-->
ಪ್ರೀತಿಯ ಪುಸ್ತಕ : ಸಂಚಿಕೆ - 29

ಪ್ರೀತಿಯ ಪುಸ್ತಕ : ಸಂಚಿಕೆ - 29

ಪ್ರೀತಿಯ ಪುಸ್ತಕ
ಸಂಚಿಕೆ - 29

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ.  ಹೊಸ ಹೊಸ  ಅನುಭವ ಇಷ್ಟ.  ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

            ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು
         ಪ್ರೀತಿಯ ಮಕ್ಕಳೇ.... ಅಬ್ಬಾ.... ಎಂತಹ ಚಂದ ಚಂದದ ಪದ್ಯಗಳು. ಈ ಹಿಂದೆ ‘ತೆಂಕಣ ಗಾಳಿಯಾಟ‘ ಪುಸ್ತಕ ಪರಿಚಯ ಮಾಡಿದ್ದೆ. ನೆನಪಿರಬಹುದು. ಈ ಪುಸ್ತಕದಲ್ಲಿ 21 ಪದ್ಯಗಳಿವೆ. ಈ ಪದ್ಯಗಳನ್ನು ಓದಬಹುದು ಅಥವಾ ಹಾಡಬಹುದು. ಚಿಕ್ಕ ಮಕ್ಕಳಿಗೆ ನಾವು ಹಾಡಿಸುತ್ತೇವಲ್ಲಾ, ‘ತಾರಮ್ಮಯ್ಯಾ ತಂದು ತೋರಮ್ಮಯ್ಯಾ, ದೂರದ ಬಾನೊಳು ಏರಿದ ಚಂದ್ರನ, ತಾರಮ್ಮಯ್ಯಾ ತಂದು ತೋರಮ್ಮಯ್ಯಾ..’ ಹಾಡಿನಲ್ಲಿ ಚಂದ್ರನ ವರ್ಣನೆ ಇದೆ. ಪಂಜೆಯವರ ಪ್ರಖ್ಯಾತ ಹಾಡು, ‘ನಾಗರ ಹಾವೇ, ಹಾವೊಳು ಹೂವೇ’ ನಾಗಣ್ಣನ ಚಿತ್ರಣ ಕೊಡುತ್ತದೆ. ‘ಮಿನುಗೆಲೆ ಮಿನುಗೆಲೆ ನಕ್ಷತ್ರ’ ನಕ್ಷತ್ರಗಳ ಸೊಬಗನ್ನು ಕಣ್ಣಿಗೆ ಕಟ್ಟಿಸುತ್ತದೆ. ‘ಮೂಡುವನು ರವಿ ಮೂಡುವನು’ ಪದ್ಯದಲ್ಲಿ ಬೆಳಗಿನ ಹೊತ್ತು ಮೂಡುವ ರವಿಯನ್ನು ಬಣ್ಣಿಸುತ್ತಾ, ಕೊನೆಯ ವಾಕ್ಯದಲ್ಲಿ, ಮೇಲೇರಿದ ಸೂರ್ಯ ಸಣ್ಣಗೆ ಕಾಣುವನು ಅಂತ ವಿವರಿಸುತ್ತಾ, ‘ಏರಿದವನು ಚಿಕ್ಕವನಿರಬೇಕು’ ಎಂಬ ಮಾತನ್ನು ಸಾರುತ್ತಾರೆ. ಒಂದೆರಡು ಜೋಗುಳದ ಪದ್ಯಗಳು ಕೂಡಾ ಇವೆ.  ಪ್ರತಿಯೊಂದು ಪದ್ಯಕ್ಕೂ ಸುಂದರವಾದ ಲಯವಿದೆ. ಅದೆಷ್ಟೋ ಕಾಲದ ಹಿಂದೆ ಬರೆದ ಪದ್ಯಗಳಿವು. ಆದರೆ ಇಂದಿಗೂ ಓದಿ ಖುಶಿ ಪಡುವ ರೀತಿಯಲ್ಲಿ ಇವೆ. ಪ್ರತಿಯೊಂದು ಪದ್ಯಕ್ಕೂ ರಾಮ ಮೂರ್ತಿಯವರು ಮಾಡಿದ ಚಿತ್ರಗಳು, ಗೆರೆ ಗೆರೆಗಳಿಂದ ಕೂಡಿದ್ದು, ಬಹಳ ಆಕರ್ಷಕವಾಗಿವೆ. ನೀವೂ..ನೋಡಿ, ಓದಿ, ಹಾಡಿ, ಖುಶಿಪಡಿ.
ಲೇಖಕರು: ಪಂಜೆ ಮಂಗೇಶರಾಯರು
ಚಿತ್ರಗಳು: ಬಿ.ವಿ. ರಾಮ ಮೂರ್ತಿ 
ಪ್ರಕಾಶಕರು: ಅಂಕಿತ ಪಸ್ತಕ, ಬೆಂಗಳೂರು, ಫೋನ್: 26617100, 26617755
ಬೆಲೆ: ರೂ.50
ಐದು, ಆರು, ಏಳನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ಚಿಕ್ಕಮಕ್ಕಳಿಗೂ ಓದಿ ಹೇಳುವಂತೆ ಇದೆ
......................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
********************************************


Ads on article

Advertise in articles 1

advertising articles 2

Advertise under the article