ಜೀವನ ಸಂಭ್ರಮ : ಸಂಚಿಕೆ - 55
Sunday, October 16, 2022
Edit
ಜೀವನ ಸಂಭ್ರಮ : ಸಂಚಿಕೆ - 55
ಒಂದು ಬೆಟ್ಟದಲ್ಲಿ ಒಂದು ನದಿ ಹುಟ್ಟಿತು. ಹುಟ್ಟಿದ ಸ್ಥಳದಲ್ಲಿ ಸ್ವಲ್ಪವೇ ನೀರು. ಆ ನೀರಿಗೆ ಏನು ಮಾಡಬೇಕೆಂದು ತಿಳಿಯದೆ, ಭೂಮಿಗೆ ಕೇಳಿತು. ನಾನೇನು ಮಾಡಲಿ ಎಂದು. ಅದಕ್ಕೆ ಭೂಮಿ ಹೇಳಿತು, "ಏನೂ ಮಾಡಬೇಡ, ಸುಮ್ಮನೆ ಹರಿ. ಏನೂ ಯೋಚನೆ ಮಾಡಬೇಡ. ದಿಕ್ಕಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡ ಹರಿ" ಎಂದಿತು. ಆ ನದಿ ಸ್ವಲ್ಪ ದೂರ ಹರಿಯಿತು ಮತ್ತೆ ಅದಕ್ಕೆ ಚಿಂತೆ ಶುರುವಾಯಿತು. ಮತ್ತೆ ಭೂಮಿಗೆ ಕೇಳಿತು. ಪುನಹ ಭೂಮಿ ಹೇಳಿತು, ಸುಮ್ಮನೆ ಹರಿ. ನಿನ್ನ ಗುರಿ, ಹೋಗಿ ಸಮುದ್ರ ಸೇರಬೇಕು. ಅದಕ್ಕಾಗಿ ಸುಮ್ಮನೆ ಹರಿ. ಮುಂದೆ ನಿನ್ನಂತವರೇ ಸೇರಿಕೊಳ್ಳುತ್ತಾರೆ ಎಂದಿತು. ನದಿ ಹರಿಯುತ್ತಾ ಹೋಯಿತು. ಸ್ವಲ್ಪ ದೂರ ಹೋಗುತ್ತಿರಬೇಕಾದರೆ ಇಂತಹದೇ ಇನ್ನೊಂದು ನದಿ ದಿಕ್ಕು ಕಾಣದೆ, ಆತ್ಮವಿಶ್ವಾಸವಿಲ್ಲದೆ ಹರಿದು ಬರುತ್ತಿತ್ತು. ಹರಿದು ಬಂದು ಇದರ ಜೊತೆ ಸೇರಿಕೊಂಡಿತ್ತು. ಆಗ ಎರಡು ನದಿಗಳು ಸೇರಿದ ಮೇಲೆ ಎರಡು ನದಿಗೂ ಆತ್ಮವಿಶ್ವಾಸ ಹೆಚ್ಚಾಯಿತು. ಅದೇ ಸಮಯಕ್ಕೆ ಒಂದು ಪಕ್ಷಿ ಸಾಗರದಿಂದ ಹಾರಿ ಬಂದು ಹೇಳಿತು, "ಇನ್ನು ಸಾಗರ ಸಾವಿರ ಕಿಲೋಮೀಟರ್ ದೂರ" ಎಂದು. ಅದಕ್ಕೆ ನದಿಗಳು ಹೇಳಿದವು, "ಸಾವಿರವಾದರೇನು, ಲಕ್ಷ ಕಿಲೋಮೀಟರ್ ಆದರೇನು? ನಾವು ಹರಿದೇ ತೀರುತ್ತೇವೆ" ಎಂದಿತು. ಹೀಗೆ ಹರಿಯುತ್ತಿರಬೇಕಾದರೆ ಅನೇಕ ಉಪನದಿಗಳು ಸೇರಿ ದೊಡ್ಡ ನದಿಯಾಯಿತು. ಇದು ಕೊನೆಗೆ ಹರಿದು ಸಮುದ್ರ ಸೇರಿ ಸಂತೋಷಪಟ್ಟಿತು.
