-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 69

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 69

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 69
                   
        ಅದೊಂದು ಊರ ಮಧ್ಯೆಯಿರುವ ಹಳೆಯ ಮನೆ. ಸದಾ ಕ್ರಿಯಾಶೀಲವಾಗಿದ್ದು ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದ ಆ ಮನೆಯು ಇಂದು ಅನಾಕರ್ಷಕವಾಗಿ ಪಾಳುಬೀಳುವ ಹಂತದಲ್ಲಿದೆ. ಧೂಳು ಮೆತ್ತಿದ, ಚೆಕ್ಕೆ ಎದ್ದಿರುವ, ದುರಸ್ತಿಗೆ ಕಾದಿರುವ, ಬಣ್ಣ ಬೇಡುವ ಗೋಡೆ. ಆ ಮನೆಯನ್ನು ನೋಡಿದವರೆಲ್ಲ ಅದರ ಗತ ವೈಭವವನ್ನು ವರ್ಣಿಸುತ್ತಾ ಅದರ ಪ್ರಸ್ತುತ ಸ್ಥಿತಿಗೆ ಮರುಕಪಡುತ್ತಾ ಬೇಸರದಿಂದ ಮುಂದುವರಿಯುತ್ತಾರೆ. ಆದರೆ ಅವರಲ್ಲೊಬ್ಬ ಎದ್ದು ನಿಂತು "ಅಯ್ಯಾ ನೋಡುಗರೇ... ನೀವೆಲ್ಲರೂ ಈ ಮನೆಯ ವೈಭವವನ್ನು ನೋಡಿದವರು. ಈ ಮನೆಯ ಅಗತ್ಯತೆಯನ್ನು ಅರಿತವರು. ಪ್ರಸ್ತುತ ಇದರ ಮೌನ ಪರಿಸ್ಥಿತಿಯನ್ನು ಕಂಡು ಮರುಕ ಪಡೆಯುತ್ತಿರುವಿರಿ. ಆದರೆ ನೀವು ಮನಸ್ಸು ಮಾಡಿದರೆ ಈ ಮನೆಯ ಗತ ವೈಭವವನ್ನು ಮರಳಿಸಬಹುದು. ಬನ್ನಿ ನನ್ನ ಜತೆ ಕೈಜೋಡಿಸಿ. ನಾನು - ನೀವು ಸೇರಿ ಈ ಮನೆಯ ಪರಿಸ್ಥಿತಿ ಬದಲಾಯಿಸೋಣ. ಬನ್ನಿ ಎಲ್ಲರು ಜತೆಗೆ ಬನ್ನಿ" ಎಂದನು.
      ಆತನ ಕರೆಯ ಕೇಳಿ ಹೆಚ್ಚಿನವರು ಅಲ್ಲಿಂದ ಕೇಳಿಯೂ ಕೇಳದಂತೆ ಹೊರ ನಡೆದರು. ಕೆಲವರು ಮೌನವಾದರು. ಬೆರಳಣಿಕೆಯ ಮಂದಿ ಮಾತ್ರ ಅವನ ಜತೆ ಸೇರಿದರು. ಮೊದಲು ಅದರ ಅನಾಕರ್ಷಕ ಅಂಶಗಳನ್ನು ಪಟ್ಟಿ ಮಾಡಿದರು. ಒಂದು ಕಾಲದಲ್ಲಿ ಆಕರ್ಷಕ ಬಣ್ಣಗಳಿಂದ ಕಂಗೊಳಿಸುತ್ತಿದ್ದ ಗೋಡೆಗಳು ಇಂದು ಬಣ್ಣ ರಹಿತವಾಗಿದೆ. ಅದಕ್ಕಾಗಿ ಮೊದಲು ಧೂಳು ತೆಗೆದು, ದುರಸ್ತಿ ಕೆಲಸ ಮಾಡಿ, ಆಕರ್ಷಕವಾದ ವಿವಿಧ ಬಣ್ಣಗಳನ್ನು ಬಳಿದರು. ಬಣ್ಣ ಬಳಿದ ಕೂಡಲೇ ಮನೆಯು ನಿಧಾನವಾಗಿ ಜೀವಂತಿಕೆಯನ್ನು ಪಡೆಯಿತು. ನಿಧಾನವಾಗಿ ಎಲ್ಲರ ಆಕರ್ಷಣೆಗೆ ಒಳಗಾಯಿತು. ದೂರ ಸರಿದವರು ಹಾಗೂ ದೂರಿ ಹೋದವರು ಮರಳಿ ಬರಲಾರಂಭಿಸಿದರು. ಇದೀಗ ಮತ್ತೆ ಹಿಂದಿನ ವೈಭವದಂತೆ ಮತ್ತೆ ಆಕರ್ಷಕ ಕೇಂದ್ರವಾಗಿ ಎಲ್ಲರನ್ನು ಕೈಬೀಸಿ ಕರೆಯುತ್ತಿದೆ. 
     ಹೌದಲ್ವ ಗೆಳೆಯರೇ... ಚೈತನ್ಯ ಭರಿತ, ಚಟುವಟಿಕೆಶೀಲ ಹಾಗೂ ಕ್ರಿಯಾಶೀಲ ವ್ಯಕ್ತಿತ್ವವೊಂದು ಯಾವುದೋ ಕಾರಣಕ್ಕಾಗಿ ನಿಷ್ಕ್ರೀಯವಾಗಿರುತ್ತದೆ. ಅದನ್ನು ನೋಡಿ ಕೆಲವರು ತಮ್ಮೊಳಗೆ ವ್ಯಥೆ ಪಡುತ್ತಾರೆ. ಮತ್ತೆ ಕೆಲವರು ಮೌನವಾಗಿರುತ್ತಾರೆ. ಆದರೆ ಕೆಲವೇ ಕೆಲವರು ಮಾತ್ರ ನಿಷ್ಕ್ರೀಯ ವ್ಯಕ್ತಿತ್ವವನ್ನು ಮರಳಿ ಕ್ರಿಯಾಶೀಲವಾಗಿರಿಸಲು ಭರವಸೆಯ ಬಣ್ಣ ತುಂಬಿಸುತ್ತಾರೆ. ಕವಿದಿಹ ನಿರುತ್ಸಾಹದ ಧೂಳನ್ನು ಒರೆಸಿ ಉತ್ಸಾಹದ ಬಣ್ಣವನ್ನು ಬಳಿದು ಝಗಮಗಿಸುತ್ತಾರೆ. ಕುಂದಿದ ವ್ಯಕ್ತಿತ್ವಕ್ಕೆ ಮತ್ತೆ ಕಳೆಗಟ್ಟಿಸುತ್ತಾರೆ. ಈ ಮೂಲಕ ವ್ಯಕ್ತಿತ್ವವೊಂದನ್ನು ಜೀವಂತವಾಗಿರಿಸಿರುತ್ತಾರೆ. ಈ ರೀತಿ ನಮ್ಮೊಳಗೆ ಕಳೆಗುಂದಿದ ವ್ಯಕ್ತಿತ್ವಗಳಿಗೆ ಭರವಸೆಯ ಬಣ್ಣ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಬಳಲಿರುವ ಜೀವಕ್ಕೆ ಬದುಕುವ ಭಾವನೆ ಮೂಡಿಸಬೇಕಾಗಿದೆ. ಬದಲಾವಣೆಯನ್ನು ತರುವ ಈ ಕೆಲಸಕ್ಕೆ ನಾವೆಲ್ಲರೂ ಬದಲಾಗಬೇಕಾಗಿದೆ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article