
ರೈತ ರಂಗಣ್ಣ - ಕಥೆ
Friday, September 16, 2022
Edit
ಕಥೆ ರಚನೆ : ರೇಷ್ಮ
10ನೇ ತರಗತಿ
ದ.ಕ.ಜಿ.ಪಂ.ಮಾದರಿ ಪ್ರೌಢ ಶಾಲೆ ವಿಟೢ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಚಿತ್ರ ರಚನೆ : ಸುದೀಪ್ ಆಚಾರ್ಯ
ಒಂದು ಊರಿನಲ್ಲಿ ರಂಗಣ್ಣ ಎಂಬ ರೈತನು ಇದ್ದನು. ಅವನಿಗೆ ಯಮುನಾ ಎಂಬ ಹೆಂಡತಿ ಇದ್ದಳು. ಅವರಿಗೆ ಸೋಮು ಮತ್ತು ಭೀಮ ಎಂಬ ಇಬ್ಬರು ಗಂಡು ಮಕ್ಕಳು ಇದ್ದರು. ಭೀಮ ಅಪ್ಪನಿಗೆ ಕೆಲಸದಲ್ಲಿ ಸಹಾಯ ಮಾಡಲು ಮುಂದಾಗುತ್ತಿದ್ದನು, ಆದರೆ ಸೋಮು ತುಂಬಾ ಸೋಮಾರಿಯಾಗಿದ್ದನು. ರೈತ ರಂಗಣ್ಣ ಯಾರದೋ ತೋಟದಲ್ಲಿ ಕೂಲಿ ಕೆಲಸ ಮಾಡಿ ಅವನು ದುಡಿದ ಹಣದಲ್ಲಿ ಮನೆಗೆ ಬೇಕಾದ ದಿನಸಿಗಳನ್ನು ತರುತ್ತಿದ್ದನು. ಅವನ ಹೆಂಡತಿ ಮನೆಯಲ್ಲಿ ಬೀಡಿ ಕಟ್ಟಿ ಅದರಿಂದ ಸಂಪಾದನೆ ಮಾಡುತ್ತಿದ್ದಳು. ರಂಗಣ್ಣನಿಗೆ ಮತ್ತು ಅವನ ಹೆಂಡತಿಗೆ ಭೀಮನನ್ನು ಚೆನ್ನಾಗಿ ಓದಿಸಬೇಕು, ನಮ್ಮ ಹಾಗೆ ಆಗುವುದು ಬೇಡ ಎಂಬುದು ಅವರ ತಲೆಯಲ್ಲಿ ಇತ್ತು. ಆದರೆ ಅವರಿಗೆ ಹಣದ ಸಮಸ್ಯೆ ಇದ್ದುದರಿಂದ ಮಗನನ್ನು ಚೆನ್ನಾಗಿ ಓದಿಸಲು ಸಾಧ್ಯವಾಗಲಿಲ್ಲ ಹಾಗಾಗಿ ಅವನು ಅರ್ಧದಲ್ಲಿಯೇ ಶಾಲೆ ಬಿಡಬೇಕಾಯಿತು.
ಒಂದು ದಿನ ರಂಗಣ್ಣ ಕೆಲಸ ಮಾಡುತ್ತಿದ್ದ ಹಾಗೆ ತಲೆ ತಿರುಗಿ ಬೀಳುತ್ತಾನೆ. ಅವನ ಜೊತೆ ಕೆಲಸ ಮಾಡುತ್ತಿದ್ದ ರಾಮಣ್ಣ ರಂಗಣ್ಣನ ಮಗನಿಗೆ ತಿಳಿಸಿದನು. ಭೀಮ ತಕ್ಷಣ ಅವನು ಕೆಲಸ ಮಾಡುತ್ತಿದ್ದ ಜಾಗಕ್ಕೆ ಓಡೋಡಿ ಬಂದನು ಅವನನ್ನು ಅಲ್ಲಿಂದ ವೈದ್ಯರ ಹತ್ತಿರ ಕರೆದುಕೊಂಡು ಹೋದನು. ವೈದ್ಯರು ಪರೀಕ್ಷೆ ಮಾಡಿ ನೋಡಿದರು. ಅನಂತರ ಒಂದಿಷ್ಟು ಮಾತ್ರೆ ಕೊಟ್ಟರು. ವೈದ್ಯರ ಹತ್ತಿರ ಭೀಮ, "ತಂದೆಗೆ ಏನಾಗಿದೆ ಏನೂ ತೊಂದರೆಯಿಲ್ಲ ತಾನೇ..." ಎಂದನು. "ತೊಂದರೆ ಏನೂ ಇಲ್ಲ...... ಅವರು ಕಡುಬಿಸಿಲಲ್ಲಿ ಕೆಲಸ ಮಾಡುತ್ತಾರಲ್ಲ ಹಾಗೆ ಸುಸ್ತಾಗಿದ್ದಾರೆ ಅಷ್ಟೇ ಬೇರೆ ಏನು ಇಲ್ಲ ಅವರು ಕೆಲವು ದಿನಗಳವರೆಗೆ ಕೆಲಸ ಮಾಡದೆ ವಿಶ್ರಾಂತಿ ಪಡೆದುಕೊಳ್ಳಬೇಕು." ಎಂದರು. "ಆಯ್ತು , ನಾವು ಇನ್ನು ಹೊರಡುತ್ತೇವೆ" ಎಂದು ಹೇಳಿ ಮನೆಗೆ ಬಂದರು. ರಂಗಣ್ಣಿನ ಹೆಂಡತಿ ಯಮುನಾ ಗಾಬರಿಗೊಂಡು ಮನೆಯ ಬಾಗಿಲ ಬಳಿಯೇ ನಿಂತಿದ್ದಳು. ಅವರು ಮನೆಗೆ ಬಂದಾಗ , "ಏನಾಯ್ತು ! ಏನಾಯ್ತು! ನಿಮಗೆ" ಎಂದು ಅಳುತ್ತಾ ಕೇಳಿದಳು. "ಅಮ್ಮಾ, ಅಪ್ಪನಿಗೆ ಏನೂ ಆಗಿಲ್ಲ ನೀನು ಯಾಕೆ ಗಾಬರಿ ಆಗುತ್ತೀಯ...? ಅಪ್ಪ ಬಿಸಿಲಿನಲ್ಲಿ ಕೆಲಸ ಮಾಡಿ ಸುಸ್ತಾಗಿದ್ದಾರೆ ಅಷ್ಟೇ." "ದೇವರೇ ನಮಗೇ ಯಾಕೆ ಈ ಕಷ್ಟ ಎಂದು ಮನಸ್ಸಿನಲ್ಲಿ ದು:ಖ ಪಡುತ್ತಾಳೆ ಯಮುನಾ. ರಂಗಣ್ಣನಿಗೆ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಎಲ್ಲಾ ಕೆಲಸಗಳನ್ನು ಭೀಮನೇ ಹೊತ್ತುಕೊಂಡನು. ಸೋಮು ಯಾವುದೇ ಕೆಲಸ ಮಾಡದೇ ಇರುವುದರಿಂದ ಭೀಮ ಎಲ್ಲಾ ಕೆಲಸಗಳನ್ನು ಮಾಡಬೇಕಾಯಿತು. ಒಂದು ದಿನ ರಂಗಣ್ಣನಿಗೆ ತೀವ್ರವಾದ ಅನಾರೋಗ್ಯ ಕಾಣಿಸಿಕೊಂಡಿತು. ಅದರಿಂದ ರಂಗಣ್ಣ ಮರಣ ಹೊಂದುತ್ತಾನೆ. ಅವನ ಮರಣದ ನಂತರ ಅವರಿಗೆ ಒಂದು ತುತ್ತು ಅನ್ನ ತಿನ್ನೋಕೆ ತುಂಬಾ ಕಷ್ಟ ಪಡಬೇಕಾಯಿತು. ಇದೆಲ್ಲಾ ನೋಡಿದ ಸೋಮು 'ನನ್ನ ಸೋಮಾರಿತನವೇ ಈ ಪರಿಸ್ಥಿತಿಗೆ ಕಾರಣವಾಯಿತು' ಎಂದು ಮನಸ್ಸಿನಲ್ಲಿಯೇ ಕೊರಗುತ್ತಿದ್ದನು. ನಂತರ ಅವನೂ ಕೂಡ ಭೀಮನ ಜೊತೆ ಸೇರಿ ಕೆಲಸ ಮಾಡಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಲಾರಂಭಿಸಿದನು.
ನಾವು ಯಾವುದೇ ಸೋಮಾರಿತನ ಮಾಡದೇ ಇದ್ದರೆ ಈ ತರಹದ ಕಷ್ಟ ಯಾವತ್ತೂ ಬರುವುದಿಲ್ಲ. ನಮ್ಮ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿ ನಮ್ಮ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳಾದವರ ಕರ್ತವ್ಯ ಎಂದು ತಿಳಿದರು.
10ನೇ ತರಗತಿ
ದ.ಕ.ಜಿ.ಪಂ.ಮಾದರಿ ಪ್ರೌಢ ಶಾಲೆ ವಿಟೢ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************