ಪ್ರೀತಿಯ ಪುಸ್ತಕ : ಸಂಚಿಕೆ - 34
Friday, November 25, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 34
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ, “ಫೆಬ್ರವರಿಯ ಒಂದು ದಿನ ನೀನಾಳ ಅಜ್ಜಿ ಹೊರಟು ಹೋದಳು, ಟಾಟಾ ಹೇಳಲಿಕ್ಕೂ ನೀನಾಳಿಗೆ ಅವಕಾಶ ಸಿಗಲಿಲ್ಲ.” ಕಥೆ ಹೀಗೆ ಶುರುವಾಗುತ್ತದೆ. ಅಜ್ಜಿ ಎಲ್ಲಿಗೆ ಹೋಗಿರಬಹುದು, ಹೇಗೆ ಹೋಗಿರಬಹುದು ಅಂತ ನೀನಾಳ ತಲೆಯಲ್ಲಿ ನೂರಾರು ಪ್ರಶ್ನೆಗಳು. ಆದರೆ ಉತ್ತರ ಕೊಡಲು ಅಮ್ಮನಿಗೂ ಗೊತ್ತಾಗುತ್ತಾ ಇಲ್ಲ. ಏನು ಮಾಡುವುದು. ಅಜ್ಜಿಯ ನೆನಪುಗಳು ನೀನಾಳನ್ನು ಕಾಡುತ್ತವೆ. ಅವಳ ಪ್ರಶ್ನೆಗಳಿಗೆ ಅವಳೇ ಏನೇನೋ ಕಲ್ಪನೆ ಮಾಡಿಕೊಂಡು ಮತ್ತು ಸ್ವಲ್ಪ ವಿಜ್ಞಾನದ ಸಹಾಯ ಪಡೆದುಕೊಂಡು ಉತ್ತರ ಹುಡುಕಿಕೊಂಡು ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳುತ್ತಾಳೆ. ಅವಳ ಕಲ್ಪನೆಗಳು ಬರಹದಲ್ಲೂ ಇವೆ, ಅಷ್ಟೇ ಸುಂದರವಾದ ಚಿತ್ರಗಳಲ್ಲೂ ಕಾಣುತ್ತವೆ. ನಮ್ಮ ಹತ್ತಿರದವರನ್ನು ಕಳೆದುಕೊಂಡಾಗ ನಮಗೆ ದುಃಖ ಅನಿಸುತ್ತದೆ ಅಲ್ಲವೇ? ಅವರ ನೆನಪು ಮಾಡಿಕೊಳ್ಳುತ್ತಾ ಇರುತ್ತೇವೆ. ಅದರಲ್ಲೇ ತೃಪ್ತಿ ಪಟ್ಟುಕೊಳ್ಳುತ್ತೇವೆ.
ನನ್ನ ಪುಟ್ಟ ಸ್ನೇಹಿತ ದಕ್ಷ ಹೇಳುತ್ತಿದ್ದ, “ನೀವು ನಮ್ಮನ್ನು ಬಿಟ್ಟು ಬಾನಕ್ಕೆ ಹೋಗುವಾಗ ನಿಮ್ಮ ಮೊಬೈಲ್ ತೆಗೆದುಕೊಂಡು ಹೋಗಿ, ನಾನು ಕಾಲ್ ಮಾಡುತ್ತೇನೆ” ಅಂತ. ಹಾಗೆ ಮಾಡಲು ಸಾಧ್ಯವೇ? ಇರಲಿ, ನೀನಾ ಅವಳ ಅಜ್ಜಿ ಬಗ್ಗೆ ಏನೇನು ಯೋಚಿಸಿದಳು, ಪುಸ್ತಕದಲ್ಲಿ ನೋಡಿ.. ನಿಮಗೆ ಇಷ್ಟ ಆಗಬಹುದು.
ಲೇಖಕರು: ಚತುರಾ ರಾವ್
ಅನುವಾದ: ಬಾಗೇಶ್ರೀ
ಚಿತ್ರಗಳು: ಕೃಷ್ಣ ಬಾಲ ಶೆಣೈ
ಪ್ರಕಾಶಕರು: ತುಲಿಕಾ ಪಬ್ಲಿಷರ್ಸ್
ಬೆಲೆ: ರೂ.150/
ಈ ಪುಸ್ತಕ 6+ ವಯಸ್ಸಿವರಿಗಾಗಿ ಇದೆ. ನಾಲ್ಕು, ಐದನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************