ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು
Monday, October 17, 2022
Edit
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಮಕ್ಕಳೇ..... “ಸಂಶಯಾತ್ಮಾ ವಿನಶ್ಯತಿ” ನಮ್ಮ ಪೂರ್ವಿಕರ ಈ ಮಾತು ಬಹಳ ಅರ್ಥಗರ್ಭಿತವಾಗಿದೆ. ಸಂಶಯಿಯ ನಾಶ ಖಂಡಿತ ಎಂಬುದು ಈ ಮಾತಿನ ಅಂತರಾಳದ ಅರ್ಥ. ಹಿತೈಷಿಗಳು ನಮಗೆ ಹಾಲನ್ನು ನೀಡಿದರೂ ಅದನ್ನು, “ಹಾಲೇ ?” ಎಂದು ಕೇಳಿಯೇ ಸ್ವೀಕರಿಸುತ್ತೇವೆ ಮತ್ತು ಪಾನ ಮಾಡುತ್ತೇವೆ. ಅವರು ನೀಡಿರುವುದು ಹಾಲು ಎಂಬುದು ನಮಗೆ ಖಚಿತವಿದೆಯಾದರೂ ಈ ಪ್ರಶ್ನೆಯನ್ನು ಕೇಳುವುದು ನಮ್ಮ ಮನಸ್ಸಿನೊಳಗೆ ಹುಟ್ಟುವ ಸಂಶಯಕ್ಕೆ ಸಹಜ ಕನ್ನಡಿ. ಹಾಲು ನೀಡಿದವನು ನಮ್ಮ ಬಗ್ಗೆ ಮಾಡುವ ಯೋಚನೆಯಾದರೂ ಏನು? “ಕೃತಘ್ನ ಇವನು. ಇವನಿಗೆ ಹಾಲು ಕೊಡುವುದೂ ಬಂಡೆಯ ಮೇಲೆ ಹೊಯ್ಯುವುದೂ ಒಂದೇ. ಇನ್ನು ಇವನಿಗೆ ಹಾಲೂ ಕೊಡಬಾರದು, ನೀರೂ ಕೊಡಬಾರದು” ಎಂಬ ನಿರ್ಧಾರಕ್ಕೆ ಬಂದರೆ ನಷ್ಟವಾಗುವುದಾದರೂ ಯಾರಿಗೆ? ನಮ್ಮ ಸಂಶಯ ನಮಗೆ ಇದೇ ರೀತಿ ಹಲವು ಕಡೆಗಳಿಂದ ನಷ್ಟವನ್ನೇ ಉಂಟು ಮಾಡಿದರೆ ನಾವು ನಾಶದೆಡೆಗೆ ಸಾಗುವುದು ಖಚಿತ ಎಂಬುದಕ್ಕೆ ಬೇರೆ ಯಾವ ಪುರಾವೆಗಳೂ ಬೇಡ.
ಸಂಶಯವನ್ನು ವಿವೇಕ ಹೀನತೆ ಅಥವಾ ಅವಿವೇಕ ಎಂದು ಹೇಳಿದರೂ ತಪ್ಪಾಗದು. ಇಡೀ ಪ್ರಪಂಚ ನೆಲೆ ನಿಂತಿರುವುದು ವಿಶ್ವಾಸದ ಮೇಲೆ ಎಂದು ಹೇಳುತ್ತೇವೆ. ನಮ್ಮಲ್ಲಿ ಯಾರಾದರೂ ಹಣ ಸಾಲ ಕೇಳಿದರೆ ಅವರ ಬಗ್ಗೆ ನಮಗೆ ಸಂಶಯ ಹುಟ್ಟದೇ ಇರುವುದಿಲ್ಲ. ಆತನು ಸಾಲವನ್ನು ಮರಳಿಸಿಯಾನೇ? ಎಂಬ ಸಂಶಯ ನಮ್ಮನ್ನು ಸಾಲದ ನೆರವು ನೀಡುವುದರಿಂದ ತಡೆಯುತ್ತದೆ. ಮುಂದೆ ನಮಗೂ ಸಾಲದ ಅಗತ್ಯ ಬರದೆಂದು ಹೇಳಲಾಗದು. ಆಗ ಸಾಲ ಸಿಗುವುದಾದರೂ ಹೇಗೆ? ಇಂದಿನ ನಮ್ಮ ಸಂಶಯ ಪಿಶಾಚಿಯೇ ನಮಗೆ ಮುಂದಿನ ಶತ್ರುವಾಗುವುದಿಲ್ಲವೇ...?
