-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
     
       ದಶಕಗಳಾಚೆಗೆ “ಬೆಸುಗೆ” ಎಂಬ ಚಲನಚಿತ್ರ ಬಹಳ ಜನಪ್ರಿಯವಾಗಿತ್ತು. ಮೇರು ನಟರಾದ ಶ್ರೀನಾಥ್ ಮತ್ತು ಮಂಜುಳಾ ನಟಿಸಿದ, ಇಂದಿಗೂ ಜನಮನದಲ್ಲಿ ಓಡಾಡುತ್ತಿರುವ ಚಲನಚಿತ್ರವಿದು. ಜೀವನದ ಬೆಸುಗೆಯೇ ಚಲನಚಿತ್ರದ ತಿರುಳು. ಬೆಸುಗೆ ಎಂದರೆ ಒಂದನ್ನೊಂದು ಜೋಡಿಸುವುದು ಎಂದರ್ಥ. ಕೌಟುಂಬಿಕವಾಗಿ ಬೆಸುಗೆ ಕಳಚಲ್ಪಡುತ್ತಿರುವ ಇಂದಿನ ಕಾಲಮಾನದಲ್ಲಿ ಈ ಚಲನಚಿತ್ರ ಪ್ರತಿಯೊಬ್ಬರಿಗೂ ಜೀವನಸ್ಪರ್ಶಿ. ಹಾಲು ಮತ್ತು ನೀರು ಬೆರೆತಂತೆ ಎಣ್ಣೆ ಮತ್ತು ನೀರು ಬೆರೆಯದು. ಪ್ರತ್ಯೇಕವಾಗಿ ನಿಲ್ಲುವ ಗುಣವನ್ನು ಎಣ್ಣೆ ಎಂದಿಗೂ ಬಿಡದು. ಎಣ್ಣೆಯ ಜಿಡ್ಡಿನ ಗುಣವೇ ಇದಕ್ಕೆ ಕಾರಣ. ಹಾಲಿನೊಳಗೂ ತುಪ್ಪವಿದ್ದು ಜಿಡ್ಡು ಇದೆಯಾದರೂ ತಾನಿರುವ ಪರಿಸ್ಥಿತಿಗನುಗುಣವಾಗಿ ಹಾಲಿನೊಂದಿಗೆ ನೀರಿನ ಒಡಲಾಳದಲ್ಲಿ ಒಂದಾಗುತ್ತದೆ. ಹಾಲು ಮೊಸರಾಗಿ ಮಜ್ಜಿಗೆಯಾಗಿ ಸಂಸ್ಕರಣವಾದಂತೆ ಬೆಣ್ಣೆ ಹೊರಬರುತ್ತದೆ. ಈ ಬೆಣ್ಣೆ ಮತ್ತು ತುಪ್ಪ ಜಿಡ್ಡಿನ ಗುಣವನ್ನು ಬಿಡದು. 
        ಕುಟುಂಬದೊಳಗೆ ಬೆಸುಗೆ ಕಳಚಲೂ ಮನುಷ್ಯ ಮನಸ್ಸಿನ ಜಿಡ್ಡುಗಳೇ ಕಾರಣ. ಜಿಡ್ಡುಗಳನ್ನು Ego ಅನ್ನಲೇ, ಅಹಂ ಎನ್ನಲೇ, ಸ್ವಹಿತಾಸಕ್ತಿ ಇರಬಹುದೇ? ಈ ಎಲ್ಲವೂ ಇರಬಹುದೇ..? ಕುಟುಂಬವೆಂದಾಗ ನಮ್ಮದುರಿಗೆ ನಿಲ್ಲುವುದು ನಮ್ಮ ಹಿರಿಯರು ಕಟ್ಟಿ ಬೆಳೆಸುತ್ತಿದ್ದ ಅವಿಭಕ್ತ ಕುಟುಂಬ. ಇಂದು ದೃಷ್ಟವಿರುವ ಕುಟುಂಬಗಳಲ್ಲಿ ಶೇಕಡಾ ಎಪ್ಪತ್ತರಷ್ಟು ಕುಟುಂಬಗಳು ವಿಭಕ್ತ ಕುಟುಂಬಗಳು. ಈ ಕುಟುಂಬಗಳಲ್ಲಿ ಅಜ್ಜ, ಅಜ್ಜಿ, ಅಪ್ಪ, ಅಮ್ಮ ಮತ್ತು ಮಕ್ಕಳ ಬೆಸುಗೆಯಿರುತ್ತದೆ. ಶೇಕಡಾ ಇಪ್ಪತ್ತೈದರಷ್ಟು ಕುಟುಂಬಗಳಲ್ಲಿ ಅಜ್ಜ, ಅಜ್ಜಿಯರು ಇರದೆ ಅಪ್ಪ, ಅಮ್ಮ ಮತ್ತು ಮಕ್ಕಳು ಮಾತ್ರ ಇರುತ್ತಾರೆ. ಇವು ವಿಭಕ್ತ ಕುಟುಂಬ ಅನ್ನುವುದಕ್ಕಿಂತ ವಿಚ್ಛಿನ್ನ ಕುಟುಂಬ ಎಂದರೂ ತಪ್ಪಲ್ಲ. ಯಾಕೆಂದರೆ ಇಲ್ಲಿ ಅಜ್ಜ ಅಜ್ಜಿಯರನ್ನು ಮನೆಯಿಂದ ಆಶ್ರಮಕ್ಕೋ ಇನ್ನೆಲ್ಲಿಗೋ ಗಡಿಪಾರು ಮಾಡಲಾಗಿರುತ್ತದೆ. ಇನ್ನೂ ಶೇಕಡಾ ಐದರಷ್ಟು ಕುಟುಂಬಗಳು ಅವಿಭಕ್ತ ಕುಟುಂಬವಾಗಿಯೇ ಉಳಿದು ಬೆಸುಗೆಯ ಉದಾರತನವನ್ನು ಮೆರೆಯುತ್ತಿವೆ ಎಂಬುದು ನಮ್ಮ ಬಿಂಕ.
       ಅವಿಭಕ್ತ ಕುಟುಂಬಗಳಿದ್ದ ಕಾಲಮಾನದಲ್ಲಿ ವಿದ್ಯಾವಂತರ ಸಂಖ್ಯೆ ಬಹಳ ಕಡಿಮೆಯಿತ್ತು. ಇತ್ತೀಚೆಗಿನ ದಿನಗಳಿಂದ ಶಿಕ್ಷಣದ ಸಾರ್ವತ್ರೀಕರಣ ಫಲದಾಯಕವಾಗುತ್ತಿದೆ. ವಿಭಕ್ತದಿಂದ ಕುಟುಂಬಗಳು ವಿಚ್ಛಿನ್ನತೆಯೆಡೆಗೆ ಸಾಗುತ್ತಿರುವ ವರ್ತಮಾನಕಾಲದಲ್ಲಿ ಸುಶಿಕ್ಷತರ ಸಂಖ್ಯೆ ಗರಿಷ್ಠವಾಗಿದೆ. ಹಾಗಾದರೆ ಶಿಕ್ಷಣ ಕುಟುಂಬಗಳನ್ನು ಬೆಸೆಯಲು ತಡೆಯಾಯಿತೇ? ಅಥವಾ ನಾವು ಬಳಸುವ ಶಿಕ್ಷಣ ಎಂಬ ಪದವು ಅಕ್ಷರಸ್ಥ, ಕಂಪ್ಯೂಟರ್ ಸಾಕ್ಷರ, ಅಂತರ್ಜಾಲ ಪಟು ಎಂಬುದಕ್ಕೆ ಸೀಮಿತವಾಗಿ ಬಿಟ್ಟಿದೆಯೇ..? ಮಾತನಾಡದ ಮೊಬೈಲ್ ಮತ್ತು ಕಂಪ್ಯೂಟರ್ ನೋಡಿ ನಗುವ ನಾವು ಸಜೀವ ಮುಖಗಳನ್ನು ನೋಡಿದಾಗ ಸಿಂಡರಿಸುವುದಾದರೂ ಏಕೆ..? ಶಿಕ್ಷಣ ತನ್ನ ವಿಶಾಲ ಅರ್ಥವನ್ನು ಕಳೆದು ಸಂಕುಚಿತವಾಯಿತೇ..? ಜ್ಞಾನವಿಕಾಸಕ್ಕೆ ಮಹತ್ವ ಅಧಿಕವಾಗಿ ಹೃದಯ ವಿಕಾಸ ಸ್ಥಬ್ಧವಾಯಿತೇ..? ಹೀಗೆ ಪ್ರಶ್ನೆಗಳ ಸುರಿಮಳೆ ಮನದೊಳಗೆ ತಿಡುಕಾಡತೊಡಗಿದೆ. ಉತ್ತರವನ್ನು ಕಂಡುಕೊಳ್ಳಲಾಗದೆ ಮನಸ್ಸು ಗೊಂದಲಮಯವಾಗತೊಡಗಿದೆ. ಮನಸ್ಸುಗಳು ಮುದುಡಿವೆಯೆಂದಾದರೆ ಅರಳಿಸುವ ಪರಿ ಏನು?
