-->
ಸಂಚಾರಿಯ ಡೈರಿ : ಸಂಚಿಕೆ - 14

ಸಂಚಾರಿಯ ಡೈರಿ : ಸಂಚಿಕೆ - 14

ಸಂಚಾರಿಯ ಡೈರಿ : ಸಂಚಿಕೆ - 14

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
                
             ಕಳೆದ ವಾರ ಇದ್ದ ರಜೆಯಲ್ಲಿ‌ ಎಲ್ಲಿಗಾದರೂ‌ solo trip ಹೋಗೋಣ ಅಂತ ಮನದಲ್ಲೇನೋ ತುಮುಲ! ಉತ್ತರಕ್ಕೋ ದಕ್ಷಿಣಕ್ಕೋ ಅನ್ನೋ ಅನುಮಾನದಲ್ಲಿದ್ದ ನನಗೆ ಉತ್ತರದ ಉತ್ತರ ಕನ್ನಡ ಜಿಲ್ಲೆಗೆ ಹೋಗೋ ಉತ್ತುಂಗ ಉತ್ಸಾಹ ಮೂಡಿತ್ತು.. ಅದಾಗ್ಯೂ ಗೋಕರ್ಣ, ಕುಮಟಾ ಅಂತೆಲ್ಲಾ ತಿರುಗಾಡಿದ್ದ ನನಗೆ ಶಿರಸಿಗೆ ಹೋಗೋಣ ಅಂದೆನಿಸಿ, MBA ಯ ಗೆಳೆಯನಿಗೆ ಫೋನಾಯಿಸಿ ಬರೋ ವಿಚಾರ ಮಾತನಾಡಿದ್ದೆ.. ಶಿರಸಿ ಉತ್ತರ ಕನ್ನಡದ ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದು ಬಹಳಷ್ಟು ಮಹತ್ವ ಪಡೆದಿದೆ.. ಚಿಕ್ಕ ಪಟ್ಟಣವಾದರೂ ಚೊಕ್ಕವಾದ ಶಿರಸಿಯ ಪ್ರಮುಖ ಪ್ರವಾಸಿ ತಾಣಗಳು ಇಂತಿವೆ ;
      
             ಹೊರಗಡೆಯಿಂದ ಕಾಣೋವಾಗ ಕೆಂಪು ಬಣ್ಣದ ಚಿತ್ತಾರಗಳಿಂದ ಶೋಭಿತ ದೇವಾಲಯ ಶಿರಸಿಯ ಮುಖ್ಯ ಆಕರ್ಷಣೆ.. ಇಲ್ಲಿನ ಮುಖ್ಯ ದೇವತೆ ಮಾರಿಕಾಂಬೆ ಜಾಗೃತ ಶಕ್ತಿ ದೇವಿಯೆಂದೇ ಪ್ರಸಿದ್ಧಿ.. ಕರ್ನಾಟಕದ ಪ್ರಮುಖ ಪವಿತ್ರ ದೇವೀಪೀಠಗಳಲ್ಲಿ ಇದೂ ಒಂದು. ಶಿರಸಿಯ ಮಾರಿಕಾಂಬೆಯನ್ನ ಸಹ್ಯಗಿರಿ ಶಿಖರ ನಿವಾಸಿನಿ ಅಂತಲೂ ಕರೆಯುವರು. ನಿತ್ಯವೂ ಭಕ್ತಾದಿಗಳಿಗೆ ಅನ್ನಸಂತರ್ಪಣೆಯೂ ನಡೆಯುತ್ತದೆ. 1930 ರ ವರೆಗೂ ಈ ದೇವಾಲಯದಲ್ಲಿ ಮಾರಿಕಾಂಬಾ ದೇವಿಗೆ ಕೋಣನ ಬಲಿ ಕೊಡುತ್ತಿದ್ದರಂತೆ.

            ವರ್ಷಕೊಮ್ಮೆ ನಡೆಯುವ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆ ಇತಿಹಾಸ ಪ್ರಸಿದ್ಧ. ಇದು ಮಾರಿಜಾತ್ರೆಗೆಂದೇ ಮೀಸಲಿಟ್ಟ ಊರ ಮಧ್ಯದ ಬಿಡಕೀ ಬೈಲಿನಲ್ಲಿ ಜಾತ್ರೆ ವೈಭವೋಪೇತವಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ನಾಡಿನ ವಿವಿದೆಡೆಗಳಿಂದ ಸಾವಿರಾರು ಭಕ್ತಾಭಿಮಾನಿಗಳು ಪಾಲ್ಗೊಳ್ಳುವರು.
     
