-->
ಸಂಚಾರಿಯ ಡೈರಿ : ಸಂಚಿಕೆ - 15

ಸಂಚಾರಿಯ ಡೈರಿ : ಸಂಚಿಕೆ - 15

ಸಂಚಾರಿಯ ಡೈರಿ : ಸಂಚಿಕೆ - 15

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ  ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
             
           ದೇಶದಲ್ಲಿ ಬೀದಿ ಬದಿ ಸರಕು ವ್ಯಾಪಾರಗಳಿಗೆ ಕೊರತೆಯಿಲ್ಲ.. ಬಹುಚರ್ಚಿತ ಸ್ಥಳಗಳು ಬೇಕಾದಷ್ಟಿವೆ. ಮುಂಬೈನ ಚೋರ್ ಬಝಾರ್, ಬೆಂಗಳೂರಿನ ಚಿಕ್ಕಪೇಟೆ ಇತ್ಯಾದಿ. ಈ ಪೈಕಿ ದಿಲ್ಲಿಯ ಕರೋಲ್‌ಭಾಗ್ ಕೂಡಾ ಒಂದು..
 
            ಅಂದ ಹಾಗೆ ಬಲ್ಲ ಮಾಹಿತಿಯ ಪ್ರಕಾರ ಕರೋಲ್‌ಬಾಗ್ ಅತ್ಯಂತ ಕಡಿಮೆ ದರದಲ್ಲಿ ಇಲೆಕ್ಟ್ರಾನಿಕ್ ಐಟಂಗಳ ಮಾರಾಟಕ್ಕೆ ಹೆಸರಾದ ಸ್ಥಳವಂತೆ.. ಅದಾಗ್ಯೂ ಅಲ್ಲಿ ತರಹೇವಾರಿ ಖಾನಾವಳಿ, ವೈವಿಧ್ಯಮಯ ವಸ್ತ್ರಗಳು, ವಿವಿಧ ಪಾದರಕ್ಷೆಗಳು ಇತ್ಯಾದಿ ಇತ್ಯಾದಿ ಅಂತಾ ದೊಡ್ಡ ಸಂತೆ ಇತ್ತು.      ಮಹಾನಗರದಲ್ಲಿ ನೀವೇನಾದ್ರೂ ವಸ್ತು ಕಳೆದುಕೊಂಡರೆ ಅದು ನಿಮಗೆ ಚೋರ್ ಬಝಾರ್‌ನಲ್ಲಿ ಸಿಗುತ್ತೆ ಅನ್ನೋ ಅಣಕದ ಮಾತು ಅಲ್ಲಿ ಸೆಕಂಡ್ ಹ್ಯಾಂಡ್ ವಸ್ತುಗಳು ಅಷ್ಟು ಮಿತದರದಲ್ಲಿ ಸಿಗೋವಾಗಲೇ ಗೊತ್ತಾಗಿಬಿಡುತ್ತಿತ್ತು. ದೆಹಲಿಯಲ್ಲಿ ಈ ತರಹದ ಹತ್ತಾರು ಮಾರ್ಕೆಟ್‌ಗಳಿದ್ದು, ಆಯಾ ಮಾರುಕಟ್ಟೆ ಒಂದೊಂದು ಬಗೆಯ ವಸ್ತುಗಳಿಗೆ ಪ್ರಸಿದ್ಧಿ ಪಡೆದಿದೆ.

