-->
ಪ್ರತಿಫಲನ : ಸಂಚಿಕೆ - 3

ಪ್ರತಿಫಲನ : ಸಂಚಿಕೆ - 3

ಪ್ರತಿಫಲನ : ಸಂಚಿಕೆ - 3
ಮಕ್ಕಳಿಗಾಗಿ ಲೇಖನ ಸರಣಿ
                  
           ಅದೊಂದು ಊರು. ಕೆಲ ದಿನಗಳಿಂದ ಸುರಿದ ಎಡೆಬಿಡದ ಮಳೆಗೆ ಊರೆಲ್ಲಾ ಪ್ರವಾಹ. ಉಕ್ಕಿ ಹರಿದ ನದಿಗಳು, ಸಮುದ್ರ! ಎಲ್ಲೆಲ್ಲೂ ನೀರೇ ನೀರು, ಕಂಗಾಲಾದ ಜಲಚರಗಳು, ಮನುಜರು. ಬದುಕಿದರೆ ಸಾಕೆಂದು ಜೀವ ಕೈಯಲ್ಲಿ ಹಿಡಿದೇ ಭಗವಂತನನ್ನು ಪ್ರಾರ್ಥಿಸಿದರು. ಕೊನೆಗೂ ಮಳೆ ನಿಂತು ಹೋಯಿತು. ಆದರೆ ಸಮುದ್ರದ ನೀರಿನ ಸೆಳೆತಕ್ಕೆ ಸಿಕ್ಕ ಕಪ್ಪೆಯೊಂದು ಊರ ಬಾವಿಯೊಳಗೆ ಬಿದ್ದು ಹೋಯಿತು. ಒಂದೆರಡು ದಿನಗಳು ಕಳೆದವು. ಬಾವಿಯೊಳಗಿನ ಒಂದು ಕಪ್ಪೆ , ತನ್ನ ಸ್ಥಳವನ್ನು ಆಕ್ರಮಿಸಿದ ಅಪರಿಚಿತ ಕಪ್ಪೆಯನ್ನು ಕಾಣುತ್ತಾ ಪರಿಚಯಕ್ಕೆ ಮನ ಮಾಡಿತು. "ನಾನು ಸಮುದ್ರದಿಂದ ಬಂದೆ" ಎಂದ ಕಪ್ಪೆಯೊಡನೆ, "ಸಮುದ್ರವೇ..? ಹಾಗೆಂದರೇನು...? ಎಷ್ಟು ದೊಡ್ಡದಿದೆ?" ಎಂದು ಕೇಳಿತು. "ಸಮುದ್ರವೆಂದರೆ ತುಂಬಾ ವಿಶಾಲವಾದದು, ನೀರಿನ ಆಗರ ತೆರೆಗಳ
ಅಬ್ಬರ ಹೀಗೆ" ಉತ್ತರಿಸಿತು ಸಮುದ್ರ ಕಪ್ಪೆ . "ನಿನ್ನ ಸಮುದ್ರ ನನ್ನ ಬಾವಿಗಿಂತ ದೊಡ್ಡದೇ....?" ಹೌದೆಂದಿತು ಸಮುದ್ರ ಕಪ್ಪೆ. "ಇಷ್ಟು ದೊಡ್ಡದೇ" ಎನ್ನುತ್ತಾ ಕಪ್ಪೆ ಬಾವಿಯ ಮೇಲಕ್ಕೆ ಹಾರುವ ಪ್ರಯತ್ನ ಮಾಡಿ ಕೆಳಗೆ ಬಿತ್ತು. ಸಾವರಿಸಿಕೊಂಡು ತನ್ನ ಎರಡೂ ಕೈಗಳನ್ನು
ಅಗಲಿಸಿ ಹೊಟ್ಟೆಯನ್ನು ಉಬ್ಬರಿಸಿ "ಇಷ್ಟು ದೊಡ್ಡದೇ" ಎಂದಿತು. ಸಮುದ್ರವು ಬಾವಿಗಿಂತ ಸಾವಿರ ಪಾಲು ದೊಡ್ಡದು ಎಂದ ಕಪ್ಪೆಯ ಮಾತನ್ನು ಕೇಳುವ ತಾಳ್ಮೆ ಬಾವಿಯ ಕಪ್ಪೆಗೆ ಇರಲಿಲ್ಲ. ತನ್ನ ಬಾವಿ ದೊಡ್ಡದೆಂಬ ಮೂಢತನಕ್ಕೆ ಬಲಿಯಾದ ಕಪ್ಪೆ ಇನ್ನಷ್ಟು ದೇಹವನ್ನು ವಿಶಾಲಗೊಳಿಸಿ ಸಮುದ್ರದ ಕಲ್ಪನೆಗೆ ತೊಡಗಿದರೂ ಉಸಿರು ಒಡೆದು ಸತ್ತೇ ಹೋಯಿತು.
