ಹೋಗುವುವು..? ಅಕ್ಕ ಮುಂದಿನ ಪತ್ರದಲ್ಲಿ ಒಂದು ಚೆಂದದ ಕಥೆ ಹೇಳಿ... ನಿಮ್ಮ ಪತ್ರಕ್ಕಾಗಿ ನಾನು ಕಾಯುತ್ತಿರುತ್ತೇನೆ. ಇಂತಿ ನಿಮ್ಮ ಪ್ರೀತಿಯ 
............................................. ಲಹರಿ ಜಿ.ಕೆ.
ಏಳನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್, ತುಂಬೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


      ನಾನು ಪ್ರಣಮ್ಯ. ಅಕ್ಕನ ಪತ್ರ ಓದಿ ಸಂತೋಷವಾಯಿತು. ಪ್ರವಾಸ ಹೋಗುವುದೆಂದರೆ ನನಗೂ ಇಷ್ಟ. ಕೆಲವೊಂದು ಕಾರಣಗಳಿಂದ ಪ್ರಾಥಮಿಕ ಶಾಲಾ ಹಂತದಲ್ಲಿ ಪ್ರವಾಸಗಳಲ್ಲಿ ಭಾಗವಹಿಸುವ ಭಾಗ್ಯ ನನಗೂ ಸಿಕ್ಕಿಲ್ಲ. ಆದರೂ ಮನೆಯವರೊಡನೆ ಹೊರಸಂಚಾರಕ್ಕೆಂದು ಹೋಗುವುದು ಕೂಡ ಒಂದು ರೀತಿಯ ಖುಷಿಯ ವಿಚಾರವಾಗಿದೆ. ಮಕ್ಕಳ ಜಗಲಿ ಅಂಕಣವು ಆಯೋಜಿಸಿದ ಕವನ ಸ್ಪರ್ಧೆಯಲ್ಲಿ ನಾನು ಬರೆದ ಕವನಕ್ಕೆ ಮೆಚ್ಚುಗೆ ಗಳಿಸಿದ ಪ್ರಶಸ್ತಿ ಲಭಿಸಿರುವುದು ನನಗೆ ಬಹಳ ಖುಷಿ ಕೊಟ್ಟಿದೆ. ಇನ್ನಷ್ಟೂ ಕವನಗಳನ್ನು ರಚಿಸುವ ಉತ್ಸಾಹವನ್ನು ತುಂಬಿಸಿ ಬಿಟ್ಟಿದೆ. ನನ್ನ ಶಾಲೆಯಲ್ಲಿಯೂ ಶಿಕ್ಷಕರು ನನ್ನನ್ನು ತುಂಬಾನೇ ಪ್ರಶಂಸಿಸಿ ಪ್ರೋತ್ಸಾಹಿಸಿದರು. ಸ್ಪರ್ಧೆಯಲ್ಲಿ ಅವಕಾಶ ನೀಡಿದ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು.
