ಪ್ರೀತಿಯ ಪುಸ್ತಕ : ಸಂಚಿಕೆ - 30
Friday, October 28, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 30
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಇದೊಂದು ಬಹಳ ವಿಶೇಷವಾದ ಪುಸ್ತಕ. ಅರ್ಥಶಾಸ್ತ್ರವನ್ನು ಬಹಳ ಸರಳವಾಗಿ ಮಕ್ಕಳಿಗೆ ತಿಳಿಹೇಳುವ ರೀತಿಯಲ್ಲಿ ಬರೆದಿದ್ದಾರೆ. ರಷ್ಯಾದ ಕ್ರಾಂತಿಕಾರಿ, ಕಾರ್ಲ್ ಮಾರ್ಕ್ಸ್ ಅವರ ‘ದಿ ಕ್ಯಾಪಿಟಲ್’ ಎಂಬ ಗ್ರಂಥವನ್ನು ಆಧರಿಸಿ ಬರೆದ ಪಾಠಗಳು ಇವು. ಹಣ, ವಸ್ತು, ಅಂದರೆ ಏನು ಎಂಬುದರಿಂದ ಶುರುಮಾಡುತ್ತಾ, ಅರ್ಥಶಾಸ್ತ್ರದಲ್ಲಿ ಬರುವ ಅನೇಕ ವಿಚಾರಗಳನ್ನು ತಿಳಿಸಿಕೊಡುತ್ತದೆ ಈ ಪುಸ್ತಕ. ಅತ್ಯಂತ ಮುಖ್ಯವಾಗಿ ‘ಶ್ರಮ’ ದ ಬಗ್ಗೆ, ಶ್ರಮಿಕರ ಬಗ್ಗೆ, ಶ್ರಮದ ಮೌಲ್ಯದ ಬಗ್ಗೆ, ಶ್ರಮ ಶೋಷಣೆಯ ಬಗ್ಗೆ ಹೊಸ ನೋಟ ಇದರಲ್ಲಿ ಸಿಗುತ್ತದೆ. ಇದನ್ನು ಓದುತ್ತಾ ಹೋಗುವಾಗ ಕೇವಲ ಅರ್ಥಶಾಸ್ತ್ರವಲ್ಲ, ನಮ್ಮ ಸಮಾಜದ ಒಂದು ವಿಶ್ಲೇಷಣೆಯೇ ಸಿಗುತ್ತದೆ. ಶ್ರಮಕ್ಕೆ ನಾವು ಎಷ್ಟು ಗೌರವ ಕೊಡಬೇಕಲ್ಲಾ ಎಂದು ಅನಿಸಲು ಶುರುವಾಗುತ್ತದೆ. ಲೇಖಕರಾದ ರಂಗನಾಯಕಮ್ಮ ಅವರು ಹೇಳಿಕೊಂಡ ಹಾಗೆ, ಈ ಪಾಠಗಳ ಹೆಸರುಗಳು, ಅವುಗಳಲ್ಲಿನ ಮಾತುಗಳು, ಪಾತ್ರಗಳು, ಮಕ್ಕಳ ಕಿವಿಗೆ ಬಿದ್ದರೆ ಸಾಕು; ಇಂತಹ ಒಂದು ಶಾಸ್ತ್ರ ಇದೆ ಎಂದು ಮಕ್ಕಳಿಗೆ ತಿಳಿದರೂ ಸಾಕು.
ಈ ಪುಸ್ತಕದಲ್ಲಿ ಬರೆದಿರುವ ಎಲ್ಲಾ ವಿಚಾರಗಳು ಅರ್ಥವಾಗದೆ ಹೋಗಬಹುದು, ಒಪ್ಪಿಗೆಯಾಗದೆಯೂ ಹೋಗಬಹುದು, ಆದರೂ ಇಂತಹ ಒಂದು ಚಿಂತನೆ ಬಗ್ಗೆ ನೀವು ಈ ವಯಸ್ಸಿನಲ್ಲಿಯೇ ತಿಳಿದುಕೊಳ್ಳುವುದು ಒಳ್ಳೆಯದು. ನನಗಂತೂ ಇದನ್ನು ಓದುತ್ತಾ ಹೋಗುವಾಗ, ನಾನು ಚಿಕ್ಕವಳಿರುವಾಗ ಇದು ಸಿಗಬೇಕಾಗಿತ್ತು ಅನಿಸಿತು. ಪುಸ್ತಕಕ್ಕಾಗಿ ಹುಡುಕುವಿರಾ? ಓದಲು ಪ್ರಯತ್ನಿಸುವಿರಾ?
ಲೇಖಕರು: ರಂಗನಾಯಕಮ್ಮ (ತೆಲುಗು ಮೂಲ)
ಅನುವಾದ: ಪಿ.ಎ.ಕುಮಾರ್; ವಿ.ಎನ್. ಲಕ್ಷ್ಮೀನಾರಾಯಣ
ಪ್ರಕಾಶಕರು: ಸ್ವೀಟ್ ಹೋಮ್ ಪಬ್ಲಿಕೇಶನ್ಸ್, ಹೈದರಾಬಾದ್
ಬೆಲೆ: ರೂ.100/-
ವಿತರಕರು: ಕ್ರಿಯಾ ಮಾಧ್ಯಮ, ಬೆಂಗಳೂರು, 9036082005, 080-23494488
ಹತ್ತನೇ ತರಗತಿಯ ಮಕ್ಕಳು, ಪಿ.ಯು, ಮಕ್ಕಳು, ಅದರಲ್ಲೂ ಬಹಳ ಓದುವ ಅಭ್ಯಾಸ ಇರುವ ಮಕ್ಕಳು ಪ್ರಯತ್ನ ಪಟ್ಟರೆ, ತಾವೇ ಓದಿಕೊಳ್ಳಬಹುದು. ಅನೇಕ ವಿಚಾರಗಳು ಅರ್ಥವಾಗಲು ಹಿರಿಯರ ಸಹಕಾರ ಬೇಕಾಗಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************