-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 68

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 68

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 68
              
             ಬಹುಹಂತ ರಾಕೆಟ್ ನ ಉಡಾವಣೆ ಕ್ರಮ ನಮಗೆಲ್ಲ ಗೊತ್ತಿರುವಂಥದ್ದೆ. ರಾಕೆಟ್ ಗೆ ಅಗತ್ಯ ಉಪಗ್ರಹವನ್ನು ಜೋಡಿಸಿ ಉಡಾವಣೆ ಕೇಂದ್ರದಲ್ಲಿ ಅಂತಿಮ ಸ್ಪರ್ಶ ಸಿಕ್ಕಾಗ ಅದು ತನ್ನೆಲ್ಲ ಶಕ್ತಿಯನ್ನು ಬಳಸಿ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನಿಯಮಕ್ಕೆ ಅನುಗುಣವಾಗಿ ವೇಗವಾಗಿ ಆಕಾಶದತ್ತ ಚಿಮ್ಮುತ್ತದೆ. ಒಂದು ನಿರ್ದಿಷ್ಟ ದೂರದ ನಂತರ ತನಗೆ ಅನಗತ್ಯವಾದ ಒಂದೊಂದೆ ಭಾಗಗಳನ್ನು ಕಳಚಿಕೊಂಡು ತನ್ನನ್ನು ತಾನು ಹಗುರ ಮಾಡಿಕೊಂಡು ತನಗಾಗಿ ನಿರ್ಧರಿತವಾದ ಕಕ್ಷೆಯತ್ತ ಗುರಿಮಾಡಿ ಚಲಿಸುತ್ತಿರುತ್ತದೆ. ತನ್ನ ಪ್ರತಿಯೊಂದು ಹಂತದಲ್ಲೂ ನಿರ್ದಿಷ್ಟ ಭಾಗಗಳನ್ನು ಕಳಚಿಕೊಂಡಂತೆ ತನ್ನ ವೇಗವನ್ನು ಮತ್ತಷ್ಟೂ ಹೆಚ್ಚಿಸಿ ಕೊನೆಗೆ ಉಪಗ್ರಹ ಮತ್ತು ಕೆಲವೇ ಕೆಲವು ಅಗತ್ಯ ವಸ್ತುಗಳೊಂದಿಗೆ ಗುರಿ ಮುಟ್ಟುತ್ತದೆ. ಒಂದು ವೇಳೆ ನಿರ್ದಿಷ್ಟ ಹಂತಗಳಲ್ಲಿ ತನಗೆ ಅನಗತ್ಯವಾದ ಭಾರವನ್ನು ಕಳಚದಿದ್ದರೆ ತನ್ನ ಗುರಿ ಮುಟ್ಟಲಾಗದೆ ತಾನು ಹೊತ್ತ ಭಾರದಿಂದಲೇ ಅಷ್ಟೇ ವೇಗದಲ್ಲಿ ಹೊಂದಿಸಲಾಗದೇ ಭೂಮಿಗೆ ಮರು ಅಪ್ಪಳಿಸುತ್ತದೆ. ತನ್ನ ಗುರಿ ಮುಟ್ಟುವಲ್ಲಿ ವಿಫಲವಾಗುತ್ತದೆ. ಈ ರಾಕೆಟ್ ಪಯಣದ ಕಥೆ ತುಂಬಾ ಅದ್ಭುತ, ರೋಚಕವೂ ಮತ್ತು ಪಾಠದಾಯಕವೂ ಆಗಿದೆ.
