ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 36
Saturday, November 5, 2022
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 36
ನಮಸ್ತೆ ಮಕ್ಕಳೇ.... ಚೆನ್ನಾಗಿದ್ದೀರಾ..?ಶಾಲೆಯನ್ನು ಎಷ್ಟೊಂದು ಸಂಭ್ರಮಿಸ್ತೇವೆ ಅಲ್ವಾ..? ಅರಿವಿಲ್ಲದೆ ಸರಿದು ಹೋಗುವ ದಿನಗಳ ನಡುವೆ ನಾವು ಹೊಸತಾಗುತ್ತಿದ್ದೇವೆ...!
ನಮ್ಮ ಜಗಲಿಗೆ ಎರಡನೆಯ ವರ್ಷದ ಸಡಗರ... ನಾವೆಷ್ಟು ಬೆಳೆದಿದ್ದೇವೆ...!ಬರೆಯದವರನ್ನು ಬರೆಸಿದ, ಓದದವರನ್ನು ಓದಿಸಿದ, ಚಿತ್ರ ಬಿಡಿಸದವರಿಗೆ ಗೆರೆ ಎಳೆಯವ ಆಸಕ್ತಿಯನ್ನು ಮೂಡಿಸುತ್ತಾ ಅನೇಕ ಮಾಹಿತಿ, ಹಿರಿಯರ ಪ್ರೀತಿಯ, ಸ್ಫೂರ್ತಿಯ, ಪ್ರೋತ್ಸಾಹದ ನುಡಿಗಳೊಂದಿಗೆ ನಮ್ಮನ್ನು ತರಗತಿ ಕೋಣೆಯ ಹೊರತಾಗಿ ಹೊರಜಗತ್ತಿನೊಂದಿಗೆ ಬೆಸೆಯುತ್ತಿರುವ ವೇದಿಕೆ... ನಿರಂತರವಾಗಿ ತೊಡಗಿಸಿಕೊಳ್ಳುತ್ತಿರುವ ಅನೇಕ ತಮ್ಮ ತಂಗಿಯರನ್ನು ಗಮನಿಸಿದ್ದೇನೆ. ಜಗಲಿಗೆ ಈ ಖುಷಿ ನಿಮ್ಮೆಲ್ಲರಿಂದಾಗಿ... ಮತ್ತು ನಿಮ್ಮ ಜೊತೆಗಿರುವ ನಿಮ್ಮೆಲ್ಲರ ಶಿಕ್ಷಕರು ಮತ್ತು ಪೋಷಕರ ಕಾಳಜಿಯಿಂದ... ಕಲಿಯಲು ಇರುವ ಇಂತಹ ಅನೇಕ ಅವಕಾಶಗಳಿಗೆ ನಮ್ಮನ್ನು ತೆರೆದುಕೊಂಡಾಗ, ಹೊಸದನ್ನು ಕಲಿಯುವ ಕುತೂಹಲವನ್ನು ಹೆಚ್ಚಿಸಿಕೊಂಡಾಗ ಖಂಡಿತವಾಗಿಯೂ ಬೆಳೆಯುತ್ತೇವೆ.
ಮಕ್ಕಳ ಲೋಕದಲ್ಲಿ ಹಿರಿಯರೂ ಮಕ್ಕಳಂತೆ ಸಂಭ್ರಮಿಸುವ ಮತ್ತು ಭವಿಷ್ಯದ ಭರವಸೆಯನ್ನು ಗಟ್ಟಿಗೊಳಿಸುವ ಈ ಒಡನಾಟದಲ್ಲಿ ನಾವೆಲ್ಲರೂ ಕಲಿತಿದ್ದೇವೆ.... ನಿಮ್ಮಿಂದ. ನಿಮ್ಮ ಪ್ರೀತಿ, ಆತ್ಮೀಯತೆ, ಗೌರವ, ಅಭಿಮಾನ.... ಎಲ್ಲ ಭಾವಗಳೂ ಈ ಬಾಂಧವ್ಯವನ್ನು ಗಟ್ಟಿಗೊಳಿಸ್ತಿವೆ.
ಮೊನ್ನೆ ಹೀಗೆಯೇ ಒಂದು ಸುದ್ದಿ ಓದಿದ ನೆನಪು. ಮಹಾರಾಷ್ಟ್ರದ ಕೊಲ್ಹಾಪುರದ ಹೂವಿನ ವ್ಯಾಪಾರಿಗಳು, ರಾತ್ರಿ ಅಂಗಡಿ ಮುಚ್ಚುವ ಮುನ್ನ ಸರದಿ ಪ್ರಕಾರ ಒಬ್ಬೊಬ್ಬರಂತೆ ಒಂದೊಂದು ಹೂವಿನ ಹಾರವನ್ನು ಅಂಗಡಿಯೆದುರು ನೇತಾಡಿಸಿ ಹೋಗ್ತಾರಂತೆ. ರಾತ್ರಿ ಹೊತ್ತಿನಲ್ಲಿ ಯಾರಾದರೂ ನಿಧನರಾದರೆ, ಶವಕ್ಕೆ ಹಾಕಲು ಹಾರಕ್ಕಾಗಿ ಬೆಳಗ್ಗಿನವರೆಗೆ ಕಾಯಬಾರದು, ತೊಂದರೆಯಾಗಬಾರದೆನ್ನುವ ಅಂತರಾಳದ ಕಾಳಜಿ....! ಈ ಹಾರ ಹಣಕ್ಕಾಗಿ ಅಲ್ಲದಿದ್ದರೂ, ಹಾರ ತೆಗೆದುಕೊಂಡು ಹೋದವರು ಹಣವನ್ನು ಅಂಗಡಿಯೆದುರು ಇಟ್ಟು ಹೋಗ್ತಾರಂತೆ..!
