ಈ ವರ್ಷ ದೀಪಾವಳಿಗೊಂದು ವಿಶೇಷ ಸೂರ್ಯಗ್ರಹಣ
Monday, October 24, 2022
Edit
ಲೇಖಕರು : ಅರವಿಂದ ಕುಡ್ಲ
ಮಕ್ಕಳೇ ನಮಸ್ತೇ.. ಎಲ್ಲರಿಗೂ ದೀಪಾವಳೀ ಹಬ್ಬದ ಶುಭಾಶಯಗಳು. ದೀಪಾವಳಿ ನಮಗೆಲ್ಲ ಸಂಭ್ರಮ ಸಡಗರದ ಹಬ್ಬ. ಮನೆ ಮುಂದೆ ರಂಗೋಲಿ ಹಾಕಿ ದೀಪ ಇಟ್ಟು, ಗೂಡುದೀಪ ಏರಿಸಿ, ಸಿಹಿ ತಿಂಡಿ ತಿಂದು, ಪಟಾಕಿ ಬಿಟ್ಟು ನಾವೆಲ್ಲ ಸಂತೋಷ ಪಡುತ್ತೇವೆ. ಅದರ ಜೊತೆಗೇ ಈ ವರ್ಷ ದೀಪಾವಳಿಗೆ ಒಂದು ವಿಶೇಷ ಖಗೋಲ ವಿದ್ಯಮಾನವೂ ನಡೆಯುತ್ತಿದೆ.
ನಿಮಗೆಲ್ಲ ತಿಳಿದ ಹಾಗೆ ಇಂದು ದೀಪಾವಳೀ ಅಮಾವಾಸ್ಯೆ. ಆಶ್ವಯುಜ ಮಾಸ ಕೃಷ್ಣಪಕ್ಷದ ಅಮಾವಾಸ್ಯೆ. ಈ ಬಾರಿ ಅಮಾವಾಸ್ಯೆಯ ದಿನ ಸೂರ್ಯಗ್ರಹಣ ನಡೀತಾ ಇದೆ. ಹಾಂ ಹಾಗಂತ ಭಯ ಪಡಬೇಕಾದ ಅವಶ್ಯಕತೆ ಏನಿಲ್ಲ. ಪ್ರತಿವರ್ಷ ಕನಿಷ್ಟ ಎರಡುಬಾರಿ ಸೂರ್ಯಗ್ರಹಣ ಅಥವಾ ಚಂದ್ರಗ್ರಹಣ ನಡೆಯುತ್ತದೆ. ಇದು ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆ. ಈ ವರ್ಷದ ಎರಡನೇ ಸೂರ್ಯಗ್ರಹಣ ಇಂದು ಸಾಯಂಕಾಲ ನಡೆಯಲಿಕ್ಕೆ ಇದೆ.
ಹಾಗಾದರೆ ಸೂರ್ಯಗ್ರಹಣ ಅಂದರೆ ಏನು. ಅದು ಯಾಕೆ ಉಂಟಾಗ್ತದೆ ಎಂಬ ಪ್ರಶ್ನೆ ಬರ್ತದೆ. ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳರೇಖೆಯ ಮೇಲೆ ಬಂದಾಗ ಸೂರ್ಯನಿಂದ ಬರುವ ಬೆಳಕಿಗೆ ಚಂದ್ರ ಅಡ್ಡ ವಾಗುತ್ತಾನೆ, ಸದಾ ಉರಿಯುವ ಬೆಳಕಿನ ಸೂರ್ಯನ ಒಂದು ಭಾಗ ಕತ್ತಲು ಆವರಿಸಿದಂತೆ ಕಾಣುತ್ತದೆ. ಹೀಗೆ ಸೂರ್ಯನಿಗೆ ಚಂದ್ರ ಅಡ್ಡ ಬರುವ ಪ್ರಕ್ರಿಯೆಯನ್ನೇ ಸೂರ್ಯಗ್ರಹಣ ಎಂದು ಕರೆಯುತ್ತಾರೆ. ಇದನ್ನೇ ಇಂಗ್ಲೀಷ್ ನಲ್ಲಿ SOLAR ECLIPSE ಎಂದು ಕರೆಯುತ್ತಾರೆ.
