-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

              
            ಮಕ್ಕಳೇ ನಮಸ್ಕಾರ.... ನಡೆದಾಡಲು, ಓಡಾಡಲು, ಸಂಚಾರ ಮಾಡಲು ರಾಜಪಥಗಳಿರುತ್ತವೆ. ಬದುಕಿಗೂ ರಾಜಪಥವೊಂದಿದೆಯೇ ಎಂಬ ನಿಮ್ಮ ಸಂದೇಹ ಸಹಜವಾದುದು. ಬದುಕೆಂಬುದೂ ಆಯಷ್ಯದ ನಡಿಗೆ ತಾನೇ? ಈ ನಡಿಗೆಗೂ ಆರಂಭ ಮತ್ತು ಅಂತ್ಯಗಳಿವೆ ಅಲ್ಲವೇ? ಹಾಗಿರುವಾಗ ಬದುಕಿನ ಸಂಚಾರದಲ್ಲೂ ರಾಜಪಥದ ಅಗತ್ಯವಿದ್ದೇ ಇದೆ. ಈಗಾಗಲೇ ನಾವು ನಮ್ಮ ಬದುಕನ್ನು ಆರಂಭಿಸಿ, ಮುಂದೆ ಮುಂದೆ ಸಾಗುತ್ತಿದ್ದೇವೆ. ನಾವು ರಾಜಪಥದಲ್ಲಿ ಸಾಗುತ್ತಿದ್ದೇವೆಯೋ ಅಥವಾ ಕಲ್ಲು ಮುಳ್ಳುಗಳಿರುವ, ಹೊಂಡ ಗುಂಡಿಗಳಿರುವ ಕಡಿದಾದ ದಾರಿಯಲ್ಲಿ ಸಾಗುತ್ತಿದ್ದೇವೆಯೋ ಎಂಬುದನ್ನೂ ಅತ್ಯಂತ ಸೂಕ್ಷ್ಮ ಮತ್ತು ಸೂಕ್ತವಾಗಿ ಗಮನಿಸುತ್ತಿರಲೇ ಬೇಕು. ಜೀವನವನ್ನು ರಾಜಪಥದಲ್ಲೇ ಮುನ್ನಡೆಸಿ ಶ್ರೇಷ್ಠವಾದ ಗುರಿಯನ್ನು ಸೇರಲು ಜ್ಯೇಷ್ಠವಾಗಿ ಶ್ರಮಿಸುವುದು ನಮ್ಮ ಬದ್ಧತೆಯಾಗಿದೆ. 
       ಜೀವನವು ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಮತ್ತು ಸಂಪತ್ತಿನಿಂದ ಕೂಡಿರಬೇಕೆಂಬುದೇ ಸರ್ವರ ಬಯಕೆ. ಈ ಬಯಕೆಗಳು ಈಡೇರಲೇ ಬೇಕೆಂಬುದೂ ಅಷ್ಟೇ ಸತ್ಯ. ಅವುಗಳನ್ನು ಈಡೇರಿಸುವುದಕ್ಕಾಗಿ ಚಲಿಸುವ ಹಾದಿ, ಮತ್ತು ವೇಗಗಳೂ ನಿರ್ಣಾಯಕವಾಗಿರುತ್ತವೆ. ಹಾದಿ ತಪ್ಪಿದರೆ ಗುರಿ ಸಿಗದು, ವೇಗ ಹೆಚ್ಚಿದರೆ ಅಪಘಾತವೂ ಖಚಿತ, ಹಾಗೆಂದು ಅತ್ಯಂತ ನಿಧಾನವೂ ಸೂಕ್ತವಲ್ಲ. ನಿಧಾನವೇ ಪ್ರಧಾನ ಎಂಬ ಮಾತಿದೆ. ಆದರೆ ಅತಿಯಾದ ನಿಧಾನವೂ ಅನುಕರಣೀಯವಲ್ಲ. ಚಲಿಸುವ ಹಾದಿಯು ಪ್ರಾಮಾಣಿಕವಾಗಿರಬೇಕು ಮತ್ತು ವೇಗವು ಉತ್ಸಾಹವನ್ನು ಕುಗ್ಗಿಸದ, ಆಯಾಸವನ್ನು ಅಧಿಕಗೊಳಿಸದ ರೀತಿಯಲ್ಲಿರಬೇಕು. ಬದುಕಿನಲ್ಲಿ ರಾಜಪಥವೊದಗಲು ಕರ್ಮ ಪಥ ಅಥವಾ ಕರ್ತವ್ಯಪಥದ ಪಾತ್ರತ್ವವೂ ಪರಿಗಣನೀಯ. ನಮಗೆ ಜೀವಿಸುವ ಹಕ್ಕಿರುವಂತೆ ಇತರರಿಗೂ ಜೀವಿಸುವ ಹಕ್ಕು ಇದೆ. ಇತರರ ಜೀವನಕ್ಕೆ ಮುಳ್ಳಾಗಿ, ನಮ್ಮ ಒಳಿತಿಗಷ್ಟೇ ಹಾತೊರೆಯುವುದು ಸ್ವಹಿತ ಅಥವಾ ಸ್ವಾರ್ಥ ಎನಿಸುತ್ತದೆ. ನಮ್ಮ ಹಿತಕ್ಕಿಂತ ಸಮಾಜದ ಹಿತವೂ ನಮಗೆ ಮುಖ್ಯವಾಗಿರಬೇಕು. ಅದಕ್ಕಾಗಿ ಸಮಾಜ ಸೇವೆಯೂ ನಮ್ಮ ಬದುಕಿನ ಪಥವಾಗಿರಬೇಕು. ಸಮಾಜದ ಸೇವೆ ಎಂದಾಗ ನಾವು ನಮ್ಮನ್ನು ಆರ್ಥಿಕವಾಗಿ ತೂಗಿ ನೋಡುತ್ತೇವೆ. ಆದರೆ ಸಮಾಜ ಸೇವೆಯನ್ನು ಬಡವನಾದವನೂ ಮಾಡಲು ಸಾಧ್ಯ. ಸಮಾಜದ ಯಾವುದೇ ಮಗುವಿಗೆ ಅಕ್ಷರ ಕಲಿಸಿದರೆ, ಮೌಲ್ಯದ ಕಥೆ ಹೇಳಿದರೆ, ಆಟ ಆಡಿಸಿದರೆ ಅವೂ ಸಮಾಜ ಸೇವೆಯಾಗುತ್ತವೆ. ಅಂಗಡಿಗೆ ಹೋಗಿ ದಿನಸಿಯೋ, ಹಾಲೋ, ಔಷಧವೋ, ತರಕಾರಿಯೋ, ಉಡುಪೋ ಏನೋ ಅವರ ಅಗತ್ಯಗಳನ್ನು ಪೂರೈಸಲಾಗದ ವೃದ್ಧರಿಗೆ ಅವುಗಳನ್ನು ಪೂರೈಸಿದರೆ ಅದೂ ಸಮಾಜಸೇವೆಯಾಗುತ್ತದೆ. ಮನಸ್ಸಿಗೆ ಮುದ ತರುವ, ಇತರರ ಜೀವನವನ್ನು ಸಂತಸಮಯಗೊಳಿಸುವ ಸೇವೆಯೂ, ಬದುಕಿನ ರಾಜ ಪಥವಾಗಿದೆ. 
        “ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನ” ಇದು ಗೀತೋಕ್ತಿ. ಭಗವದ್ದೀತೆಯ ಈ ಸಂದೇಶವು ಕರ್ಮ ಮಾಡು, ಫಲವನ್ನು ಬಯಸದಿರು ಎಂದೇ ಸಾರಿದೆ. ಕರ್ಮ ಎಂಬುದು ಕರ್ತವ್ಯದೊಂದಿಗೆ ಸಂಯೋಜಿತವಾದಾಗ ಬದುಕಿಗೆ ರಾಜಪಥ ನಿಶ್ಚಿತ. ಕರ್ಮಕ್ಕೆ ಪ್ರತಿಫಲವಾಗಿ ಹೊಗಳಿಕೆ, ಮನ್ನಣೆ, ಪ್ರಚಾರ ಮುಂತಾದ ಯಾವುದೇ ಪ್ರತಿಫಲವನ್ನೂ ಆಶಿಸಬಾರದು. ಭಾರತೀಯ ಪರಂಪರೆಯಲ್ಲಿ ದೈವತ್ವಕ್ಕೆ ಅಪಾರವಾದ ಮನ್ನಣೆಯಿದೆ. ಆದರೆ ನಾವು ದೇವರನ್ನು ಗುರುತಿಸುವಲ್ಲಿ ವಿಫಲರಾಗಿರುವುದು ನಮ್ಮ ದುರ್ದೈವ. ಗುಡಿ, ಮಂದಿರ, ಮಸೀದಿ, ಚರ್ಚು, ಬಸದಿ ಮುಂತಾದ ಆರಾಧನಾಲಯಗಳಲ್ಲಿರುವುದು ಮಾತ್ರವೇ ದೇವರು ಎಂಬ ನಿರೂಪಣೆ ಸಮಂಜಸವಲ್ಲ. ಸರಿಯಾದುದು, ಸಮರ್ಪಕವಾದುದು ದೇವರು ಎಂಬ ಭಾವನೆ ನಮ್ಮಲ್ಲಿರಲಿ. ನಮ್ಮೊಳಗಿನ ಆತ್ಮ ಪರಮಾತ್ಮ, ಇತರರೊಳಗಿನ ಆತ್ಮವೂ ಪರಮಾತ್ಮ ಎಂಬ ಭಾವನೆ ನಮ್ಮಲ್ಲಿರಲಿ. ನಾವು ವೇದ-ಪುರಾಣದಲ್ಲಿ ಓದುವ ದೇವರಂತೆ ನಮ್ಮ ಸಮಕಾಲೀನರೆಲ್ಲರಲ್ಲೂ ದೇವರನ್ನು ಕಾಣುವ ಗುಣ ಹೊಂದಿದಾಗ, ನಮ್ಮ ಬದುಕಿಗೆ ರಾಜಪಥ ಒದಗುತ್ತದೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************


Ads on article

Advertise in articles 1

advertising articles 2

Advertise under the article