         ಶಾಲ್ಮಲಾ ನದಿಯ ತಟಿಯಲ್ಲಿರುವ ಸಹಸ್ರಾರು ಲಿಂಗಗಳನ್ನ ನೋಡುವುದೇ ಒಂದು ಹಬ್ಬ. ಶಿರಸಿಯಿಂದ ಯಲ್ಲಾಪುರ ಕಡೆಗಿನ ರಸ್ತೆಯಲ್ಲಿ ಸಿಗೋ ಈ ತಾಣ ಅತ್ಯಂತ ತಂಪಾಗಿದ್ದು, ಮಾರಿಕಾಂಬಾ ದೇವಿಯ ಆಲಯಕ್ಕೆ ಹೋದವರು ಇಲ್ಲಿಗೆ ಭೇಟಿ ನೀಡದೆ ಇರಲಾರರು.

           ಅಷ್ಟಮಠಗಳಲ್ಲಿ‌ ಒಂದಾದ ಸೋದೆ ಮಠವನ್ನ‌ ನಿರ್ಮಿಸಿದ್ದು ವಿಷ್ಣುತೀರ್ಥರು. ಹಲವಾರು‌ ಆಕ್ರಮಣಗಳಿಂದ ತತ್ತರಿಸಿದರೂ ಕ್ಷೇತ್ರದಲ್ಲಿ ಅಸ್ತಿತ್ವದ ಅಸ್ಮಿತೆ ಇತ್ತು.

                ಕನ್ನಡದ ಮೊದಲ ರಾಜವಂಶವೆಂದು ಕರೆಯಲ್ಪಡುವ ಕದಂಬರ ರಾಜಧಾನಿ ಬನವಾಸಿ ಆಗಿತ್ತು. ಇದು ಶಿರಸಿಯಿಂದ 21ಕಿ.ಮೀ ದೂರದಲ್ಲಿದೆ. ದೇವಾಲಯ ಅದ್ಭುತ ಶಿಲ್ಪಕಲೆಗೆ ಹೆಸರಾಗಿದೆ. ಸರ್ಕಾರಿ ಪ್ರಾಯೋಜಿತ ಕದಂಬೋತ್ಸವ ಇಲ್ಲಿ‌ ನಡೆಯುತ್ತದೆ.
                ಶಿರಸಿಯಿಂದ ಸುಮಾರು 33 ಕಿ.ಮೀ ದೂರದ ಈ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸೀ ತಾಣಗಳಲ್ಲಿ ಒಂದು. ಸ್ಥಳೀಯವಾಗಿ ಕೆಪ್ಪಜೋಗ ಎಂದು ಕರೆಯಲ್ಪಡುವ ಈ ಜಲಪಾತ ಅಘನಾಶಿನಿ ನದಿಯಿಂದ ಹುಟ್ಟುತ್ತದೆ.

ಯಾಣ : 46 ಕಿ.ಮೀ 
ಚಂದ್ರಗುತ್ತಿ : 45 ಕಿ.ಮೀ 
ಯಲ್ಲಾಪುರ : 50 ಕಿ.ಮೀ.
     
          ಶಿರಸಿಯಲ್ಲಿ‌ ಗೆಳೆಯನ‌ ಮನೆಯಲ್ಲಿದ್ದಾಗ‌ ನನಗೆ ಎರಡು ಸಾಮಾಗ್ರಿಗಳ ಬಗ್ಗೆ ಕುತೂಹಲ ಮೂಡಿತ್ತು. ಒಂದು‌ ತೊಡದೇವು‌ ಮತ್ತೊಂದು‌‌ ಮೆಕ್ಕೆಹಣ್ಣು.

