-->
ಜೀವನ ಸಂಭ್ರಮ : ಸಂಚಿಕೆ - 57

ಜೀವನ ಸಂಭ್ರಮ : ಸಂಚಿಕೆ - 57

 ಜೀವನ ಸಂಭ್ರಮ : ಸಂಚಿಕೆ - 57                                                               
     ಮಕ್ಕಳೇ...  ಇಂದು ನಾವು 'ಗುರಿ' ಯ ಕುರಿತು ಚರ್ಚಿಸೋಣ. ಗುರಿಯನ್ನು ಅಡ್ಡಿಪಡಿಸುವ ಅಂಶಗಳಾವುವು..? ಎನ್ನುವುದಕ್ಕೆ ಈ ಕಥೆ ಓದಿ.
      ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆತ ಜನಾನುರಾಗಿ. ಆದರೆ ಜನರು ರಾಜನನ್ನು ನೋಡಲು ಆಗುತ್ತಿರಲಿಲ್ಲ. ರಾಜನು ಜನರ ಜೊತೆ ಬೆರೆಯುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ರಾಜನ ಹುಟ್ಟುಹಬ್ಬ ಬಂದಿತು. ಈ ಬಾರಿ ವಿಶೇಷವಾಗಿ ರಾಜ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ತೀರ್ಮಾನಿಸಿದ. ಅದೇನೆಂದರೆ ರಾಜನ ಹುಟ್ಟುಹಬ್ಬದ ದಿನ ಅರಮನೆ ಪಕ್ಕದಲ್ಲಿರುವ ವಿಶಾಲವಾದ ತೋಟದಲ್ಲಿ ರಾಜನನ್ನು ಮುಖಾಮುಖಿ ಭೇಟಿಯಾಗಬಹುದು. ಪಕ್ಕದಲ್ಲಿ ನಿಲ್ಲಬಹುದು. ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆ ವರೆಗೆ ಉಚಿತವಾಗಿ ಭೇಟಿ ಮಾಡಬಹುದೆಂದು ಡಂಗೂರ ಸಾರಿಸಿದ.
ಹುಟ್ಟು ಹಬ್ಬದ ದಿನ ಬಂದಿತು. ರಾಜ ಸಾಮಾನ್ಯ ರೈತನಂತೆ ವೇಷ ಬದಲಿಸಿ, ಬೆಳಿಗ್ಗೆ ಆರು ಗಂಟೆಗೆ ವಿಶಾಲವಾದ ತೋಟದಲ್ಲಿ ರೈತನಂತೆ ಕೆಲಸ ಮಾಡುತ್ತಿದ್ದ. ತೋಟ ವಿಶಾಲವಾಗಿದ್ದು, ಅದರಲ್ಲಿ ತೆಂಗು, ಕಂಗು, ಬಗೆ ಬಗೆಯ ಹೂವಿನ ಗಿಡಗಳು. ಫಲ ಪುಷ್ಪದ ಮರಗಳು, ಸಣ್ಣ ಸಣ್ಣ ನದಿಯ ಜರಿಗಳು ಹರಿಯುತ್ತಿದ್ದವು. ತೋಟದ ಮಹದ್ವಾರವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ರಾಜನನ್ನು ನೋಡಲು ಜನಸಾಗರವೇ ಬರಲಾರಂಭಿಸಿತು. ಜನರಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ದ್ವಾರ ಪ್ರವೇಶಿಸಿದ ತಕ್ಷಣ ದಾರಿಯ ಎರಡು ಬದಿ ಜನರಿಗೆ ವಿವಿಧ ಬಗೆಯ ಘಮಘಮಿಸುವ ತಿಂಡಿ ತಿನಿಸುಗಳ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು. ಬಗೆ ಬಗೆಯ ತಿಂಡಿ ತಿನಿಸುಗಳನ್ನು ಇಡಲಾಗಿತ್ತು. ವೈವಿಧ್ಯಮಯ ವಸ್ತುಗಳನ್ನು ಇಡಲಾಗಿತ್ತು. ಯಾರು ಏನು ಬೇಕಾದರೂ ಉಚಿತವಾಗಿ ತೆಗೆದುಕೊಳ್ಳಬಹುದಾಗಿತ್ತು. ಅಲ್ಲಲ್ಲಿ ನೃತ್ಯ ಏರ್ಪಡಿಸಲಾಗಿತ್ತು. ಸಂಗೀತ ಕಾರ್ಯಕ್ರಮಗಳು ಇದ್ದವು. ಜನ ನೋಡಿ ಕುಣಿಯಲು ವ್ಯವಸ್ಥೆ ಮಾಡಲಾಗಿತ್ತು. ಬಂದ ಜನ ಸಾಗರವೆಲ್ಲ ಕಣ್ಣಿಗೆ ಕಂಡಿದ್ದನ್ನು ತೆಗೆದುಕೊಳ್ಳಲು ಶುರು ಮಾಡಿದರು. ಬೇಕಾದನ್ನು ತಿಂದರು. ಸಂಗೀತ, ನೃತ್ಯ ನೋಡುತ್ತಾ ಮೈಮರೆತರು. ರಾಜ ಮಾತ್ರ ಕೆಲಸದಲ್ಲಿ ತಲ್ಲೀನನಾಗಿದ್ದ. ಎಲ್ಲರೂ ವಸ್ತುಗಳನ್ನು ತೆಗೆದುಕೊಳ್ಳಲು, ತಿನ್ನಲು, ಸಂಗೀತ ಕೇಳಲು ಮತ್ತು ನೃತ್ಯದಲ್ಲಿ ತಲ್ಲಿನರಾದರೆ ವಿನಃ ರಾಜನನ್ನು ನೋಡುವುದನ್ನೇ ಮರೆತರು. ಸಂಜೆ 6 ಗಂಟೆ ಆಯಿತು. ಎಲ್ಲರೂ ಸಂತೋಷದಿಂದ ಮನೆಗೆ ಹಿಂದಿರುಗಿದರು.
       ಒಬ್ಬ ರೈತ ದೂರದ ಊರಿನಿಂದ ರಾಜನನ್ನು ನೋಡಲು ಬಂದ. ತಡವಾಗಿತ್ತು. ದ್ವಾರ ಪ್ರವೇಶಿಸಿದ. ಸುತ್ತಮುತ್ತ ವಸ್ತುಗಳ ರಾಶಿ ರಾಶಿ ತಿಂಡಿ ತಿನಿಸು, ನೃತ್ಯ ಮತ್ತು ಸಂಗೀತ ಎಲ್ಲ ಇದ್ದರೂ, ಅದರ ಕಡೆ ಗಮನ ಹರಿಸದೆ, ಮುಂದೆ ಹೆಜ್ಜೆ ಇಡುತ್ತಿದ್ದ. ಇದನ್ನು ಗಮನಿಸಿದ ರಾಜಸೇವಕರು ರೈತನನ್ನು ಸಂಧಿಸಿ ವಸ್ತುಗಳು, ತಿಂಡಿ ತಿನಿಸುಗಳ, ನೃತ್ಯದ, ಸಂಗೀತದ ಬಗ್ಗೆ ಹೇಳಿದರು. ಆ ರೈತ ಅದ್ಯಾವುದಕ್ಕೂ ಗಮನ ಹರಿಸದೆ ರಾಜ ಎಲ್ಲಿ ಎಂದು ಕೇಳಿದ. ಇದೇ ದಾರಿಯಲ್ಲಿ ಹೋಗಿ ರಾಜ ಸಿಗುತ್ತಾನೆ ಎಂದರು ರಾಜಸೇವಕರು. ರೈತ ನೇರವಾಗಿ ನಡೆದು ಬಂದು ರೈತ ದೇಶದಲ್ಲಿದ್ದ ರಾಜನನ್ನೇ ರಾಜ ಎಲ್ಲಿ ಎಂದು ಕೇಳಿದ. ರಾಜ ಹೇಳಿದ ನಿನಗೆ ಉಚಿತವಾಗಿ ತಿನ್ನಲು ತಿಂಡಿ ತಿನಿಸುಗಳಿವೆ. ಉಚಿತ ವಸ್ತುಗಳಿವೆ.  