-->
ಸಂಚಾರಿಯ ಡೈರಿ : ಸಂಚಿಕೆ - 10

ಸಂಚಾರಿಯ ಡೈರಿ : ಸಂಚಿಕೆ - 10

ಸಂಚಾರಿಯ ಡೈರಿ : ಸಂಚಿಕೆ - 10

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
        
               ಅರಮನೆ ಅಂದಾಕ್ಷಣ ರಾಜರ ಘನವೈಭವವೇ ನೆನಪಾಗುತ್ತದೆ. ಕರ್ನಾಟಕದ ಮೈಸೂರಿನ ಅರಮನೆ ವಿಶ್ವಪ್ರಸಿದ್ಧಿ ಪಡೆದಿದೆ. ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ರಾಜರ ಅರಮನೆ ಕಾಣಬಹುದು. ಅಂತಹ ಅರಮನೆಗಳಲ್ಲಿ ವೈಶಿಷ್ಠ್ಯತೆಗಳಿವೆ. ಆ ಪೈಕಿ ನೀರ ಮೇಲಿರುವ ಅರಮನೆಯ ಬಗ್ಗೆ ಹೇಳಲೇಬೇಕು. ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ತ್ರಿಪುರಾದಲ್ಲಿ ನೀರ್‌ಮಹಲ್ ಇದೆ. ತ್ರಿಪುರಾ ರಾಜ್ಯದ ಸಿಫಾಝಲಾ ಜಿಲ್ಲೆಯ ಮೇಲಾಘರ್‌ನಲ್ಲಿರುವ ಈ ಅರಮನೆ ರುದ್ರಸಾಗರ ಸರೋವರದ ಮಧ್ಯೆ ನಿರ್ಮಾಣವಾಗಿದೆ.
           ಈ ಅರಮನೆಯನ್ನು ತ್ರಿಪುರಾದ ಮಾಣಿಕ್ಯಾ ರಾಜಮನೆತನದ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹಾದೂರ್ 1930 ರಲ್ಲಿ ನಿರ್ಮಿಸಿದ ಎಂಬ ಐತಿಹ್ಯವಿದೆ. ಸ್ಥಳೀಯ ಕಥೆಗಳ ಪ್ರಕಾರ ಮಹಾರಾಜ ತನ್ನ ಮಗನಿಗೆ ಸಿಂಹದಿಂದ ಮರಣ ಎಂದು ಜ್ಯೋತಿಷಿ ಹೇಳಿದ ಕಾರಣ ಮಗನಿಗಾಗಿ ಸರೋವರದ ಮಧ್ಯದಲ್ಲೊಂದು ಅರಮನೆ ಕಟ್ಟಿಸಿದ. ಆದರೆ ಆ ಮಗ ದೊಡ್ಡವನಾದಾಗ ಸಿಂಹವನ್ನು ನೋಡಬೇಕು ಎಂದು ಹಠ ಹಿಡಿದಾಗ ಸಿಂಹದ ಚಿತ್ರವನ್ನ ತೋರಿಸುತ್ತಾರೆ. ದುರದೃಷ್ಟವಶಾತ್ ಚಿತ್ರದಲ್ಲಿದ್ದ ಸಿಂಹವೇ ಹಾರಿ ರಾಜಕುಮಾರನನ್ನ ಕೊಂದುಹಾಕಿತಂತೆ. ಈ ಕಥೆ ಕಾಲ್ಪನಿಕವೆನಿಸಿದರೂ ಸ್ಥಳೀಯರಿಗೆ ರಾಜ ಸರೋವರದ ಮಧ್ಯದಲೇ ಯಾಕೆ ಕಟ್ಟಿಸಿದ ಎಂಬ ಪ್ರಶ್ನೆಗೆ ಸರಿ ಉತ್ತರ ಇಲ್ಲ. ಹಾಗಂತೆ ಹೀಗಂತೆ ಎಂಬ ಕಥೆಗಳೇ ಇಲ್ಲಿವೆ.
      ಈ ಅರಮನೆ ಶ್ವೇತವರ್ಣದಿಂದ ಕೂಡಿದ್ದು ಇಪ್ಪತ್ತ ನಾಲ್ಕು ಕೋಣೆಗಳಿವೆ. ವಿಶಾಲವಾದ ಸಭಾಂಗಣದ ಜತೆ ಆಗಿನ ಕಾಲದ ಅಡುಗೆ ಕೋಣೆ, ನೃತ್ಯ ಗೃಹ ಎಲ್ಲವೂ ಇವೆ. ಎತ್ತರದ ಮಹಡಿ ಮೇಲಿನಿಂದ ಸರೋವರದ ಸುಂದರ ನೋಟ ಕಣ್ತುಂಬಿಕೊಳ್ಳಬಹುದು. ಭಾರತೀಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ಈ ಅರಮನೆ ರಾಜಸ್ಥಾನದ ಜಲ್‌ಮಹಲ್‌ಗಿಂತ ದೊಡ್ಡದಾಗಿದೆ.
            
           ತ್ರಿಪುರಾ ರಾಜಧಾನಿ ಅಗರ್ತಲಾದಿಂದ ಮೇಲಾಘರ್ 40ಕಿಮೀ ದೂರದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣ ಅಗರ್ತಲಾ. ಬಿಶ್ರಮ್‌ಗಂಜ್ ಸಮೀಪದ ರೈಲುನಿಲ್ದಾಣವಾಗಿದೆ. ಅಗರ್ತಲಾದಿಂದ ನಿಯಮಿತ ಬಸ್‌ಗಳಿವೆ. ಸರೋವರದ ಮಧ್ಯಕ್ಕೆ ತೆರಳಲು ಬೋಟ್ ಸೌಲಭ್ಯವಿದ್ದು ಒಬ್ಬರಿಗೆ ಐವತ್ತು ರೂಪಾಯಿಯಾದರೆ, ಅರಮನೆಯ ಒಳಗಡೆ ಹೋಗಲು ಪ್ರವೇಶ ಶುಲ್ಕ ಮೂವತ್ತು ರೂಪಾಯಿ. ತ್ರಿಪುರಾ ರಾಜ್ಯಕ್ಕೆ ಭೇಟಿ ಕೊಡುವ ಅವಕಾಶ ಸಿಕ್ಕಿದರೆ ನೀರ್‌ಮಹಲ್‌ಗೆ ಭೇಟಿ ಕೊಡೋದನ್ನ ಮರಿಬೇಡಿ..
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************


Ads on article

Advertise in articles 1

advertising articles 2

Advertise under the article