-->
ಸಂಚಾರಿಯ ಡೈರಿ : ಸಂಚಿಕೆ - 20

ಸಂಚಾರಿಯ ಡೈರಿ : ಸಂಚಿಕೆ - 20

ಸಂಚಾರಿಯ ಡೈರಿ : ಸಂಚಿಕೆ - 20

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
              
      Once a nomadic, always nomadic ಅನ್ನುವಂತೆ ಭಾರತದ ಅನೂಹ್ಯ ಸೌಂದರ್ಯೋಪಾಸನೆಗೆ ಪ್ರೇರಣೆ ನನ್ನ ಮೊದಲ ಪ್ರವಾಸ.. ಮೊದಲ ಪ್ರವಾಸ, ಪ್ರವಾಸ ಎಂದರೇನು ಎಂಬುವುದನ್ನ ಸೂಕ್ಷ್ಮವಾಗಿ ಹಾಗೂ ಸೂಕ್ತವಾಗಿ ತಿಳಿಸಿತ್ತು..
      ನನ್ನ ಮೊದಲ ಪ್ರವಾಸ ಕೈಗೊಂಡಿದ್ದು ಮಂಗಳೂರಿಗೆ. ಆಗ ನಾನು ದಕ್ಷಿಣ ಕನ್ನಡದ ಸುರಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರನೆಯ ತರಗತಿಯಲ್ಲಿದ್ದೆ. ಶಾಲಾ ಪ್ರವಾಸವೆಂದರೆ ಕೇಳಬೇಕೆ... ದಿನಾಂಕ ನಿಗದಿಯಾದ ಒಂದು ವಾರ ಮುಂಚಿತವಾಗಿಯೇ ಸಮರೋಪಾದಿಯ ತಯಾರಿ. ಪ್ರವಾಸವಂತೂ ಬೆಳಗ್ಗಿನ ಜಾವ ತೆರಳಿ ಸಂಜೆ ಹೊತ್ತಿಗೆ ಹಿಂದಿರುಗುವ ಯೋಜನೆಯಾಗಿದ್ದರೂ ಸಹ ಉತ್ಸಾಹಕ್ಕೆ ಕೊರತೆ ಇರಲಿಲ್ಲ..
    ಪ್ರತಿ ಒಬ್ಬರಿಗೆ 50 ರೂಪಾಯಿಯಂತೆ ಊಟ, ಬಸ್ ಪ್ರಯಾಣದ ದರ ಸೇರಿತ್ತು. ನಾನು ಅಷ್ಟೇ ನಮ್ಮ ಪಕ್ಕದ ಊರಾದ ಕಲ್ಲಡ್ಕ ಅನ್ನೋ ಜಾಗವನ್ನೆ ದೊಡ್ಡ ನಗರ ಅಂದುಕೊಂಡಿದ್ದೆ. ಅದರಲ್ಲೂ ಅಜ್ಜಿ ಕೈ ಹಿಡಿದುಕೊಂಡು ರಸ್ತೆ ದಾಟುವಾಗ ದೊಡ್ಡ ಟ್ಯಾಂಕರ್ ಕಂಡರಂತೂ ಭಯದಿಂದ ಆವಕ್ಕಾಗಿ ನಿಂತುಬಿಡುತ್ತಿದ್ದವನಿಗೆ ಮಂಗಳೂರು ನಗರದ ಪ್ರವಾಸ ಕುತೂಹಲ ಮೂಡಿಸಿತ್ತು.
        ಸುರಿಬೈಲು ಶಾಲಾ ಪ್ರವಾಸಕ್ಕೆ ಜಯವಾಗಲಿ
