-->
ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 37

ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 37

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 37

ನಮಸ್ತೆ ಮಕ್ಕಳೇ.... ಚೆನ್ನಾಗಿದ್ದೀರಾ?
     ನವೆಂಬರ್ ಮಾಸವೆನ್ನುವ ಖುಷಿ ಎಂದಿಗೂ ಮರೆಯಲಾಗದ ಅನುಭೂತಿ. ನಮಗೆ ಹಾಕಿಕೊಂಡಿರುವ ಮಿತಿಗಳಾಚೆ ತೆರೆದುಕೊಂಡಾಗ ನಮ್ಮ ಸಾಧ್ಯತೆಯ ಅರಿವಾಗುತ್ತದೆ ಅಲ್ವಾ? ಜಗಲಿಗೆ ಬಂದಿದ್ದ ಕವನ, ಕಥೆಗಳ ಗುಂಗಿನಲ್ಲಿಯೇ ಇದ್ದೇವೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಬಂದ ಸ್ವರಚಿತ ಕಥೆ, ಕವನಗಳ ವಿಷಯ ವಸ್ತುಗಳು, ನೀವು ತೊಡಗಿಸಿಕೊಂಡ ರೀತಿ, ನಿಮ್ಮ ಸಾಹಿತ್ಯ ಪ್ರೀತಿ... ಎಲ್ಲೋ ಒಂದು ಹೊಸ ಭರವಸೆಯನ್ನು ಹುಟ್ಟು ‌ಹಾಕಿದೆ. ಓದದವರಿಗೆ ಬರೆಯಲು ಸಾಧ್ಯವಿಲ್ಲ...! ನಮ್ಮ ಬರೆವಣಿಗೆಗಳು ಇನ್ನಷ್ಟು ಪ್ರಬುದ್ಧವಾಗಬೇಕಾದರೆ ಹೊಸತಾಗಿ ಓದಬೇಕು ಅಲ್ವಾ...! ಜಗಲಿಗೆ ಬಹಳಷ್ಟು ಗೆಳೆಯ ಗೆಳತಿಯರು ಸ್ಪಂದಿಸಿದ್ದೀರಿ. ತುಂಬಾ ಖುಷಿ ಆಯ್ತು. ಈ ಬರೆವಣಿಗೆ ನಿರಂತರವಾಗಲಿ. ಸಾಹಿತ್ಯದ ಒಲವು ಇನ್ನಷ್ಟು ಹೊಸ ಸೃಷ್ಟಿ ಗೆ ಕಾರಣವಾಗಲಿ. ಭಾಗವಹಿಸಿದ, ಬಹುಮಾನಿತರಾದ ಎಲ್ಲರಿಗೂ ಜಗಲಿ ಬಳಗದ ಪರವಾಗಿ ಪ್ರೀತಿಯ ವಂದನೆಗಳು.    
        ಇನ್ನು ಡಿಸೆಂಬರ್ ತಿಂಗಳು... ಪ್ರವಾಸ, ವಾರ್ಷಿಕೋತ್ಸವದ ಸಂಭ್ರಮ ಜೊತೆಯಾಗಲಿದೆ. ಪ್ರವಾಸ.....