-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                                
             ಮಕ್ಕಳೇ.... ಸಿಹಿಗೆ ಮಾರು ಹೋಗುವ ನಾವು ಕಹಿಯೆಂದೊಡನೆ ಮಾರು ದೂರ ಸಾಗುವೆವು. ಆದರೆ ಕಹಿಯಿರದೆ ಸಿಹಿಯ ಅನುಭವ ಸಾಧ್ಯವಿಲ್ಲ. ಹಗಲು ಮತ್ತು ರಾತ್ರಿಗಳು ಈ ಪ್ರಪಂಚದಲ್ಲಿ ಎಷ್ಟು ಅನಿವಾರ್ಯವೋ ; ಕಹಿ ಮತ್ತು ಸಿಹಿಗಳೂ ದೇಹಕ್ಕೆ ಮತ್ತು ಮನಸ್ಸಿಗೆ ಅಷ್ಟೇ ಅಗತ್ಯ ಎಂಬುದನ್ನು ಮರೆಯಲಾಗದು. ಕಹಿಯನ್ನು ಕಟು ಎಂದೂ ಕರೆಯುತ್ತಾರೆ. ಸಿಹಿ ಮತ್ತು ಕಹಿಗಳನ್ನು ತಿಂಡಿಗೆ ಮಾತ್ರ ಮೀಸಲಾಗಿ ಬಳಸುವುದಿಲ್ಲ. ಕಾಯಿಲೆಗೂ ಸಿಹಿ ಕಾಯಿಲೆ ಅಥವಾ ಸಕ್ರೆ ಕಾಯಿಲೆ ಎಂಬ ಹೆಸರಿದೆ. ಎಲ್ಲ ಕಾಯಿಲೆಗಳು ಮನ ಮತ್ತು ದೇಹಕ್ಕೆ ಕಹಿ. ನಾಲಗೆಯಲ್ಲಿರುವ ಬೇರೆ ಬೇರೆ ಗ್ರಂಥಿಗಳು ರುಚಿಯನ್ನು ತಿಳಿಸುತ್ತವೆ. ಆಯಾ ರುಚಿಗ್ರಂಥಿಗಳಿಲ್ಲದವರಿಗೆ ಆ ರುಚಿ ವೇದ್ಯವಾಗುವುದಿಲ್ಲ. ಕಹಿ ರುಚಿಯ ಗ್ರಂಥಿಗಳು ಇಲ್ಲದಿದ್ದರೆ ಎಷ್ಟು ಚೆನ್ನ! ಎಂದು ಮಕ್ಕಳು ಊಹಿಸಬಹುದು. ಆಯಾಯ ರುಚಿ ಗ್ರಂಥಿಯಿಲ್ಲದಿರುವವರೂ ಆ ರುಚಿಯನ್ನು ಅತಿಯಾಗಿ ಸೇವಿಸುವಂತಿಲ್ಲ ಯಾಕೆಂದರೆ ಹೊಟ್ಟೆ ತಡೆದುಕೊಳ್ಳಬೇಕಲ್ಲ? 