ಈ ಕಥೆಯ ಉದ್ದೇಶ ತನ್ನಲ್ಲಿ ತನಗೆ ಶ್ರದ್ಧೆ ಇರಬೇಕು.. ಇದಕ್ಕೆ ಆತ್ಮ ಶ್ರದ್ಧೆ ಎನ್ನುವರು. ತನ್ನಲ್ಲಿ ತನಗೆ ವಿಶ್ವಾಸ ಇರಬೇಕು. ಇದಕ್ಕೆ ಆತ್ಮವಿಶ್ವಾಸ ಎನ್ನುವರು. ಆತ್ಮಶ್ರದ್ದೆ ಇರುವ ವ್ಯಕ್ತಿ, ನಾನು ಮಾಡೇ ತೀರುತ್ತೇನೆ ಎಂದು ಹೇಳುತ್ತಾನೆ. ನಾನು ಹಿಡಿಬಲ್ಲೆ, ನಾನು ನಡೆಯಬಲ್ಲೆ , ನಾನು ನೋಡಬಲ್ಲೆ , ನಾನು ಕೇಳಬಲ್ಲೆ, ನಾನು ಮಾಡಬಲ್ಲೆ , ನಾನು ಓದಬಲ್ಲೆ ಮತ್ತು ನಾನು ಬರೆಯಬಲ್ಲೆ ಎಂದು ಹೇಳುತ್ತಾನೆ. ಬೇರೆಯವರು ಮಾಡಬಹುದಾದರೆ ನನ್ನಿಂದ ಯಾಕೆ ಸಾಧ್ಯವಿಲ್ಲ ಎನ್ನುತ್ತಾನೆ. ಇದು ಆತ್ಮವಿಶ್ವಾಸ ಇರುವ ವ್ಯಕ್ತಿ ಹೇಳುವ ವಿಧಾನ. ಆದರೆ ಬಹುತೇಕ ಮಕ್ಕಳ ಗೋಳು ಎಂದರೆ, ನಾನು ಓದುತ್ತೇನೆ ಅರ್ಥವಾಗುವುದಿಲ್ಲ ಎಂದು. ಎಷ್ಟು ಬಾರಿ ಓದಿದ್ದೀರಿ ಎಂದರೆ ಒಂದು ಬಾರಿ ಎನ್ನುವರು. ಒಂದು ಬಾರಿ ಓದಿದರೆ ಅರ್ಥವಾಗುವುದೇ?. ಅದು ಸಾಧ್ಯವಿಲ್ಲ. ಆತ್ಮವಿಶ್ವಾಸ ಇರುವ ವ್ಯಕ್ತಿ ಹೇಳುವುದು ಹೇಗೆಂದರೆ, ನನಗೆ ಅರ್ಥವಾಗುವವರೆಗೆ ಓದುತ್ತೇನೆ. ಎಷ್ಟು ಬಾರಿ ಓದಿದರೆ ನನಗೆ ಅರ್ಥವಾಗುತ್ತದೆಯೋ ಅಷ್ಟು ಬಾರಿ ಓದುತ್ತೇನೆ, ಹತ್ತು ಬಾರಿಯಾದರೇನು? ಇಪ್ಪತ್ತು ಬಾರಿಯಾದರೇನು? ಓದಿ ಅರ್ಥ ಮಾಡಿಕೊಂಡೆ ತೀರುತ್ತೇನೆ ಎನ್ನುತ್ತಾನೆ. ಹೀಗೆ ಓದಿದರೆ ಮತ್ತು ಬರೆದರೆ ಯಾಕೆ ಅರ್ಥವಾಗುವುದಿಲ್ಲ...? ಅರ್ಥವಾದಾಗ ನಮಗೆ ಅರಿವಿಲ್ಲದಂತೆ ಆತ್ಮವಿಶ್ವಾಸ ಉಂಟಾಗುತ್ತದೆ. ಈ ರೀತಿ ಮಾಡಿದರೆ ಯಾರೂ ಅನುತೀರ್ಣ ಆಗುವುದಿಲ್ಲ. ಈ ರೀತಿ ಶ್ರದ್ಧೆ, ಆತ್ಮವಿಶ್ವಾಸ ಇದ್ದರೆ, ನಾವು ಬಯಸಿದ್ದು ಆಗಬಹುದು. ಇದುವರೆಗೆ ಯಶಸ್ವಿಯಾದವರು ಇದೇ ರೀತಿ ಆತ್ಮವಿಶ್ವಾಸ ಇರುವವರು. ಮಕ್ಕಳೇ ನಿಮಗೂ ನಿಸರ್ಗ ಅದ್ಬುತ ಮನಸ್ಸನ್ನು ನೀಡಿದೆ. ಅದನ್ನು ಸರಿಯಾಗಿ ಬಳಸಬೇಕಾಗಿದೆ. ಸ್ವಾಮಿ ವಿವೇಕಾನಂದರು "ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ." ಎಂದಿದ್ದಾರೆ. ಅದೇ ರೀತಿ ನಾವು ಗುರಿಮುಟ್ಟುವ ತನಕ ಪ್ರಯತ್ನ ನಿಲ್ಲಿಸಬಾರದು. ಒಂದು ಒಳ್ಳೆಯ ಬೀಜ ಭೂಮಿಗೆ ಹಾಕಿದರೆ, ಬೀಜ ಮೊಳೆತು ಮರವಾಗಿ ಫಲ ನೀಡುತ್ತದೆ. ಅದಕ್ಕಾಗಿ ಕಾಯಬೇಕು, ಪೋಷಣೆ ಮಾಡುತ್ತಿರಬೇಕು. ಹಾಗೆ ಪ್ರಯತ್ನ ಇರಲಿ ಮಕ್ಕಳೇ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************