-->
ಕನ್ನಡವೇ ಸತ್ಯ... ಕನ್ನಡವೇ ನಿತ್ಯ - 67ನೇ ಕನ್ನಡ ರಾಜ್ಯೋತ್ಸವದ ವಿಶೇಷ ಲೇಖನ

ಕನ್ನಡವೇ ಸತ್ಯ... ಕನ್ನಡವೇ ನಿತ್ಯ - 67ನೇ ಕನ್ನಡ ರಾಜ್ಯೋತ್ಸವದ ವಿಶೇಷ ಲೇಖನ

ಲೇಖಕರು : ವಿಜಯಲಕ್ಷ್ಮೀ ಕಟೀಲು
ಕನ್ನಡ ಭಾಷಾ ಶಿಕ್ಷಕಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಸಂಪರ್ಕ ಸಂಖ್ಯೆ : +91 99645 85581

            'ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡ ವಾಗಿರು ಕನ್ನಡವೇ ಸತ್ಯ... ಕನ್ನಡವೇ ನಿತ್ಯ...' ಕುವೆಂಪುರವರ ಭಾಷಾಪ್ರೇಮದ ಈ ಸಾಲುಗಳನ್ನು ಮರೆಯಲು ಸಾಧ್ಯವೆ? ಆಸರೆಗೆ ನೆಲವಿತ್ತು, ಉಸುರಿಗೆ ಗಾಳಿತೀಡಿ, ದೃಷ್ಟಿಗೆ ಬೆಳಕ ಚೆಲ್ಲಿ ನರನಾಡಿಗಳ ಜೀವರಸಕ್ಕೆ ಫಲ - ಧಾನ್ಯ ಕರುಣಿಸಿದ ಈ ನೆಲ ಸಿರಿ ಕನ್ನಡ ನಾಡಲ್ಲವೆ? ಮಣ್ಣ ಕಣಕಣದಲ್ಲಿ ಜೀವಭಾವವ ತುಂಬಿದ ಕನ್ನಡದ ಭೂಮಿಯಲ್ಲವೆ?
         ಯಾವಾಗ ಕನ್ನಡ ಭಾಷೆ ಹುಟ್ಟಿತು? ಎಲ್ಲಿ? ಹೇಗೆ ? ಎಂಬ ಪ್ರಶ್ನೆಗೆ ಉತ್ತರ ಸಿಗದು. ಆದರೆ ಕ್ರಿ.ಪೂ 3ನೆಯ ಶತಮಾನದ 'ಇಸಿಲ' ಎನ್ನುವ ಪದ ಕನ್ನಡದ್ದೆಂಬ ಉಲ್ಲೇಖವಿದೆ. ಕ್ರಿ.ಪೂ 4ನೆಯ ಶತಮಾನದಲ್ಲೇ ಗ್ರೀಕ್ ಪ್ರಹಸನವೊಂದರಲ್ಲಿ 'ಕನ್ನಡ ವಾಕ್ಯ' ದ ಪ್ರಯೋಗದ ದಾಖಲೆಯಿದೆ. ಕ್ರಿ.ಶ 5ನೆಯ ಶತಮಾನದ 'ಹಲ್ಮಿಡಿ ಶಾಸನ' ಕನ್ನಡದ ಮೊದಲ ಶಾಸನವಾಗಿದೆ. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಕರ್ನಾಟಕದ ರಾಜ್ಯಭಾಷೆ. ಆದರೆ ಕನ್ನಡ ಭಾಷೆಯ ಜೀವಂತಿಕೆ ಇಂದಿನ ದಿನಗಳಲ್ಲಿ ಸವಾಲಾಗಿ ಹೋಗಿದೆ ಎಂದರೆ ತಪ್ಪಲ್ಲ.
         ಇತ್ತೀಚೆಗೆ ಕವಿಯೊಬ್ಬರ ಸಾಲುಗಳನ್ನು ಓದಿದ್ದು ನೆನಪಿಸುವುದಾದರೆ "ಸ್ವಾಮಿ ಬೆಂಗಳೂರಿನಲ್ಲಿ ಕನ್ನಡ ಭವನ ಎಲ್ಲಿದೆ? ಎಂದು ಕೇಳಿದರೆ, 3ಡ್ (ಥರ್ಡ್)ಕ್ರಾಸ್, 4ತ್ ಮೈನ್, ಲೆಫ್ಟ್ ಸೈಡಲ್ಲಿ ಸ್ಟ್ರೈಟ್ ಹೋದರೆ ಡೆಡ್ ಎಂಡಲ್ಲಿದೆ" ಎಂಬ ಉತ್ತರ. ಇಲ್ಲಿನ ಮಾತುಕತೆ ಕನ್ನಡದಲ್ಲೇ ನಡೆದಿದೆ. ಆದರೆ ಬಳಕೆಯಾದ ಪದಗಳು ಅತಿಹೆಚ್ಚು ಇಂಗ್ಲೀಷ್ ಭಾಷೆಯದ್ದು. ಭಾಷೆಗಾಗಿ ಹೋರಾಟ ನಡೆಯುತ್ತಲೇ ಇದೆ. ಅಂದು ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾದ ಬಗ್ಗೆ ಹಿಂತಿರುಗಿ ನೋಡಿದರೆ.... ಅದು 1905 ರ ಕಾಲ. ಬಂಗಾಳ ವಿಭಜನೆಯು ಭಾಷಾಭಿಮಾನಕ್ಕೆ ನಾಂದಿ ಹಾಡಿತು. ಅಭಿಮಾನ ಬಹಿರಂಗಗೊಳ್ಳಲು ಕಾರಣವೂ ಆಯಿತು. ಚಳುವಳಿಗಳು ಅತ್ಯುಗ್ರವಾಯಿತು. ಕವಿ ರವೀಂದ್ರನಾಥ ಟಾಗೋರರೂ ಭಾಷಾ ಚಳುವಳಿಗೆ ಧುಮುಕಿದರು. ಇಲ್ಲಿ ಎಲ್ಲರಲ್ಲೂ ಕಂಡುಬಂದದ್ದು ಅವರವರ ಭಾಷಾ ವ್ಯಾಮೋಹ. ಭಾಷಾವಾರು ವಿಂಗಡಣೆಗಾಗಿ ಹೋರಾಟ.
        ಸ್ವಾತಂತ್ರ್ಯ ಪಡೆದ ಅನಂತರ ಏಕೀಕರಣವೇ ಮುಖ್ಯ ವಿಷಯವಾಗಿತ್ತು. ಕರ್ನಾಟಕದಲ್ಲಿ ಏಕೀಕರಣ ಚಳುವಳಿಯನ್ನು ಮೊದಲು ಆರಂಭಿಸಿದವರು ಆಲೂರು ವೆಂಕಟರಾಯರು. ಏಕೀಕರಣದಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ತುಡಿತ ಕಾಸರಗೋಡಿನ ಕನ್ನಡಿಗರದ್ದು. ಆದರೆ.... ಫಜಲ್ ಆಲಿ ಆಯೋಗ ಕಾಸರಗೋಡನ್ನು ಕೇರಳಕ್ಕೆ ಸೇರಿಸಿದ್ದು ಕರ್ನಾಟಕದ ಪಾಲಿಗೆ ಕರಾಳ ಶಾಸನವಾಯಿತು. ಅತ್ತ ಬೆಳಗಾವಿ ಮಹಾರಾಷ್ಟ್ರ ದ ಪಾಲಾಯಿತು. ಅಂದಿನಿಂದ ಇಂದಿನವರೆಗೂ ಈ ಎರಡು ಪ್ರದೇಶಗಳು ನಮ್ಮ ಭಾಷೆಯ, ನಮ್ಮದಲ್ಲದ ರಾಜ್ಯದಲ್ಲಿದೆ. ಜನತೆಯ ಹೋರಾಟಕ್ಕೆ ಮುಕ್ತಿ ಸಿಗಲೇ ಇಲ್ಲ. 'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ' ಎಂದು ಹಾಡಿದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈಗಳ ಹಾಡು ರಿಂಗಣಿಸುತ್ತಲೇ ಇದೆ.
       ಅಂತೂ 1956 ರ ನವಂಬರ್ 1 ರಂದು ಕನ್ನಡಿಗರ ಬಹುದಿನಗಳ ಕನಸು ನನಸಾಗಿ ಮೈಸೂರು ರಾಜ್ಯ ಉದಯವಾಯಿತು. ಆದರೆ ಕಾಸರಗೋಡಿನವರು 'ಚೆಲುವ ಕನ್ನಡ ನಾಡಿ' ನಿಂದ ವಂಚಿತರಾದರು. ಈ ಸಂದರ್ಭದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೆ.ವಿ.ಪುಟ್ಟಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಗಡಿನಾಡ ಕವಿ ಕೈಯಾರ ಕಿಂಙಣ್ಣ ರೈ ಯವರು,
        ಬೆಂಕಿ ಬಿದ್ದಿದೆ ಮನೆಗೆ ಓ..ಬನ್ನಿ
        ಕನ್ನಡದ ಗಡಿ ಕಾಯೆ
        ಗುಡಿ ಕಾಯೆ, ನುಡಿ ಕಾಯೆ
