ಹಕ್ಕಿ ಕಥೆ : ಸಂಚಿಕೆ - 69
Tuesday, October 18, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.... ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ನಾನು ಸಂಸೆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕಳಸದಿಂದ ಸಂಸೆ ವರೆಗಿನ ಹತ್ತು ಕಿಲೋಮೀಟರ್ ದೂರವನ್ನು ಸೈಕಲಿನಲ್ಲಿ ಕ್ರಮಿಸುತ್ತಿದ್ದೆ. ಓಡಾಡುವ ಕೆಲವು ವಾಹನಗಳನ್ನು ಬಿಟ್ಟರೆ ನಿರ್ಜನವಾದ ದಾರಿ. ಸೈಕಲಿನ ಪೆಡಲ್ ತುಳಿಯುವ ಶಬ್ದವೂ ಸ್ಪಷ್ಟವಾಗಿ ಕೇಳಿಸುವಷ್ಟು ಮೌನ. ಮಾರ್ಚ್ ತಿಂಗಳ ಒಂದು ದಿನ, ಚಳಿಗಾಲ ಕಳೆದು ಬೇಸಗೆ ನಿಧಾನವಾಗಿ ಪ್ರಾರಂಭ ಆಗತೊಡಗಿತ್ತು. ಹಗಲಿನ ಅವಧಿಯೂ ನಿಧಾನವಾಗಿ ದೀರ್ಘವಾಗಲು ಶುರುವಾಗಿತ್ತು. ಹತ್ತನೆಯ ತರಗತಿಗೆ ಪರೀಕ್ಷೆ ಹತ್ತಿರ ಬರುತ್ತಿತ್ತು, ಸಂಜೆಯ ಹೆಚ್ಚುವರಿ ತರಗತಿ ಮುಗಿಸಿ ಮಕ್ಕಳನ್ನು ಕಳಿಸಿ ಸೈಕಲ್ ಏರಿ ಕಳಸದ ಕಡೆಗೆ ಹೊರಟಿದ್ದೆ. ಸಂಸೆಯ ಬಳಿಯ ಗುಮ್ಮಿನಕಾನ್ ಚಹಾ ತೋಟದ ಹತ್ತಿರ ಅವರದೇ ಒಂದು ಅಂಗಡಿ ಇತ್ತು. ಒಂದೊಳ್ಳೆ ಚಹಾ ಕುಡಿದು ಪ್ರಯಾಣ ಮುಂದುವರೆಸಿದೆ. ಚಹಾ ತೋಟದಿಂದ ಸ್ವಲ್ಪದೂರ ಬರುತ್ತಿದ್ದಂತೆ ರೈ... ರೈರೈರೈ.. ರೈ ರೈ... ರೈ... ಎಂದು ನಮ್ಮೂರಿನ ಸಿಟಿ ಬಸ್ ಕಂಡೆಕ್ಟರ್ ಅವಸರವಾಗಿ ವಿಶಲ್ ಹೊಡೆದಂತೆ ಕೇಳಿಸಿತು. ಕಳಸದ ಕಡೆಗೆ ಆ ಹೊತ್ತಿನ ಬಸ್ಸು ಅದಾಗಲೇ ಹೋಗಿಬಿಟ್ಟಿತ್ತು. ಇದೇನಪ್ಪ ಶಬ್ದ ಅಂತ ಸೈಕಲ್ಲನ್ನು ರಸ್ತೆಯ ಬದಿಗೆ ನಿಲ್ಲಿಸಿ ಗಮನಿಸಲು ಆರಂಭಿಸಿದೆ. ಅಲ್ಲೇ ಸ್ವಲ್ಪದೂರದ ಪೊದೆಗಳಿಂದ ನಿರಂತರವಾಗಿ ಶಬ್ದ ಕೇಳುತ್ತಿತ್ತು. ಹಕ್ಕಿಯ ಕೂಗು ಅನ್ನುವುದು ಖಾತ್ರಿ ಆಯ್ತು. ಪೊದೆಗಳ ಮಧ್ಯೆ ಹಕ್ಕಿಯೊಂದು ಕುಪ್ಪಳಿಸುತ್ತ ಓಡಾಡುವುದೂ ಕಾಣಿಸಿತು. ಸೂಕ್ಷ್ಮವಾಗಿ ಗಮನಿಸಿದಾಗ ಒಂದಲ್ಲ ಮೂರೋ ನಾಲ್ಕೋ ಹಕ್ಕಿಗಳು ಇರುವುದು ಖಾತರಿ ಆಯ್ತು. ಆದರೆ ಆ ದಿನ ಹಕ್ಕಿ ಪೊದೆಗಳಿಂದಾಚೆ ಕಾಣಿಸಲೇ ಇಲ್ಲ. ಮರುದಿನವೂ ದಾರಿಯ ಹಲವಾರು ಕಡೆ ಈ ಹಕ್ಕಿಯ ಕೂಗು ಕೇಳಿಸಿತು. ಬಣ್ಣ, ಗಾತ್ರ, ಆಕಾರ ಮತ್ತು ಸ್ವಭಾವ ನೋಡಿದಾಗ ಇದು ಹರಟೆಮಲ್ಲದ ಜಾತಿಗೆ ಸೇರಿದ ಹಕ್ಕಿ ಅನ್ನುವುದು ಸ್ಪಷ್ಟವಾಯಿತು. ನಮ್ಮ ಶಾಲೆಯ ಆಸುಪಾಸಿನಲ್ಲೂ ಈ ಹಕ್ಕಿಯ ಕೂಗು ಕೇಳಿಸುತ್ತಿತ್ತು. ಆದರೆ ಪೊದೆಯಿಂದ ಹೊರಬಂದು ಸರಿಯಾಗಿ ದರುಷನ ಮಾತ್ರ ಕೊಟ್ಟಿರಲಿಲ್ಲ. ಪ್ರತಿದಿನ ಕ್ಯಾಮರಾ ಕೈಯಲ್ಲಿ ಹಿಡಿದುಕೊಂಡೇ ಓಡಾಡಿದರೂ ಒಂದೊಳ್ಳೆ ಫೋಟೋ ತೆಗೆಯಲು ಸಾದ್ಯವಾಗಿರಲಿಲ್ಲ.
