ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 35
Saturday, October 22, 2022
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 35
ಮಕ್ಕಳೇ.... ಹೇಗಿದ್ದೀರಿ...? ಬಿಡುವಿನಲ್ಲಿ ಗೆಲುವಾಗಿ, ಕಲಿಕೆಯನ್ನು ಆಟವನ್ನಾಗಿಸುತ್ತಾ, ಗಳಿಸಿದ ಅನುಭವಗಳ ಮೂಟೆಯನ್ನು ಕಟ್ಟಿಕೊಂಡು ಮತ್ತೆ ಶಾಲೆಯಲ್ಲಿದ್ದೇವೆ.
ನೆಂಟರ ಮನೆಗೆ ಹೋಗಿ ಬಂದವರು, ಅನಿರೀಕ್ಷಿತವಾಗಿ ಭೇಟಿಯಾದವರು... ಮಾತುಗಳೆಷ್ಟು ನೆನಪುಗಳನ್ನು ತೆರೆದಿಡುತ್ತವೆ!! ಸಂಬಂಧಗಳು ಕೊಡುವ ಆಪ್ತತೆ ಎನ್ನುವ ಹಿತವಾದ ಭಾವದೊಳಗೆ ಅರಿವಿಲ್ಲದೆ ಖುಷಿಯಾಗಿದ್ದೀರಿ..... ಇರಬೇಕು ಕೂಡಾ!
ಸಂಬಂಧಿಕರನ್ನು ಭೇಟಿಯಾದಾಗ, ಅವರೊಡನೆ ಕಳೆವ ಸಮಯಗಳು ನೆನಪುಗಳನ್ನು ಬಿಚ್ಚಿಡುತ್ತಾ ಸಾಗುತ್ತವೆ ಅಲ್ವಾ? ಆ ನೆನಪುಗಳೊಂದಿಗೆ ಸಂಭ್ರಮಿಸಿದ್ದೀರಾ?
ಅಂದೊಮ್ಮೆ ನಾನು ನನ್ನ ಅಜ್ಜಿ ಮನೆಗೆ ಹೋಗಿದ್ದೆ... ಅಜ್ಜಿ ಇಲ್ಲದ ಮನೆಯಲ್ಲಿ ಯಾರನ್ನೋ ಕಳಕೊಂಡ ಹಾಗೆ.....! ಇರುವಾಗ ಯಾರ ಮೌಲ್ಯವೂ ಅರಿವಿಗೆ ಬರುವುದಿಲ್ಲ ಅಲ್ವಾ...! ಹಾಗೆಯೇ ಮಾವನ ಮದುವೆಯ ಫೋಟೋ ಗಳನ್ನು ನೋಡ್ತಿದ್ದೆ. ನಾನು ಸಣ್ಣವಳಿರುವಾಗ ತೆಗೆದ ಪಟಗಳ ಜೊತೆಗೆ ನೆನಪುಗಳೂ ಹಿಂದಕ್ಕೋಡಿದವು. ನಾನಾಗ ಎರಡನೇ ತರಗತಿ. ಅಜ್ಜಿ ಮನೆಯಿಂದಲೇ ಶಾಲೆಗೆ ಹೋಗುತ್ತಿದ್ದೆ. ಮನೆಯಲ್ಲಿ ಮಾವನ ಮದುವೆ. ಆ ದಿನ ನನ್ನ ಉಮಾವತಿ ಮೇಡಂ ಪರೀಕ್ಷೆ ಮಾಡ್ತೇನೆ ಅಂದಿದ್ರು. ಮನೆಯಲ್ಲಿ ಎಲ್ಲರೂ ಮದುವೆಯ ದಿನ ಯಾಕೆ ಶಾಲೆಗೆ ಕಳಿಸೋದು... ಒಂದು ದಿನ ರಜೆ ಮಾಡಿದ್ರೆ ಏನೂ ಪರವಾಗಿಲ್ಲ ಎಂದ್ರೂ, ಅಪ್ಪ ರಜೆ ಮಾಡಲು ಬಿಡಲಿಲ್ಲ. ಶಾಲೆಗೆ ಮದುವೆ ಮನೆಯ ಗೌಜಿಯ ಹಾಡುಗಳು ಕೇಳುತ್ತಿದ್ದವು. ಮೇಡಂ ದೊಡ್ಡ ಮಕ್ಕಳಲ್ಲಿ ವಿಚಾರಿಸಿದ್ರು. ನಮ್ಮ ಮನೆಯಲ್ಲಿಯೇ ಮದುವೆ ಎನ್ನುವುದು ಗೊತ್ತಾಯ್ತು. "ನೀನ್ಯಾಕೆ ಶಾಲೆಗೆ ಬಂದದ್ದು?" ಅಂದ್ರು. "ಪರೀಕ್ಷೆ ಮಾಡ್ತೀರಲ್ಲ. ರಜೆ ಮಾಡ್ಬಾರ್ದು ಅಂತಾ ಅಪ್ಪ ಹೇಳಿದ್ರು" ಅಂದೆ. ಬಳಿಕ ಎಲ್ಲ ಶಿಕ್ಷಕರೂ ನನ್ನ ಬಳಿ ಬಂದು, ಮನೆಗೆ ಹೋಗು. ಪರೀಕ್ಷೆ ಇನ್ನೊಮ್ಮೆ ಬರೆಯಬಹುದು... ಎಂದು ಹಿರಿಯ ಮಕ್ಕಳ ಮೂಲಕ ಕಳಿಸಿದ್ರು. ಅತ್ಯಂತ ಖುಷಿಯಿಂದ ಮತ್ತೆ ಮದುವೆ ಮನೆಯ ಕಡೆ ಹೊರಟೆ.
ಆ ದಿನದ ಈ ನೆನಪುಗಳು ಮಾತ್ರ ಇನ್ನೂ ಜೀವಂತ! ಹಠ ಮಾಡದೆ, ಅಪ್ಪ ಹೇಳಿದ ಮಾತಿಗೆ ಮರು ಮಾತನಾಡದೆ, ಶಾಲೆಗೆ ಹೊರಟ ಮುಗ್ಧತೆ .....! ಬಾಲ್ಯ ಚಂದ.
ಹೋ... ಮಾತನಾಡುತ್ತಾ ಹೋದೆ... ದಸರಾ ರಜೆ ಮುಗಿದೇ ಹೋಯ್ತು! ನೀವು ಅನುಭವಿಸಿದ, ನಿಮ್ಮಿಂದಾಗಿ ಮನೆಯವರಿಗೆ ಏನಾದರೂ ತೊಂದರೆಯಾದ ಅಥವಾ ನೀವು ಎಂದೆಂದಿಗೂ ನೆನಪಿನಲ್ಲಿ ಇಡಬಹುದಾದ ಸನ್ನಿವೇಶಗಳಿಗೆ ಕಾರಣವಾಗಿದ್ದಿರಬಹುದು. ನಿಮ್ಮ ನೆನಪುಗಳನ್ನು, ಅನುಭವಗಳನ್ನು ಪತ್ರದ ಮೂಲಕ ಹಂಚಿಕೊಳ್ತೀರಾ...?
ಕಳೆದ ವಾರದ ಪತ್ರಕ್ಕೆ ಅಕ್ಕರೆಯ ನುಡಿಗಳೊಂದಿಗೆ ಜೊತೆಯಾದ, ಪ್ರತಿ ಸಲದ ಪತ್ರಗಳಿಗೂ ಅತ್ಯಂತ ಪ್ರೀತಿಯಿಂದ ಸ್ಪಂದಿಸುವ ಶಿಶಿರ್, ಶ್ರಾವ್ಯ, ಧೀರಜ್, ಸಾತ್ವಿಕ್ ಗಣೇಶ್, ನಿಭಾ, ಪ್ರಣಮ್ಯ, ಸ್ರಾನ್ವಿ ಶೆಟ್ಟಿ, ಸಿಂಚನಾ, ಲಹರಿ, ವೈಷ್ಣವಿ, ಪೂಜಾ, ಲಮಿತಾ, ಸಾತ್ವಿ.... ತಮಗೆ ವಿಶೇಷವಾದ ವಂದನೆಗಳು.
ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು. ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************