-->
ಜೀವನ ಸಂಭ್ರಮ : ಸಂಚಿಕೆ - 56

ಜೀವನ ಸಂಭ್ರಮ : ಸಂಚಿಕೆ - 56

ಜೀವನ ಸಂಭ್ರಮ : ಸಂಚಿಕೆ - 56
                                  
             ಮಕ್ಕಳೇ....  ನಾವು ಮನಸ್ಸಿನ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳೋಣ. ಈ ಕಥೆಯನ್ನು ಓದಿ. ಇದು ನನಗೆ ಬಹಳ ಇಷ್ಟವಾದ ಕಥೆ.
        ಭೂಮಂಡಲದಲ್ಲಿ ದೇವರು ಮನುಷ್ಯನನ್ನು ಸೃಷ್ಟಿಸಿದ. ಮನುಷ್ಯನನ್ನು ಸೃಷ್ಟಿಸಿದ ಮೇಲೆ ಎಲ್ಲಾ ದೇವರು ಒಂದು ಕಡೆ ಸೇರಿ ಸಭೆ ನಡೆಸಿದರು. ಪ್ರಾಣಿಗಳಲ್ಲಿ ಹೆಚ್ಚು ಬುದ್ಧಿವಂತನಾದ ಮನುಷ್ಯನನ್ನು ಸೃಷ್ಟಿಸಿದ್ದೇವೆ. ಈಗ ಮನುಷ್ಯನಿಗೆ ಆನಂದ ಕೊಡುವ ವಸ್ತುವನ್ನು ಎಲ್ಲಿಡಬೇಕು ಎಂಬುದನ್ನು ತೀರ್ಮಾನಿಸಲು ಸಭೆ ಸೇರಿದ್ದರು. ಒಂದು ದೇವರು, "ಬೆಟ್ಟದ ಮೇಲೆ ಇಡೋಣ" ಎಂದರು. ಅದಕ್ಕೆ ಉಳಿದವರು, "ಮನುಷ್ಯ ಬುದ್ಧಿವಂತ, ಬೆಟ್ಟಕ್ಕೆ ಮೆಟ್ಟಿಲು ಮಾಡಿಕೊಂಡು, ದಾರಿ ಮಾಡಿಕೊಂಡು ಹೋಗುತ್ತಾನೆ, ಹಾಗಾಗಿ ಬೇಡ" ಎಂದರು. ಮತ್ತೊಂದು ದೇವತೆ,  "ನೀರಿನಲ್ಲಿ ಅಂದರೆ ಸಾಗರದಲ್ಲಿ ಇಡೋಣ" ಎಂದಾಗ, ಬೇರೆಯವರು ಒಪ್ಪಲಿಲ್ಲ. "ಮನುಷ್ಯ ತನ್ನ ಬುದ್ಧಿ ಬಳಸಿ ನೀರಿನಲ್ಲಿ ಮುಳುಗುವ ಉಪಕರಣ ಕಂಡು ಹಿಡಿದು ಅದನ್ನು ಹುಡುಕುತ್ತಾನೆ, ಹಾಗಾಗಿ ಬೇಡ" ಎಂದರು. ಮತ್ತೊಂದು ದೇವತೆ "ಆಕಾಶದಲ್ಲಿ ಇಡೋಣ ಎಂದರು. ಅದಕ್ಕೆ ಉಳಿದ ದೇವರುಗಳು, "ಬೇಡ, ಮನುಷ್ಯ ವಿಮಾನದಂತಹ ಯಂತ್ರ ಕಂಡು ಹಿಡಿದು ಅಲ್ಲಿ ಹುಡುಕುತ್ತಾನೆ." ಎಂದರು. ಹೀಗೆ ಬಹಳಷ್ಟು ಚರ್ಚೆ ನಡೆಯಿತು. ಎಲ್ಲಿಟ್ಟರೂ ಮನುಷ್ಯ ಹುಡುಕುತ್ತಾನೆ. ಏನು ಮಾಡುವುದು ಎಂದು ಹೀಗೆ ಬಹಳಷ್ಟು ಚರ್ಚೆ ನಡೆಯಿತು. ಚರ್ಚಿಸಿ ಚರ್ಚಿಸಿ ಏನೂ ತಿಳಿಯದೆ ಕಂಗಾಲಾದರು. ಆಗ ಒಂದು ದೇವತೆ, "ಸಂತೋಷ ಕೊಡುವ ವಸ್ತು ಎಲ್ಲಿಟ್ಟರೂ ಹುಡುಕೇ ಹುಡುಕುತ್ತಾನೆ. ಹಾಗಾಗಿ ಆತನೊಳಗೆ ಇಟ್ಟರೆ ಆತ ಹೊರಗಡೆ ಹುಡುಕುತ್ತಾ ಇರುತ್ತಾನೆ ಆತನಿಗೆ ತಿಳಿಯುವುದಿಲ್ಲ" ಎಂದಾಗ, ಅದರಂತೆ ಎಲ್ಲರೂ ತೀರ್ಮಾನಿಸಿ ಸಂತೋಷಪಡುವ ವಸ್ತುವನ್ನು ಆತನ ದೇಹದಲ್ಲೇ ಅಳವಡಿಸಿದರು. 
       ನಾವು ಇಂದು ಕೂಡ ಸಂತೋಷವನ್ನು ಹೊರಗಡೆ ಹುಡುಕುತ್ತಿದ್ದೇವೆ. ವಸ್ತುಗಳಲ್ಲಿ, ಒಡವೆಗಳಲ್ಲಿ ಮತ್ತು ರತ್ನಗಳಲ್ಲಿ, ಭೂಮಿಯಲ್ಲಿ ಮತ್ತು ಹಣದಲ್ಲಿ ಸಂತೋಷವನ್ನು ಹುಡುಕುತ್ತಿದ್ದೇವೆ. ಆದರೆ ಆತನಿಗೆ ಸಂತೋಷ ಸಿಕ್ಕಿಲ್ಲ. ಇನ್ನೂ ಹೊರಗಡೆ ಹುಡುಕುತ್ತಿದ್ದೇವೆ ಅದಕ್ಕೆ ಸಂತೋಷ ಸಿಕ್ಕಿಲ್ಲ. ಹಾಗಾದರೆ ಸಂತೋಷ ಪಡುವ ವಸ್ತು ನಮ್ಮ ದೇಹದಲ್ಲಿ ಇಟ್ಟಿದ್ದು ಯಾವುದೆಂದರೆ ಮನಸ್ಸು. ಮನುಷ್ಯ ಎನ್ನುವ ಹೆಸರು ಬಂದದ್ದೇ ಮನಸ್ಸು ಇರುವುದರಿಂದ. ಮನಸ್ಸು ಇಲ್ಲದ ಮನುಷ್ಯರಿಲ್ಲ. ಕೈ ಇಲ್ಲದಿರಬಹುದು. ಕಣ್ಣು ಇಲ್ಲದಿರಬಹುದು. ಕಿವಿ ಇಲ್ಲದಿರಬಹುದು ಆದರೆ ಮನಸ್ಸು ಇಲ್ಲದವರಿಲ್ಲ. ಅದು ಎಲ್ಲಿದೆ ಎಂದು ಇಂದಿಗೂ ಗೊತ್ತಿಲ್ಲ. ಕೆಲವು ವಿಜ್ಞಾನಿಗಳು ಹೃದಯದಲ್ಲಿದೆ ಎಂದರು ಹಿಂದೆ. ಈಗ ಮೆದುಳಿನಲ್ಲಿದೆ ಎಂದು ಹೇಳುತ್ತಾರೆ. ಅದನ್ನು ಇನ್ನೂ ಖಚಿತವಾಗಿಲ್ಲ. ಆದರೆ ಅದು ಇಡೀ ದೇಹವನ್ನೇ ಆವರಿಸಿದೆ. ಈ ಮನಸ್ಸಿಗೆ ಎಂತಹ ಅದ್ಭುತ ಶಕ್ತಿ ಇದೆ ಎಂದರೆ ಆಕಾಶದ ಎತ್ತರಕ್ಕೆ ಏರುತ್ತದೆ. ಜಗತ್ತಿನಷ್ಟು ವಿಶಾಲವಾಗುತ್ತದೆ. ಸೂಕ್ಷ್ಮಾಣು ಜೀವಿಯಷ್ಟು ಸಣ್ಣದಾಗುತ್ತದೆ. ಮನಸ್ಸು ಕಲ್ಪಿಸಿಕೊಳ್ಳುತ್ತದೆ, ಭಾವಿಸುತ್ತದೆ, ಭವಿಷ್ಯಕ್ಕೆ ಹೋಗುತ್ತದೆ, ಭೂತಕಾಲಕ್ಕೂ ಹೋಗುತ್ತದೆ. ಕನಸು ಬೀಳುವುದು ಮನಸ್ಸಿಗೆ. ದೇಹಕ್ಕೆ ಮಿತಿ ಇದೆ. ಹೆಚ್ಚು ಅಂದರೆ 