-->
ಜೀವನ ಸಂಭ್ರಮ : ಸಂಚಿಕೆ - 54

ಜೀವನ ಸಂಭ್ರಮ : ಸಂಚಿಕೆ - 54

ಜೀವನ ಸಂಭ್ರಮ : ಸಂಚಿಕೆ - 54
                                
            ಮಕ್ಕಳೇ, ನಾವು ಸಂತೋಷ ಪಡಬೇಕಾದರೆ ಸಿರಿವಂತಿಕೆ ಬೇಕೆಂದು ಹೆಚ್ಚಾಗಿ ತಿಳಿದಿರುತ್ತೇವೆ. ಆದರೆ, ಈ ಘಟನೆಗಳನ್ನು ಓದಿ, ಪರಿಶೀಲಿಸಿದ ನಂತರ ನೀವೇ ತೀರ್ಮಾನಿಸಿ.
       ಒಂದು ಊರು. ಅಲ್ಲಿ ಒಂದು ಬಡ ಕುಟುಂಬ ವಾಸವಾಗಿತ್ತು. ಆ ಮನೆಯಲ್ಲಿ ಮನೆಯ ಯಜಮಾನ, ಹೆಂಡತಿ ಹಾಗೂ ಒಂದು ಚಿಕ್ಕ ಮಗು ಅಂದರೆ ಹಸುಗೂಸು ವಾಸವಾಗಿದ್ದರು. ಅವರು ವಾಸವಿದ್ದುದ್ದು ಒಂದು ಸಣ್ಣ ಮುರಿದ ಗುಡಿಸಲು. ಅದರಲ್ಲಿ ಹೇಳಿಕೊಳ್ಳುವಂತಹ ವಸ್ತುಗಳು ಇರಲಿಲ್ಲ. ಅಡುಗೆ ಮಾಡಲು ಬೇಕಾದ ಮಣ್ಣಿನ ಪಾತ್ರೆ, ನೀರು ತುಂಬಿಡಲು ಹಾಗೂ ಕಾಯಿಸಲು ಮಣ್ಣಿನ ಹಂಡೆ, ಮಲಗಲು ಚಾಪೆ ಇಷ್ಟು ಬಿಟ್ಟರೆ ಬೇರೇನು ಇರಲಿಲ್ಲ. ಮನೆಯೊಡತಿ ಹರಿದ ಸೀರೆ ಉಟ್ಟು ಮಗುವಿಗೆ ಹಾಲು ಕುಡಿಸುತ್ತಿದ್ದಾಳೆ. ಮಗು ಹಾಲು ಕುಡಿದ ನಂತರ ನಗುತ್ತದೆ. ಆ ನಗುಮುಖ ನೋಡಿ ತಾಯಿಯಲ್ಲಿ ಎಂತಹ ಆನಂದ?. ಎಷ್ಟು ಸಂತೋಷ?. ಆನಂದಕ್ಕೆ ಯಾವುದೂ ಸಾಟಿ ಇಲ್ಲ. ಆ ಮಗುವಿನ ನಗುವಿನಲ್ಲಿ ತಾಯಿ ತನ್ನ ಎಲ್ಲಾ ನೋವನ್ನು ಮರೆಯುತ್ತಾಳೆ. ಸಂತೋಷ ಬಿಟ್ಟು ಅಲ್ಲಿ ಬೇರೇನು ಕಾಣುವುದಿಲ್ಲ.
        ಒಂದು ಅರಮನೆ. ಅರಮನೆ ಎಂದ ಮೇಲೆ ಕೇಳಬೇಕೆ ವಜ್ರ, ಚಿನ್ನ ಮತ್ತು ಧನಕ್ಕೇನು ಕೊರತೆ ಇರಲಿಲ್ಲ. ಸೇವೆಗಾಗಿ ಸೇವಕಿಯರು. ಮಹಾರಾಣಿಗೆ ಒಂದು ಸುಂದರ ಮಗುವಾಗಿದೆ. ಮಗುವನ್ನು ಚಿನ್ನದ ತೊಟ್ಟಿಲಲ್ಲಿ ಮಲಗಿಸಿದ್ದಾರೆ. ಮಗು ಅತ್ತರೆ ಮಹಾರಾಣಿ ಹಾಲು ಕುಡಿಸುತ್ತಾಳೆ. ಉಳಿದ ಎಲ್ಲಾ ಕೆಲಸವನ್ನು ಸೇವಕಿಯರೇ ಮಾಡುತ್ತಾರೆ. ಮಗುವಿನ ಸ್ನಾನ, ತೊಟ್ಟಿಲು ತೂಗುವುದು ಮತ್ತು ಆಟ ಆಡುವುದು ಎಲ್ಲಾ ಸೇವಕಿಯರೇ. ಮಗುವಿನ ನಗು ಕಂಡು ಆನಂದ ಪಡುವವರು ಸೇವಕಿಯರೇ. ಹಾಲು ಕುಡಿಸಲು ಚಿನ್ನದ ಬಟ್ಟಲು ಇದೆ. ಆದರೆ ತಾಯಿಯ ಮಮತೆ ಮಗುವಿಗಿಲ್ಲ. ಮಗುವಿನ ನಗುವನ್ನು ತಾಯಿ ನೋಡುತ್ತಿಲ್ಲ. ಮಗುವಿನಲ್ಲಿ ಸಂತೋಷ ಕಾಣುತ್ತಿಲ್ಲ. ಬಹುತೇಕ ಅರಮನೆಯ ಚಿತ್ರಣ ಇದು.