           ಪ್ರೀತಿಯ ವಿದ್ಯಾರ್ಥಿ ಮಿತ್ರರೇ, ಕಥೆಯಂತೆಯೇ ಜೀವನವೂ ಅಲ್ಲವೇ....? ಹಲವಾರು ಬಾರಿ ನಮ್ಮ ತರಗತಿಗಳಿಗೆ ಬೇರೆ ಬೇರೆ ಶಾಲೆಗಳಿಂದ ವಿದ್ಯಾರ್ಥಿಗಳು ಆಗಮಿಸುವುದಿದೆ. ಪೋಷಕರ ವಲಸೆ, ವರ್ಗಾವಣೆ, ನೈಸರ್ಗಿಕ ವಿಕೋಪಗಳು, ಹೆಚ್ಚು ಕಲಿಯಬೇಕೆಂಬ ಹಂಬಲ.. ಹೀಗೆ ವಿವಿಧ ಕಾರಣಗಳಿಗಾಗಿ ವಿದ್ಯಾರ್ಥಿಗಳು ಪೋಷಕರ ಆಶಯದಂತೆ ಶಾಲೆ ಬದಲಿಸುತ್ತಿರುತ್ತಾರೆ. ಹಾಗೆ ಬರುವ ಹೊಸ ವಿದ್ಯಾರ್ಥಿಗಳಲ್ಲಿ ವಿಭಿನ್ನತೆ ಕಾಣಬಹುದು. ಹಳ್ಳಿಯ ಶಾಲೆಯಿಂದ ಪಟ್ಟಣದ ಶಾಲೆಗೆ ಬಂದ ಮಕ್ಕಳು ಭಯಭೀತರಾಗುತ್ತಾರೆ. ಟಿಪ್ ಟಾಪ್ ಆಗಿ ಸಮವಸ್ತ್ರ ಧರಿಸಿರುವ ಅವರನ್ನು ಕಂಡಾಗ ಒಂದಷ್ಟು ಕಸಿವಿಸಿಯೂ ಸಹಜವೇ. ಹೊಸದಾಗಿ ತರಗತಿಗೆ ಬಂದ ವಿದ್ಯಾರ್ಥಿಗಳು ಒಂಟಿ ಭಾವ ಅನುಭವಿಸುತ್ತಾರೆ. ಉಳಿದವರೆಲ್ಲರೂ ಒಗ್ಗಟ್ಟಾಗಿಯೂ ತಾವು ಏಕಾಂಗಿಯಾಗಿಯೂ ಇರುವ ಭಾವನೆ ಅವರನ್ನು ಕಾಡುತ್ತದೆ. ಅಂತೆಯೇ ಕೆಲವೊಮ್ಮೆ, "ನೀನು ಯಾವ ಶಾಲೆಯಿಂದ ಬಂದೆ? ಅಲ್ಲಿ
ನೀನು ಕಲಿತದ್ದು ಏನೂ ಇಲ್ಲ, ನಮ್ಮ ಬರವಣಿಗೆ ನೋಡು ನಮ್ಮ ಶಾಲೆಯ ಅಂದ ನೋಡು"… ಹೀಗೆಲ್ಲಾ ಹೇಳಿ ಇತರರು ಹೀಯಾಳಿಸುವುದೂ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊಸದಾಗಿ ಆಗಮಿಸಿದ ವಿದ್ಯಾರ್ಥಿಗಳು ಯಾಕಪ್ಪ ನನಗೆ ಹೊಸ ಶಾಲೆ, ನನ್ನ ಹಳೆಯ ಶಾಲೆಯೇ ನನಗೆ ಚಂದ. ಸಾಕು ಈ ಶಾಲೆಯ ಸಹವಾಸ ಎಂದು ವಿದ್ಯಾಭ್ಯಾಸದಿಂದ ವಿಮುಖರಾಗುವುದೂ ಇದೆ. ಒಂಟಿ ಭಾವ ಯಾರನ್ನಾದರೂ ದುಃಖಕ್ಕೀಡು ಮಾಡುತ್ತದೆ ಅಲ್ಲವೇ..? ಇದಕ್ಕೆ ವಿರುದ್ಧವಾಗಿ ಪೇಟೆಯ ದೊಡ್ಡ ದೊಡ್ಡ ಶಾಲೆಗಳಿಂದ ಕಾರಣಾಂತರಗಳಿಂದ ಹಳ್ಳಿಯ ಕಡೆ ಬಂದ
ವಿದ್ಯಾರ್ಥಿಗಳಾದರೋ ತಮ್ಮ ಶಾಲೆ, ಆವರಣ, ಆಸು ಪಾಸು ಅಲ್ಲಿನ ಸೌಕರ್ಯಗಳ ಬಗ್ಗೆ ಆಡಿಕೊಳ್ಳುತ್ತಾ ಉಳಿದ ವಿದ್ಯಾರ್ಥಿಗಳನ್ನು ತುಚ್ಛವಾಗಿ ಕಾಣುವುದೂ ಇದೆ. ಇವೆಲ್ಲವೂ ಸಾಗರ - ಬಾವಿಯ ಕಪ್ಪೆಗಳ ಕಥೆಯದೇ ವರಸೆ. ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾದರೆ ನಾವೇನು ಮಾಡಬಹುದು ಹೇಳಿ..? ಹೊಸದಾಗಿ ನಮ್ಮ ಶಾಲೆಗೆ ಬಂದ ವಿದ್ಯಾರ್ಥಿ ಮಿತ್ರರನ್ನು ಗೆಳೆಯರಂತೆ ಒಟ್ಟಿಗೆ ಸೇರಿಸಿಕೊಂಡು ಅವರಿಗೆ ಸಂಪೂರ್ಣ ಶಾಲೆಯ ಸನ್ನಿವೇಶದ ಪರಿಚಯ ಮಾಡಿಕೊಡಬೇಕು. ಹೊಸತನದ ಒಂಟಿತನ ನಿವಾರಣೆಯಾಗುವಂತೆ ಅವರೊಂದಿಗೆ ನೀವಿದ್ದೀರಿ ಎಂಬ ಭಾವನೆಯನ್ನು ಬಲಪಡಿಸಬೇಕು. ಅಭ್ಯಾಸದ ನಡುವೆ ಉಂಟಾಗುವ ಸಮಸ್ಯೆಗಳಿದ್ದರೆ ಪರಿಹರಿಸುವ ಮನಮಾಡಬೇಕು. ಮಾತ್ರವಲ್ಲ ನೀವೇನಾದರೂ ಹೊಸ ಶಾಲೆಯ ಸನ್ನಿವೇಶದಲ್ಲಿ ಇದ್ದೀರೆಂದು ಯೋಚಿಸಿ ಆಗ ನಿಮ್ಮ ತರಗತಿಯ ಎಲ್ಲರನ್ನೂ ಗೆಳೆಯರನ್ನಾಗಿ ಮಾಡಿಕೊಳ್ಳಿ ನಿಮ್ಮ ಶಾಲೆಯ ಉತ್ತಮ ಅಂಶಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳಿ. ಯಾವುದೇ ಕಾರಣಕ್ಕೂ
ಹೋಲಿಕೆ ಮೇಲು ಕೀಳು, ತರತಮ ಭಾವ ಸರಿಯಲ್ಲ. ಒಂಟಿಯಾಗಿದ್ದಾಗ ಮನಸ್ಸು ಖೇದಗೊಳ್ಳುತ್ತದೆ. ಜೊತೆ ಸೇರಿ ಬೆರೆತಾಗ ಪ್ರಫುಲ್ಲಿತರಾಗಿರುತ್ತೇವೆ. ಗೆಳೆತನಕ್ಕೆ ಅಂತಹ ಶಕ್ತಿ ಇದೆ. ಸ್ನೇಹ ಸಂಗಮದಲ್ಲಿ ಅಹಂಕಾರ ಔದಾಸೀನ್ಯಗಳು ಎಂದಿಗೂ ಸಲ್ಲ ಅಲ್ಲವೇ.. ಅಂದ ಹಾಗೆ ನಿಮ್ಮ ನೆಚ್ಚಿನ ಗುರುಗಳು ನಿಮಗೆ ಇದೇ ಮಾತನ್ನು ಹೇಳಿರುತ್ತಾರೆ. ಸಹಪಾಠಿಗಳಲ್ಲಿ ವೈಷಮ್ಯ ಸಲ್ಲದು. ಹೊಸದಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ನಮ್ಮವರೆಂದು ಸ್ವೀಕರಿಸುವ ಹೃದಯ ವೈಶಾಲ್ಯತೆ ನಮಗಿರಬೇಕು. ಪರಸ್ಪರ ಸಹಕಾರ ಸಹಬಾಳ್ವೆಯ ಸಾಕಾರ. ಗುರುಗಳ ನಿರಂತರ ನಿಷ್ಕಲ್ಮಶ ಬೋಧನೆಯನ್ನು ಪಾಲಿಸಿರಿ. ನಿಮ್ಮ ನಡೆ ನುಡಿಗಳಲ್ಲಿ ಗುರುಗಳ ಮಾತಿನ ಪ್ರತಿಫಲನ ನಡೆಯಲಿ. ನಾವೆಲ್ಲರೂ ಒಂದೇ ಎಂಬ ಸಮರಸ ಸಮಾನತೆಯ ಭಾವ ಸಂಪನ್ನವಾಗಲಿ. ಇದು ನನ್ನಾಶಯ. ಅನುಸರಿಸುವಿರಲ್ಲವೇ....? ಪ್ರೀತಿಯಿಂದ,
........................................... ಪುಷ್ಪಲತಾ ಎಂ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************

Ads on article

Advertise in articles 1

advertising articles 2

Advertise under the article