-->
ಸಂಚಾರಿಯ ಡೈರಿ : ಸಂಚಿಕೆ - 16

ಸಂಚಾರಿಯ ಡೈರಿ : ಸಂಚಿಕೆ - 16

ಸಂಚಾರಿಯ ಡೈರಿ : ಸಂಚಿಕೆ - 16

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
                       
         ದೇವಭೂಮಿ‌ ಉತ್ತರಾಖಂಡ್‌ಗೆ‌ ನಮ್ಮ ವಿಭಾಗದ ಪ್ರವಾಸದಲ್ಲಿ ಅದಾಗಲೇ ಮುಸ್ಸೊರಿ, ಡೆಹ್ರಾಡೂನ್, ಹೃಷಿಕೇಶ್ ‌ನ ತಿರುಗಾಟ ಮುಗಿಸಿದ್ದೆವು. ತಿರುವು ಮುರುವಿನ ರಸ್ತೆಗಳಲ್ಲಿ, ಕಡಿದಾದ ಕಣಿವೆಗಳಲ್ಲಿ, ಹಸಿರ ಐಸಿರಿಯ ಜತೆ, ಚುಮುಚುಮು ಛಳಿಯ ಕಚಗುಳಿಯ ಅದ್ಭುತ ರಾಜ್ಯದ ಸೌಂದರ್ಯಕ್ಕೆ ಎಣೆಯಿರಲಿಲ್ಲ. ಏತನ್ಮಧ್ಯೆ ನಮ್ಮ‌ ಪಯಣ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದತ್ತ ಸಾಗಿತ್ತು..
    ದೇಶದ ಅತ್ಯಂತ ಹಳೆಯ ಉದ್ಯಾನವನಗಳಲ್ಲಿ ಒಂದಾದ ಇದು, ಉತ್ತರಾಖಂಡ್‌ನ ನೈನಿತಾಲ್ ಜಿಲ್ಲೆಯ ರಾಮ್‌ನಗರ್‌ನಲ್ಲಿದೆ. ಜಿಮ್‌ಕಾರ್ಬೆಟ್ ಎಂಬಾತನ ಒತ್ತಾಸೆಯಿಂದ 1936ರಲ್ಲಿ ಇದು ಕಾರ್ಯರೂಪಕ್ಕೆ ಬಂತು..
     ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಅಲ್ಲಿ ತಲುಪಿದ್ದ ನಾವು ಅಲ್ಲಿದ್ದ ಜೀಪ್‌ ಚಾಲಕರಲ್ಲಿ, ಜೀಪ್ ಸಫಾರಿಯ ಕುರಿತು ಕೇಳಿದೆವು. ಒಂದು ಜೀಪ್‌ನಲ್ಲಿ ಆರು ಜನರಂತೆ ಕುಳಿತ ನಂತರ ಶುರುವಾಗಿದ್ದೇ ನಮ್ಮ ಜೀಪ್ ಸಫಾರಿಯ ವೈಭವ!             
                  ವಿಷ್ಣುವರ್ಧನ್-ದ್ವಾರಕೀಶ್ ಜೋಡಿ, 'ಕಾಲವನ್ನು ತಡಿಯೋರು ಯಾರೂ ಇಲ್ಲ' ಅಂತಾ ಹಾಡುತ್ತಾ ಜೀಪ್‌ನಲ್ಲಿ ತಿರುಗಾಡುತ್ತಿದ್ದ ಅನುಭವ ನಮಗೆ ದಕ್ಕಿತ್ತು. ಸುತ್ತಲೂ ಕಾಡು, ನಡುವೆ ಚಿಕ್ಕ ದಾರಿಯಲ್ಲಿ ನಮ್ಮ ಸವಾರಿಗೆ ತಂಪಾದ ಗಾಳಿ ಶೃತಿ ಹಿಡಿದರೆ ಹಕ್ಕಿಗಳ ಇಂಚರ ತಾಳ ಹಾಕಿತ್ತು. ನಮ್ಮೊಂದಿಗಿದ್ದ ಚಾಲಕ ಜಿಮ್ ಕಾರ್ಬೆಟ್ ಕಾಡಿನ ವೈಶಿಷ್ಠ್ಯತೆಯ ಕುರಿತು ಹೇಳುತ್ತಿದ್ದ. ಅಲ್ಲಿದ್ದ ಕೆಲವು ಪರಾವಲಂಬಿ ಮರಗಳು, ವಿವಿಧ ಸಸ್ಯ ಜಾತಿಗಳ ಪರಿಚಯಿಸಿ detailing ಮಾಡಿದ್ದ.