              ಯಾವ ಮಾರಾಟಗಾರನ ಬಳಿ ಹೋದರೂ ಮಾತು ಮಾತ್ರ ಮಲ್ಲಿಗೆಯಷ್ಟೇ ಮೃದು.. 'ಅರೇ ಭೈಯ್ಯಾ! ಯೇ ತೋ ಬೊಹೊತ್ ಅಚ್ಭೇ ಕ್ವಾಲಿಟಿ ಕಾ ಮಾಲ್ ಹೇ' ಅನ್ನುವ ಉತ್ಪ್ರೇಕ್ಷಿತ ಮಾತು. ನಾವು ಏಮಾರಿ ಅವರು ಕೇಳಿದ ರೇಟ್ ಕೊಟ್ಟರೆ ಮಾರ್ಕೆಟ್ ಬಂದಿದ್ದು ವ್ಯರ್ಥವೇ ಸರಿ. ಒಂದು ಸಾವಿರದ ವಸ್ತುವನ್ನ ಚೌಕಾಸಿ ಮಾಡಿ, ಇನ್ನೂರಕ್ಕೆ ಮಾಡಿದರೆ ಏನೋ ಸಾಧಿಸಿದ ಭಾವ. ಕೆಲವು ಮಾರಾಟಗಾರರು ಜಪ್ಪಯ್ಯ ಅಂದರು ಒಪ್ಪದಿದ್ದಾಗ  'ನಿಮ್ಮ ಲೆಕ್ಕದ ಬೆಲೆ ಎಷ್ಟು? ಎಂದು ನಾಮ್‌ಕೇವಾಸ್ತೆ ಕೇಳುವುದುಂಟು ಅದಾಗ್ಯೂ ನಾವು ಹಿಂದಿರುಗಿದರೆ 'ಬನ್ನಿ ಇನ್ನೂರಕ್ಕೆ ಕೊಡುತ್ತೇನೆ' ಅಂದುಬಿಡುತ್ತಾರೆ. ಅದರಲ್ಲೂ ಕೆಲವು ವ್ಯಾಪಾರಸ್ಥರು ಬೆಲೆತಗ್ಗಿಸಲು  ಖಡಾಖಂಡಿತವಾಗಿ ನಿರಾಕರಿಸುತ್ತಾರೆ.
        
           ನಮಗಂತೂ ಆಶ್ಚರ್ಯಕರವಾಗಿ ಕಂಡಿದ್ದು ಸ್ಯಾ‌ನ್‌ಡಿಸ್ಕ್ ನ ಪೆನ್‌ಡ್ರೈವ್‌ಗಳು ನೂರಕ್ಕೆ ನಾಲ್ಕು ಅನ್ನುವಂತೆ ಬಿಕರಿಯಾಗುತ್ತಿದ್ದುದು. ಇದೆಲ್ಲಾ ಹೇಗೆ ಅಂತಾ ಒಬ್ಬ ಹುಡುಗನ ಬಳಿ ಕೇಳ್ದಾಗ 'ಕದ್ದು ತಂದ ಮಾಲ್‌ ಸಾರ್ ' ಅಂದ. ಹಾಗೇನೇ ಅಡಿಡಾಸ್ ನ ಶೂಸ್ 250 ಕ್ಕೆ, ಫಾಸ್ಟ್‌ಟ್ರ್ಯಾಕ್‌ನ ಕೈಗಡಿಯಾರ 100 ಕ್ಕೆ ಹೀಗೆ ಬಹುತೇಕ ಬ್ರಾಂಡೆಡ್ ಮಾಲ್‌ಗಳು ಬಹಳ ಕಡಿಮೆ ದರದಲ್ಲಿ ಮಾರಾಟವಾಗುತ್ತಿತ್ತು. ಅದರಲ್ಲೂ ಚೌಕಾಸಿಯ ಚಾಕಚಕ್ಯತೆ ಇರುವ ಚತುರರಿಗೆ ಇನ್ನಷ್ಟು ಚಿಕ್ಕ ಬೆಲೆಗೆ ತರಿಸಬಹುದು.
     ಒಟ್ಟಾರೆ ದಿಲ್ಲಿಯ ಕರೋಲ್‌ಭಾಗ್‌ನಲ್ಲಿ ನಮ್ಮ ಶಾಪಿಂಗ್ ಒಳ್ಳೆಯ ಅನುಭವ ನೀಡಿತ್ತು. ಎಷ್ಟರ ಮಟ್ಟಿಗೆ bargaining ಮಹತ್ವ ಪಡೆದಿದೆ ಎಂಬುವುದನ್ನ ತಿಳಿಸಿತ್ತು. ಅದರಲ್ಲೂ ನಾನು 300ಕ್ಕೆ ತಗೊಂಡಿದ್ದನ್ನ 100ಕ್ಕೆ ತಗೊಂಡಿದ್ದೆ ಅಂದಾಗ ಏನೋ ತಳಮಳ! ಹೀಗೆ ಹಲವಾರು ಹೊಸ ಅನುಭವಕ್ಕೆ ಸಾಕ್ಷಿಯಾಗಿತ್ತು ಕರೋಲ್‌ಭಾಗ್.
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************


Ads on article

Advertise in articles 1

advertising articles 2

Advertise under the article