-->
ಪ್ರತಿಫಲನ : ಸಂಚಿಕೆ - 1

ಪ್ರತಿಫಲನ : ಸಂಚಿಕೆ - 1

ಪ್ರತಿಫಲನ : ಸಂಚಿಕೆ - 1
ಮಕ್ಕಳಿಗಾಗಿ ಲೇಖನ ಸರಣಿ
         
         ಪ್ರೀತಿಯ ವಿದ್ಯಾರ್ಥಿ ಮಿತ್ರರೇ ವಂದನೆಗಳು. ವಿದ್ಯಾರ್ಜನೆಯ ಪರ್ವಕಾಲದಲ್ಲಿ ತಾವಿರುವಿರಿ. ಏಕೆ ಬಲ್ಲಿರಾ..? ಶೈಕ್ಷಣಿಕ ವರ್ಷದ ಪೂರ್ವಾರ್ಧ ಕಳೆದು ಉತ್ತರಾರ್ಧದೆಡೆಗೆ ನಾವು ಚಲಿಸುತ್ತಿದ್ದೇವೆ. ತರಗತಿಯಲ್ಲಿ ಗುರುಗಳು ಅತೀವ ಶ್ರದ್ಧೆಯಿಂದ,‌ ಮುತುವರ್ಜಿಯಿಂದ, ಕಿಂಚಿತ್ ವೇಗದಿಂದ ಪಠ್ಯವನ್ನು ಪೂರ್ತಿಗೊಳಿಸುವ ತವಕದಲ್ಲಿದ್ದಾರೆ. ಅದರಲ್ಲೂ ಎಸ್.ಎಸ್.ಎಲ್.ಸಿ, ಪಿ.ಯು.ಸಿ ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆಯನ್ನು ಎದುರಿಸಬೇಕಾದ ಕಾರಣ ಪುನರ್ಮನನ, ಪುನರ್ಬಲನಗಳ ಜೊತೆ ಹಲವು ಬಾರಿ ಪುನರಾವರ್ತನೆಗಳಾಗಿ ಪಾಠ-ಪಾಠಾಂಶಗಳು ನಿಮಗೆ ಕಂಠಸ್ತವಾಗಬೇಕು ಹೃದ್ಯವಾಗಬೇಕು. ಈ ನಿಟ್ಟಿನಲ್ಲಿ ಗುರುಗಳ ಜವಾಬ್ದಾರಿಯು ಹಿರಿದಾದುದಾಗಿದೆ. ಉಳಿದ ತರಗತಿಗಳ ಸನ್ನಿವೇಶಗಳೂ ಇದಕ್ಕೆ ಹೊರತಲ್ಲ. ಹಾಗೆ ವೇಗವಾಗಿ ಅಧ್ಯಾಪನ ಸಾಗುವಾಗ ಜಾಗ್ರತೆಯಿಂದ ಜಾಣರಾಗಿ ಹಿಂಬಾಲಿಸುವವರು ನೀವಾಗಬೇಕಿದೆ.
     ಸಣ್ಣ ತರಗತಿಗಳಿಂದಲೇ ನಿರಂತರ ಮೌಲ್ಯಮಾಪನ ನಡೆದು ನಿಮ್ಮ ಕಲಿಕಾ ಪ್ರಗತಿಯನ್ನು ನಿಮಗರಿವಿಲ್ಲದಂತೆಯೇ ಗುರುತಿಸಲಾಗುತ್ತದೆ. ಇದೇಕೆ ಬಲ್ಲಿರಾ…? ಕಲಿಕೆ ಎಂದರೆ ಕೇವಲ ಪುಸ್ತಕಗಳ ಓದು, ಅಭ್ಯಾಸ ಪ್ರಶ್ನೆಗಳಿಗೆ ಉತ್ತರ ಬರೆಯುವುದು, ಗುರುಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು, ಆಗಾಗ ನಡೆಯುವ ಪರೀಕ್ಷೆಗಳಲ್ಲಿ ದೊರೆತ ಅಂಕಗಳನ್ನು ಕಂಡು ಸಂಭ್ರಮಿಸುವುದು