ಹೋಗಲು ಸಾಧ್ಯವಾದವರು ಬಹಳಷ್ಟು ಖುಷಿ ಪಡ್ತೇವೆ. ಈ ನಡುವೆ ನಮ್ಮಲ್ಲಿ ಕೆಲವರಿಗೆ ಯಾವುದಾದರೊಂದು ಕಾರಣದಿಂದ ಸಾಧ್ಯವಾಗುವುದಿಲ್ಲ ಅಲ್ವಾ? ಅದು ಬಹಳಷ್ಟು ಸಲ ಹಣದ ಸಮಸ್ಯೆಯೇ ಆಗಿರುತ್ತದೆ. ಎಲ್ಲರೂ ಹೊರಡುವಾಗ ನಮಗೆ ಅಥವಾ ನಮ್ಮ‌ ಸಹಪಾಠಿಗಳಿಗೆ ಹೋಗಲಾರದೆ ಬೇಸರಿಸಿಕೊಳ್ಳುವ ಸಂದರ್ಭಗಳೂ ಇರ್ತವೆ. ನಾನೂ ಸಣ್ಣದಿರುವಾಗ ಅತ್ತದ್ದಿದೆ. ಆದರೆ ಆ ಕ್ಷಣದಲ್ಲಿ ನೋಡಲಾಗದ ಜಗತ್ತು ಇನ್ನಷ್ಟು ಸುಂದರವಾಗಿ ನಮಗಾಗಿ ಕಾಯುತ್ತಿರುತ್ತದೆ ಎನ್ನುವುದು‌ ಸತ್ಯ!
        ಬದಲಾಯಿಸಲಾಗದ ಪರಿಸ್ಥಿತಿಯನ್ನು ತಾಳ್ಮೆಯಿಂದ ಒಪ್ಪಿಕೊಂಡಿರಲು ಅಥವಾ ನಮ್ಮ ಮೂಲಕ ಇನ್ನೊಬ್ಬರನ್ನೂ ಜೊತೆಗೆ ಕರೆದುಕೊಂಡು ಹೋಗುವ ಸಹಾಯ ಮಾಡಲು ಸಾಧ್ಯವಾದರೆ ಆ ಸಂದರ್ಭವನ್ನು ಗೆದ್ದಂತೆ..! ಬದಲಾಗುತ್ತಲೇ ಇರುವ ಪರಿಸ್ಥಿತಿಯೊಳಗೆ ನಮ್ಮ ದಿನಗಳು ಬಂದೇ ಬರುತ್ತವೆ ಎನ್ನುವ ಸಕಾರಾತ್ಮಕ ಚಿಂತನೆಯೇ ನೆಮ್ಮದಿಯ ಮೂಲ. ಬಾಲ್ಯ ಕಲಿಸುವ ಬದುಕಿನ ಚಿತ್ರಣವು ನಮ್ಮ ಭವಿಷ್ಯವನ್ನು ಭದ್ರವಾಗಿಸಲು ಅನುಭವದ ಪಾಠವಾಗುತ್ತವೆ. ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳಲಾಗದ ಕಾರಣಗಳಿಂದಾಗಿ ಪ್ರವಾಸ ಹೋಗುವ ಅವಕಾಶ ನಮ್ಮಲ್ಲಿ ಕೆಲವರಿಗೆ ಸಿಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕಾರಣವನ್ನು ಹುಡುಕುವ ಪ್ರಯತ್ನವಾಗಲಿ. ನಮ್ಮ ಜೊತೆಗಿರುವವರು ಬೇಸರಿಸಿಕೊಂಡಿರುವಾಗ ನಮ್ಮ ಸಂತೋಷವನ್ನು ಅತಿಯಾಗಿ ತೋರ್ಪಡಿಸುವುದು ಸರಿ ಅಲ್ಲ ಎಂದು ಅನಿಸ್ತದೆ.
     ಮುಂದಿನ ದಿನಗಳಲ್ಲಿ, ಪ್ರವಾಸ ಹೋದವರು ಆ ಖುಷಿಯನ್ನು ಹಂಚಿಕೊಳ್ಳಲಿದ್ದೀರಿ. ಹೋಗಲು ಸಾಧ್ಯವಾಗದವರಿಗೆ ಅಥವಾ ಆಸಕ್ತ ಗೆಳೆಯ ಗೆಳತಿಯರಿಗೊಂದು ಸಣ್ಣ ಕೆಲಸ. ನಿಮ್ಮ ಮನೆಯ ಸುತ್ತ ಇರುವ ಜೀವಿಗಳನ್ನು ಅವಲೋಕನ ಮಾಡುವುದು....! ಆಶ್ಚರ್ಯ ಅನಿಸಿತಾ...? ನಮ್ಮ ಅರಿವಿಗೆ ಬಾರದೆ ನಿರ್ಲಿಪ್ತವಾಗಿ ತಮ್ಮ ಲೋಕದೊಳಗೆ ಬದುಕುವ ಜೀವ ವೈವಿಧ್ಯತೆ ನಮ್ಮ ಸುತ್ತ ಇದೆ. ಪ್ರಾಣಿ, ಪಕ್ಷಿ, ಕೀಟಗಳ ಜೊತೆಗೆ ನಾವೂ ಇದ್ದೇವೆ. ಹಾಗೆ ಸುಮ್ಮನೆ ಮನೆಯಿಂದ ಹೊರಬಂದು ಗಿಡಗಳನ್ನು ಅಥವಾ ಪರಿಸರದ ತುಂಬೆಲ್ಲಾ ಸೂಕ್ಷ್ಮ ವಾಗಿ ಕಣ್ಣಾಡಿಸಿ. ಅನೇಕ ಜೀವಿಗಳು ಕಾಣಸಿಗುತ್ತವೆ. ಅವುಗಳ ಬಗ್ಗೆ ಸಣ್ಣ ಅಧ್ಯಯನ‌ ನಡೆಸಿ. ಅವುಗಳಿಗಿರುವ ಬೇರೆ ಬೇರೆ ಹೆಸರುಗಳನ್ನು ಸಂಗ್ರಹಿಸಿ. ಇನ್ನಿತರ ವಿಶೇಷ ಮಾಹಿತಿಗಳನ್ನೂ ಪಡೆದುಕೊಳ್ಳಿ. ವಿಶೇಷ ಅನಿಸಿದರೆ Photo ವನ್ನೂ ತೆಗೆಯಿರಿ. ಹೊಸತನ್ನು ಕಲಿತ ಸಂಭ್ರಮ ಖಂಡಿತವಾಗಿಯೂ ನಿಮ್ಮ ಪಾಲಿಗಿರುತ್ತದೆ...! ಈ ಪುಟ್ಟ ಹೊರಸಂಚಾರದ ಅನುಭವವನ್ನು ನೀವು ವೀಕ್ಷಿಸಿದ ಜೀವಿಗಳ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ತೀರಿ ಅಲ್ವಾ...?
   ಕಳೆದ ಬಾರಿಯ ಪತ್ರಕ್ಕೆ ಹೆಚ್ಚು ಪ್ರೀತಿಯನ್ನು ಸೇರಿಸಿ ಮರುಪತ್ರ ಬರೆದ ಪ್ರಿಯಾ, ಧೀರಜ್ ಕೆ ಆರ್, ಶಿಶಿರ್ ಎಸ್, ಶ್ರಾವ್ಯ, ಸಿಂಚನಾ ಶೆಟ್ಟಿ, ಪ್ರಣಮ್ಯ, ಸಾತ್ವಿಕ್ ಗಣೇಶ್, ಸಪ್ತಮಿ ಅಶೋಕ್, ಲಹರಿ ಜಿ ಕೆ, ವೈಷ್ಣವಿ ಕಾಮತ್, ಪೂಜಾ, ನಿಭಾ.... ನಿತ್ಯ ಹೊಸತಾಗುವ ನಿಮ್ಮ ಆತ್ಮೀಯ ನುಡಿಗಳು ಎಂದಿಗೂ ಪತ್ರದ ಸ್ಫೂರ್ತಿ. ಹೊಸದೊಂದು ಆಪ್ತ ವರ್ಗವನ್ನೇ ಸೃಷ್ಟಿಸಿದ ಈ ಬಾಂಧವ್ಯ ಬಹಳ ಖುಷಿ ಕೊಡ್ತಿದೆ. ವಂದನೆಗಳು ನಿಮಗೆಲ್ಲರಿಗೂ.
     ಸರಿ ಮಕ್ಕಳೇ.... ನಿಮ್ಮ ಕುತೂಹಲದ ಕಣ್ಣುಗಳು ವೀಕ್ಷಿಸಿದ್ದೆಲ್ಲವೂ ಕಲಿಕೆಗೆ ದಕ್ಕಲಿ. ಚಳಿಗಾಲದ ಈ ಬೆಳಗು ನಿಮ್ಮೊಂದಿಗಿನ ಮಾತುಗಳ ಮೂಲಕ ಹಿತವೆನಿಸುವ ಬೆಚ್ಚಗಿನ ಭಾವ.
     ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************


Ads on article

Advertise in articles 1

advertising articles 2

Advertise under the article