-->
ಹಕ್ಕಿ ಕಥೆ : ಸಂಚಿಕೆ - 70

ಹಕ್ಕಿ ಕಥೆ : ಸಂಚಿಕೆ - 70

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
               
                ಮಕ್ಕಳೇ ನಮಸ್ತೇ. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ಇದು ಹಕ್ಕಿಕಥೆಯ ಎಪ್ಪತ್ತನೆಯ ಸಂಚಿಕೆ, ಜೊತೆಗೆ ದೀಪಾವಳಿ ಹಬ್ಬ ಬೇರೆ. ಇದೇ ಸಂದರ್ಭದಲ್ಲಿ ಒಂದು ವಿಶಿಷ್ಟ ಹಕ್ಕಿಯನ್ನು ನಿಮಗೆ ಪರಿಚಯಿಸೋಣ ಎಂದುಕೊಂಡಿದ್ದೇನೆ. 
          ಈ ಬಾರಿ ದಸರಾ ಹಬ್ಬ ಮುಗಿದು ರಜೆಯಲ್ಲಿದ್ದಾಗ ಹಿಮಾಲಯ ಚಾರಣಕ್ಕೆ ಹೋಗಬೇಕು ಎಂಬ ನಿರ್ಧಾರ ಆಗಿತ್ತು. ಹಿಮಾಲಯಕ್ಕೆ ಹಲವು ಬಾರಿ ಚಾರಣ ಹೋದ ಗೆಳೆಯ ರಾಜೇಶ ಕೃಷ್ಣಪ್ರಸಾದರು ಮತ್ತು ಅವರ ಓಂ ಚಾರಣ ತಂಡದ ಮಿತ್ರರೊಡನೆ ಪಂಚಕೇದಾರ ಚಾರಣಕ್ಕೆ ಹೊರಟಿದ್ದೆ. ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ, ಮಧ್ಯಮಹೇಶ್ವರ, ತುಂಗಾನಾಥಗಳು ನಮ್ಮ ಚಾರಣದ ಗುರಿಗಳು. ಹಿಮಾಲಯ ಚಾರಣ ಮೊದಲ ಬಾರಿಗೆ ಮಾಡುತ್ತಿರುವ ನಾನು ಯಾವುದನ್ನೂ ಮಿಸ್ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ನನ್ನ ಕ್ಯಾಮರಾ, ಬೈನಾಕುಲರ್ ಗಳನ್ನೂ ಹೊತ್ತುಕೊಂಡೇ ಹೋಗಿದ್ದೆ. ಕೇದಾರನಾಥ ಹತ್ತಿ ಇಳಿದ ಅನುಭವ ಒಂದು ರೀತಿಯಾದರೆ ಮಧ್ಯಮಹೇಶ್ವರ ಇನ್ನೊಂದೇ ರೀತಿ. ಎರಡೂ ಕಡೆ ಕಾಣಿಸಿದ ದಟ್ಟಕಾಡು, ಆಳವಾದ ಕಣಿವೆಗಳು, ನೀರು ತುಂಬಿ ಹರಿಯುವ ನದಿ ಮತ್ತು ಜಲಪಾತಗಳ ಚಿತ್ರ ನೆನಪಿನಲ್ಲಿ ಆಳವಾಗಿ ಅಚ್ಚೊತ್ತಿದೆ. ನಮ್ಮ ಮೂರನೆಯ ಚಾರಣ ಜಗತ್ತಿನ ಅತೀ ಎತ್ತರದ ಶಿವದೇವಾಲಯ ಇರುವ ತುಂಗಾನಾಥ ಮತ್ತು ಚಂದ್ರಶಿಲಾ ಎಂಬ ಪರ್ವತಕ್ಕೆ. ಅದಾಗಲೇ ನನ್ನ ವನ್ಯಜೀವಿಗಳ ಕುರಿತಾದ ಆಸಕ್ತಿಯ ಪರಿಚಯವಾಗಿದ್ದ ನಮ್ಮ ತಂಡದ ಸದಸ್ಯರು ಪ್ರಾಣಿ ಪಕ್ಷಿಗಳನ್ನು ಕಂಡರೆ ಮೇಷ್ಟ್ರೇ ಇಲ್ಲೊಂದು ಹಕ್ಕಿ ಉಂಟು ನೋಡಿ ಎಂದು ಕೂಗಿ ಕರೆಯುತ್ತಿದ್ದರು. ಬೆಳಗ್ಗಿನ ಆರು ಗಂಟೆಗೆ ನಡುಗುವ ಚಳಿಯಲ್ಲಿ ಕೋಟು, ಬೂಟು ಎಲ್ಲ ಹಾಕಿಕೊಂಡು ನಮ್ಮ ವಸ್ತುಗಳನ್ನು ಬೆನ್ನಮೇಲೆ ಹೇರಿಕೊಂಡು ಚಾರಣ ಪ್ರಾರಂಭಿಸಿದೆವು. 