                  ಕುಡ್ಲದ ಕೋರಿರೊಟ್ಟಿಯನ್ನೇ ಹೋಲುವ ಶಿರಸಿ-ಯಲ್ಲಾಪುರ ಭಾಗದ ಒಂದು ಸಿಹಿ ತಿನಿಸು.. ಬೋರಲಾಗಿ‌ ಒಲೆ ಮೇಲೆ ಹಾಕಿದ ಪಾತ್ರೆಯ ಮೇಲೆ ಅಕ್ಕಿಹಿಟ್ಟು ಮತ್ತು ಕಬ್ಬಿನಹಾಲಿನ‌‌ ಮಿಶ್ರಣವನ್ನ ಹುಯ್ದು ನಾಜೂಕಾಗಿ‌ ಮಡಚಿ, ಪೊಟ್ಟಣದೊಳಗೆ ಹಾಕುತ್ತಾರೆ. ಉತ್ತರ ಕರ್ನಾಟಕದಲ್ಲಿ ಮಂಡಿಗೆ ಎಂದು‌‌ ಕರೆಯಲ್ಪಡುವ ಈ‌ ತಿಂಡಿಯ ಜತೆ ತುಪ್ಪ ಅಥವಾ ಹಾಲು‌ ಒಳ್ಳೆಯ ಕಾಂಬಿನೇಷನ್ ಅಂತೆ. ನಾನಂತೂ‌ ಎರಡು ಪ್ಯಾಕೆಟ್ ಕೊಂಡು ಮನೆಗೆ ಒಯ್ದಿದ್ದೆ.
                    ಮೆಕ್ಕೆಹಣ್ಣು / ಇಬ್ಬಡ್ಲ ಹಣ್ಣು ಅಂತಾ ಕರೆಯಲ್ಪಡುವ ಈ ಹಣ್ಣು‌ ಸೌತೆ ಜಾತಿಗೆ ಸೇರಿದೆಯಂತೆ. ಶಿರಸಿಯ ಮಾರುಕಟ್ಟೆಯಲ್ಲಿ ಸಾಲಾಗಿ‌ ಜೋಡಿಸಿಟ್ಟ ಈ ಹಣ್ಣಿಗೆ ಗಾತ್ರಕ್ಕನುಸಾರ ಬೆಲೆ. ಮಿತ್ರನ‌‌ ಮನೆಯಲ್ಲಿ ಈ‌ ಹಣ್ಣಿನ ಪಾಯಸ ಮಾಡಿದ್ದರು. ಹಣ್ಣಾದಾಗ ತನ್ನಷ್ಟಕ್ಕೇ ಇಬ್ಭಾಗವಾಗುವ ಹಣ್ಣು, ಜ್ಯೂಸ್, ಐಸ್‌ಕ್ರೀಂಗೆ ಉತ್ತಮ‌ ಆಯ್ಕೆ..

        ಬಾಯಲ್ಲಿ ನೀರೂರಿಸುವ ಅಪ್ಪೆಮಿಡಿ ಉಪ್ಪಿನಕಾಯಿ ಉತ್ತರ ಕನ್ನಡ ಜಿಲ್ಲೆಯ ಸ್ಪೆಷಲ್! ಮರೀದೇ ಸವಿಯಿರಿ..

ಜೇನಿನಂತೆ ಕಾಣೋ ಜೋನಿಬೆಲ್ಲವನ್ನೂ‌ ಕೊಳ್ಳೋದನ್ನ ಮರಿಬೇಡಿ.. 
      ತಿನಿಸು, ತಿರುಗಾಟ, ತಿಳುವಳಿಕೆ, ತಿಳುವಿಗೆ ತಿರುಳು ನೀಡಿದ್ದ ಶಿರಸಿ ಅಭೂತಪೂರ್ವ ಅನುಭವ ನೀಡಿತ್ತು. ಒಟ್ಟಾರೆ ಶಿರಸಿಯಲ್ಲಿ‌ ಕಳೆದಿದ್ದ ಮೂರು ದಿವಸದಲ್ಲಿ ಶಿರಸಿ ನನ್ನ ಹರಸಿ ಕಳುಹಿಸಿತ್ತು ಎಂದರೆ ತಪ್ಪಾಗದು.

       ಮಂಗಳೂರಿನಿಂದ 260 ಕಿ.ಮಿ , ಉಡುಪಿಯಿಂದ 205 ಕಿ.ಮೀ ಹಾಗೂ‌ ಕುಮಟಾದಿಂದ 60 ಕಿ.ಮೀ ಇದೆ. ಮಂಗಳೂರಿನಿಂದ ನೇರ ಬಸ್ ಕಡಿಮೆ ಇದ್ದು‌, ಕುಮಟಾದವರೆಗೆ ಬಸ್/ ರೈಲಿನಲ್ಲಿ ತೆರಳಿ‌ ಅಲ್ಲಿಂದ ಶಿರಸಿ ಬಸ್ ಹಿಡಿಯಬಹುದು..
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************


Ads on article

Advertise in articles 1

advertising articles 2

Advertise under the article