ಅವಿಭಕ್ತ ಕುಟುಂಬಗಳನ್ನು ಮುಂದೆ ಕಾಣಲಾರೆವು. ವಿಭಕ್ತವಾದ ಸಂತೃಪ್ತ ಕುಟುಂಬಗಳನ್ನಾದರೂ ಉಳಿಸುವ ಮನಸ್ಸುಗಳ ಅಗತ್ಯವಿದೆ. ಅದಕ್ಕಾಗಿ ದೇಹ ಮತ್ತು ಮನದ ಜಿಡ್ಡುಗಳನ್ನು ಕಳಚಿ, ಪ್ರಕಾಶಗೊಳಿಸುವ ಅಗತ್ಯವಿದೆ. ಬೆಳಕಿರದೆ ಕಮಲವು ಅರಳದು. ನಮ್ಮ ಹೃದಯ ಕಮಲವು ಅರಳಲು ಅಲ್ಲಿಗೂ ಬೆಳಕು ಬೇಕು. ಆ ಬೆಳಕೇ ಜ್ಞಾನ, ಅರಿವು. ತಿಳುವಳಿಕೆ, ಲೋಕಾನುಭವ.... ಇತ್ಯಾದಿ. ಅರೆಬೆಂದ ಆಹಾರ ಅನಾರೋಗ್ಯಕರ. ಅದೇ ರೀತಿ ಅಪರಿಪೂರ್ಣ ಜ್ಞಾನವೂ ಜಿಡ್ಡೇ ಸರಿ. ನಾವು ಮೊದಲಿಗೆ ಪರಿಪೂರ್ಣರಾಗೋಣ.
        ಇಂದು ಸಾಮಾಜಿಕ ಸಂಪರ್ಕಗಳು ಕಡಿಮೆಯಾಗುತ್ತಿವೆ. ಮೊಬೈಲ್ ಜಗತ್ತೇ ನಮಗೆ ದೊಡ್ಡದಾಗಿದೆ. ಜನರನ್ನು ಭಾವನಾತ್ಮಕವಾಗಿ ಅರಳಿಸಲು ಬಯಸುವ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಕಡಿಮೆಯಾಗುತ್ತಿದ್ದಾರೆ. ಹರಿಕಥೆ, ಪ್ರವಚನ, ಉಪನ್ಯಾಸಗಳ ಸಭಾವೇದಿಕೆ ಖಾಲಿ ಕುರ್ಚಿಗಳಿಂದ ನಿಬಿಡ. ಜನ ನಿಬಿಡವಾಗ ಬೇಕಾದರೆ ಡಿ.ಜೆ ಅಥವಾ ಡಿಸ್ಕೋ ಇರಬೇಕು. ಮನರಂಜನೆ ಮಾತ್ರ ಸಾಕು. ಸಂಸ್ಕಾರ ತುಂಬಲು ಸಾಹಿತ್ಯ ವಾಚನವೂ ಬೇಕು, ಲೋಕಜ್ಞಾನವೂ ಬೇಕು, ಜನಸಂಪರ್ಕವೂ ಬೇಕು. ಒಂಟಿಯಾಗಿ ಕೋಣೆಯ ಮೂಲೆಯಲ್ಲಿ ಮೊಬೈಲ್ ಅಥವಾ ಜಾಲತಾಣಗಳಲ್ಲಿ ಲೀನರಾದರೆ ಬದುಕು ಹೊಳೆಯದು, ಉತ್ತಮ ವಿಚಾರಗಳು ಮೂಡವು. 
ಆದುದರಿಂದ ನಮ್ಮಲ್ಲಿ ಸಜ್ಜನಿಕೆಯನ್ನು ಬೆಳೆಸುವ ಚಟುವಟಿಕೆಗಳತ್ತ ಗಮನ ಕೊಡೋಣ; ಸಂಸ್ಕಾರದ ಬೆಸುಗೆಯಾಗಲು ಶ್ರಮಿಸೋಣ; ಸುಶಿಕ್ಷಿತರು ಎಂಬ ಪದದ ಗೌರವವನ್ನು ಎತ್ತರಿಸೋಣ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************Ads on article

Advertise in articles 1

advertising articles 2

Advertise under the article