ಈ.... ನಮ್ಮವರು ಎನ್ನುವ ಪ್ರೀತಿ ಒಮ್ಮೆ ಆವರಿಸಿಕೊಂಡರೆ ಎಲ್ಲರಿಗೂ ಒಳಿತನ್ನೇ ಬಯಸಲು ಸಾಧ್ಯವಾಗ್ತದೆ ಅಲ್ವಾ...! ಸೇವೆ ಮಾಡಲು ಎಷ್ಟೊಂದು ದಾರಿಗಳು...! ಘಟನೆಯನ್ನು ಓದಿಕೊಂಡು ಹೋದ ಹಾಗೆ ಹಳ್ಳಿಗರ ನಿರ್ಮಲ ಪ್ರೇಮದ ಬಗ್ಗೆ ಅಭಿಮಾನ ಮೂಡುತ್ತದೆ...!
ನಿಮ್ಮ ಮೇಲೂ ನಮಗೆ ವಿಶೇಷ ಅಕ್ಕರೆ...! ಜಗಲಿಯನ್ನು ನೀವು ಪ್ರೀತಿಯಿಂದ ಅಪ್ಪಿಕೊಂಡು, ನಮ್ಮದೆನ್ನುವ ಕಾಳಜಿಯನ್ನು ಭದ್ರವಾಗಿರಿಸಿಕೊಂಡಿದ್ದೀರಿ. ವಂದನೆಗಳು ನಿಮಗೆ.
ಮಕ್ಕಳೇ, ನೀವೆಲ್ಲರೂ ನಮ್ಮ ಜಗಲಿಯ ಆಸ್ತಿ. ಜಗಲಿಯ ಹಿರಿಯರೆಲ್ಲರೂ ನಿಮ್ಮ ತೊಡಗಿಸಿಕೊಳ್ಳುವಿಕೆಯನ್ನು ಸಂಭ್ರಮಿಸುತ್ತಿದ್ದಾರೆ. ಈ ಪ್ರೀತಿ ಇನ್ನಷ್ಟು ಭದ್ರವಾಗಲಿ... ಮನಸ್ಸುಗಳೆಲ್ಲ ಆಂತರ್ಯದ ನಿರ್ಮಲತೆಯೊಂದಿಗೆ ನಿತ್ಯ ಅರಳಿ, ಬೆಳೆಯಲಿ.
ನವೆಂಬರ್ 14... ಎಲ್ಲ ದಿನವೂ ನಮ್ಮೆಲ್ಲರದ್ದೇ ಆದರೂ, ಈ ದಿನಕ್ಕೊಂದು ಹೊಸ ಹುರುಪನ್ನು ನೀಡುವ ಅಪೂರ್ವ ಶಕ್ತಿಯಿದೆ. ನಮ್ಮ ನೆಲದಲ್ಲಿ ಬೆಳೆವ ಸಿರಿಗಳು ನೀವು. ದೇಶದ ಸುಂದರವಾದ ಭವಿಷ್ಯ ನೀವು. ನಿಮ್ಮೆಲ್ಲರ ಬದುಕು ನಿತ್ಯ ಪ್ರಜ್ವಲಿಸುತ್ತಿರಲಿ. ಜಗಲಿ ಬಳಗದ ಎಲ್ಲರ ಪರವಾಗಿ, ತಮಗೆಲ್ಲರಿಗೂ ಮಕ್ಕಳ ದಿನಾಚರಣೆಯ ಅತ್ಯಂತ ಪ್ರೀತಿಯ ಶುಭಾಶಯಗಳು.
ಕಳೆದ ಬಾರಿಯ ಪತ್ರಕ್ಕೆ ಎಂದಿನಂತೆ ಪ್ರೀತಿಯಿಂದ ಸ್ಪಂದಿಸಿದ, ಜಗಲಿಯ ನಿರಂತರ ಒಡನಾಡಿಗಳಾಗಿರುವ, ಪ್ರತಿಸಲವೂ ಪ್ರತಿಕ್ರಿಯಿಸುವ ಶಿಶಿರ್, ಶ್ರಾವ್ಯ, ಸಾತ್ವಿಕ್ ಗಣೇಶ್, ಪೂಜಾ, ನಿಭಾ, ಸಿಂಚನಾ, ಲಹರಿ, ಪ್ರಣಮ್ಯ,
ಪುಟಾಣಿ ಗೆಳೆಯರಾದ ದನಿ ಮಣಿನಾಲ್ಕೂರು, ನಿನಾದ್ ಕೈರಂಗಳ... ಅಬ್ಬಬ್ಬಾ... ಎಷ್ಟೊಂದು ಸುಂದರ ನೆನಪುಗಳನ್ನು ಬಿಚ್ಚಿಟ್ಟಿದ್ದೀರಿ. ಖುಷಿಯಾಯ್ತು ಓದಿ..... ನಿಮ್ಮ ಗೆಳೆಯ ಗೆಳತಿಯರನ್ನೂ ನಮ್ಮ ಜಗಲಿಗೆ ಕರೆತನ್ನಿ. ಎಲ್ಲರೂ ಜೊತೆಗಿರುವ ಸಂತಸ.... ನಮ್ಮೆಲ್ಲರದಾಗಲಿ ಅಲ್ವಾ...?
ತುಂಬಾ ಹೊತ್ತು ಮಾತನಾಡಿದೆ ಅನ್ನಿಸ್ತಾ...?
ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************