................................................ ಪ್ರಣಮ್ಯ
10 ನೇ ತರಗತಿ 
ಸಂತಜಾರ್ಜ್ ಆಂಗ್ಲಮಾಧ್ಯಮ 
ಪ್ರೌಢಶಾಲೆ ನೆಲ್ಯಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
    ನಮಸ್ತೆ ನಾನು ಪೂಜಾ.. ಅಕ್ಕನಿಗೆ ನನ್ನ ನಮಸ್ಕಾರಗಳು.. ಅಕ್ಕ ನಾವೆಲ್ಲರೂ ಚೆನ್ನಾಗಿ ಇದ್ದೇವೆ. ನೀವು ಹೇಗಿದ್ದೀರಿ...? ನಮಗೆ ಎರಡು ವರ್ಷ ಕೊರೋನದ ಕಾರಣ ಶಾಲೆಗೆ ರಜೆ ಇತ್ತು. ನಂತರ ಕೋರೋನ ಕಡಿಮೆ ಆಗುತ್ತ ಬಂತು. ಆದ್ದರಿಂದ ಮತ್ತೆ ಶಾಲೆ ಪ್ರಾರಂಭವಾಯಿತು. ಸಂತೋಷವೊ.... ಸಂತೋಷ. ನಮ್ಮ ಶಾಲೆಯಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತದೆ. ಈ ಬಾರಿಯು ನಮ್ಮ ಶಾಲೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಈಗ ನಮ್ಮ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಸಂಭ್ರಮ ಹಾಗೂ ಕ್ರೀಡೋತ್ಸವಾದ ತಯಾರಿಯು ಆಗುತ್ತಿದೆ. ಹಾಗೆಯೇ ನಮಗೆ ಪ್ರವಾಸವೂ ಇತ್ತು. ಆದರೆ ನಾನು ಆ ಪ್ರವಾಸಕ್ಕೆ ಹೋಗಲಿಲ್ಲ. ನನ್ನ ಮನೆಯಿದ ಒಪ್ಪಿಗೆ ಇತ್ತು. ಆದರೆ ನನ್ನ ಗೆಳತಿಯರು ಯಾರು ಹೋಗದ ಕಾರಣ ನಾನು ಹೋಗಲಿಲ್ಲ. ಯಾಕೆಂದರೆ ನಾವೆಲ್ಲರೂ ಕಬ್ಬಡ್ಡಿ ಪಂದ್ಯಾಟಕ್ಕಾಗಿ ಬಿಜಾಪುರಕ್ಕೆ ಹೋಗಿದ್ದೆವು. ಅಲ್ಲಿ ಹಲವು ಪ್ರದೇಶಗಳನ್ನು ಸುತ್ತಿದೆವು. ಹಾಗೆಯೇ ಉತ್ತರ ಪ್ರದೇಶಕ್ಕೆ ಹೋಗಿದ್ದೆವು. ಅಲ್ಲಿ ಡೆಲ್ಲಿ, ಕೆಂಪು ಕೋಟೆ ಹಾಗೂ ಇನ್ನಿತರ ಪ್ರದೇಶಗಳನ್ನು ಸುತ್ತಾಡಿದೆವು. ನಮಗೆ ಅದೇ ದೊಡ್ಡ ಪ್ರವಾಸ ಆಗಿತ್ತು. ಸರಿ ಅಕ್ಕ... ಇನ್ನೊಂದು ಪತ್ರದೊಂದಿಗೆ ಭೇಟಿಯಾಗೊಣ.... ಅಕ್ಕನಿಗೆ ನನ್ನ ನಮನಗಳು....
................................................. ಪೂಜಾ 
ಎಂಟನೇ ತರಗತಿ
ವಿವೇಕಾನಂದ ಕನ್ನಡ ಮಾದ್ಯಮ ಶಾಲೆ ತೆಂಕಿಲ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************         ಪ್ರೀತಿಯ ಅಕ್ಕನಿಗೆ ನಿಮ್ಮ ಪ್ರೀತಿಯ ತಂಗಿ ಸಿಂಚನಶೆಟ್ಟಿ ಮಾಡುವ ನಮಸ್ಕಾರಗಳು. ನಾನು ಚೆನ್ನಾಗಿದ್ದೇನೆ ಅಕ್ಕ, ನೀವು ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ಮಕ್ಕಳ ಜಗಲಿಗೆ ಎಲ್ಲರೂ ಕೂಡ ಸೇರಬೇಕೆಂದು ನನ್ನದೊಂದು ಕೋರಿಕೆ. ಆಹಾ! ಇನ್ನೊಂದು ಸಂತೋಷ ಏನೆಂದರೆ ಮತ್ತೊಮ್ಮೆ ಬರುತ್ತಿದೆ ದ್ವಿತೀಯ ವರ್ಷದ ಚಿತ್ರಕಲಾ ಸ್ಪರ್ಧೆ. ಚಿತ್ರಕಲೆ ಸ್ಪರ್ಧೆಗೆ ಹೊರ ರಾಜ್ಯದ ವಿದ್ಯಾರ್ಥಿಗಳು ಸೇರಬಹುದು. ಕವನ ಕಥಾ ಸ್ಪರ್ಧೆಗೆ ಭಾಗವಹಿಸಿದ ಎಲ್ಲರಿಗೂ ಸಿಂಚನಳ ಕಡೆಯಿಂದ ಹಾರ್ದಿಕ ಅಭಿನಂದನೆಗಳು. ನಾವು ಒಂದೇ ಎನ್ನುವ ರೀತಿಯಲ್ಲಿ ಬಾಳಬೇಕು. ನಾವು ಭಾಗವಹಿಸುವ ಮುಖ್ಯ ಗುರಿ ಗೆಲ್ಲೋದು ಅಲ್ಲ. ಮಕ್ಕಳ ಜಗಲಿಯ ಸುದ್ದಿಯನ್ನು ಒಂದು ಎರಡು ವಾಕ್ಯದಲ್ಲಿ ಹೇಳಲು ಸಾಧ್ಯವಿಲ್ಲ. ಈ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು.