        ಈ ಎರಡು ಘಟನೆ ನೋಡಿ. ಈಗ ಹೇಳಿ. ಸಂತೋಷಕ್ಕೆ ಸಿರಿತನ ಕಾರಣವೇ?. ಇಲ್ಲ. ಸಂತೋಷಕ್ಕೆ ಬೇಕಾಗಿರುವುದು ಪ್ರೀತಿ ತುಂಬಿದ ಮನಸ್ಸು. ಪ್ರೀತಿ ತುಂಬಿದ ಮನಸ್ಸು ಇಲ್ಲದ ಮೇಲೆ ಸಂತೋಷ ಹೇಗಾಗುತ್ತದೆ?. ಪ್ರೀತಿ ತುಂಬಿದ ಮನಸ್ಸನ್ನು ಹೊಂದಲು ನಾವೇನು ಮಾಡಬೇಕು?.
          ಜಗತ್ತಿನಲ್ಲಿ ಒಳ್ಳೆಯದು, ಕೆಟ್ಟದ್ದು ಎರಡು ಇದೆ. ನಾವು ಒಳ್ಳೆಯದನ್ನೇ ನೋಡಿ, ಕೇಳಿ, ರುಚಿಸಿ, ಮತ್ತು ಸ್ಪರ್ಶಿಸಿ ಅನುಭವಿಸಬೇಕು. ಇದರಿಂದ ಮನಸ್ಸಿನಲ್ಲಿ ಒಳ್ಳೆಯದೇ ತುಂಬುತ್ತದೆ. ಒಳ್ಳೆಯದೇ ಇರುವ ಕಡೆ ಪ್ರೀತಿ ಸಹಜವಾಗಿರುತ್ತದೆ. ಇಂತಹ ಮನಸ್ಸು ಎಷ್ಟೇ ಕೆಟ್ಟದ್ದನ್ನು ನೋಡಿದರೂ ಅದರಲ್ಲಿ ಒಳ್ಳೆಯದನ್ನೇ ಗುರುತಿಸಿ ಆನಂದ ಪಡುತ್ತದೆ. ಒಂದು ವೇಳೆ ಕೆಟ್ಟದ್ದನ್ನೇ ನೋಡಿ, ಕೇಳಿ, ರುಚಿಸಿ, ಮತ್ತು ಸ್ಪರ್ಶಿಸಿ ಕೆಲಸವನ್ನು ಇಷ್ಟವಿಲ್ಲದೆ ಹೇಗೇಗೋ ಮಾಡಿದರೆ, ಆಗ ಮನಸ್ಸಿನಲ್ಲಿ ಕೆಟ್ಟದ್ದೇ ತುಂಬುತ್ತದೆ. ಕೆಟ್ಟದ್ದು ಇರುವ ಕಡೆ ದ್ವೇಷ, ಅಸೂಯೆ ಮತ್ತು ಮತ್ಸರ ಇಂತಹದೇ ಇರುತ್ತದೆ. ಇಂತಹ ಮನಸ್ಸು ಎಷ್ಟೇ ಒಳ್ಳೆಯ ವಸ್ತುಗಳನ್ನು ನೋಡಿದರು, ಅದರಲ್ಲಿ ಕೆಟ್ಟದ್ದನ್ನು ಹುಡುಕಿ ಘಾಸಿಗೊಳ್ಳುತ್ತದೆ. ಮಕ್ಕಳೇ ದೇಹ ನಮ್ಮದು. ಈ ದೇಹದಲ್ಲಿರುವ ಇಂದ್ರಿಯ ಮತ್ತು ಮನಸುಗಳು ನಮ್ಮ ಅಧೀನದಲ್ಲಿದೆ. ಇವುಗಳನ್ನು ನಿಯಂತ್ರಿಸಿ ಒಳ್ಳೆಯದಕ್ಕೆ ಬಳಸಬೇಕು. ಆಗ ಸಂತೋಷವು ಸಹಜವಾಗಿ ನಮ್ಮದಾಗುತ್ತದೆ. ಸಂತೋಷಪಡಲು ಪ್ರೀತಿ ತುಂಬಿದ ಮನಸ್ಸು ಕಾರಣವೇ ಹೊರತು ಐಶ್ವರ್ಯವಲ್ಲ. ವಿದೇಶಿ ಲೇಖಕ ಹೇಳುತ್ತಾನೆ "richness depends upon richness of your mind". ಮಕ್ಕಳೇ ನಾವು ಪ್ರೀತಿ ತುಂಬಿದ ಮನಸ್ಸನ್ನು ರೂಪಿಸಿಕೊಳ್ಳೋಣ.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************



Ads on article

Advertise in articles 1

advertising articles 2

Advertise under the article