ಭೂಮಿ ಸೂರ್ಯನನ್ನು ಸುತ್ತುವ ದಾರಿ ಮತ್ತು ಚಂದ್ರ ಭೂಮಿಯನ್ನು ಸುತ್ತುವ ದಾರಿ ಒಂದೇ ಸಮತಲದಲ್ಲಿ ಇಲ್ಲ. ಅವುಗಳ ನಡುವೆ ಸ್ವಲ್ಪ ವ್ಯತ್ಯಾಸ ಇರುವುದರಿಂದ ಪ್ರತೀ ಅಮಾವಾಸ್ಯೆಯಂದು ಸೂರ್ಯಗ್ರಹಣ ಆಗುವುದಿಲ್ಲ. ಒಂದು ವರ್ಷದಲ್ಲಿ ಕಡಿಮೆ ಅಂದರೆ ಎರಡು ಬಾರಿ ಗ್ರಹಣ ಸಂಭವಿಸುತ್ತದೆ. ಅದು ಸೂರ್ಯಗ್ರಹಣವೂ ಆಗಿರಬಹುದು ಚಂದ್ರ ಗ್ರಹಣವೂ ಆಗಿರಬಹುದು. ಗ್ರಹಣ ಸಂಭವಿಸುವ ಆ ಎರಡು ಬಿಂದುಗಳನ್ನೇ ನಮ್ಮವರು ರಾಹು ಮತ್ತು ಕೇತು ಎಂದು ಕರೆದಿದ್ದಾರೆ.
1. ಖಗ್ರಾಸ ಸೂರ್ಯಗ್ರಹಣ
2. ಕಂಕಣ ಸೂರ್ಯಗ್ರಹಣ
3. ಪಾರ್ಶ್ವಸೂರ್ಯಗ್ರಹಣ
ಇಂದು ನಡೆಯಲಿರುವುದು ಪಾರ್ಶ್ವ ಸೂರ್ಯಗ್ರಹಣ. ಇಂದಿನ ಸೂರ್ಯ ಗ್ರಹಣದಲ್ಲಿ ಸೂರ್ಯನ ಒಂದು ಭಾಗವನ್ನು ಮಾತ್ರ ಚಂದ್ರ ಮರೆಮಾಚುತ್ತಾನೆ.
ಇವತ್ತಿನ (25-10-2022) ಸೂರ್ಯಗ್ರಹಣ ಬಹಳ ವಿಶಿಷ್ಟವಾದದ್ದು. ಸುಮಾರು ಸಾಯಂಕಾಲ 5 ಗಂಟೆಯಿಂದ ಇಂದಿನ ಸೂರ್ಯಗ್ರಹಣ ಆರಂಭವಾಗುತ್ತದೆ. ಸುಮಾರು 5.50 ರ ಹೊತ್ತಿಗೆ ಗರಿಷ್ಟ ಮಟ್ಟವನ್ನು ತಲುಪುತ್ತದೆ. ಇನ್ನೂ ಸೂರ್ಯನನ್ನು ಚಂದ್ರ ಸ್ವಲ್ಪಭಾಗ ಆವರಿಸಿಕೊಂಡಿರುವಾಗಲೇ ಸೂರ್ಯ ಪಶ್ಚಿಮ ದಿಗಂತದಲ್ಲಿ ಮುಳುಗುತ್ತಾನೆ. ಈ ರೀತಿ ಗ್ರಹಣ ನಡೆಯುತ್ತಿರುವಾಗಲೇ ಸೂರ್ಯ ಅಸ್ತಮಿಸುವ ದೃಶ್ಯ ಅತ್ಯಂತ ವಿರಳ ಮತ್ತು ಅಪರೂಪ. ಆದ್ದರಿಂದಲೇ ಇವತ್ತಿನ ಗ್ರಹಣ ಖಗೋಲಾಸಕ್ತರ ಪಾಲಿಗೆ ವಿಶೇಷ ಮಹತ್ವ ಪಡೆದುಕೊಂಡಿದೆ.