ಮುಂಜಾವಿನ ರವಿ ಕಿರಣಗಳು ಭುವಿಗೆ ಸ್ಪರ್ಶಿಸುವ ಮುನ್ನ, ಚುಮುಚುಮು ಛಳಿಯ ನಡುಕದೊಂದಿಗೆ ನಾವೆಲ್ಲ ಬಸ್ ಏರಿದ್ದೆವು. ಬಣ್ಣ ಬಣ್ಣದ ದಿರಿಸುಗಳೊಂದಿಗೆ, ಬಣ್ಣಬಣ್ಣದ ಕನಸುಗಳೂ ನಮ್ಮ ಮನದೊಳಗಿತ್ತು. ತದನಂತರ ಶಿಕ್ಷಕರೂ ನಮ್ಮ ಜತೆ ಸೇರಿಕೊಂಡು, ಪ್ರಯಾಣದ ಸಂಪೂರ್ಣ ಮಾಹಿತಿ ನೀಡಿದರು. ಬಸ್ ಹೊರಟಾಗ ಹುರುಪಿನಿಂದ ಎಲ್ಲರ ಬಾಯಲ್ಲೂ ಒಂದೇ ಘೋಷಣೆ 'ಸುರಿಬೈಲು ಶಾಲಾ ಪ್ರವಾಸಕ್ಕೆ ಜಯವಾಗಲಿ' ಎಂದು‌. ಕೆಲವು ತುಂಟರು ಚಿಕ್ಕ ಚೀಟಿಗಳಲ್ಲಿ ಬರೆದು ಹೊರಗೆ ತೂರಿಬಿಟ್ಟಿದ್ದರು. ಪ್ರಯಾಣದುದ್ದಕ್ಕೂ ನಮಗೆ ಗೈಡ್ ಆಗಿ ಕಾರ್ಯನಿರ್ವಹಿಸಿದ್ದು ಮಾತ್ರ ನಮ್ಮ ಪ್ರೀತಿಯ ಇಂಗ್ಲಿಷ್ ಮಾಸ್ತರ್ ಆದ ಶಿವಪ್ರಸಾದ್ ಸರ್. "ನೋಡಿ ಅಲ್ನೋಡಿ ಅದು ನಾನು ಕಲಿತ ಕಾಲೇಜು, ಕದ್ರಿ ದೇವಸ್ಥಾನ, ನಂದಿನಿ ಹಾಲು ಉತ್ಪಾದಕ ಸಂಸ್ಥೆ ಅಂತೆಲ್ಲಾ ಕಿಟಕಿಯಾಚೆಗೆ ಇದ್ದ ಪ್ರಸಿಧ್ಧ ಇಮಾರತಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.
                      ನಮ್ಮ ಮೊದಲ ಪ್ರವಾಸ ತೆರಳಿದ್ದು ಮಂಗಳೂರಿನ ಪ್ರಸಿದ್ಧ ಆದ 'ಪಿಲಿಕುಳ ನಿಸರ್ಗಧಾಮಕ್ಕೆ.. ಬೆಳ್ಳಂಬೆಳಗ್ಗೆ ಎದ್ದು ಸೀದಾ ಬಂದಿದ್ದ ಬಹುತೇಕ ವಿದ್ಯಾರ್ಥಿಗಳು ಬೆಳಗ್ಗಿನ ತಿಂಡಿ ತಿಂದಿರಲಿಲ್ಲ. ಅದಕ್ಕಾಗಿ ಬಸ್ಸನ್ನ ವಾಮಂಜೂರು ಎಂಬಲ್ಲಿಯ ಹೋಟೆಲ್ ಎದುರುಗಡೆ ನಿಲ್ಲಿಸಿ ಉಪಹಾರ ಸೇವಿಸಲು ಅಣಿಯಾದೆವು. 'ಶಿವಪ್ರಸಾದ್' ನಾಮಧೇಯದ ಹೋಟೆಲ್ ಹೆಸರು ಕಂಡು ನಾವೆಲ್ಲ ದಂಗಾಗಿಬಿಟ್ಟಿದ್ದೆವು. ಅದಾಗ್ಯೂ ನನಗೆ surprise ಅನಿಸಿದ್ದು ಮಾತ್ರ ಅಲ್ಲಿ ಸರ್ವರ್ ಆಗಿದ್ದ ನಮ್ಮ‌ ಮಾವನನ್ನ ಕಂಡು. ಅವರು ನನ್ನಲ್ಲಿ ಮಾತನಾಡಿ, ಕುಶಲೋಪರಿ ವಿಚಾರಿಸಿದ್ದರು. ಗಡದ್ದಾಗಿ ತಿಂಡಿ ತಿಂದು ನಮ್ಮ ಪಯಣ ಪಿಲಿಕುಳದ ಕಡೆ ಸಾಗಿತ್ತು.. 