        ಕಾಯಲಾರೆವೆ ಸಾಯೆ
ಎಂದು ಆವೇಶಭರಿತರಾಗಿ ಹಾಡಿದಾಗ ಬಸವರಾಜ ಕಟ್ಟೀಮನಿಯವರು "ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುತ್ತೇವೆ" ಎಂಬ ಆಶ್ವಾಸನೆಯನ್ನು ನೀಡಿದರೂ ಇಂದಿಗೂ ಅದು ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ. ಮುಂದೆ ಶ್ರೀ ದೇವರಾಜ ಅರಸರು ಮುಖ್ಯಮಂತ್ರಿಯಾದಾಗ 1973 ರ ನವಂಬರ್ 1ರಂದು 'ಕರ್ನಾಟಕ' ಎಂಬ ಮರುನಾಮಕರಣವಾಯಿತು.
       ಕನ್ನಡನಾಡಿನ ಅಸ್ತಿತ್ವದ ಕುರುಹುಗಳು ಹಲವಾರು. ಕನ್ನಡನಾಡಿಗೆ ಅದರದ್ದೇ ಆದ ಬಾವುಟವಿದೆ. ಅಂದಿನ ಕನ್ನಡ ಪರ ಹೋರಾಟಗಾರರಾದ ಎಂ.ರಾಮಮೂರ್ತಿಯವರು ಹಳದಿ ಮತ್ತು ಕೆಂಪು ಬಣ್ಣದ ಬಾವುಟವನ್ನು ತಯಾರಿಸಿದರು. ಹಳದಿ ಬಣ್ಣ ಕನ್ನಡಮ್ಮನ ಅರಶಿನ ಮತ್ತು ಕುಂಕುಮ ದ ಸಂಕೇತವಲ್ಲದೆ ಶಾಂತಿ ಸೌಹಾರ್ದತೆಯ ದ್ಯೋತಕ. ಕೆಂಪು ಕ್ರಾಂತಿಯ ಸಂದೇಶ ನೀಡುತ್ತದೆ. ಕನ್ನಡಿಗರು ಶಾಂತಿಗೆ ಬದ್ಧರು. ನಾಡುನುಡಿಯ ರಕ್ಷಣೆಗಾಗಿ ಸಿದ್ಧರು ಎನ್ನುವ ಭಾವವು ಈ ಬಾವುಟದಲ್ಲಿದೆ.
      ಕನ್ನಡ ರಾಜ್ಯೋತ್ಸವ ಆಚರಣೆ, ವಿಶೇಷ ಭಾಷಾಭಿಮಾನ ಕೇವಲ ನವಂಬರ್ ತಿಂಗಳಿಗೆ ಮಾತ್ರ ಮೀಸಲಾಗದೆ ನಿತ್ಯನೂತನವಾಗಿರಲಿ. ವಿಶ್ವದ ಪ್ರಾಚೀನ ಭಾಷೆ ಕನ್ನಡದ ಉಳಿವು- ಅಳಿವು ನಮ್ಮ ಕೈಯಲ್ಲಿದೆ. ಆದರೆ ಶಾಲೆಗಳಲ್ಲಿ ಮನೆಗಳಲ್ಲಿ ಕನ್ನಡ ಮಾತನಾಡದಂತೆ ಪೋಷಕರು ಮಕ್ಕಳಿಗೆ ತಡೆಯಾಗುತ್ತಿರುವುದು ವಿಪರ್ಯಾಸವೇ ಸರಿ.
       67ನೆಯ ಕನ್ನಡ ರಾಜ್ಯೋತ್ಸವ ದ ಸಂಭ್ರಮದಲ್ಲಿರುವ ಕನ್ನಡನಾಡು ತನ್ನದೇ ಆದ ವಿಶೇಷತೆಗಳಿಂದ ದೇಶ ವಿದೇಶದ ಲಕ್ಷ್ಯವನ್ನು ತನ್ನೆಡೆಗೆ ಸೆಳೆದಿದೆ. ಕನ್ನಡ ನಾಡಿನ ಒಡಲ ತಣಿಸಿ ಕಡಲ ಸೇರುವ ಕಾವೇರಿ, ಗೋದಾವರಿ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಕೃಷ್ಣಾ, ನೇತ್ರಾವತಿ, ಶಾಂಭವಿ, ನಂದಿನಿ, ಫಲ್ಗುಣಿ, ಸೀತಾ, ಪಯಸ್ವಿನಿ, ನಮ್ಮ ನಾಡಿನ ಜೀವನದಿಗಳು. ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿ, ಕುದುರೆಮುಖ, ನಂದಿಬೆಟ್ಟ, ಕೆಮ್ಮಣ್ಣು ಗುಂಡಿಯಂತಹ ಗಿರಿ- ಶಿಖರಗಳು, ಜೋಗ, ಅಬ್ಬಿ, ದಬ್ಬೆ, ಹನುಮನಗುಂಡಿ, ಗೋಕಾಕ್, ಗಗನ ಚುಕ್ಕಿ, ಭರಚುಕ್ಕಿಯಂತಹ ಧುಮ್ಮಿಕ್ಕುವ ಜಲಪಾತಗಳು ನಮ್ಮ ನಾಡಿನ ಹೆಮ್ಮೆ. ಮೈಸೂರು ಚಾಮುಂಡಿ, ನಂಜುಂಡೇಶ್ವರ, ಶಿರಸಿ ಮಾರಿಕಾಂಬ, ಶ್ರವಣಬೆಳಗೊಳ, ಧರ್ಮಸ್ಥಳ, ಉಡುಪಿ, ಕೊಲ್ಲೂರು, ಕಟೀಲು, ಸುಬ್ರಹ್ಮಣ್ಯ, ಮುರುಡೇಶ್ವರ ಇತ್ಯಾದಿ ಧಾರ್ಮಿಕ ಕ್ಷೇತ್ರಗಳು ಕನ್ನಡಿಗರ ಧಾರ್ಮಿಕ ನಂಬಿಕೆಯ ಕುರುಹುಗಳು. ಸಾಹಿತ್ಯ ಕ್ಷೇತ್ರದ ಪಂಪ, ರನ್ನ ನಾಗಚಂದ್ರ ನೇಮಿಚಂದ್ರ, ಜನ್ನ, ಪೊನ್ನ, ಲಕ್ಷ್ಮೀಶ, ಕುಮಾರವ್ಯಾಸ, ಕುವೆಂಪು, ಕಾರಂತ, ಮಾಸ್ತಿ, ಬೇಂದ್ರೆ, ಶಿವರುದ್ರಪ್ಪ ಹೀಗೆ ಅದೆಷ್ಟೋ ಕನ್ನಡ ನಾಡು ಕಂಡ ಕವಿಶ್ರೆಷ್ಠರ ತಾಣವಿದು. ಸಿನೇಮಾ ಪ್ರಪಂಚದಲ್ಲಿ ತನ್ನದೇ ಹೆಸರು ಮೂಡಿಸಿ ಧ್ರುವತಾರೆಗಳಾದ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಕಲ್ಪನಾ, ಮಂಜುಳಾ ಇತ್ಯಾದಿ ಮನೋರಂಜನಾ ಕ್ಷೇತ್ರದಲ್ಲಿ ಹೆಸರು ಪಡೆದ ಕಲಾವಿದರಿವರು.
      ಜನಪದ ಕಲೆಗಳು, ರಂಗಕಲೆಗಳು, ಶೈಕ್ಷಣಿಕ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ಕೈಗಾರಿಕಾ ಉದ್ಯಮ, ತಾಂತ್ರಿಕ ಕ್ಷೇತ್ರ,ವಿಧ ವಿಧ ಕಾರ್ಖಾನೆಗಳು ನಮ್ಮ ರಾಜ್ಯದ ಅಭಿವೃದ್ಧಿಯ ಪಥದ ಹೆಗ್ಗುರುತುಗಳು. ಚೆಲುವಿಗೆ ಚೆಲುವು, ಭಾಷೆಯೋ ಕಸ್ತೂರಿ ಘಮಿಸಿದಂತೆ, ಇಂತಹ ಕನ್ನಡನಾಡು ನುಡಿ-ನಡೆಗೆ ಸಂಪದವಾಗಿರಲಿ, ನನ್ನ ನಾಡೆಂಬ ಅಭಿಮಾನವಿರಲಿ. ರಾಜ್ಯೋತ್ಸವದ ಸಂಭ್ರಮದ ಕ್ಷಣಗಳು ನಿತ್ಯ ಸಂಜೀವಿನಿಯಾಗಿರಲಿ.
      67 ನೆಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
......................... ವಿಜಯಲಕ್ಷ್ಮೀ ಕಟೀಲು
ಕನ್ನಡ ಭಾಷಾ ಶಿಕ್ಷಕಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಸಂಪರ್ಕ ಸಂಖ್ಯೆ : +91 99645 85581
******************************************



Ads on article

Advertise in articles 1

advertising articles 2

Advertise under the article