ಇಷ್ಟೆಲ್ಲಾ ಓದಿದ ಮೇಲೆ ಇವತ್ತಿನ ಸೂರ್ಯ ಗ್ರಹಣವನ್ನು ನೀವು ನೋಡಬೇಕು ಎಂಬ ಕುತೂಹಲ ನಿಮ್ಮಲ್ಲಿ ಉಂಟಾಗಿದ್ದರೆ ಬಹಳ ಸಂತೋಷ. ಆದರೆ ಒಂದು ಎಚ್ಚರಿಕೆ. ಬರಿಗಣ್ಣಿನಿಂದ, ಬೈನಾಕುಲರ್ (ದುರ್ಬೀನು) ಮೂಲಕ ಅಥವಾ ಟೆಲಿಸ್ಕೋಪ್ ಮೂಲಕ ನೇರವಾಗಿ ಸೂರ್ಯನನ್ನು ನೋಡಬೇಡಿ.
ಸೂರ್ಯನನ್ನು ನೋಡಬೇಕಾದರೆ ಉತ್ತಮ ಗುಣಮಟ್ಟದ ಸೌರ ಕನ್ನಡಕ (ಸೋಲಾರ್ ಫಿಲ್ಟರ್) ಬಳಸಿ. ಅಥವಾ ಸೂಜಿ ರಂಧ್ರ ಬಿಂಬಗ್ರಾಹಕ ಬಳಸಿ ಗ್ರಹಣ ನೋಡಬಹುದು.
ಇದ್ಯಾವುದೂ ಇಲ್ಲವೆಂದಾದರೆ ಇನ್ನೊಂದು ಸರಳ ಉಪಾಯ ಇದೆ. ನಿಮ್ಮ ಮನೆಯಲ್ಲಿ ಮುಖ ನೋಡುವ ಕನ್ನಡಿ ಇದ್ದರೆ ಅದನ್ನು ಬಳಸಿ ಸೂರ್ಯನ ಪ್ರತಿಬಿಂಬವನ್ನು ನಿಮ್ಮ ಮನೆಯ ಗೋಡೆಯಮೇಲೆ ಬೀಳುವಂತೆ ಮಾಡಿ ಅಲ್ಲಿ ಸೂರ್ಯನ ಪ್ರತಿಬಿಂಬ ನೋಡಿ ಗ್ರಹಣವನ್ನು ಆನಂದಿಸಿ. ಸಮುದ್ರತೀರಕ್ಕೆ ಹೋಗುವುದು ಸಾದ್ಯವಾಗುವುದಾದರೆ ಮಂಗಳೂರು, ಉಡುಪಿ ಮೊದಲಾದ ಹಲವು ಕಡೆ ಖಗೋಲವೀಕ್ಷಕರು ಸಾರ್ವಜನಿಕರಿಗೆ ಗ್ರಹಣವನ್ನು ನೋಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅವರ ಜೊತೆ ನೀವೂ ಗ್ರಹಣ ನೋಡಿ ಗ್ರಹಣದ ಬಗ್ಗೆ ಹೆಚ್ಚಿನ ವಿಚಾರ ತಿಳಿದುಕೊಂಡು ಸಂತೋಷ ಪಡಬಹುದು. ಎಲ್ಲರಿಗೂ ಮತ್ತೊಮ್ಮೆ ದೀಪಾವಳಿ ಮತ್ತು ಪಾರ್ಶ್ವ ಸೂರ್ಯಗ್ರಹಣದ ಶುಭಾಶಯಗಳು..
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************