ಆನಂದಿಸಲು ಸಂಗೀತ, ನೃತ್ಯ ಇದೆ. ಇದು ಬೇಡವೇ ಎಂದ. ಆಗ ರೈತ ಹೇಳಿದ್ದು, ನಾನು ಅಷ್ಟು ದೂರದಿಂದ ಬಂದಿದ್ದು ರಾಜನನ್ನು ನೋಡಲು ವಿನಃ ವಸ್ತುಗಳಿಗಾಗಿ ಅಲ್ಲ ಎಂದ. ಆಗ ರಾಜನಿಗೆ ಇದನ್ನು ಕೇಳಿ ಬಹಳ ಸಂತೋಷವಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ಯಾರಾದರೂ ಬರುತ್ತಾರೆಂದು ದಾರಿ ಕಾಯುತ್ತಿದ್ದೆ. ನೀನೊಬ್ಬನಾದರೂ ಬಂದೆಯಲ್ಲ ಎಂದನು. ರಾಜ ತನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡು, ಆತಿಥ್ಯ ನೀಡಿ ಕಳುಹಿಸಿದ.
       ಮಕ್ಕಳೇ, ನಮ್ಮ ಜೀವನವು ಹಾಗೆಯೇ. ನಾವು ಯಾವುದೋ ಗುರಿಯನ್ನು ಹೊಂದಿರುತ್ತೇವೆ. ಸಾಧಿಸಬೇಕೆಂಬ ಆಸೆ ಇರುತ್ತದೆ. ಆದರೆ ನಾವು ರೂಪಕ್ಕೆ, ಸೌಂದರ್ಯಕ್ಕೆ, ಶಬ್ದಕ್ಕೆ, ವಾಸನೆಗೆ, ರುಚಿಗೆ ಮತ್ತು ಸ್ಪರ್ಶಕ್ಕೆ ಮನ ಸೋಲುತ್ತೇವೆ. ನಾವು ಸಾಧಿಸಬೇಕಾದ ಗುರಿಯನ್ನೇ ಮರೆಯುತ್ತೇವೆ. ಯಾರು ರೈತನಂತೆ ರೂಪಕ್ಕೆ, ಸೌಂದರ್ಯಕ್ಕೆ, ಶಬ್ದಕ್ಕೆ, ವಾಸನೆಗೆ, ರುಚಿಗೆ ಮತ್ತು ಸ್ಪರ್ಶಕ್ಕೆ ಮನ ಸೋಲುವುದಿಲ್ಲವೋ ಅವನು ತನ್ನ ಗುರಿ ತಲುಪುತ್ತಾನೆ. ಪಂಚೇಂದ್ರೀಯಗಳನ್ನು ನಮ್ಮ ಗುರಿಗೆ ಅನುಗುಣವಾಗಿ ನಿಯಂತ್ರಿಸಬೇಕು. ಮನಸ್ಸನ್ನು ಗುರಿ ಕಡೆ ಅಣಿಗೊಳಿಸಬೇಕು. ಮನಸ್ಸಿನಲ್ಲಿ ಸಂಕಲ್ಪ ಮಾಡಬೇಕು. ಸದಾ ಗುರಿಯ ಕಡೆ ಪ್ರಯತ್ನ ಇರಬೇಕು. ಈ ಪಂಚೇಂದ್ರಿಯಗಳನ್ನು ಸರಿಯಾಗಿ ಬಳಸಿ ಮನಸ್ಸನ್ನು ಸುಂದರಗೊಳಿಸಬಹುದು. ಇದೇ ಪಂಚೇಂದ್ರಿಯಗಳನ್ನು ಸರಿಯಾಗಿ ಬಳಸದೆ, ಪಂಚೇಂದ್ರಿಯಗಳ ದಾಸರಾಗಿ, ಮನಸ್ಸನ್ನು ಕುರೂಪಗೊಳಿಸಬಹುದು. ಮಕ್ಕಳೇ, ಗುರಿ ಸಾಧನೆಗೆ ಪಂಚೇಂದ್ರಿಯಗಳ ನಿಗ್ರಹ, ಎಚ್ಚರದ ಬಳಕೆ ಬಹಳ ಮುಖ್ಯ ಅಲ್ಲವೇ..?
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************Ads on article

Advertise in articles 1

advertising articles 2

Advertise under the article