200 ಕೆಜಿ ತೂಕವಿರಬಹುದು. ಚಲಿಸಿದರೆ ಒಂದು ಗಂಟೆಗೆ ಐದು ಕಿಲೋಮೀಟರ್ ನಡೆಯಬಲ್ಲದು. ಆದರೆ ಈ ಮನಸ್ಸು ನಿಮಿಷಕ್ಕೆ ಅಮೆರಿಕಕ್ಕೆ ಹೋಗಿಬರುವುದು. ಮನಸ್ಸಿಗೆ ಮಿತಿ ಇಲ್ಲ. ಇದರ ಗುಣ ಎಂದರೆ ಚಂಚಲ. ಇದ್ದಲ್ಲಿ ಇರುವುದಿಲ್ಲ. ಇಂತಹ ಅದ್ಭುತ ಮನಸನ್ನು ಹೊಂದಿರುವ ನಾವೇ ಧನ್ಯರು. 
        ಸಾವಿರಾರು ವರ್ಷಗಳ ಹಿಂದೆ ಈ ಮನುಷ್ಯನ ಮನಸ್ಸನ್ನು ಕುರಿತು ಆಳವಾಗಿ ಸಂಶೋಧನೆ ಮಾಡಿದವರು ಪತಂಜಲಿ ಮಹರ್ಷಿಗಳು. ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಕುರಿತು ಪತಂಜಲಿ ಮಹರ್ಷಿ ಹೇಳಿದ್ದಾರೆ. ಇಂದು  ಜಗತ್ಪ್ರಸಿದ್ಧವಾಗಿರುವ. "ಚಿತ್ತ ವೃತ್ತಿ ನಿರೋಧ ಯೋಗ" ಎಂಬುದು ಯೋಗದ ಸೂತ್ರ. ಈಗ ಮನಸ್ಸು ಇದರ ಆಳ ಅಗಲ ಅಧ್ಯಯನ ಮಾಡಿ ಮನಸ್ಸನ್ನು ನಿಯಂತ್ರಿಸಲು ಯೋಗ, ಪ್ರಾಣಯಾಮ ಮತ್ತು ಧ್ಯಾನ ಅಗತ್ಯ ಎಂದು ರೂಪಿಸಿದ. ಈ ಮನಸ್ಸಿನ ವಿಶೇಷ ಗುಣವೆಂದರೆ ಜಗತ್ತನ್ನ ಅರಿಯುವುದು ಅಂದರೆ ಜ್ಞಾನ ಪಡೆಯುವುದು ಇದೇ ಮನಸ್ಸು. ಪ್ರೀತಿ, ಪ್ರೇಮ, ಕರುಣೆ  ಮತ್ತು ಮಮತೆ ಯಂತಹ ಧನಾತ್ಮಕ ಭಾವಗಳು, ದ್ವೇಷ ಅಸೂಯೆಯಂತಹ ಋಣಾತ್ಮಕ ಭಾವನೆಗಳು ಮೂಡುವುದು ಈ ಮನಸ್ಸಿನಲ್ಲಿ. ಸಂತೋಷ ಮತ್ತು ದುಃಖವನ್ನು ಅನುಭವಿಸುವುದು ಇದೇ ಮನಸ್ಸು. ಹಾಗಾಗಿ ಈ ಮನಸ್ಸನ್ನು ನಿಯಂತ್ರಿಸಿ ನಮಗೆ ಬೇಕಾದಂತೆ ಬಳಸಿದರೆ ಸಂತೋಷದ ಅನುಭವವನ್ನು ಪಡೆಯಬಹುದು.  