       ಅದೇ ಥರಾ ನಮ್ಮ ಸಫಾರಿಯಲ್ಲಿ ಸಂಭಾರ್ (ಒಂದು ಜಾತಿಯ ಜಿಂಕೆ) ಕಾಡುಕೋಳಿ, ಬಿಳಿ ಮೂತಿಯ ಕೋತಿಯಂತಹ ಪ್ರಾಣಿಗಳು ಕಂಡಿದ್ದವು. ದಟ್ಟಾರಣ್ಯದಲ್ಲಿ ಮಾನವನ ಕಟ್ಟಳೆಗಳಿಲ್ಲದೆ ಗಟ್ಯಾಗಿ ಜೀವಿಸಬಲ್ಲ ಜೀವಚರಗಳ ಒಗ್ಗಟ್ಟು ಎಲ್ಲರನ್ನೂ ಚಕಿತಗೊಳಿಸಿತ್ತು..
             ಎರಡು ವರ್ಷಗಳ ಹಿಂದಿನ ಡಿಸ್ಕವರಿ ಚಾನೆಲ್‌ನ 'ಮ್ಯಾನ್ ವರ್ಸಸ್ ವೈಲ್ಡ್' ಶೂಟಿಂಗ್ ನಡೆದಿದ್ದು ಇದೇ ಪಾರ್ಕ್‌ನಲ್ಲಿ. ಪ್ರಧಾನಿ ನರೇಂದ್ರ ಮೋದಿ ಜತೆ ಬೇರ್ ಗ್ರಿಲ್ಲ್ಸ್ ಸಂಭಾಷಿಸುತ್ತಾ, ಕಾಡಿನ ಸೊಬಗು ವರ್ಣಿಸುತ್ತಿದ್ದ ಕಾರ್ಯಕ್ರಮ ಅತೀ ಹೆಚ್ಚು ವೀಕ್ಷಣೆಗೊಳಗಾಗಿತ್ತು..
                 ಒಂದು ಜೀಪ್‌ ಸವಾರಿಗೆ ಬೆಲೆ 4500 ರಿಂದ ಶುರುವಾಗುತ್ತದೆ. ಕಾರ್ಬೆಟ್ ಪಾರ್ಕ್‌‌ನಲ್ಲಿ ಒಟ್ಟು ನಾಲ್ಕು ಪ್ರವೇಶ ದ್ವಾರಗಳಿದ್ದು ಪ್ರಸ್ತುತ ಪ್ರವಾಸಿಗರಿಗೆ ಅವಕಾಶ ಇರೋದು ಎರಡು ಕಡೆಯಿಂದ ಮಾತ್ರ. ಕೆಲವು ಕಡೆ ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಇದೆ ಅದು‌ ದುಬಾರಿ. ಹತ್ತಿರದಲ್ಲೆ ಕಾರ್ಬೆಟ್ ವಸ್ತುಸಂಗ್ರಹಾಲಯವೂ ಇದೆ. ಒಟ್ಟು ಮೂರು ಗಂಟೆಗಳ‌ ಕಾಲ ನಮ್ಮ ಸಫಾರಿ ಸಾಗಿ, ನಮ್ಮ ಪ್ರವಾಸಕ್ಕೆ ಲವಲವಿಕೆ ತಂದಿತ್ತು.
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************


Ads on article

Advertise in articles 1

advertising articles 2

Advertise under the article