ಬೆಟ್ಟ ಹತ್ತುತ್ತಾ ಕಾಡು ಪ್ರದೇಶವೆಲ್ಲ ಕಳೆದು ಹುಲ್ಲುಗಾವಲು ಪ್ರಾರಂಭವಾಯಿತು. ಹಿಮಾಲಯದಲ್ಲಿ ಕಾಗೆಗಳಿಗೇನೂ ಬರವಿಲ್ಲ, ಅವು ನಮ್ಮೂರಿನ ಕಾಗೆಗಳಿಗಿಂತ ತುಸು ದಪ್ಪ ಮತ್ತು ದೊಡ್ಡ ಕೊಕ್ಕು ಹೊಂದಿದ್ದವು. ಕಾಗೆಯ ಪೋಟೋ ತೆಗೆಯುತ್ತಿದ್ದ ನನ್ನನ್ನು ಗೆಳೆಯ ಗ್ಲಾಡ್ ಸನ್ ಕೂಗಿ ಕರೆದರು. ಇಲ್ಲೊಂದು ಹಕ್ಕಿ ನೋಡಿ ಬಾರಿ ಚಂದ ಉಂಟು ಎಂದು ಕರೆದರು. ಬೇಗ ಅವರು ಕರೆದ ಜಾಗಕ್ಕೆ ಹೋದೆ. ಚಾರಣದ ದಾರಿಯ ಅಂಚಿನಲ್ಲಿ ಪೂರ್ತಿ ಹುಲ್ಲುಗಾವಲಿನ ಇಳಿಜಾರು ಬೆಟ್ಟ. ಸುಮಾರು ನಮ್ಮೂರಿನ ಗಿರಿರಾಜ ಕೋಳಿಯ ಗಾತ್ರದ ಹಕ್ಕಿ. ಹುಲ್ಲುಗಾವಲಿನ ಸಸ್ಯಗಳನ್ನು, ಅವುಗಳ ಮಧ್ಯೆಯ ಕೀಟಗಳನ್ನು ತನ್ನ ಕೊಕ್ಕಿನಿಂದ ಕುಕ್ಕಿ ಅಗೆದು ಹುಡುಕಿ ತಿನ್ನುತ್ತಿತ್ತು. ಮೊದಲು ಬೈನಾಕುಲರ್ ಹಿಡಿದು ನೋಡಿದವನಿಗೆ ಆಶ್ಚರ್ಯವೂ ಸಂತೋಷವೂ ಒಟ್ಟಿಗೇ ಉಕ್ಕಿಬಂತು.
        ಹಿಮಾಲಯದಲ್ಲಿ ಕಂಡುಬರುವ ಕೋಳಿಗಳಿಗೆ ಫೆಸೆಂಟ್ ಎಂದು ಕರೆಯುತ್ತಾರೆ. ಫೆಸೆಂಟ್ ಜಾತಿಗೆ ಸೇರಿದ ಈ ಹಕ್ಕಿ ಗಾತ್ರದಲ್ಲಿ ಕೋಳಿಯಾದರೂ ಬಣ್ಣದಲ್ಲಿ ನವಿಲನ್ನೂ ಮೀರಿಸುವ ಹಕ್ಕಿ. ಇದರ ಬಣ್ಣಗಳನ್ನು ಒಂದೊಂದಾಗಿ ವರ್ಣಿಸುವುದಕ್ಕಿಂತ ಕಣ್ಣಲ್ಲಿ ನೋಡಿ ಆನಂದಿಸುವುದೇ ಹೆಚ್ಚು ಸುಖ. ಹಿಮಾಲಯದ ಕಾಡುಗಳಲ್ಲಿ 6900-14800 ಅಡಿಗಳಷ್ಟು ಎತ್ತರದಲ್ಲಿ ಮಾತ್ರ ಕಾಣಸಿಗುವ ಈ ಹಕ್ಕಿ ನೇಪಾಳದ ರಾ಼ಷ್ಟ್ರ ಪಕ್ಷಿಯೂ ಹೌದು, ಉತ್ತರಾಖಂಡ ರಾಜ್ಯದ ರಾಜ್ಯ ಪಕ್ಷಿಯೂ ಹೌದು. ನೇಪಾಳದಲ್ಲಿ ಇದನ್ನು ದನ್ ಫೆ ಎಂದು ಕರೆದರೆ ಉತ್ತರಾಖಂಡದಲ್ಲಿ ಇದನ್ನು ಮೋನಲ್ ಎಂದು ಕರೆಯುತ್ತಾರೆ. ಚಳಿಗಾಲದಲ್ಲಿ ಹಿಮ ಬಿದ್ದಾಗಲೂ ಗುಡ್ಡದ ಇಳಿಜಾರಿನಲ್ಲಿ ಹುಲ್ಲುಗಾವಲಿನಲ್ಲಿ ತನ್ನ ಆಹಾರ ಹುಡುಕಿ ಬದುಕುವ ಸಾಮರ್ಥ್ಯ ಈ ಹಕ್ಕಿಗೆ ಇದೆ.
        ಅತಿಯಾದ ಬೇಟೆಯ ಕಾರಣದಿಂದ ಇದು ಅಳಿವಿನ ಅಂಚಿನಲ್ಲಿರುವ ಹಕ್ಕಿಯೂ ಹೌದು. ನಮ್ಮ ಚಾರಣ ಮಿತ್ರರೆಲ್ಲಾ ಬೈನಾಕುಲರ್ ಮೂಲಕ ಆ ಹಕ್ಕಿಯನ್ನು ನೋಡಿ ಸಂತೋಷ ಪಟ್ಟು ಈಗಲೂ ಅದರ ಚಂದವನ್ನು ನೆನಪಿಸಿಕೊಳ್ಳುತ್ತಾರೆ. 
ಹಿಂದಿ ಹೆಸರು: ಹಿಮಾಲಯನ್ ಮೋನಲ್
ಇಂಗ್ಲೀಷ್ ಹೆಸರು: Impeyan Pheasant, Impeyan monal
ವೈಜ್ಞಾನಿಕ ಹೆಸರು: Lophophorus impejanus
ಚಿತ್ರ ಕೃಪೆ: ಅಂತರ್ಜಾಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article