ಸಂತೆಯಲ್ಲಿ ರೈತನೊಬ್ಬನು ತಾನು ತಂದ ಬಾಳೆಹಣ್ಣನ್ನು ಉಳಿದವರಿಗಿಂತ ಕಡಿಮೆಗೆ ಮಾರುತ್ತಿದ್ದನು. ಆತ ಕಡಿಮೆಗೆ ಮಾರುವುದಾದರೂ ಏತಕ್ಕೆ ಎಂದು ಎಲ್ಲರಿಗೂ ಸಂಶಯ ಹುಟ್ಟಿತು. ಬಾಳೆಹಣ್ಣು ದೋಷಪೂರಿತವಾಗಿ ಇರಬಹುದೆಂಬ ಸಂಶಯ ಎಲ್ಲರ ಮನಸ್ಸಿನೊಳಗೆ ಹುಟ್ಟಿತು. ಅವನ ಬಳಿಗೆ ಹೋಗುವವರ ಸಂಖ್ಯೆ ಕಡಿಮೆಯಾಯಿತು. ಸ್ವಲ್ಪ ವಿಳಂಬವಾಗಿಯಾದರೂ ಅವನ ಹಣ್ಣುಗಳೇನೋ ಮಾರಾಟವಾದುವು. ಆದರೆ ಕಡಿಮೆಗೆ ಸಿಗುತ್ತಿದ್ದುದನ್ನು ಕೈಚೆಲ್ಲಿದವರಿಗೆ ನಷ್ಟವೇ ಹೊರತು ಲಾಭವಾಗಲಿಲ್ಲ ಎಂಬುದು ಈ ಘಟನೆಯ ಸಾರ.
ವೃದ್ಧ ಕುರುಬನೊಬ್ಬ ಒಂದು ನಾಯಿಯನ್ನು ಸಾಕಿದ್ದನಂತೆ. ಆ ನಾಯಿ ಬಹಳ ನಿಯತ್ತಿನ ನಾಯಿ. ಸ್ವಾಮಿನಿಷ್ಠ ಮತ್ತು ಯಜಮಾನನ ಪ್ರೀತಿ ಪಾತ್ರ. ಒಮ್ಮೆ ಆ ವೃದ್ಧನಿಗೆ ಹಣದ ಅಗತ್ಯವುಂಟಾಯಿತು, ಊರ ಶ್ರೀಮಂತನಿಂದ ತನ್ನ ಮುದ್ದು ನಾಯಿಯನ್ನು ಅಡವಿಟ್ಟು ಸಾಲ ಪಡೆದನು. ಶ್ರೀಮಂತನ ಮಗು ಆಡುತ್ತಿದ್ದಾಗ ವಿಷದ ಹಾವೊಂದು ಮಗುವಿಗೆ ಹೊಂಚು ಹಾಕತೊಡಗಿತು. ಮಗು ಅಪಾಯದಲ್ಲಿರುವುದನ್ನು ಗಮನಿಸಿದ ನಾಯಿಯು, ಆ ಹಾವಿನೊಂದಿಗೆ ಹೋರಾಡಿ ಅದನ್ನು ಕೊಂದು ಹಾಕಿತು. ಹೊರಗಿನಿಂದ ಮರಳಿದ ಶ್ರೀಮಂತನು ತನ್ನ ಮಗುವನ್ನು ಹಾವಿನ ಬಾಯಿಯಿಂದ ನಾಯಿಯೇ ರಕ್ಷಿಸಿತೆಂದು ಅರ್ಥಮಾಡಿಕೊಂಡನು. ಕೂಡಲೇ ಒಂದು ಚೀಟಿಯಲ್ಲಿ “ನಿನ್ನ ಸಾಲವನ್ನು ನಾಯಿ ತೀರಿಸಿದೆ. ಅದು ನನ್ನ ಮಗುವನ್ನು