..................................... ಸಿಂಚನಾ ಶೆಟ್ಟಿ 
5ನೇ ತರಗತಿ 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೇಡಿಗುಳಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************ಅಕ್ಕನ ಪತ್ರ ಸಂಚಿಕೆ 37 ಕ್ಕೆ ಶಿಶಿರನ ಉತ್ತರ              
    ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ನಮಸ್ಕಾರಗಳು. ನಾನು ಕ್ಷೇಮವಾಗಿರುವೆ. ನಿಮ್ಮ ಪತ್ರ ಓದಿ ಸಂತೋಷವಾಯಿತು. ನಮ್ಮ ಶಾಲೆಯಿಂದ ನನ್ನ ಗೆಳೆಯ ಗೆಳತಿಯರು ಪ್ರವಾಸಕ್ಕೆ ಹೋಗಿದ್ದಾರೆ. ಕಾರಣಾಂತರಗಳಿಂದ ನನಗೆ ಹೋಗಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನನಗೆ ಬೇಸರವೇನಿಲ್ಲ. ನೀವು ನಮಗೆ ಪುಟ್ಟ ಹೊರ ಸಂಚಾರದ ಅನುಭವವನ್ನು ಬರೆಯಲು ತಿಳಿಸಿದ್ದೀರಿ ಧನ್ಯವಾದಗಳು ಅಕ್ಕ. ನನ್ನ ಭಾಗ್ಯವೇನೆಂದರೆ ನನ್ನ ಮನೆಯು ಹಚ್ಚ ಹಸಿರಿನಿಂದ ಕೂಡಿದ ಒಂದು ಸುಂದರವಾದ ಪರಿಸರದಲ್ಲಿದೆ. ನಾನು ನನ್ನ ಅಮ್ಮ, ಅಪ್ಪ, ಅಣ್ಣ ಎಲ್ಲರೂ ಪರಿಸರ ಪ್ರೇಮಿಗಳೇ. ನಮಗೆ ನಮ್ಮ ಸುತ್ತಮುತ್ತಲಿರುವ ಪ್ರಾಣಿ ಪಕ್ಷಿಗಳ ಕುತೂಹಲಕರವಾದ ಚಟುವಟಿಕೆಗಳನ್ನು ವೀಕ್ಷಿಸುವುದೆಂದರೆ ತುಂಬಾ ಇಷ್ಟ. ಈಗ ಚಳಿಗಾಲದ ಸಮಯವಾಗಿರುವುದರಿಂದ ನಮ್ಮ ಮನೆಯ ಬಳಿಯಿರುವ ವಿಶಾಲವಾದ ಅರಳಿ ಮರದ ಎಲೆಗಳು ಉದುರಿ ಹೊಸ ಚಿಗುರು ಬರುತ್ತಿರುವುದುನ್ನು ಗಮನಿಸಿದೆ.‌ ಅದರ ಎಲ್ಲಾ ಎಲೆಗಳು ಉದುರಿ ನಸು ಕೆಂಪು ಬಣ್ಣದ ಹೊಸ ಚಿಗುರಿನಿಂದ ಸುಂದರವಾಗಿ ಮೈದುಂಬಿದೆ . ಅಲ್ಲದೆ ಎಲ್ಲಾ ಎಲೆಗಳು ಉದುರಿದ ಸಂದರ್ಭದಲ್ಲಿ ಅದರಲ್ಲಿದ್ದ ಎಲ್ಲಾ ಹಕ್ಕಿಯ ಗೂಡುಗಳು ನಮಗೆ ಕಂಡವು. ಆ ಒಂದು ಮರವು ಎಷ್ಟೊಂದು ಹಕ್ಕಿಗಳಿಗೆ ಆಶ್ರಯ ತಾಣವಾಗಿದೆ ಎಂಬುದು ಅರಿವಾಯಿತು. ಅದರಲ್ಲೂ ಕಾಗೆ ತನ್ನ ಗೂಡಿನಲ್ಲಿ ಇಟ್ಟಿರುವ ಮೊಟ್ಟೆಗಳನ್ನು ಗಿಡುಗಗಳಿಂದ ತನ್ನ ಬಳಗದೊಂದಿಗೆ ಒಗ್ಗಟ್ಟಿನಿಂದ ಸೆಣಸಾಟ ಮಾಡಿ ರಕ್ಷಿಸುವುದುದನ್ನು ಕುತೂಹಲದಿಂದ ನೋಡಿದೆ. ನಮ್ಮ ಸೀತಾಫಲ ಹೆಣ್ಣಿನ ಮರದ ತುಂಬಾ ಕಾಯಿಗಳಾಗಿ ಹಣ್ಣಾಗುತ್ತಿವೆ. ಅದನ್ನು ತಿನ್ನಲು ಬರುವ ಹೆಣ್ಣು ಮತ್ತು ಗಂಡು ಕೋಗಿಲೆಗಳನ್ನು ನೋಡಿದೆ. ರಾತ್ರಿ ಬಾವಲಿಗಳ ಚೀರಾಟವನ್ನು ಆಲಿಸಿದೆ. ಇನ್ನೊಂದು ಸುಂದರವಾದ ದೃಶ್ಯವನ್ನು ಕಂಡೆ. ಅದೇನೆಂದರೆ ನಮ್ಮ ನಕ್ಷತ್ರಹಣ್ಣಿನ ಮರದಲ್ಲಿ ತುಂಬಾ ಹಣ್ಣುಗಳಾಗಿವೆ. ಅದನ್ನು ಸುಂದರವಾದ ದಷ್ಟಪುಷ್ಟವಾಗಿರುವ ಗಿಳಿಗಳು ತಿನ್ನುವುದನ್ನು ಕಂಡು ಮನಸ್ಸು ಉಲ್ಲಾಸಗೊಂಡಿತು. ಹಣ್ಣಾದ ತೊಂಡೆ ಕಾಯಿಯನ್ನು ಒಂದು ಚೂರೂ ಉಳಿಸದೆ ತಿನ್ನುವ ಮಡಿವಾಳಹಕ್ಕಿ ಹಾಗೂ ದಿನವಿಡೀ ಚಿಲಿಪಿಲಿ ಗುಟ್ಟುವ ಹರಟೆಮಲ್ಲ ಹಕ್ಕಿ, ಮುನಿಯ ಮುಂತಾದ ಹಲವಾರು ಹಕ್ಕಿಗಳನ್ನು ನೋಡಿ ಖುಷಿ ಪಟ್ಟೆ. ಹಕ್ಕಿಗಳಿಗೆ ಬೇಸಿಗೆಯಲ್ಲಿ ಬಾಯಾರಿಕೆಗೆ ನೀರು ಕುಡಿಯಲು ನನ್ನ ಅಣ್ಣ ಮಾಡಿದ ಸಣ್ಣದಾದ ಕೆರೆಗೆ ನೀರು ಕುಡಿಯಲು, ಸ್ನಾನ ಮಾಡಲು ಬರುವ ಕೆಂಭೂತಹಕ್ಕಿ, ಮೈನಾ, ಮಿಂಚುಳ್ಳಿ, ಹಾಗೂ ಹೆಸರು ಗೊತ್ತಿಲ್ಲದ ಹಲವಾರು ಹಕ್ಕಿಗಳನ್ನು ನೋಡಿದೆ. ಮುಂಗುಸಿಯ ಚೆಂದದ ಸಂಸಾರವನ್ನೂ ವೀಕ್ಷಿಸಿದೆ. ಇನ್ನು ಅನೇಕ ಸುಂದರವಾದ ವಿಷಯವಗಳಿವೆ ಅಕ್ಕ ಈ ಪತ್ರವನ್ನು ಇಲ್ಲಿಗೆ ಕೊನೆಗೊಳಿಸುತ್ತೇನೆ.
