-->
ಪ್ರತಿಫಲನ : ಸಂಚಿಕೆ - 2

ಪ್ರತಿಫಲನ : ಸಂಚಿಕೆ - 2

ಪ್ರತಿಫಲನ : ಸಂಚಿಕೆ - 2
ಮಕ್ಕಳಿಗಾಗಿ ಲೇಖನ ಸರಣಿ

       
           ಒಂದು ದೊಡ್ಡ ಆಲದ ಮರದ ಗೆಲ್ಲಲ್ಲೊಂದು ಹಕ್ಕಿಗೂಡು. ಹಕ್ಕಿಗಳೆರಡು ಮರಿಗಳೆರಡು. ಸಂಸಾರ.. ಆನಂದ ಸಾಗರ. ಅದೊಂದು ದಿನ ಸುರಿದ ಬೋರೆಂಬ ಮಳೆಗೆ ಮರದಡಿಯಲ್ಲಿ ಸಿಲುಕಿ ಗೂಡಿನೊಂದಿಗೆ ಗಂಡು ಹೆಣ್ಣು ಹಕ್ಕಿಗಳೆರಡು ಅಪ್ಪಚ್ಚಿಯಾಗಿದ್ದವು. ದೇವರ ದಯೆಯೋ ಸೃಷ್ಟಿಯ ವೈಚಿತ್ರ್ಯವೋ ರೆಕ್ಕೆ ಬಲಿಯುತ್ತಿದ್ದ ಮರಿಗಳೆರಡು ಆಶ್ರಯ ಆಹಾರಗಳಿಗಾಗಿ ಕೂಗಿಡುತ್ತಿದ್ದವು. ಆ ದಾರಿಯಲ್ಲಿ ಬಂದ ಋಷಿಯೋರ್ವರ ಕಣ್ಣಿಗೆ ಬಿತ್ತು ಒಂದು ಪುಟ್ಟ ಹಕ್ಕಿ. ಇನ್ನೊಂದು ಹಕ್ಕಿಯಾದರೋ ಕಟುಕನೊಬ್ಬನ ಬಗಲು ಸೇರಿತು. ವಿಭಿನ್ನ ಪರಿಸರದಲ್ಲಿ ಎರಡು ಹಕ್ಕಿಗಳೂ ಬೆಳೆಯುತ್ತಾ ಬಂದವು. ಜೊತೆಗೆ ತಮ್ಮ ಪರಿಸರದ ಸಂಸ್ಕೃತಿಯನ್ನೂ ಸಂಸ್ಕಾರವನ್ನೂ ಜೊತೆಗೂಡಿಸಿಕೊಂಡವು. ‌   
         ಒಂದು ದಿನ ಆ ದಾರಿಯಾಗಿ ಬಂದ ರಾಜನನ್ನು ಕಂಡ ಕಟುಕನ ಹಕ್ಕಿ‌ "ನೋಡಿ ನೋಡಿ ಕಟ್ಟು ಮಸ್ತಾದ ದೇಹವುಳ್ಳ ಮನುಷ್ಯನೊಬ್ಬ ಬಂದಿದ್ದಾನೆ. ಆತನನ್ನು ಹಿಡಿಯಿರಿ, ಕೊಲ್ಲಿರಿ, ಮಾಂಸ ಮಾಡಿರಿ" ಎಂದಿತು. ಕಸಿಬಿಸಿಗೊಂಡ ರಾಜನು ಕಾಡ ದಾರಿಯಲ್ಲಿ ಮುಂದುವರೆಯುತ್ತಾ ಸಾಗಿದಾಗ ಅನತಿ ದೂರದಲ್ಲೇ ಋಷ್ಯಾಶ್ರಮವೊಂದನ್ನು ಕಂಡನು. ಆತನನ್ನು ಪ್ರೀತಿಯಿಂದ ಸ್ವಾಗತಿಸಿದ ಹಕ್ಕಿಯೊಂದು "ಬನ್ನಿ ದೊರೆಗಳೇ ಕುಳಿತುಕೊಳ್ಳಿ, ಆಯಾಸ ಪರಿಹರಿಸಿ. ಪಾನೀಯ ಕುಡಿಯಿರಿ ಹಣ್ಣುಗಳನ್ನು ತಿನ್ನಿ" ಎಂದು ಮೃದುವಚನದಿಂದ ಸ್ವಾಗತಿಸಿತು. ಆಶ್ಚರ್ಯಗೊಂಡ ರಾಜ ಋಷಿಯೊಡನೆ‌ ಮಾತನಾಡಿ ನಿಜ ವೃತ್ತಾಂತವನ್ನು ತಿಳಿದುಕೊಂಡ.  