       ವೈದ್ಯರು ಕಾಯಿಲೆಗಳ ಶಮನಕ್ಕೆ ನೀಡುವ ಔಷಧಗಳ ರುಚಿ ಸ್ವಲ್ಪ ಕಹಿಯೇ ಇರುತ್ತದೆ. ಕಾಯಿಲೆ ಗುಣವಾಗಬೇಕಲ್ಲ ಎಂದು ಕಣ್ಣು ಮುಚ್ಚಿ ಒಂದೇ ಗುಟುಕಿನಲ್ಲಿ ನುಂಗಿಬಿಡುತ್ತೇವೆ. ಮಕ್ಕಳ ಔಷಧಗಳಿಗೆ ಸಿಹಿ ಲೇಪನ ಅಥವಾ ಮಿಶ್ರಣ ಮಾಡುತ್ತಾರೆ. ಅವರು ಒಂದೇ ಗುಟುಕಿನಲ್ಲಿ ಕುಡಿಯುವುದಿಲ್ಲವೆಂದು ಈ ಉಪಾಯ ಮಾಡಿರುತ್ತಾರೆ. ಲೇಪನವಿಲ್ಲದ ಸಂದರ್ಭದಲ್ಲಿ ಜೇನಿನೊಂದಿಗೆ ಅಥವಾ ಬೆಲ್ಲದ ರವೆಯೊಂದಿಗೆ ಸೇರಿಸಿ ಮಕ್ಕಳಿಗೆ ಕುಡಿಸುವುದೂ ಇದೆ. ಹಾಗೆಂದು ಔಷಧಗಳಲ್ಲಿ ಸಿಹಿ ರುಚಿಯವುಗಳು ಇಲ್ಲವೆಂದೇ ಹೇಳುವಂತಿಲ್ಲ. ಆದರೆ ಸಕ್ಕರೆ ಕಾಯಿಲೆಯುಳ್ಳವರಿಗೆ ಶುಗರ್ ಲೆಸ್ ಎಂದು ನೀಡುತ್ತಾರೆ, ಇದರಲ್ಲಿ ಸಕ್ಕರೆಯ ಅಂಶವಿದೆ ಆದರೆ ಕಡಿಮೆ. ನಾವು ಶುಗರ್ ಲೆಸ್ ಚಹ ಕುಡಿಯುತ್ತೇವೆ ಎಂದರೆ ಅದು ಕಹಿಯಾದುದೆಂದರ್ಥವಲ್ಲ. ಸಕ್ರೆ ಕಡಿಮೆಯೆಂದು ತಿಳಿಯಬೇಕು. ಯಾಕೆಂದರೆ ನೇರವಾಗಿ ಸಕ್ಕರೆ ಹಾಕದೆ ಇದ್ದರೂ ಅದಕ್ಕೆ ಹಾಕಿದ ಸಿಹಿ ನೀರು ಮತ್ತು ಹಾಲು ಅದರ ರುಚಿಯನ್ನು ನೀಡಿಯೇ ನೀಡುತ್ತದೆ. 
      ಸಿಹಿ ಕಹಿಗಳನ್ನು ಕೇವಲ ಹೊಟ್ಟೆಗೆ ಸೇವಿಸುವ ವಸ್ತುಗಳಿಗೆ ಅನ್ವಯಿಸಿದರೆ ತಪ್ಪಾದೀತು. ನಾಲಗೆಯು ಕೆಲವೊಮ್ಮೆ ಹೊರಡಿಸುವ ಮಾತುಗಳಲ್ಲೂ ರುಚಿಗಳರುತ್ತವೆ. ಕಟು ಪದ, ಕಟು ಮಾತು, ಖಾರದ ನುಡಿ, ಸಿಹಿಯಾದ ಮಾತು ಹೀಗೆಲ್ಲ ಮಾತಿನ ಬಗ್ಗೆ ಹೇಳುವುದನ್ನೂ ಕೇಳಿದ್ದೇವೆ. ಬಾಯಿಯಿಂದ ಮಾತು ಬೀಳುವುದು ಎಂದು ಹೇಳುತ್ತೇವೆ. ಬಿದ್ದಾಗ ಶಬ್ದ ಆಗಲೇ ಬೇಕು. ಕೆಲವು ಮಾತುಗಳು ಭಯಂಕರ ಅಪಘಾತಗಳನ್ನುಂಟು ಮಾಡುತ್ತವೆ. ಅಂದರೆ ಬಾಯಯಿಂದ ಬಿದ್ದ ಮಾತಿನ ರುಚಿ ಮತ್ತು ರಭಸ ಅಸಹನೀಯವಾದಾಗ ಅಪಘಾತವಾಗುವುದು ಸಹಜ. ಸಾಮಾನ್ಯವಾಗಿ ಕಹಿ ಮಾತು ಅಪಘಾತಗಳನ್ನುಂಟು ಮಾಡಿಯೇ ಮಾಡುತ್ತದೆ. ಅದಕ್ಕಾಗಿ ಮಾತು ಸಿಹಿಯಾಗಿರಲೇ ಬೇಕು. ಸಿಹಿ ಮಾತು ಎಲ್ಲರಿಗೂ ಪಥ್ಯವಾಗುತ್ತದೆ. ನಾಲಿಗೆ ತಿಂಡಿಯ ಬಗ್ಗೆ ಸಿಹಿಯನ್ನು ಹೆಚ್ಚು ಇಷ್ಟಪಡುತ್ತದೆ. ಅದೇ ನಾಲಿಗೆ ಮಾತಿಗೆ ತೊಡಗುವಾಗ ಏಕೆ ಸಿಹಿಯನ್ನು ಬಚ್ಚಿಡುತ್ತದೆ ಎಂಬುದೇ ಯಕ್ಷಪ್ರಶ್ನೆ. ಮಾತು ಮನಸ್ಸಿನ ಪ್ರತಿಬಿಂಬ. ಆದುದರಿಂದ ಮನಸ್ಸು ಕಹಿಯಾಗಿದ್ದರೆ ಸಿಹಿ ಮಾತು ಬರುವುದಾದರೂ ಹೇಗೆ..?  
       ಮನುಷ್ಯನ ದೋಷಗಳನ್ನು ತಿದ್ದುವಾಗ ಕೆಲವೊಮ್ಮೆ ಕಹಿಯಾದ ಮಾತೂ ಬೇಕಾಗುತ್ತದೆ. ಆದರೆ ಆ ಕಹಿ ಮಾತು ಸಂಬಂಧ ಎಂಬ ಆರೋಗ್ಯವನ್ನು ಘಾತಿಗೊಳಿಸುವಂತಿರಬಾರದು. ಕಹಿಯಾದ ಔಷಧಕ್ಕೆ ಸಿಹಿ ಲೇಪನ ಕೊಡುವಂತೆ ಕಹಿಯಾದರೂ ಹೇಳುವ ವಿಧಾನವನ್ನು ಪಾಲಿಸಿ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಾಗಬೇಕು. ಕಹಿ ಮಾತುಗಳ ಮೂಲಕ ಎಲ್ಲನ್ನೂ ಸರಿಪಡಿಸುವೆ ಎಂಬ ಮನೋಭೂಮಿಕೆ ಮೂರ್ಖತನದ ದರ್ಪಣ.  
      ನಮ್ಮ ನಾಲಿಗೆಯಿಂದ ಸಿಹಿ ಕಹಿಗಳು ಸಮಾನವಾಗಿ ಆದಾನ ಪ್ರದಾನವಾಗುವುದಿಲ್ಲ. ಅದೇ ರೀತಿ ಮುಖವೂ ವರ್ತನೆಗೆ ಸಂಬಂಧಿಸಿದಂತೆ ಮಧುರ ಮತ್ತು ಕಟುತ್ವಗಳ ಪ್ರತಿಬಿಂಬವಾಗಿರುತ್ತದೆ. ಕಣ್ಣು, ಮೂಗು, ಹುಬ್ಬು ಎಲ್ಲವೂ ಸಂದರ್ಭಾನುಸಾರ ಕಹಿ ಮತ್ತು ಸಿಹಿಗಳ ಪ್ರದರ್ಶಕಗಳು. ನಾವು ಎಲ್ಲರ ಆರೋಗ್ಯಕ್ಕೆ ತಾರಕವಾಗಿ ಸಿಹಿಮೊಗ ತೋರುವ, ಸಿಹಿನುಡಿಯುವ ಸಿಹಿ ಹೃದಯವಂತರಾಗೋಣ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************


Ads on article

Advertise in articles 1

advertising articles 2

Advertise under the article