ಹಾವಿನಿಂದ ರಕ್ಷಿಸಿದೆ” ಎಂದು ಸಿರಿವಂತನು ಬರೆದು ನಾಯಿಯ ಕುತ್ತಿಗೆಗೆ ದಾರದಿಂದ ಕಟ್ಟಿ ವೃದ್ಧ ಕುರುಬನಲ್ಲಿಗೆ ಬೀಳ್ಕೊಡುತ್ತಾನೆ. ಮನೆಗೆ ಹಿಂತಿರುಗಿದ ನಾಯಿಯ ನಿಯತ್ತಿನ ಮೇಲೆ ವೃದ್ಧನಿಗೆ ಸಂಶಯವು ಹುಟ್ಟಿತು. ಅಡವಿಟ್ಟ ನಾಯಿ ಶ್ರೀಮಂತನಿಗೆ ವಿಶ್ವಾಸ ದ್ರೋಹ ಮಾಡಿತು. ತನಗೆ ಮುಖಭಂಗ ಮಾಡಿತು ಎಂದು ಸಂಶಯಕ್ಕೆ ಒಳಗಾದನು. ಕೈಯಲ್ಲಿದ್ದ ದೊಣ್ಣೆಯಿಂದ ಚೆನ್ನಾಗಿ ನಾಯಿಗೆ ಬಾರಿಸಿಯೇ ಬಿಟ್ಟನು. ಮಿತಿ ಮೀರಿದ ಅವನ ಕೋಪದ, ಹನುಮ ಬಲದ ಒಂದೇ ಪೆಟ್ಟು ನಾಯಿಯನ್ನು ಸಾಯಿಸಿತು. ಸತ್ತ ನಾಯಿಯನ್ನು ಎಳೆಯಲೆಂದು ಕುತ್ತಿಗೆಯತ್ತ ಕೈಚಾಚಿದಾಗ ನಿಜವು ಅರ್ಥವಾಗುತ್ತದೆ. ತನ್ನ ಸಂಶಯ ತನ್ನ ಸರ್ವಸ್ವವಾಗಿದ್ದ ನಾಯಿಯನ್ನು ಬಲಿತೆಗೆಯಿತೆಂದು ಅತ್ತನು. ಎಷ್ಟು ಅತ್ತರೇನಂತೆ? ನಾಯಿಯು ಮರಳುವುದೇ....?
ಸಂಶಯವು ಭಗವಂತನನ್ನೂ ಕಾಡಿದ ಕತೆಗಳಿವೆ. ಮನುಷ್ಯನಿಗೆ ಸಂಶಯ ಹುಟ್ಟುವುದು ಸಹಜ. ಆದರೆ ಸಂಶಯದ ಸತ್ಯಾ ಸತ್ಯತೆಯನ್ನು ಪರಾಮರ್ಶೆಮಾಡುವ ವಿವೇಕವಿರಬೇಕು. ಸಂಶಯದ ಪಾಷಾಣಕ್ಕೆ ವಿವೇಕವನ್ನು ಬಲಿಕೊಟ್ಟು ನಮ್ಮ ನಷ್ಟಕ್ಕೆ ನಾವೇ ಹೊಣೆಗಾರರಾಗುವುದು ಮೂರ್ಖತನದ ಲಕ್ಷಣ. ಸಂಶಯದ ಸುಳಿಯಿಂದ ಹೊರಗಡೆ ಬರಲು ಪ್ರಯತ್ನಿಸೋಣ. ಅದಕ್ಕಾಗಿ ವಿವೇಕಿಗಳಾಗೋಣ. ನಮಸ್ಕಾರ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************