.............................................. ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


ಅಕ್ಕನ ಪತ್ರಕ್ಕೆ ನನ್ನ ಉತ್ತರ        
          ನಲ್ಮೆಯ ಅಕ್ಕನಿಗೆ... ರೇಣುಕಾ ರಂಗನಾಥ ಹೆಗಡೆ ಮಾಡುವ ನಮನಗಳು. ಹೌದು ನೀವು ಪತ್ರದಲ್ಲಿ ಹೇಳಿದಂತೆ ನಮ್ಮ ಶಾಲೆಯಲ್ಲಿಯೂ ಪ್ರವಾಸಕ್ಕೆ ಹೋಗುವುದೆಂದು ನಿರ್ಧರಿಸಿದ್ದೆವು. ಆದರೆ ಬೇಸರದ ಸಂಗತಿಯೆಂದರೆ ನಮ್ಮ ಶಾಲೆಯಲ್ಲಿ ಕೇವಲ 23 ವಿದ್ಯಾರ್ಥಿಗಳಿದ್ದೇವೆ. ಅದರಲ್ಲೂ ಎಲ್ಲರ ಮನೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಅಥವಾ ಹಣದ ಅಭಾವದಿಂದ ಪ್ರವಾಸಕ್ಕೆ ಕಳಿಸುವುದಿಲ್ಲ. ಹೀಗಿರುವಾಗ ಸರ್ಕಾರದಿಂದ ಆದೇಶ ಬಂದಿದೆಯಲ್ಲ....! ಪ್ರವಾಸಕ್ಕೆ ಹೋಗುವಾಗ ಸರ್ಕಾರಿ ವಾಹನದಲ್ಲೇ ಹೋಗಬೇಕೆಂದು.... 50 ಜನ ಹೋಗುವ ಸರ್ಕಾರಿ ವಾಹನದಲ್ಲಿ ಕೇವಲ 15 ಜನ ಹೋಗಲು ಸಾಧ್ಯವಿಲ್ಲವೆಂದು ನಮ್ಮ ಮುಖ್ಯ ಶಿಕ್ಷಕರು ನಿರಾಕರಿಸಿಬಿಟ್ಟರು. ಪ್ರವಾಸಕ್ಕೆ ಹೋಗುವುದೆಂದು ಇದ್ದ ಉತ್ಸಾಹ ಖುಷಿ ಎಲ್ಲಾ ಬೇಸರವಾಗಿ ಬದಲಾಯಿತು. ಪ್ರವಾಸಕ್ಕೆ ಹೋಗುವ ಕನಸು ಕನಸಾಗೇ ಉಳಿಯಿತು. ಆದರೆ ನೀವು ಹೇಳಿದಂತೆ ನಾನು ನನ್ನ ಸ್ನೇಹಿತರೆಲ್ಲ ಪರಿಸರಾವಲೋಕನ ದಿಂದ ಹಲವಾರು ವಿಷಯಗಳನ್ನು ಅರಿತೆವು. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುವೆ. ಧನ್ಯವಾದಗಳು.
..........................ರೇಣುಕಾ ರಂಗನಾಥ ಹೆಗಡೆ
ತರಗತಿ 7
ಸ ಹಿ ಪ್ರಾ ಶಾಲೆ ಹುತ್ಗಾರ್
ಸಿದ್ದಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article