      ಪಿಲಿಕುಳ ಎಂದರೆ ತುಳುವಿನಲ್ಲಿ ಹುಲಿ ನೀರು ಕುಡಿಯಲು ಬರುತ್ತಿದ್ದ ಕೊಳ ಎಂಬ ಅರ್ಥ ಇದೆ. ನಾವು ಅಲ್ಲಿಗೆ ತೆರಳಿ ಮೃಗಾಲಯ ನೋಡಿ ಮಾನಸ ವಾಟರ್ ಪಾರ್ಕ್‌ಗೆ ತೆರಳಿದ್ದೆವು. ಪ್ರಸ್ತುತ ಡಾ| ಕೋಟ ಶಿವರಾಮ ಕಾರಂತ ಜೈವಿಕ ಉದ್ಯಾನವನ ಎಂದು ಕರೆಯಲ್ಪಡುತ್ತಿದ್ದು, ಮೃಗಾಲಯ, ಸರ್ಪಾಲಯ, ಪಾರ್ಕ್, ಗುತ್ತಿನಮನೆ ಇಲ್ಲಿಯ ಪ್ರಮುಖ ಆಕರ್ಷಣೆಗಳಾಗಿವೆ. ಭಾರತದ ಮೊದಲ ತ್ರೀಡಿ ಪ್ಲಾನೇಟೋರಿಯಂ ಇರುವುದು ಇಲ್ಲಿಯೇ! ನಂತರ ಮಾನಸ ವಾಟರ್ ಪಾರ್ಕ್‌ಗೆ ನಮ್ಮ ಧಾಂಗುಡಿ. ನೀರಾಟ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಮೇಲಿಂದ ತಿರುವು-ಮುರುವಿನ ದಾರಿಯಲ್ಲಿ ಬರೋ ಟ್ಯೂಬ್ ಮೇಲೆ ಕುಳಿತು ಢುಬುಕ್ಕೆಂದು ಈಜುಕೊಳಕ್ಕೆ ಬೀಳುವ ಸಾಹಸ, ತಿಳಿನೀಲ ನೀರಿನ ಮೇಲೆ ಈಜಿನ ಪಟ್ಟು ಎಂದೆಲ್ಲ ಆಟವಾಡಿ ಮುಗಿಸಿದಾಗ ಗಂಟೆ ಎರಡಾಗಿತ್ತು..
   ಅಲ್ಲಿಂದ ಊಟ ಮುಗಿಸಿ, ನಾವು ಹೊರಟಿದ್ದು ಪಣಂಬೂರು ಬೀಚ್‌ಗೆ. ಸಂಜೆಯ ತಂಪುಗಾಳಿಯ ಜತೆ, ಸೂರ್ಯಾಸ್ತದ ಮೆರುಗು ಸವಿದು ನಮ್ಮ ಯಾತ್ರೆ ಕೊನೆಗೊಂಡಿತು. ಒಂದು ಮಧುರ ನೆನಪು ಮನದಲ್ಲಿ ಅಚ್ಚಳಿಯದೆ ಉಳಿದಿತ್ತು.
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************


Ads on article

Advertise in articles 1

advertising articles 2

Advertise under the article