       ಮನಸ್ಸಿಗೆ ಸಂತೋಷ ಅಥವಾ ದುಃಖ ಅನುಭವಿಸಲು ಮಾಹಿತಿ ಹೋಗುವುದು ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಮುಂತಾದ ಪಂಚೇಂದ್ರಿಯಗಳಿಂದಲೇ ಇವುಗಳನ್ನು ಜ್ಞಾನೇಂದ್ರಿಯಗಳೆಂದು ಕರೆಯುತ್ತೇವೆ. ಈ ಮನಸ್ಸನ್ನು ಸುಂದರ ಗೊಳಿಸಿದರೆ ಸಂತೋಷವಾಗುತ್ತದೆ. ಈ ಮನಸ್ಸನ್ನು ಸುಂದರಗೊಳಿಸಲು ಸುಂದರವಾದದ್ದನ್ನು, ಒಳ್ಳೆಯದನ್ನು ಮತ್ತು ಮಧುರವಾದದ್ದನ್ನು ಪಡೆದುಕೊಂಡರೆ  ಮನಸ್ಸು ಸುಂದರಗೊಳ್ಳುತ್ತದೆ. ಪಂಚೇಂದ್ರಿಯಗಳ ಮೂಲಕ  ಹೊಲಸು ಮಾಹಿತಿ ಹೋದರೆ ಮನಸ್ಸು ಹೊಲಸಾಗುತ್ತದೆ. ಇದರಿಂದ ದುಃಖದ ಅನುಭವವಾಗುತ್ತದೆ. ಮನಸ್ಸಿನ ವಿಶೇಷ ಗುಣವೆಂದರೆ ಮನಸ್ಸು ಹೊಲಸಾಗಿದ್ದರೆ ಅದನ್ನು ಸುಂದರವಾದ, ಸಂತೋಷ ಕೊಡುವ, ಮಧುರ ಮಾಹಿತಿಯಿಂದ ಈ ಹೊಲಸನ್ನು ಹೊರಹಾಕಿ ಮನಸ್ಸನ್ನು ಸುಂದರಗೊಳಿಸಬಹುದು. ಜಗತ್ತು ಸುಂದರವೂ ಅಲ್ಲ ಕುರೂಪವೂ ಅಲ್ಲ. ಮನಸ್ಸು ಮಧುರವಾದರೆ ಜಗತ್ತು ಮಧುರ. ಮನಸ್ಸು ಕುರೂಪವಾದರೆ ಜಗತ್ತು ಕೂಡಾ ಕುರೂಪ. ಹಾಗಾಗಿ ನಮಗೆ ಬೇಕಾದಂತೆ ಮನಸ್ಸನ್ನು ರೂಪಿಸಿಕೊಳ್ಳಬಹುದು. ವಸ್ತುವಿಗೆ ಬೆಲೆ ಕಟ್ಟುವುದು ಈ ಮನುಸ್ಸೇ. ಮನಸ್ಸು ಸಿರಿವಂತವಾದರೆ ವ್ಯಕ್ತಿಯು ಸಿರಿವಂತನೆ. ಮನಸ್ಸು ಸಿರಿವಂತನಾಗಲು ಅನುಭವವೇ ಮುಖ್ಯ. ಹಾಗಾಗಿ ವ್ಯಕ್ತಿಯ ಶ್ರೀಮಂತಿಕೆ ಮನಸ್ಸಿನ ಶ್ರೀಮಂತಿಕೆಯನ್ನು ಅವಲಂಬಿಸಿದೆ. ಈ ಸುಂದರ ಮನಸ್ಸನ್ನು ಬಳಸಿ ಆನಂದವಾಗುವುದರ ಜೊತೆಗೆ ನಮಗೆ ಬೇಕಾದನ್ನು ಸಾಧಿಸಬಹುದು. ಮಕ್ಕಳೇ, ಈ ಮನಸ್ಸನ್ನು ಸರಿಯಾಗಿ ಬಳಸಿ ಆನಂದಪಡೋಣ ಮತ್ತು ಯಶಸ್ವಿ ಜೀವಿಗಳಾಗೋಣ.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************Ads on article

Advertise in articles 1

advertising articles 2

Advertise under the article