       ನಮ್ಮ ಬದುಕೆಂಬ ರಾಕೆಟ್ ಪಯಣ ಕೂಡಾ ಇದೇ ರೀತಿ ತಾನೇ. ಒಂದು ನಿರ್ಧರಿತ ಗುರಿಯನ್ನು ಮುಟ್ಟುವ ಆಲೋಚನೆಯಿಂದ ಪ್ರಾರಂಭವಾಗುವ ಬದುಕೆಂಬ ರಾಕೆಟ್ ಪಯಣವು ನಮ್ಮ ಸುತ್ತಮುತ್ತಲೂ ಸಿಗುವ ಕ್ರಿಯೆ - ಪ್ರತಿಕ್ರಿಯೆಗಳಿಂದ ವೇಗವನ್ನು ಗಳಿಸಿ ಅಥವಾ ಕಳೆದುಕೊಂಡು ಮುಂದುವರಿಯುತ್ತದೆ. ನಿರ್ದಿಷ್ಟವಾದ ಪ್ರತಿಯೊಂದು ಹಂತಗಳಲ್ಲಿಯೂ ಬದುಕಿನ ಮುಂದುವರಿಕೆ ಅಥವಾ ಗುರಿಯ ಮುಟ್ಟಲು ಅನಗತ್ಯವಾದ ವಿಚಾರಗಳನ್ನು ಕಳಚಿಕೊಂಡು ಕೇವಲ ಅಗತ್ಯ ವಿಚಾರಗಳೊಂದಿಗೆ ಪಯಣ ಮುಂದುವರಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಭಾರ ಹೆಚ್ಚಾಗಿ ಜೀವನ ಸಾಗಿಸಲು ಕಷ್ಟವಾಗಬಹುದು. ಯಾವಾಗ ಅನಗತ್ಯದ ಕಳಚುವಿಕೆ ವೇಗವಾಗಿ ಸಾಗುತ್ತದೋ ಆಗ ಗುರಿಯನ್ನು ಬೇಗನೇ ಮುಟ್ಟಬಹುದು.
        ವಿದ್ಯಾರ್ಥಿಗಳಿಗೆ ತಾನು ಕಲಿಯುತ್ತಿರುವ ಪ್ರತಿಯೊಂದು ತರಗತಿ ಕೂಡಾ ರಾಕೆಟ್ ಇದ್ದಂತೆ. ಜೂನ್ ತಿಂಗಳಲ್ಲಿ ಎಲ್ಲಾ ವಿಚಾರಗಳಿಂದ ಪೂರ್ತಿಯಾಗಿ ಪ್ರಾರಂಭವಾಗುವ ವಿದ್ಯಾರ್ಥಿ ಜೀವನವು ಮಾರ್ಚ್- ಏಪ್ರಿಲ್ ಆಗುವಾಗ ತನ್ನ ಶೈಕ್ಷಣಿಕ - ಪಠ್ಯ - ಸಹಪಠ್ಯ - ವೈಯಕ್ತಿಕ ಪ್ರತಿಭೆ ಕೌಶಲ್ಯಗಳ ಗರಿಷ್ಠ ಸಾಧನೆಯ ಗುರಿಯನ್ನು ಮುಟ್ಟಬೇಕಾಗಿದೆ. ಹಾಗಾಗಿ ಗುರಿಯನ್ನು ಮುಟ್ಟುವ ಹಂತಗಳಲ್ಲಿ ಕೆಲವನ್ನು ಕಳಚಬೇಕಾಗಿದೆ. ಗುರಿ ಸಾಧಿಸಬೇಕಾದರೆ ಪ್ರತಿ ಹಂತದಲ್ಲೂ ಮೊಬೈಲ್ ನ ಅತೀ ಬಳಕೆ, ಆನ್ ಲೈನ್ ಗೇಮ್ಸ್ ಆಡುವುದು, ಹರಟೆ, ಅಶಿಸ್ತು, ಅನಗತ್ಯ ಕಾಲಹರಣ, ಕೆಟ್ಟವರ ಸಂಘ, ಹಗಲುಗನಸು, ಸೋಮಾರಿತನ, ಅನಗತ್ಯ ಕಾರ್ಯಕ್ರಮಗಳಲ್ಲಿ ಭಾಗಹಿಸುವುದು... ಹೀಗೆ ಹಲವಾರು ಅಂಶಗಳನ್ನು ಕಳಚುತ್ತಾ ಬರುವುದು ಅಗತ್ಯ. ಆಗ ಮಾತ್ರ ವಿದ್ಯಾರ್ಥಿ ಜೀವನದ ಗುರಿಯನ್ನು ಮುಟ್ಟಬಹುದಾಗಿದೆ.
      ಬನ್ನಿ... ಈ ಭಾರದ ಕಳಚುವಿಕೆಯ ಮೂಲಕ ಬದುಕಿನ ಗುರಿಯನ್ನು ಮುಟ್ಟುವತ್ತ ಪಯಣ ಮುಂದುವರಿಸೋಣ. ಈ ಮೂಲಕ ಹೊಸ ಬದಲಾವಣೆಗೆ ಬದಲಾಗುವತ್ತ ಬದಲಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article