ಒಂದು ದಿನ ಮುಂಜಾನೆ ಶಾಲೆಯ ಕಡೆಗೆ ಬರುತ್ತಿದ್ದಾಗ ಚಹಾ ತೋಟದ ಹತ್ತಿರ ಹೊಳೆಬದಿಯಲ್ಲಿ ನಾಲ್ಕಾರು ಹಕ್ಕಿಗಳು ಬೇಲಿಯ ಮೇಲೆ ಕುಳಿತು ಜೋರಾಗಿ ಕೂಗುತ್ತಿರುವುದು ಕಾಣಿಸಿತು. ಸ್ವಲ್ಪ ದೂರದಲ್ಲೇ ಸೈಕಲ್ ನಿಲ್ಲಿಸಿ ಕ್ಯಾಮರಾ ತೆಗೆದುಕೊಂಡು ಜೂಮ್ ಮಾಡಿದೆ. ಬೆಳಗ್ಗಿನ ಚಳಿಗೆ ಬಿಸಿಲು ಕಾಯಿಸುತ್ತ ಹಕ್ಕಿಗಳು ಹಾಡುತ್ತ ಕುಳಿತಿದ್ದವು. ನಾಲ್ಕಾರು ಒಳ್ಳೆಯ ಚಿತ್ರ ತೆಗೆಯಲು ಸಾದ್ಯವಾಯಿತು. ಚಿತ್ರ ತಂದು ಸಲೀಂ ಅಲಿಯವರ ಪುಸ್ತಕದಲ್ಲಿ ನೋಡಿದಾಗ ತಿಳಿದದ್ದು ಇದು ಭಾರತದ ಪಶ್ಚಿಮಘಟ್ಟ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಕಡುಕಂದು ಬಣ್ಣದ ಹರಟೆಮಲ್ಲ.
ಕಡುಕಂದು ಬಣ್ಣದ ದೇಹ, ಬೂದು ಬಣ್ಣದ ಹಣೆಯಭಾಗ, ಮೇಲಿನ ಕೊಕ್ಕು ಕಪ್ಪು ಬಣ್ಣವಾದರೆ, ಕೆಳಗಿನ ಕೊಕ್ಕು ಹಳದಿಬಣ್ಣ, ಸುತ್ತಲೂ ತಿಳಿಬಿಳಿ ಬಣ್ಣದ ನಡುವೆ ಎದ್ದುಕಾಣುವ ಕಪ್ಪು ಕಣ್ಣುಗುಡ್ಡೆ, ಕತ್ತು ಮತ್ತು ಹೊಟ್ಟೆಯ ಭಾಗದ ( Rufous ) ಕೆಂಪು ಮಿಶ್ರಿತ ಕಂದು ಬಣ್ಣ, ಜೊತೆಗೆ ವಿಶಿಷ್ಟವಾದ ಕೂಗು. ಗುಂಪು ಗುಂಪಾಗಿ ವಾಸಿಸುವ ಈ ಹಕ್ಕಿಗಳು ನಿಮ್ಮ ಆಸುಪಾಸಿನಲ್ಲೂ ಇರಬಹುದು.
ಕನ್ನಡದ ಹೆಸರು: ಕಡು ಕಂದು ಹರಟೆಮಲ್ಲ
ಇಂಗ್ಲೀಷ್ ಹೆಸರು: Rufous Babbler
ವೈಜ್ಞಾನಿಕ ಹೆಸರು: Turdoides subrufa
ಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************