ಮಾತ್ರ ಎಂದರೆ ತಪ್ಪಾಗಬಹುದು. ಬದಲಿಗೆ ನಮ್ಮ ಶಾಲೆಯ ಬಗ್ಗೆ ನಮಗಿರುವ ಪ್ರೀತಿ, ಕಷ್ಟದಲ್ಲಿರುವ ಗೆಳೆಯರಿಗೆ ನೀಡುವ ಸಹಕಾರ, ದಾರಿಯಲ್ಲಿ ಕಾಣುವ ಪ್ರಾಣಿ ಪಕ್ಷಿಗಳನ್ನು ಉಪದ್ರವಿಸದೆ, ಸಂತೈಸುವ ರೀತಿ ಹಿರಿಯರ ಮೇಲಿನ ಗೌರವ ಆಪ್ತತೆ…. ಹೀಗೆ ನಿರಂತರ ಎಲ್ಲ ಗುರುಗಳ ಚಕ್ಷುಗಳಿಗೆ ನಿಮ್ಮ ನಡವಳಿಕೆಗಳು ಆಹಾರವಾಗುತ್ತಾ ಸಾಗುತ್ತವೆ. ಒಂದೊಮ್ಮೆ ನಿಮ್ಮ ಉತ್ತಮ ಗುಣಗಳನ್ನು ಕಂಡಾಗ ತಮ್ಮ ಶಿಷ್ಯನೆಂಬ ಹೆಮ್ಮೆಯಿಂದ ಅಭಿನಂದಿಸುವ ಗುರುಗಳು ತಪ್ಪುಗಳನ್ನು ತಿದ್ದಿ ಉತ್ತಮರಾಗಲು ಪ್ರೇರೇಪಿಸುತ್ತಾರೆ. ಆದ್ದರಿಂದ ಕಲಿಕೆ ಪ್ರತಿದಿನ ಪ್ರತಿ ಕ್ಷಣ!
     ಹಾಗೆಂದು ನಿತ್ಯದ ಉತ್ತಮ ನಡವಳಿಕೆಗಳು ಮಾತ್ರ ಕಲಿಕಾ ಏಣಿಯಲ್ಲಿ ಶ್ರೇಣಿ ಸೂಚಕವಾಗುತ್ತವೆ ಎನ್ನಲು ಸಾಧ್ಯವೇ...? ಅದು ಸಾಧುವಲ್ಲ. ಪುಸ್ತಕದ ಓದಿನಿಂದ ಪಡೆದ ಜ್ಞಾನದ ಗಳಿಕೆಯು,‌ ಅದರ ಮೌಲ್ಯಮಾಪನವು ಮುಂದಿನ ಜೀವನದ ಮಜಲುಗಳನ್ನು ನಿರ್ಧರಿಸುವ ಅಂಶಗಳಾಗಿ ವಿದ್ಯಾರ್ಥಿಗಳಾದ ನಿಮ್ಮನ್ನು ಹಿಂಬಾಲಿಸುತ್ತವೆ. ಹಾಗಾದರೆ ಸದಾ ಜಾಗೃತರಾಗಿ ಜಾಣರಾಗಿ ಕಲಿಕೆ ಹಾದಿಯಲ್ಲಿ ಮುನ್ನುಗ್ಗಬೇಕಾದುದು ಇಂದಿನ - ಪ್ರತಿದಿನದ ಅವಶ್ಯಕತೆಯಾಗಿದೆ.
      ಗಂಟೆಗಳ ಕಾಲ ಓದುತ್ತಾ ಸಾಗುವ ಕೆಲವರು ಒಂದಕ್ಷರವನ್ನೂ ಮನನಮಾಡಿಕೊಳ್ಳುವುದಿಲ್ಲ . ಕಾರಣ ಏಕಾಗ್ರತೆಯ ಕೊರತೆ. ಸ್ವಲ್ಪವೇ ಸಮಯ ಓದಿದರೂ ಅಷ್ಟನ್ನೂ ನೆನಪಿಟ್ಟು ಬರೆಯುವ ಸಾಮರ್ಥ್ಯ ಕೆಲವರ ವಿಶೇಷತೆ. ಪರೀಕ್ಷೆ ಬಂದಾಗ ಓದೋಣ ಎಂಬ ಔದಾಸೀನ್ಯ ಅಧ್ಯಯನಕ್ಕೆಸೆವ ದ್ರೋಹ! ನಾನೇಕೆ ಓದಬೇಕೆಂಬ ಉದಾಸೀನಭಾವ, ಉಡಾಫೆ, ಗುರುಗಳು ಮತ್ತು ಪೋಷಕರಿಗೆ ತೋರುವ ಅಗೌರವ. ಹಾಗಾದರೆ ವಿದ್ಯಾರ್ಥಿ ದೆಸೆಯಲ್ಲಿ ಓದು ಅನಿವಾರ್ಯ ಅವಶ್ಯಕತೆ. ನಿರಂತರ ಅಧ್ಯಯನಶೀಲತೆ ಉತ್ತಮ ವಿದ್ಯಾರ್ಥಿಗಳ ಲಕ್ಷಣ. ನಾಳೆ ಎಂಬ ಮುಂದೂಡಿಕೆ ಅಧಃಪತನಕ್ಕೆ ದಾರಿ. ಇಂದು ಈಗಲೇ ಎಂಬ ಪ್ರವೃತ್ತಿ ಚೇತೋಹಾರಿ. 
      ಮುದ್ದು ಮಕ್ಕಳೇ, ಪರೀಕ್ಷೆ ಇರಲಿ ಇಲ್ಲದಿರಲಿ ನಿರಂತರ ಅಧ್ಯಯನದಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ. ಜೀವನದಲ್ಲಿ ಉತ್ತಮ ಗುಣಗಳಿಂದ ಕೂಡಿದ ಮಾನವೀಯ ಮೌಲ್ಯಗಳನ್ನಾಗಲೀ ಜ್ಞಾನವನ್ನಾಗಲೀ ಬೇಕೆಂದಾಗ ತುಂಬಿಕೊಳ್ಳುವುದು ಅಸಾಧ್ಯ. ಹಾಗೆಯೇ ಕಲಿಕೆ ಎಂಬ ಕೌಶಲವು ನಿಧಾನ ಸಿದ್ದಿಯದಾಗಿದೆ ಎಂಬ‌ ಅರಿವೂ ನಮಗಿರಬೇಕು. 
     "ಸುಖಾರ್ಥೀ ಚೇತ್ ತ್ಯಜೇತ್ ವಿದ್ಯಾಂ 
      ವಿದ್ಯಾರ್ಥೀ ಚೇತ್ ತ್ಯಜೇತ್ ಸುಖಂ| 
      ಸುಖಾರ್ಥಿನಃ ಕುತೋ ವಿದ್ಯಾ 
      ಕುತೋ ವಿದ್ಯಾರ್ಥಿನಃ ಸುಖಂ ||"
 ಸುಖ ಮತ್ತು ವಿದ್ಯೆ ಜತೆಗಿರುವುದು ಅಸಾಧ್ಯ. ಕೇವಲ ಸುಖದ ನಿರೀಕ್ಷೆಯಲ್ಲಿರುವವನಿಗೆ ವಿದ್ಯೆ ಫಲಿಸದು. ವಿದ್ಯಾರ್ಥಿಗಳು ಸುಖಭೋಗಗಳನ್ನು ತ್ಯಾಗ ಮಾಡುತ್ತಾ ಸಾಗಿದಾಗ ವಿದ್ಯಾ ಸರಸ್ವತಿಯ ಒಲವು ತಂತಾನೆ ಬರುವುದು. ಆದುದರಿಂದ ಕಲಿಕೆಯ ಪ್ರತಿಫಲನ ಪ್ರತಿದಿನದ ಶೋಭೆಯಾಗಲಿ. ದಿನದಿಂದ ದಿನಕ್ಕೆ ಜಾಣರಾಗುತ್ತಾ ಜಾಗೃತರಾಗಿರಿ... ಶುಭವಾಗಲಿ
........................................... ಪುಷ್ಪಲತಾ ಎಂ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************

Ads on article

Advertise in articles 1

advertising articles 2

Advertise under the article