       ಮಕ್ಕಳೇ ನೀವು ಹಲವು ಬಾರಿ ಕೇಳಿದ, ಓದಿದ ಕಥೆ ಇದಾಗಿರಬಹುದು. ಆದರೆ ಎಂದಾದರೂ ಈ ಕಥೆಯನ್ನು ನಿಮ್ಮ ಜೀವನಕ್ಕೆ ಹೊಂದಿಸಿಕೊಂಡು ನೋಡಿರುವಿರಾ? ದೈನಂದಿನ ಸನ್ನಿವೇಶದಲ್ಲಿ ಹಲವಾರು ಮಂದಿ, ಅಂತೆಯೇ ನಿಮ್ಮಂತಹ ಮಕ್ಕಳೂ ಆಡುವ ಮಾತುಗಳನ್ನು ಕೇಳುತ್ತೇವೆ. ಒಬ್ಬ ವ್ಯಕ್ತಿಯೊಡನೆ ಐದು ನಿಮಿಷಗಳ ಕಾಲ ಮಾತನಾಡಿದರೆ ಆತನ ಹುಟ್ಟಿನ ಮನೆಯ ಹಿನ್ನೆಲೆಯನ್ನು ತಿಳಿಯಬಹುದಂತೆ ಇದು ಸತ್ಯ!. ಶಾಲೆಯ‌ ಹಲವಾರು‌ ಸನ್ನಿವೇಶಗಳಲ್ಲಿ ನಿಮ್ಮ ಗುರುಗಳು ಕೂಡ ಮಾತಿನ ಬಗ್ಗೆ ನಿಮ್ಮನ್ನೆಚ್ಚರಿಸಿರಬಹುದಲ್ಲವೇ..? ನಿಮ್ಮ ಗೆಳೆಯರನ್ನೇ ನೋಡಿ ಹಲವಿಧ ಮಾತುಗಳ ಮಲ್ಲರಿದ್ದಾರೆ. ಅವರವರ ಮನೆಯ ಸನ್ನಿವೇಶ ಸಂಸ್ಕಾರಗಳಿಗೆ ತಕ್ಕಂತೆ ಮಾತುಗಳು ಹೊರ ಬರುತ್ತವೆ.  
         ಮಾತು ಸಂಸ್ಕೃತಿಯ ಅಭಿವ್ಯಕ್ತಿ ! ಸುಸಂಸ್ಕೃತ ಮನೆಯ, ವಾತಾವರಣದ ಹಿನ್ನೆಲೆ ಆಡುವ ಮಾತುಗಳಲ್ಲಿ ಪ್ರತಿಫಲಿತವಾಗುತ್ತದೆ. ನಿಮ್ಮಂತಹ ಮಕ್ಕಳ ಮಾತುಗಳು ಮನದ ಅಂಕೆ ಮೀರಿ ವ್ಯಕ್ತವಾಗುವ ತಾಣವೇ ಆಟದ ಅಂಗಳ. ಕ್ರೀಡಾಂಗಣವು ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರತಿಫಲಿಸುತ್ತದೆ. ಆಟ ಪಾಠಗಳ ಅಥವಾ ಇತರ ಯಾವುದೇ ಸಂದರ್ಭದಲ್ಲಿ ಮಿತ್ರರೊಡನೆ ನಿಮ್ಮ ಮಾತು ಮೃದುವಚನವಾಗಿರಲಿ ಅದು ಮೂರು ಲೋಕವನ್ನು ಗೆಲ್ಲಲಿ. 
 ಮಾತಿನಿಂ ನಗೆ ನುಡಿಯು
 ಮಾತಿನಿಂ ಹಗೆ ಕೊಲೆಯು 
 ಮಾತಿನಿಂ ಸರ್ವ ಸಂಪದವು 
 ಮಾತೇ‌ ಮಾಣಿಕ್ಯವು ಸರ್ವಜ್ಞ|    
         ‌‌ಮಾತಿನಿಂದಲೇ ಹಗೆ, ತುಟಿ ಮೀರಿದ ಕೆಟ್ಟ ಮಾತಿನಿಂದ ಕೊಲೆಗಳೂ ನಡೆಯಬಲ್ಲವು. ಸರ್ವಸಂಪದವನ್ನು ನಮಗೀವ ಮಾತು ನೈಜ ಸಂಸ್ಕೃತಿಯ ಸಂಸ್ಕಾರದ ಪ್ರತಿಫಲನವಾಗಲಿ. ಮಾತೆಂಬ ಬೆಲೆ ಬಾಳುವ ಮಾಣಿಕ್ಯವನ್ನು ಹದವರಿತು ಬಳಸೋಣ. ಶುಭವಾಗಲಿ
........................................... ಪುಷ್ಪಲತಾ ಎಂ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************


Ads on article

Advertise in articles 1

advertising articles 2

Advertise under the article